ವನ್ಯಜೀವಿಗಳ ಮೇಲೆ ಕೃತಕ ಬೆಳಕಿನ ದುಷ್ಪರಿಣಾಮ.

ವನ್ಯಜೀವಿಗಳ ಮೇಲೆ ಕೃತಕ ಬೆಳಕಿನ ದುಷ್ಪರಿಣಾಮ.

"ಇರುಳ ವಿರುದ್ಧ ಬೆಳಕಿನ ಯುದ್ಧ...

ಇದು ಮುಕ್ತ ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ. ಇದರ ಅರ್ಥ ಇರುಳು ಎಂಬ ಅನ್ಯಾಯದ ವಿರುದ್ಧ ಬೆಳಕು ಎನ್ನುವ ನ್ಯಾಯ ಹೋರಾಡುತ್ತಿದೆ ಎಂದು. ಇಲ್ಲಿ ಇರುಳನ್ನು ಏಕೆ ಅನ್ಯಾಯ ಎಂದು ಬಿಂಬಿಸಲಾಗಿದೆ ಎಂದು ಆಶ್ಚರ್ಯವಾಗುತ್ತದೆ. ಇದಕ್ಕೆ ಕಾರಣ ಮನುಷ್ಯನಿಗೆ ಕತ್ತಲಿನ ಬಗ್ಗೆ ಇರುವ ಭಯ.

ಮನುಷ್ಯ ಜೀವಿ ಹಗಲಿನಲ್ಲಿ ಸಕ್ರಿಯವಾಗಿರುವ ಇವನು ವಿಕಾಸ ಹೊಂದಿರುವುದೆ ಹೀಗೆ. ಇವನ ಜೀವನ ಕ್ರಮ, ಆಹಾರ ಕ್ರಮ ಎಲ್ಲ ಹಗಲಿಗೆ ಹೊಂದಿಕೊಂಡಿವೆ. ಇದೆ ಮನುಷ್ಯ ಕತ್ತಲಾದರೆ ಅಸಹಾಯಕನಾಗುತ್ತಾನೆ. ಹೀಗಾಗಿ ರಾತ್ರಿಯ ವೇಳೆ ಹೆಚ್ಚು ಚಟುವಟಿಕೆಯಿಂದ ಇರದೆ ವಿಶ್ರಾಂತಿ ಪಡೆಯುತ್ತಾನೆ. ಆದರೆ ಮನುಷ್ಯನಿಗೆ ಹಲವಾರು ನಿಶಾಚರಿ ಶತ್ರುಗಳಿವೆ. ಕತ್ತಲಿನಲ್ಲಿ ನಿಶಾಚರಿ ಶತ್ರುಗಳೊಡನೆ ಹೋರಾಡುವುದು ಮನುಷ್ಯನಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಮನುಷ್ಯ ಕತ್ತಲಿನ ಬಗ್ಗೆ ಭಯ ಬೆಳೆಸಿಕೊಂಡಿರಬಹುದು.

ಮನುಷ್ಯ ಬೆಂಕಿಯನ್ನು ಕೃತಕವಾಗಿ ಹೊತ್ತಿಸಿ, ತನಗೆ ಬೇಕಾದ ರೀತಿಯಲ್ಲಿ ಉಪಯೋಗಿಸಲು ಶುರು ಮಾಡಿದಂದು ಅವನ ಇತಿಹಾಸದ ದಿಕ್ಕೇ ಬದಲಾಗಿ ಹೋಯಿತು. ಬೆಂಕಿಯಿಂದ ಕೇವಲ ಆಹಾರವನ್ನು ಸುಟ್ಟು ತಿನ್ನುವುದಲ್ಲದೆ, ಚಳಿಯಿಂದ ರಕ್ಷಣೆ ಪಡೆದು, ಬೆಳಕನ್ನು ಸಹ ಪಡೆದ. ಈ ಕೃತಕ ಬೆಳಕಿಗೆ ಹೆದರಿ ನಿಶಾಚರಿ ಶತ್ರುಗಳು ಮನುಷ್ಯನಿಂದ ದೂರವುಳಿದವು. ಹೀಗೆ ಬೆಂಕಿಯ ಸಹಾಯದಿಂದ ಮನುಷ್ಯ ಸಾವಿರಾರು ವರ್ಷ ಭೂಮಿಯ ಮೇಲೆ ಯಶಸ್ವಿಯಾಗಿ ವಿಕಾಸ ಹೊಂದುತ್ತ ಬಂದ.

