ವಯನಾಡು
‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ ದುಃಖದಿಂದ ಮಾಹಿತಿ ನೀಡಿದ್ದಾರೆ. ಸ್ವತಃ ವಯನಾಡಿಗೆ ಹೋಗಿ ಈ ದುರಂತವನ್ನು ಕಣ್ಣಾರೆ ಕಂಡ ಆಶಿಕ್ ಮುಲ್ಕಿಯವರು ತಮ್ಮ ಜೊತೆಗೇ ವರದಿಗಾರಿಕೆ ಮಾಡುತ್ತಿದ್ದ ವಿಕ್ರಂ ಕಾಂತಿಕೆರೆಯವರಿಗೆ ಮುನ್ನುಡಿ ಬರೆಯುವ ಹೊಣೆಯನ್ನು ವಹಿಸಿದ್ದಾರೆ. ವಿಕ್ರಂ ಕಾಂತಿಕೆರೆಯವರು ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಲ್ಲಿನ ಕೆಲವು ಸಾಲುಗಳು ನಿಮ್ಮ ಓದಿಗಾಗಿ..
“ಪತ್ರಿಕೋದ್ಯಮ ಹಾಗೆಯೇ. ಈ ಕ್ಷೇತ್ರದಲ್ಲಿ ಕೆಲವರು ಹೇಳಿದ ಕೆಲಸ ಮಾಡಿ ಸುಮ್ಮನಾಗುತ್ತಾರೆ. ಕೆಲವರು ಸಂಸ್ಥೆ ಒಪ್ಪಿಸಿದ ಕೆಲಸಕ್ಕೆ ತಮ್ಮ ಪ್ರತಿಭೆಯನ್ನು ಸೇರಿಸಿ ಸಂವೇದನಾಶೀಲರಾಗಿ ಓದುಗರಿಗೆ ಅಥವಾ ವೀಕ್ಷಕರಿಗೆ ಮೌಲ್ಯವರ್ಧಿತ ವರದಿ ನೀಡುತ್ತಾರೆ. ಇಂಥ ವರದಿಗಳು ಜನಮಾನಸದಲ್ಲಿ ಹೆಚ್ಚು ಕಾಲ ಉಳಿಯುತ್ತವೆ, ದಾಖಲಾಗುತ್ತವೆ. ಯುದ್ಧ, ಪ್ರಕೃತಿ ವಿಕೋಪದಂಥ ಮಹಾದುರಂತಗಳು ಸಂಭವಿಸಿದಾಗ ಇಂಥ ಸಂವೇದನಾಶೀಲರ ಅಗತ್ಯವಿರುತ್ತದೆ. ಇಲ್ಲವಾದರೆ ವರದಿಗಳು ಸಪ್ಪೆಯಾಗುತ್ತವೆ, ಗಿಳಿಪಾಠವಾಗುತ್ತವೆ. ದುರಂತಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಪತ್ರಕರ್ತರ ಪೈಕಿ ಕೆಲವರಲ್ಲಿ ದುರಂತಭೂಮಿಯಿಂದ ವಾಪಸಾದ ನಂತರ ಕ್ರಿಯಾಶೀಲ ವ್ಯಕ್ತಿತ್ವ ಎಚ್ಚೆತ್ತುಕೊಳ್ಳುತ್ತದೆ. ಅದು ಪುಸ್ತಕದ ರೂಪದಲ್ಲಿ ‘ಅಚ್ಚು’ ಆಗುತ್ತದೆ. ವಯನಾಡ್‌ನ ಪುಂಜಿರಿಮಟ್ಟಂ, ಮುಂಡಕ್ಕೈ ಮತ್ತು ಚೂರಲ್‌ಮಲದಲ್ಲಿ ನಡೆದ ಭೂಕುಸಿತ ವರದಿ ಮಾಡಲು ತೆರಳಿದ್ದ ಆಶಿಕ್ ಅವರ ಒಳಗಿದ್ದ ಇಂಥ ಕ್ರಿಯಾಶೀಲ ಪತ್ರಕರ್ತ ಮೈಕೊಡವಿ ಎದ್ದುನಿಂತದ್ದರ ಫಲ ಈ ಕೃತಿ.
