ವನದಲ್ಲಿ ಪಾಂಡವರು

ವನದಲ್ಲಿ ಪಾಂಡವರು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಕೆ. ಎಸ್. ನಾರಾಯಣಾಚಾರ್ಯ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
ರೂ. ೩೧೫.೦೦, ಮುದ್ರಣ: ೨೦೧೪

ಅಜ್ಞಾತ ವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕರಾದ ಡಾ. ಕೆ ಎಸ್ ನಾರಾಯಣಾಚಾರ್ಯ ಇವರು ಸವಿವರವಾಗಿ ‘ವನದಲ್ಲಿ ಪಾಂಡವರು' ಕೃತಿಯಲ್ಲಿ ಬರೆದಿದ್ದಾರೆ. ಆಜ್ಞಾತವಾಸದ ನಿಯಮಗಳನ್ನು ಮುರಿಯಲು ದುರ್ಯೋಧನ ನಡೆಸಿದ ಕುಯುಕ್ತಿಗಳಿಗೆ ಪಾಂಡವರು ಇಟ್ಟ ಎಚ್ಚರಿಕೆಯ ಹೆಜ್ಜೆಗಳ ಬಗ್ಗೆ, ಕೀಚಕನ ಸಂಹಾರದ ಬಗ್ಗೆ, ಅರಗಿನ ಅರಮನೆಗೆ ಬೆಂಕಿ ಬಿದ್ದ ಬಗ್ಗೆ ಈ ಎಲ್ಲಾ ಸನ್ನಿವೇಶಗಳನ್ನು ಬಹಳ ಸಮರ್ಥವಾಗಿ ಬರೆದು ಓದುಗರ ಮಡಿಲಿಗೆ ಹಾಕಿದ್ದಾರೆ ನಾರಾಯಣಾಚಾರ್ಯ ಇವರು. 

ಲೇಖಕರು ತಮ್ಮ ಅರಿಕೆಯಲ್ಲಿ ಹೀಗೆ ಬರೆಯುತ್ತಾರೆ “ಶ್ರೀಮನ್ಮಹಾಭಾರತದ ಕಾದಂಬರೀಕರಣ ಮಾಲಿಕೆಯಲ್ಲಿ ಈಗಣ ‘ವನದಲ್ಲಿ ಪಾಂಡವರು' ಎಂಬುದು ನಾಲ್ಕನೆಯ ಕೃತಿ. ಈ ಮುಂಚಿನ ಮೂರು ‘ಆ ಹದಿನೆಂಟು ದಿನಗಳು’, ‘ರಾಜಸೂಯ ರಾಜಕೀಯ' ಮತ್ತು ‘ರಾಜಸೂಯ ತಂದ ಅನರ್ಥ' ಎಂಬುವು ಈಗಾಗಲೇ ಓದುಗರ ಕೈ ಸೇರಿ ಬಹಳ ದಿನಗಳಾಗಿವೆ. ಈಗಣ ಸಂಪುಟವು ‘ವನಪರ್ವದ’ ಪೂರ್ವಾರ್ಧಭಾಗದ ಕಥೆಯನ್ನಾಧರಿಸಿದ್ದು, ಇದರ ಶೈಲಿ ಬೇರೆಯಾಗಿರಬೇಕಾದ ಅನಿವಾರ್ಯತೆಯನ್ನು ಮೂಲಗ್ರಂಥ ವಿಧಿಸಿದೆ. ‘ಅಷ್ಟಾವಕ್ರಗೀತೆ', ‘ಸಾವಿತ್ರಿ ಚರಿತ್ರೆ'. ನಳ ಚರಿತ್ರೆ', ನಹುಷೋಪಾಖ್ಯಾನ' ಮುಂತಾದವು ತಾತ್ವಿಕ ಚಿಂತನೆ, ನಿರೂಪಣೆಗಳನ್ನೊಳಗೊಂಡು, ಕಲಾಕಾರನ ಕಲ್ಪನಾ ವಿಲಾಸಕ್ಕೆ ಕಡಿವಾಣವನ್ನು ಹಾಕುತ್ತವೆ. ತೀರ್ಥಯಾತ್ರಾ ಪ್ರಸಂಗದ ಪಾಂಡವರ ಸಂಚಾರಕಾಲದಲ್ಲಿ ಋಷಿ ಮುನಿಗಳ ಸಹವಾಸ, ತತ್ವಶ್ರವಣ, ಬೋಧೆ ಇವು ಶ್ರೀ ಮಹಾಭಾರತದ ತಾತ್ವಿಕ ಭಾಗಗಳಾಗಿ, ಕಥೆಗಿಂತ ಇಲ್ಲಿ ಬೇರೆ ಅಭಿರುಚಿಯನ್ನೇ ಓದುಗ ಬೆಳೆಸಿಕೊಳ್ಳಬೇಕು, ಬೆಳೆಯಬೇಕು. ಪ್ರತಿ ವರ್ಷದಲ್ಲೂ ಕಬ್ಬಿನ ಗಿಣ್ಣಿನಲ್ಲಿನಂತೆ ರಸೋದಯದ ರೀತಿ ಬೇರೆಯೇ ಇರುವುದನ್ನು ಹಿರಿಯರು ಎಂದೋ ಮೂಲದಲ್ಲಿ ಗುರುತಿಸಿಯೇ ಇದ್ದಾರೆ. ನಮ್ಮ ಇಂದಿನ ಪೀಳಿಗೆಯ ಭಾರತೀಯರಿಗೆ ಕಥೆಯೂ, ತತ್ವವೂ, ಮಹಾಭಾರತದ ಮೂಲಕ ಸ್ವರೂಪೋದ್ದೇಶ್ಯಗಳೂ ಎಷ್ಟು ಅರಿವಿಗೂ ಗೌರವಕ್ಕೂ ಬಾರದಂತೆ ೬೪ ವರ್ಷಗಳ ಕಾಲ ನಮ್ಮ ಆಳುಗರು ನಮ್ಮನ್ನು ‘ಸಾಂಸ್ಕೃತಿಕ ಪರಕೀಯತೆಯ ಕೂಪದಲ್ಲಿ' ತಳ್ಳಿದ್ದಾರೆ…” ೩೫೨ ಪುಟಗಳ ಈ ಕೃತಿ ಸಂಗ್ರಹ ಯೋಗ್ಯ.