ಮುಂದೆ ಈ ದಿಕ್ಕನ್ನು ಬದಲಿಸಿದ್ದು ಮನುಷ್ಯ ವಿದ್ಯುತ್ ಕಂಡುಹಿಡಿದ ಮೇಲೆ. ಇಂದು ವಿದ್ಯುತ್ ನಿಂದ ಮನುಷ್ಯ ಏನೆಲ್ಲಾ ಮಾಡುತ್ತಿದ್ದಾನೆಂದು ನಮಗೆಲ್ಲ ತಿಳಿದೆ ಇದೆ. ವಿದ್ಯುತ್ ಕಂಡುಹಿಡಿದ ನೂರು ವರ್ಷಗಳಲ್ಲೆ ಭೂಮಿಯ ಮೂಲೆ ಮೂಲೆಯಲ್ಲಿ ವಿದ್ಯುತ್ ದೀಪ ಬೆಳಗುತ್ತಿದೆ. ನೀವೊಮ್ಮೆ ರಾತ್ರಿಯ ವೇಳೆ ಭೂಮಿಯ ಛಾಯಚಿತ್ರವನ್ನು (ಉಪಗ್ರಹದಿಂದ ಸೆರೆಹಿಡಿದ) ನೋಡಿದರೆ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಮುಂದುವರಿದ ರಾಷ್ಟ್ರಗಳು ಈ ವಿದ್ಯುತ್ ದೀಪಗಳನ್ನು ತೋರಿಸಿ ಹೆಮ್ಮೆ ಪಡುತ್ತವೆ. ಮುಂದುವರಿಯುತ್ತಿರುವ ರಾಷ್ಟ್ರಗಳು ಪೈಪೋಟಿಗಾಗಿ ಸಿಕ್ಕ ಸಿಕ್ಕಲೆಲ್ಲ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿವೆ. ಆದರೆ ಅದೆಷ್ಟು ರಾಷ್ಟ್ರಗಳು ಬೆಳಕಿನ ಮಾಲಿನ್ಯದ ಬಗ್ಗೆ ಗಂಭೀರವಾಗಿ ಯೋಚಿಸಿವೆ?"

 

>ಮನುಷ್ಯ ನಿರ್ಮಿಸಿದ ಕೃತಕ ಬೆಳಕಿನಿಂದ, ಸ್ವಾಭಾವಿಕ ಬೆಳಕಿನ ಮಟ್ಟದಲ್ಲಿ ಆಗುವ ಅಸಮತೋಲನವನ್ನು  ಬೆಳಕಿನ ಮಾಲಿನ್ಯ ಎನ್ನುತ್ತಾರೆ.

 

>ಬೆಳಕಿನ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳು ಹಲವಾರಾದರು ಇಲ್ಲಿ ಇದರಿಂದ ಪರಿಸರ ಅಥವ ವನ್ಯಜೀವಕ್ಕೆ ಆಗುತ್ತಿರುವ ಧಕ್ಕೆಯ ಕೆಲವು ವಿವರ ಕೊಡಲಾಗಿದೆ.

ರಾತ್ರಿಯ ವೇಳೆ ಮಾತ್ರ ಸಕ್ರಿಯವಾಗಿರುವ ಕೆಲವು ಪತಂಗಗಳು ಪ್ರಖರವಾದ ಬೆಳಕಿನಿಂದ ಮೋಸ ಹೋಗುತ್ತವೆ. ಇದು ಪರಾಗ ಸ್ಪರ್ಶಕ್ಕಾಗಿ ಪತಂಗಗಳನ್ನು ನಂಬಿಕೊಂಡಿರುವ ಗಿಡಗಳಿಗೂ ಮಾರಕ.">ಸಾವಿರಾರು ಕಿಮೀ ದೂರ ವಲಸೆ ಹೋಗುವ ಪಕ್ಷಿಗಳ ಸ್ಥಿತಿ ಶೋಚನಿಯ. ನಗರದ ಎತ್ತರದ ಕಟ್ಟಡಗಳ ಪ್ರಖರವಾದ ದೀಪಗಳಿಗೆ ಆಕರ್ಷಣೆಗೊಂಡು ಇವು ತಮ್ಮ ಹಾದಿ ತಪ್ಪುತ್ತದೆ.

ಅವರ ಅಂದಾಜಿನ ಪ್ರಕಾರ ವರ್ಷಕ್ಕೆ ೪೦-೫೦ ಲಕ್ಷ ಪಕ್ಷಿಗಳು ಈ ಕಾರಣದಿಂದ ಸಾವನ್ನಪ್ಪುತ್ತಿವೆ.>ಕಡಲಾಮೆಯ ಮರಿಗಳು ಹುಟ್ಟಿದಾಗ, ಸಮುದ್ರವನ್ನು, ಮರಳಿನ ಮೇಲೆ ಬಿದ್ದಿರುವ ನೆರಳಿನಿಂದ ಕಂಡು ಹಿಡಿದು ಸಮುದ್ರದೆಡೆಗೆ ಚಲಿಸುತ್ತವೆ. ಆದರೆ ಕಡಲ ತೀರದಲ್ಲಿರುವ ಕೃತಕ ಬೆಳಕು ಇದಕ್ಕೆ ಅಡ್ಡಿಪಡಿಸುತ್ತದೆ. ದಿಕ್ಕು ತಪ್ಪಿದ ಆಮೆ ಮರಿಗಳು ಸಮುದ್ರ ಸೇರುವ ಮುನ್ನವೆ ಇತರ ಪ್ರಾಣಿಗಳಿಗೆ ಆಹಾರವಾಗಿ ಸಾವನ್ನಪ್ಪುತ್ತವೆ.

