ವನಸಿರಿ ದರ್ಪಣ
ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ, ಸಸ್ಯದ ಕನ್ನಡ, ತೆಲುಗು, ತಮಿಳು, ಮಳೆಯಾಳ ಮತ್ತು ಸಂಸ್ಕೃತ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಬಹುಪಾಲು ಸಸ್ಯಗಳ ಹಿಂದಿ ಹೆಸರುಗಳೂ ಇವೆ.
ಅಕಾರಾದಿಯಾಗಿ ಔಷಧೀಯ ಸಸ್ಯಗಳ ಬಗ್ಗೆ ತಲಾ ಒಂದೊಂದು ಪುಟ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ ಹೆಸರುಗಳ ಪಟ್ಟಿ, ನಂತರ ಐದಾರು ಸಾಲುಗಳಲ್ಲಿ ಸಸ್ಯದ ವಿವರಣೆ, ಕೊನೆಯಲ್ಲಿ ಆಯುರ್ವೇದದ ಅನುಸಾರ ಸಸ್ಯದ ಉಪಯೋಗಗಳನ್ನು ತಿಳಿಸಲಾಗಿದೆ.
ಮುನ್ನುಡಿಯಲ್ಲಿ ಆಯುರ್ವೇದದ ಹಿನ್ನೆಲೆಯ ಬಗ್ಗೆ ನೀಡಲಾಗಿರುವ ಮಾಹಿತಿ ಹೀಗಿದೆ: ಆಯುರ್ವೇದ ಚಿಕಿತ್ಸಾ ಪದ್ಧತಿ ಕುರಿತ ಮೂರು ಪುರಾತನ ಗ್ರಂಥಗಳೆಂದರೆ ಚರಕ ಸಂಹಿತ, ಶುಶ್ರುತ ಸಂಹಿತ ಮತ್ತು ಭೇದ ಸಂಹಿತ. ಈ ಗ್ರಂಥಗಳನ್ನು 3ರಿಂದ 6ನೇ ಶತಮಾನದ ಮಧ್ಯಕಾಲದಲ್ಲಿ ಬರೆದಿರಬಹುದು. ನಂತರ ಕಶ್ಯಪ ಮತ್ತು ಹರಿತ ಸಂಹಿತೆಗಳು ಗುಪ್ತರ ಕಾಲದ ಮೊದಲು ಬರೆದಿರಬಹುದೆಂದು ತಿಳಿಯಲಾಗಿದೆ. ಗುಪ್ತರ ಕಾಲದಲ್ಲಿ ವಾಗ್ಭಟ ಮತ್ತು ಮಾಧವ ಸಂಹಿತೆಗಳನ್ನು ರಚಿಸಲಾಗಿದೆ.
ಅನಂತರ ಹಲವಾರು ಗ್ರಂಥಗಳು ಬುದ್ಧನ ಕಾಲದಲ್ಲಿ ಅಂದರೆ ಮೌರ್ಯ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ರಚಿಸಲ್ಪಟ್ಟವು; ಚಿಕಿತ್ಸಾಲಯ ಮತ್ತು ಚಿಕಿತ್ಸಾ ಪದ್ಧತಿ ಹೇಗಿರಬೇಕು ಎಂಬುದರ ಬಗ್ಗೆ ಬಹಳಷ್ಟು ಅಧ್ಯಯನಗಳು ನಡೆದಿರುವುದನ್ನು ನಮಗೆ ತಿಳಿಸುತ್ತವೆ. ಹೀಗೆ ಹಂತಹಂತವಾಗಿ ಭರತಖಂಡದಲ್ಲಿ ಬೆಳೆದ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅನೇಕ ಸಸ್ಯಜಾತಿಗಳ ಔಷಧೀಯ ಗುಣ ಮತ್ತು ಚಿಕಿತ್ಸಾ ಪದ್ಧತಿಯ ಬಗ್ಗೆ ಹಲವಾರು ಗ್ರಂಥಗಳಲ್ಲಿ ಶ್ಲೋಕಗಳ ಮೂಲಕ ವಿಶ್ಲೇಷಿಸಲಾಗಿದೆ.”