ವಯನಾಡ್ ದುರಂತದ ವರದಿಗಾರಿಕೆಗೆ ನಾನೂ ಹೋಗಿದ್ದೆ. ಆಶಿಕ್ ಅವರ ಪರಿಚಯ ಆದದ್ದು ದುರಂತಭೂಮಿಯಲ್ಲೇ. ಪಾದರಸದಂಥ ವ್ಯಕ್ತಿತ್ವ ಮತ್ತು ಚುರುಕು ಬುದ್ಧಿಯ ಮೂಲಕ ಅವರು ಸುದ್ದಿಗಳನ್ನು ಹೆಕ್ಕುತ್ತಿದ್ದುದನ್ನು ಗಮನಿಸಿದ್ದೆ. ಆತ್ಮೀಯತೆ, ಮಾನವ ಪ್ರೇಮ, ಸಕಲ ಜೀವಿಗಳಿಗೆ ಒಳಿತು ಬಯಸುವ ಉದಾರ ಮನಸ್ಸು ಅವರದು. ವಯನಾಡ್‌ನಿಂದ ವಾಪಸಾದ ಕೆಲವೇ ದಿನಗಳಲ್ಲಿ ಅಲ್ಲಿನ ಅನುಭವಗಳು ಕೃತಿರೂಪದಲ್ಲಿ ಮೂಡಿಬರಲು ಇಂಥ ಗುಣಗಳೇ ಪ್ರೇರಕ. ಅದು ಇಲ್ಲಿನ ಬರವಣಿಗೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ವಯನಾಡ್‌ನ ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಜಿರಿಮಟ್ಟಂನಲ್ಲಿ ಸಂಭವಿಸಿದ ಭೂಕುಸಿತದ ನಂತರ ಕಂಡುಬಂದ ದೃಶ್ಯಗಳು ಹೃದಯವಿದ್ರಾವಕ. ಆಶಿಕ್ ಹೋದ ದಿನವೇ ನಾನು ಮತ್ತು ನಮ್ಮ ಛಾಯಾಗ್ರಾಹಕ ಅಲ್ಲಿ ಕಾಲಿರಿಸಿದ್ದು. ಅದು ಮೂರನೇ ದಿನ. ಆದರೂ ಅಲ್ಲಿ ಹೆಣಗಳನ್ನು ಹೆಕ್ಕುವ ಕಾರ್ಯ ಮುಂದುವರಿದಿತ್ತು. ಬೆಟ್ಟವೇ ಬಂದು ಅಪ್ಪಳಿಸಿದ್ದರಿಂದ ಎರಡಂತಸ್ತಿನ ಮನೆಗಳೇ ಅಪ್ಪಚ್ಚಿಯಾಗಿದ್ದವು. ಇನ್ನು ಮನುಷ್ಯ ಮತ್ತು ಪ್ರಾಣಿಗಳ ವಿಷಯ ಹೇಳಬೇಕೇ...? ನಜ್ಜುಗುಜ್ಜಾದ ದೇಹ ಮತ್ತು ದೇಹದ ಭಾಗಗಳನ್ನು ಮಣ್ಣಿನಡಿ, ಬಂಡೆಯ ಕೆಳಗೆ, ಮನೆಗಳ ಒಳಗಿನಿಂದ ಹುಡುಕುತ್ತಿದ್ದ ದೃಶ್ಯ ಮನಕಲಕಿತ್ತು. ಒಟ್ಟಾರೆ ಇಡೀ ಪ್ರದೇಶ ಭೀಭತ್ಸವಾಗಿತ್ತು. ಅಂಥ ಸನ್ನಿವೇಶದಲ್ಲಿ ಮಾಹಿತಿಗಳನ್ನು ಕಲೆ ಹಾಕುವಾಗ ನಮ್ಮ ಕಣ್ಣುಗಳಿಂದಲೂ ನೀರು ಜಿನುಗಿತ್ತು. ಕೆಲವೊಮ್ಮೆ ಮನಸ್ಸನ್ನು ಬಂಡೆಯಂತಾಗಿಸಿ ‘ಜವಾಬ್ದಾರಿ’ ನಿರ್ವಹಿಸಲು ಪ್ರಯತ್ನಿಸಿ ಕಣ್ಣಾಲಿಗಳಲ್ಲಿ ನೀರು ಬರಲು ಬಿಡದಿದ್ದರೂ ಮನಸ್ಸು ವಿಲವಿಲ ಒದ್ದಾಡಿತ್ತು.