 

ಅಮೇರಿಕದಲ್ಲಿ ನಡೆಸಿದ ಅದ್ಯಯನವೊಂದರ ಪ್ರಕಾರ, ಸಾಲ್ಮಂಡರ‍್ ಎನ್ನುವ ಉಭಯವಾಸಿ ಹಗಲಿನ ವೇಳೆ ಉದುರಿದ ಎಲೆಯಡಿ ಹುದುಗಿಕೊಂಡಿರುತ್ತದೆ. ಸೂರ್ಯ ಮುಳುಗುತ್ತಿದ್ದಂತೆ ಇವು ಹೊರ ಬಂದು ಬೇಟೆಯಾಡುತ್ತದೆ. ಆದರೆ ಕೃತಕ ಬೆಳಕಿರುವ ಪ್ರದೇಶಗಳಲ್ಲಿ ಇವು ತಡವಾಗಿ ಹೊರ ಬರುವುದು ಕಂಡುಬಂದಿದೆ. ಹೀಗೆ ತಡವಾಗಿ ಹೊರ ಬಂದರೆ, ಇವುಗಳಿಗೆ ಅವಶ್ಯವಾದಷ್ಟು ಬೇಟೆ ದೊರಕದೆ ಹೋಗಬಹುದು.ನಿಶಾಚರಿ ಕಪ್ಪೆಗಳು, ಕೃತಕ ಬೆಳಕಿನಿಂದಾಗಿ ತಮ್ಮ ಬೇಟೆಯನ್ನು ಕಂಡುಹಿಡಿದು ತಿನ್ನುವುದರಲ್ಲಿ ವಿಫಲವಾಗುತ್ತಿವೆ. ಇದು ಬಹುಶಃ ಹೊಸಬೆಳಕಿಗೆ ತಮ್ಮ ಕಣ್ಣುಗಳನ್ನು ಹೊಂದಿಸಿಕೊಳ್ಳುವುದು ಕಷ್ಟವಿರಬಹುದು. ಇವುಗಳಿಗೆ ಹೀಗೆ ಹೊಸಬೆಳಕಿಗೆ ತಮ್ಮ ದೃಷ್ಟಿಯನ್ನು ಹೊಂದಿಸಬೇಕಾದರೆ ಕೆಲವು ನಿಮಿಷದಿಂದ ಹಲವು ಗಂಟೆಯಾಗಬಹುದು.

ಕೃತಕ ಬೆಳಕಿನಿಂದಾಗಿ ಹಗಲಿನ ವೇಳೆಯಲ್ಲಿ ಬೇಟೆಯಾಡುವ ಪಕ್ಷಿ, ಹಾವುಗಳು, ರಾತ್ರಿಯ ವೇಳೆಯು ಬೇಟೆಯಾಡುತ್ತವೆ, ಇದು ಬೇಟೆ ಪ್ರಾಣಿಯ ಮೇಲೆ ಅನಾವಶ್ಯಕ ಒತ್ತಡ ತಂದು ಅವುಗಳ ಅಸ್ತಿತ್ವಕ್ಕೆ ಮಾರಕವಾಗುತ್ತದೆ.