ಪುರಾತನವಾದ ಭಾರತೀಯ ಚಿಕಿತ್ಸಾ ಪದ್ಧತಿಯನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮುಟ್ಟಿಸಬೇಕೆಂಬುದು ತಮ್ಮ ಬಹುದಿನಗಳ ಹೆಬ್ಬಯಕೆ ಎಂದು ಲೇಖಕರು ಮುನ್ನುಡಿಯ ಆರಂಭದಲ್ಲೇ ಬರೆದುಕೊಂಡಿದ್ದಾರೆ. ಅದರಲ್ಲಿ ಅವರು ದಾಖಲಿಸಿರುವ ಎರಡು ಕುತೂಹಲಕರ ಮಾಹಿತಿ: (ಅ) ಅಥರ್ವವೇದದ ಸಂಹಿತೆಯೊಂದರಲ್ಲೇ 114 ಶ್ಲೋಕಗಳಲ್ಲಿ ವ್ಯಾಧಿಗಳ ಪರಿಹಾರಗಳ ಬಗ್ಗೆ ತಿಳಿಸಲಾಗಿದೆ. (ಆ) “ಕೃಷ್ಣ ತುಳಸಿ"ಗೆ ಭಾರತದ ಎಲ್ಲ ಭಾಷೆಗಳಲ್ಲಿ ಒಟ್ಟಾಗಿ 52 ಹೆಸರುಗಳಿವೆ.
ನಮಗೆಲ್ಲರಿಗೂ ಆಹಾರವಾಗಿ ಅಕ್ಕಿಯ ಉಪಯೋಗ ತಿಳಿದಿದೆ. ಈ ಪುಸ್ತಕದಲ್ಲಿ ಔಷಧಿಯಾಗಿ ಅಕ್ಕಿಯ ಉಪಯೋಗಗಳನ್ನು ಹೀಗೆ ತಿಳಿಸಲಾಗಿದೆ: ಅಕ್ಕಿಯನ್ನು ಚೆನ್ನಾಗಿ ಕುದಿಸಿದ ನಂತರ ರುಬ್ಬಿ ನುಣ್ಣಗೆ ಮಾಡಿಕೊಂಡು ನಂತರ ಅದನ್ನು ಸುಟ್ಟ ಗಾಯಗಳಿಗೆ, ಊತ, ಬಾವುಗಳಿಗೆ, ಚರ್ಮವ್ಯಾಧಿಗಳಿಗೆ ಲೇಪಿಸುವುದರಿಂದ ಉಪಶಮನವುಂಟಾಗುತ್ತದೆ.
-ಮುದ್ದೆಯಾಗುವಂತಹ ಹೊಸ ಅಕ್ಕಿ ಬೇಯಿಸಿ, ಎದೆ ಉರಿ, ಅಜೀರ್ಣ ಮೊದಲಾದ ವ್ಯಾಧಿ ಇರುವವರು ಸೇವಿಸಿದರೆ ಒಳ್ಳೆಯ ಫಲಿತವಿರುತ್ತದೆ.
-ಕೆಂಪು ಅಕ್ಕಿಯ ಗಂಜಿಯನ್ನು ಎದೆ ಮತ್ತು ಹೊಟ್ಟೆಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸೇವಿಸಲು ಕೊಡಲಾಗುತ್ತದೆ.
-ಭತ್ತದ ಹೊಟ್ಟಿನಿಂದ ತಯಾರಿಸಿದ ಎಣ್ಣೆಯನ್ನು ಸೇವಿಸುವುದು ಶರೀರದ ಕೊಬ್ಬು ಕರಗಿಸುತ್ತದೆ. ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುವವರಿಗೆ ಇದು ವರದಾನವಾಗಿದೆ.
-ಕೆಂಪು ಅಕ್ಕಿಯ ಗಂಜಿಯನ್ನು ಜೇನುತುಪ್ಪದೊಡನೆ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಅದೇನಿದ್ದರೂ, “ಈ ಪುಸ್ತಕದಲ್ಲಿ ತಿಳಿಸಿರುವ ಪ್ರಯೋಗಗಳನ್ನು ಪೂರ್ವಾಪರ ವ್ಯಾಪ್ತಿಯನ್ನು ತಿಳಿದು ಬಳಕೆ ಮಾಡುವುದು ಸಮಂಜಸ” ಎಂದು ಲೇಖಕರು ಮುನ್ನುಡಿಯಲ್ಲಿ ಎಚ್ಚರಿಸಿದ್ದಾರೆ.