ನಾನು ಕೂಡ ಪತ್ರಿಕಾವೃತ್ತಿಯಲ್ಲಿ ವೈವಿಧ್ಯಮಯ ವರದಿಗಾರಿಕೆ ಮಾಡಿದವನು. ಕ್ರೀಡಾ ಪತ್ರಕರ್ತನಾಗಿದ್ದರೂ ಅಪರಾಧ, ಸಾಂಸ್ಕೃತಿಕ, ರಾಜಕೀಯ ಮುಂತಾದ ಎಲ್ಲ ಬಗೆಯ ವರದಿಗಾರಿಕೆಯಲ್ಲೂ ತೊಡಗಿಸಿಕೊಂಡವನು. ಅಪರಾಧ ವರದಿಗಾರಿಕೆ ತುಂಬ ಕಠಿಣ ಎಂದು ಅನೇಕ ಸಂದರ್ಭದಲ್ಲಿ ಅನಿಸಿದ್ದಿದೆ. ಮೃದು ಹೃದಯಿಗಳಿಗೆ ಇದೊಂದು ಸವಾಲಿನ ಕೆಲಸ. ಚಿತ್ರವಿಚಿತ್ರ ಪ್ರಕರಣಗಳು, ಮನಸ್ಸನ್ನು ಮರಗಟ್ಟಿಸುವ ಮೃತಶರೀರಗಳ ಬಗ್ಗೆ ಬರೆಯಬೇಕಾದ, ಕೆಲವೊಮ್ಮೆ ಅನಿವಾರ್ಯವಾಗಿ ನೋಡಬೇಕಾದ ನತದೃಷ್ಟರು ನಾವೆಲ್ಲ. ಮೈಸೂರು ಜಿಲ್ಲೆ ಹುಣಸೂರಿನಲ್ಲಿ 2006ರ ಸಂದರ್ಭದಲ್ಲಿ ಹೊಲದಲ್ಲಿ ಸಾಗುತ್ತಿದ್ದ ಚಕ್ಕಡಿಗೆ ವಿದ್ಯುತ್ ಸ್ಪರ್ಶವಾಗಿ ಏಳು ಮಂದಿ ಚಕ್ಕಡಿಯಲ್ಲೇ ಸುಟ್ಟು ಕರಕಲಾದ ಹೃದಯ ಹಿಂಡುವ ದುರಂತದ ಚಿತ್ರಣವನ್ನು ಕಣ್ಣಾರೆ ಕಂಡಿದ್ದ ನಾನು ಅದರ ನಂತರ ಬೆಚ್ಚಿಬೀಳುವಂಥ ದೃಶ್ಯಗಳಿಗೆ ಸಾಕ್ಷಿಯಾದದ್ದು ವಯನಾಡ್‌ನಲ್ಲಿ.