ಸಾಕ್ ಐ ಸಾಲ್ಮನ್ ಎನ್ನುವ ಮೀನುಗಳು ಸಾದಾರಣ ಬೆಳಕಿನ ಮಟ್ಟಕ್ಕಿಂತ (ರಾತ್ರಿಯ ಕತ್ತಲು) ಕೇವಲ ೦.೧ ಲಕ್ಸ್ ನಷ್ಟು ಬೆಳಕು ಏರಿದರು, ಈಜುವುದನ್ನು ನಿಲ್ಲಿಸಿ, ನಿಧಾನವಾಗಿ ಹರಿಯುವ ನೀರಿನಲ್ಲಿ ಆಶ್ರಯ ಪಡೆಯುತ್ತವೆ. ಇದು ಬೇಟೆಗಾರ ಪ್ರಾಣಿಗಳಿಗೆ ಸಾಲ್ಮನ್ ಗಳು ಸುಲಭವಾಗಿ ತುತ್ತಾಗುವಂತೆ ಮಾಡುತ್ತದೆ. ಕೃತಕ ಬೆಳಕಿನಿಂದಾಗಿ ಕೆಲವು ಪಕ್ಷಿಗಳ ನಿತ್ಯದ ಬದುಕಿನಲ್ಲಿ ಏರುಪೇರುಂಟಾಗಿದೆ. ಹಲವು ಪಕ್ಷಿಗಳು ಸೂರ್ಯೋದಯದ ಸಮಯದಲ್ಲಿ ಹಾಡುತ್ತವೆ. ಆದರೆ ಕೃತಕ ಬೆಳಕು ಇವುಗಳಿಗೆ ಇನ್ನು ಮುಂಚೆಯೆ ಹಾಡಲು ಪ್ರೇರೆಪಿಸುತ್ತದೆ.ಇದರಿಂದ ಹಕ್ಕಿಗಳು ದೀರ್ಘಕಾಲ ಹಾಡಿ ಅತಿಯಾಗಿ ಬಳಲುತ್ತವೆ. ಹೀಗೆ ಬಳಲಿದ ಹಕ್ಕಿಗಳು ತಮ್ಮ ಶತ್ರುಗಳಿಗೆ ಸುಲಭವಾಗಿ ತುತ್ತಾಗುತ್ತವೆ. >ಕೃತಕ ಬೆಳಕಿನ ಪರಿಣಾಮ ಸಸ್ತನಿಗಳ ಮೇಲು ಉಂಟಾಗುತ್ತಿದೆ. ಕೆಲವು ಬಾವಲಿಗಳು ರಾತ್ರಿಯ ವೇಳೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಆದರೆ ನಗರದ ಬೆಳಕಿನಲ್ಲಿ ಬಾವಲಿಗಳು ತಡವಾಗಿ ಬೇಟೆಗೆ ಹೊರಡುತ್ತವೆ. ಇದರಿಂದಾಗಿ ಕೀಟಗಳು ಸಿಕ್ಕದೆ ಬಾವಲಿಗಳ ಸಂತತಿ ಕ್ಷೀಣಿಸುತ್ತಿದೆ. ಕೃತಕ ಬೆಳಕಿನಲ್ಲಿ, ಕೆಲವು ಬೇಟೆಗಾರ ಹಕ್ಕಿ ಬಾವಲಿಗಳನ್ನು ಹಿಡಿದು ತಿನ್ನುತ್ತವೆ.ಇವಿಷ್ಟು ಸಂಶೋಧನೆ ನಡೆದಿರುವುದು ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ. ಇಂತಹ ಸಮಸ್ಯೆಗಳು ಭಾರತದಲ್ಲಿ ಎಷ್ಟಿದೆ ಎಂಬ ಹೆಚ್ಚು ಮಾಹಿತಿಯಿಲ್ಲ. ನಿಮಗೇನಾದರು ತಿಳಿದಿದ್ದರೆ ದಯವಿಟ್ಟು ಹಂಚಿಕೊಳ್ಳಿ.

ಹೀಗೆ ಹಲವಾರು ರೀತಿಯಲ್ಲಿ, ಕೃತಕ ಬೆಳಕು ನಮ್ಮ ವನ್ಯಜೀವಕ್ಕೆ ಮಾರಕವಾಗುತ್ತಿದೆ. ವಿವೇಚನೆಯಿಲ್ಲದ ಮನುಷ್ಯ ತನಗೆಷ್ಟು ಬೆಳಕು ಬೇಕೊ ಅಷ್ಟನ್ನು ಬಳಸದೆ ಮನೋರಂಜನೆ, ಪ್ರತಿಷ್ಟೆಗಾಗಿ ಬೆಳಕನ್ನು ಬಳಸುತ್ತಿರುವುದು ವಿಷಾದನೀಯ. ನಮಗೆ ಬೇಕಿರುವಷ್ಟು ಮಾತ್ರ ದೀಪಗಳನ್ನು ಉಳಿಸಿ, ಅನಗತ್ಯವಾದದ್ದನ್ನು ತೆಗೆದು ಹಾಕುವುದರಿಂದ ಮತ್ತು ಬೆಳಕನ್ನು ಇತರೆಡೆಗೆ ಸೋರದಂತೆ ನಮಗೆ ಬೇಕಿರುವಲ್ಲಿ ಮಾತ್ರ ನಿರ್ದೇಶಿಸುವುದರಿಂದ ಪ್ರಕೃತಿಯ ಮೇಲಾಗುತ್ತಿರುವ ಹಲವಾರು ದುಷ್ಪರಿಣಾಮವನ್ನು ತಡೆಗಟ್ಟಬಹುದು.