ವನದಲ್ಲೊಂದು ಬನ
ಪ್ರಕೃತಿಯ ಮಡಿಲನ್ನೇ ಚಿತ್ರಿಸುವ ಶೀರ್ಷಿಕೆ, ಹೌದು ಪ್ರಕೃತಿಯ ಮಡಿಲಲ್ಲೇ ಬೆಳೆದ ಹಳ್ಳಿಗರು ನಾವು ಧನ್ಯರು, ಕಳೆದ ಕೆಲ ದಿನಗಳ ಹಿಂದೆ ನಾಗರ ಪಂಚಮಿಯ ಪವಿತ್ರ ದಿನ. ಪ್ರತಿ ಕಡೆಯಲ್ಲೂ ವಿಶೇಷ ಹಾಗೂ ನಮ್ಮ ಊರಿನಲ್ಲಂತೂ ಮತ್ತೂ ವಿಶೇಷ ಅರಿಶಿಣ ಎಲೆಯ ಕಡುಬು, ನಾಗದೇವರಿಗೆ ವಿಶೇಷ ಪೂಜೆ, ತಂಬಿಲ, ಪಂಚಾಮೃತ ಅಭಿಷೇಕ ಇತ್ಯಾದಿ ಭಕ್ತಿಯಿಂದ ಕಣ್ತುಂಬಲು ಕಣ್ಣೇ ಸಾಲದು.
ಈ "ಬನ" ಅಂದರೆ "ವನ" ಸಾಮಾನ್ಯ ಒಂದೇ ಅರ್ಥ ನೀಡುವ ಪದಗಳು, ಇಲ್ಲಿ ಪ್ರಸ್ತಾಪಿಸುತ್ತಿರುವುದು, ವನದೊಳಗಿರುವ ನಾಗಬನದ ಬಗ್ಗೆ, ನಾಗಬನ ಅಂದರೆ ಪ್ರಕೃತಿಯ ನಡುವಲ್ಲೇ ನಾಗದೇವರನ್ನು ಪೂಜಿಸುವ ಪವಿತ್ರ ಸ್ಥಳ. ಹಿಂದೆ ಹೀಗೆಯೇ ಇವು ವನದೊಳಗೆ ನಿರ್ಮಲ ಸ್ಥಳದಲ್ಲಿ ಕಂಡುಬರುತ್ತಿತ್ತು, ಇದೀಗ ಮಾರ್ಗದ ಬದಿಯ ಕಾಂಕ್ರೀಟ್ ಕಂಪೌಂಡ್ ನ ಭದ್ರ ಕೋಟೆಯೊಳಗೆ ಕಾಣಸಿಗುತ್ತದೆ.
ವರುಷಕ್ಕೊಮ್ಮೆ ಭಕ್ತಿಯಿಂದ ತಮ್ಮ ಕುಟುಂಬದ ಆದಿ ನಾಗಬನಕ್ಕೆ ಬಂದು ಪೂಜೆಸಲ್ಲಿಸಿ ಹೋಗುವುದು ಕ್ರಮ. ನಾಗ ಬನ ಎಂಬುದು ಪರಿಸರದೊಂದಿಗೆ ಬೆಸೆದ ಬಂಧ. ವೈಜ್ಞಾನಿಕವಾಗಿ ಪರಿಸರ ಸಂರಕ್ಷಣೆ ಒಂದು ಭಾಗ ಹಾಗೂ ಸಾಂಪ್ರದಾಯಿಕವಾಗಿ ಇದು ನಂಬಿಕೆಯ ಮೂಲ.