ವಯನಾಡ್ ದುರಂತ ಮೂರು ಬಗೆಯಲ್ಲಿ ನನ್ನ ಮನ ಕಲಕಿತ್ತು, ಕಾಡಿತ್ತು. ಈಗಲೂ ಕಾಡುತ್ತಿದೆ. ಒಂದು, ಅಂದು ಮಧ್ಯರಾತ್ರಿಯಿಂದ ಮುಂಜಾನೆ ವರೆಗೆ ಸಂಭವಿಸಿದ ಮೂರು ಕುಸಿತಗಳ ಸಂದರ್ಭದಲ್ಲಿ ಇಡೀ ಪರಿಸರದಲ್ಲಿ ಆಗಿರಬಹುದಾದ ಆಘಾತ, ಪ್ರಾಣಭಯದ ಚೀರಾಟ, ಜೀವ ಉಳಿಸುವುದಕ್ಕೋಸ್ಕರ ನಡೆದಿರಬಹುದಾದ ಹೋರಾಟ, ಸುಖನಿದ್ರೆಯಲ್ಲಿದ್ದುಕೊಂಡೇ ಸಾವಿಗೆ ಶರಣಾದವರ ನರಳಾಟ. ಇದನ್ನು ಯಾವುದೆಲ್ಲ ಬಗೆಯಲ್ಲಿ ಕಲ್ಪನೆ ಮಾಡಿಕೊಂಡರೂ ಅಂದಿನ ಪೂರ್ಣ ಚಿತ್ರಣ ಕಟ್ಟಿಕೊಳ್ಳಲು ಮನಸ್ಸು ವಿಫಲವಾಗುತ್ತಿದೆ. ಯಾಕೆಂದರೆ ದುರಂತ ಅಷ್ಟರ ಮಟ್ಟಿಗೆ ಆ ಊರನ್ನು ನಡುಗಿಸಿದೆ. ಚಿತ್ರಗಳಲ್ಲೂ ದೃಶ್ಯಗಳಲ್ಲೂ ಕಾಣುವುದಕ್ಕಿಂತ ಭೀಕರವಾಗಿದೆ ನೇರನೋಟಕ್ಕೆ ಸಿಗುವ ಅಲ್ಲಿನ ವಾತಾವರಣ.
ಎರಡನೆಯದು, ಬದುಕಿ ಉಳಿದವರ ನೋವು, ಸಂಟಕ, ಯಾತನೆ. ಇವರ ಕಥೆಗಳು ಮನಸ್ಸನ್ನು ಕದಡುತ್ತವೆ. ಒಬ್ಬೊಬ್ಬರಲ್ಲೂ ಇದೆ, ಹೇಳಲು ನೂರಾರು ವಿಷಯಗಳು. ಸಂಬಂಧಿಕರು, ಆಪ್ತರು, ಒಡನಾಡಿಗಳು, ನಿತ್ಯವೂ ಎದುರು ಸಿಗುವವರು ಕೆಸರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣಬಿಟ್ಟದ್ದನ್ನು ಹತ್ತಿರದಿಂದ ಕಂಡವರೇ ಅವರ ಪೈಕಿ ಬಹುತೇಕರು. ಎಲ್ಲರನ್ನೂ ಉಳಿಸಿದರೂ ಹೆಂಡತಿ ಮಾತ್ರ ಕೈಯಿಂದ ಜಾರಿ ಕಣ್ಣೆದುರಲ್ಲೇ ಸಮಾಧಿಯಾದದ್ದನ್ನು ನೆನೆಯುತ್ತ ಅತ್ತು ಅತ್ತು ಕಣ್ಣೀರೇ ಬತ್ತಿಹೋಗಿರುವ ಗಂಡ, ತಾಯಿಯನ್ನು ಕಳೆದುಕೊಂಡ ಮಕ್ಕಳು, ಕರುಳ ಕುಡಿಗಳು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮಾತೆಯರು, ಕುಟುಂಬದ ಆರು, ಹತ್ತು, ಇಪ್ಪತ್ತು ಮಂದಿಯನ್ನು ಕಳೆದುಕೊಂಡು ಉಳಿದಿರುವ ‘ಅನಾಥ’ರು, ಹಾಡಿ, ಆಡಿ ನಲಿದು ಶಾಲೆಯ ವಾತಾವರಣಕ್ಕೆ ಜೀವ ತುಂಬಿದ ಮಕ್ಕಳು ಇನ್ನಿಲ್ಲ ಎಂಬ ಕೊರಗಿನಲ್ಲಿ ಮುಖಕ್ಕೆ ಸೆರಗು ಮುಚ್ಚುವ ಶಿಕ್ಷಕರು, ನಿತ್ಯವೂ ಜೊತೆಯಾಗಿ ಕುಳಿತು ಚಹಾ ಹೀರುತ್ತಿದ್ದ ‘ಸಹೋದ್ಯೋಗಿ’ಗಳನ್ನು ಕಳೆದುಕೊಂಡ ಆಫ್‌ರೋಡ್ ಜೀಪ್ ಚಾಲಕರು, ಭಯಾನಕ ಸದ್ದು ಕೇಳಿ ಕಾಡಿನ ಹಾದಿಯಲ್ಲಿ ಓಡಿ ಜೀವ ಉಳಿಸಿಕೊಂಡು ವಾರದ ನಂತರ ಮರಳಿ ತಮ್ಮ ಮನೆ ಇದ್ದ ಜಾಗವನ್ನು ಹುಡುಕಿದವರು, ಮಗುಚಿಬಿದ್ದ ಊರನ್ನು ಕಂಡು ತಲೆಮೇಲೆ ಕೈ ಹೊತ್ತುಕೊಂಡು ಅರಚಿದವರು...ಇಂಥ ನೂರಾರು ಮಂದಿಯ ಸಂಕಟದ ಕಡಲು ಬತ್ತುವುದಾದರೂ ಎಂದು...?
