ವನ್ಯಜೀವಿ ಪ್ರಪಂಚದ ಅತಿ ಅಪರೂಪದ ಅಪ್ಪ ಮಂಗಟ್ಟೆ!

ವನ್ಯಜೀವಿ ಪ್ರಪಂಚದ ಅತಿ ಅಪರೂಪದ ಅಪ್ಪ ಮಂಗಟ್ಟೆ!

ಪ್ರಾಣಿ ಇರಲಿ, ಪಕ್ಷಿಗಳಿರಲಿ ವನ್ಯಜೀವಿ ಪ್ರಪಂಚದಲ್ಲಿ ಸಾಮಾನ್ಯವಾಗಿ ತಂದೆ ಪಾತ್ರ ಕೇವಲ ಸಂತಾನಾಭಿವೃದ್ಧಿಯ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬಹುತೇಕ ವನ್ಯಜೀವಿಗಳಲ್ಲಿ ಮರಿಗಳ ಲಾಲನೆ ಪಾಲನೆ, ರಕ್ಷಣೆ, ಬೇಟೆಯ ತರಬೇತಿ ಸೇರಿ ಎಲ್ಲವನ್ನು ಮಾಡುವುದು‌ ತಾಯಿಜೀವಿಗಳು ಮಾತ್ರ. ಇದಕ್ಕೆ ಅಪವಾದ *ಮಂಗಟ್ಟೆಗಳು* (Hornbills).

ಮಂಗಟ್ಟೆಗಳು 'Monogamous' ಜೀವಿಗಳಾಗಿದ್ದು, ಒಮ್ಮೆ ಕೂಡುವ ಗಂಡು ಹೆಣ್ಣು ಹಕ್ಕಿಗಳು ಮಾನವರಲ್ಲಿನ ದಂಪತಿಗಳಂತೆ ಕಡೆಯವರೆಗೂ ಜೊತೆಯಲ್ಲಿರುತ್ತವೆ. ಮಿಲನದ ನಂತರ ಮೊಟ್ಟೆ ಇಟ್ಟು ಮರಿ ಮಾಡುವಾಗ ಸುರಕ್ಷಿತ ಗೂಡು ಹುಡುಕಿ, ಹೆಣ್ಣು ಹಕ್ಕಿ ಗೂಡಿನ ಒಳಕ್ಕೆ ಸೇರಿದರೆ, ಮೊಟ್ಟೆಗಳಿಂದ ಮರಿ ಹೊರಬಂದು, ಮರಿಗಳು ಸ್ವಲ್ಪ ದೊಡ್ಡವಾಗುವ ತನಕ ಹೆಣ್ಣು ಹಕ್ಕಿ ಒಮ್ಮೆಯೂ ಹೊರಬರುವುದಿಲ್ಲ. ರಕ್ಷಣೆಯ ಉದ್ದೇಶಕ್ಕಾಗಿ ಅದು ಗೂಡಿನಲ್ಲಿ ಕೇವಲ ತನ್ನ ಕೊಕ್ಕು ಹೊರಬರುವಷ್ಟು ಸಣ್ಣ ರಂದ್ರ ಬಿಟ್ಟು ಉಳಿದ ಜಾಗವನ್ನು ವಿವಿಧ ವಸ್ತುಗಳಿಂದ ಮುಚ್ಚುತ್ತದೆ. ಹೀಗೆ ಗೂಡು ಸೇರಿದ ತರುವಾಯ ಮೂರು ನಾಲ್ಕು ತಿಂಗಳು ಹೊರಬಾರದ ಹೆಣ್ಣು ಹಕ್ಕಿಯ ಆಹಾರ ಹಾಗೂ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಗಂಡು ಹಕ್ಕಿ ಹೊರುತ್ತದೆ. ಮೊಟ್ಟೆ ಒಡೆದು ಮರಿಯಾದ ನಂತರವೂ ಸ್ವಲ್ಪ ದಿನ ಈ ಊಟೋಪಚಾರ, ರಕ್ಷಣೆಯ ಜವಾಬ್ದಾರಿಯನ್ನು ಗಂಡುಹಕ್ಕಿ ಮುಂದುವರೆಸುತ್ತದೆ. ಹೀಗೆ ತನ್ನ ಮರಿಗಳನ್ನು ಬೆಳೆಸಲು ತನ್ನ ಸಂಗಾತಿಗೆ ನೆರವಾಗುವ ಗಂಡು ಮಂಗಟ್ಟೆ ವನ್ಯಜೀವಿ ಪ್ರಪಂಚದ ಅತ್ಯಪರೂಪದ 'ಅಪ್ಪ'ನಾಗಿ ಹೆಸರುವಾಸಿಯಾಗಿದೆ. 

~ ಸಂಜಯ್ ಹೊಯ್ಸಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