ಹೀಗೊಂದು ಬನ ಇದ್ದರೆ ಎಷ್ಟು ಚೆಂದ, ಪ್ರಕೃತಿಗೆ ಮೈಯೊಡ್ಡಿ, ಬಾನಂಚನ್ನು ತಲುಪಲೆತ್ನಿಸುವ ಮರಗಳ ಸಾಲು 'ಬನ' ಎಂಬ ಹೆಸರಿಗೆ ತಕ್ಕಂತೆ ಒಂದನ್ನೊಂದು ಬೆಸೆದುಕೊಂಡಿರುವ ಮೈತಾಲ್ ಮರದ ಬೇರುಗಳು, ಇದು ಒಂದು ಔಷಧೀಯ ಗಿಡವೂ ಹೌದು. ಕಟ್ಟೆಯ ಸುತ್ತ ಅರಶಿಣ, ತುಳಸಿ ಗಿಡಗಳು, ಹರಿಯುವ ತಂಪಾದ ನೀರು, ಕಂಪೌಂಡಿಗೆ ಅಂಟಿಕೊಂಡಿರುವ ಹಸಿರು ಬಳ್ಳಿಯ ತೋರಣ
ಎಷ್ಟೊಂದು ಸುಂದರ ವಾತಾವರಣವಲ್ಲವೇ? ಕೆಲವೊಂದು ಕಡೆಯಲ್ಲಿ ಮರುದಿನ ಕ್ಷೀರಾಭಿಷೇಕ ಮಾಡುವ ಕ್ರಮವೂ ಪ್ರಸ್ತುತ ದಿನಗಳಲ್ಲಿದೆ ಕಾರಣ ನಾಗರ ಪಂಚಮಿಯಂದು ಭಟ್ರು ಫುಲ್ ಬ್ಯುಸಿ. ಕುಟುಂಬ ಸಮೇತ ನಾಗಬನಕ್ಕೆ ಹೋಗಿ ಕ್ಷೀರಾಭಿಷೇಕ ಕಣ್ತುಂಬಿಕೊಂಡು ಪಾಪ ಪರಿಹರಿಸುವಂತೆ ಹಾಗು ನಾಗದೋಷ ಪರಿಹರಿಸುವಂತೆ ಕೇಳಿಕೊಳ್ಳುತ್ತಾರೆ. ಅರಶಿಣದ ಗಂಧ ತಂದ ನಂತರ ಕುಟುಂಬದಲ್ಲಿ ಅನೇಕ ಚರ್ಮದ ಖಾಯಿಲೆಗಳು ವಾಸಿಯಾದದ್ದು ಇದೆ. ವರುಷಕ್ಕೊಮ್ಮೆ ಹೂಮಾಲೆಯಿಂದ ಅರಶಿಣದಿಂದ ಅಲಾಂಕೃತಗೊಂಡ ನಾಗದೇವರುಗಳ ಕಲ್ಲುಗಳು ಪಂಚಾಮೃತ, ಎಳನೀರ ಅಭಿಷೇಕ, ಸೀಯಾಳದ ಅಲಂಕಾರದ ಸೊಬಗು ಹಾಗು ಭಕ್ತಿಯ ತುಣುಕನ್ನು ಮನದುಂಬಿಕೊಂಡು ಪ್ರಾರ್ಥಿಸಲು ನಿಂತಿರುವ ಜನರು.
ಎನೋ ಒಂದು ಶಾಂತತೆ, ಮೌನ-ನಿರಾಳ ಗಾಳಿಯೊಂದಿಗೆ ಸೇರಿಕೊಂಡಿರುವ ಊದುಬತ್ತಿ ಕರ್ಪೂರದ ಘಮ ಎಲ್ಲವೂ ವಿಭಿನ್ನ, ವಿಶೇಷ. ಮನಸ್ಸಿನ ನಿರಾಳತೆಗೆ ದಾರಿ ಈ ಭಕ್ತಿಯ ವಾತಾವರಣ.
ಇಂದಿಗೂ ಕೆಲವು ಕಡೆ ನಾಗಸಂಚಾರವಿರುತ್ತದೆ, ಬಹುಷಃ ಭಯ ಭಕ್ತಿಯಿಂದ ಬನ, ಬನ(ವನ)ವಾಗಿ ಉಳಿದಿರಬಹುದೇನೋ, ಹೀಗೊಂದು ಸ್ಥಳ ಕಂಡುಬಂದಿದ್ದು ಮನೆಯ ಪಕ್ಕದ ಹೇರೊಡಿ ಬನದಲ್ಲಿ ಭಯ-ಭಕ್ತಿ ಆಚಾರ-ವಿಚಾರ ನೈರ್ಮಲ್ಯ ಸ್ಥಳ ಈ ನಾಗಬನ, ಎಲ್ಲದರಂತೆ ಈ ಜಾಗ ಸಾಕಷ್ಟು ಆಧುನಿಕತೆಗೆ ಸೇರಿಕೊಂಡಿಲ್ಲ.
ಸುತ್ತ ಗುಡ್ಡ ನಡುವಲ್ಲಿ ಬನ, ಒಂದು ಭವ್ಯ ಅರಣ್ಯದ ರೂಪನ್ನು ಹೊಂದಿದೆ. ಎಷ್ಟು ಸುಂದರತೆಯಲ್ಲವೇ ನಮ್ಮ ಪ್ರಕೃತಿ. ಭಯ-ಭಕ್ತಿ ನಂಬಿಕೆಯಿಂದಾದರೂ ಪ್ರಕೃತಿಯ ಮೇಲೆ ಕಾಳಜಿ ವಹಿಸೋಣ, ಬನ ವೈಭೋಗವಾಗದಿರಲಿ ಪ್ರಕೃತಿ ನಾಶವಾಗದಿರಲಿ ಎಂಬುದೇ ನನ್ನ ಬರಹದ ಆಶಯ
-ಆಕಾಶ್ ಪೂಜಾರಿ ಗೇರುಕಟ್ಟೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