ದುರಂತದ ನಡುವೆ ಕಂಡ ಮೂರನೇ ನೋಟ ಸ್ವಲ್ಪ ಮುದ ನೀಡುವಂಥಾದ್ದು, ಭರವಸೆ ಮೂಡಿಸುವಂಥಾದ್ದು. ಪ್ರಕೃತಿ ಹಾಗೂ ಕೃಷಿಯನ್ನು ಇಷ್ಟಪಡುವ, ಭೂಮಿ, ಆಕಾಶ, ನೀರು, ಮರ–ಗಿಡ, ಪ್ರಾಣಿ–ಪಕ್ಷಿಗಳೆಲ್ಲದರಲ್ಲೂ ಕವಿಮನಸ್ಸಿನ ಪ್ರೀತಿ ಹೊಂದಿರುವ ಕೇರಳದ ಜನರು ಪ್ರಕೃತಿ ವಿಕೋಪಕ್ಕೆ ನಲುಗುವುದು ಹೊಸತೇನಲ್ಲ. ದುರಂತಗಳ ಸಂದರ್ಭದಲ್ಲಿ ಎಲ್ಲ ಮರೆತು ಒಂದಾಗುವುದು ಕೂಡ ಹೊಸತಲ್ಲ. ಅದಕ್ಕೆ ಮತ್ತೊಂದು ದೃಷ್ಟಾಂತವಾಯಿತು ಚೂರಲ್‌ಮಲ, ಮುಂಡಕ್ಕೈ, ಪುಂಜಿರಿಮಟ್ಟಂ ಭೂಕುಸಿತದ ನಂತರದ ತೊಡಗಿಸುವಿಕೆ. ಘಟನೆ ನಡೆದ ಕೆಲವೇ ತಾಸಿನಲ್ಲಿ ನಾಡಿನ ಮೂಲೆಮೂಲೆಯಿಂದ ಅಲ್ಲಿಗೆ ತಲುಪಿದ ಜನರು ದಿನಗಟ್ಟಲೆ ಎಲ್ಲವನ್ನೂ ಬಿಟ್ಟು, ಕೆಲಸ ಮಾಡಿದ ರೀತಿ ಅನುಕರಣೀಯ. ಜಾತಿ, ಧರ್ಮ, ಪಕ್ಷ, ಅಂತಸ್ತು ಇತ್ಯಾದಿ ಗೋಡೆಗಳನ್ನು ಕೆಡವಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ಸಾಬೀತುಪಡಿಸಿದ ಅವರು ಊಟ, ತಿಂಡಿ, ಚಹಾ, ಬಿಸ್ಕತ್ತಿನ ರೂಪದಲ್ಲಿ ಉಣಬಡಿಸಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ‘ಹಬ್ಬ ಮತ್ತು ದುರಂತದಲ್ಲಿ ಮಲಯಾಳಿಗಳು ಒಂದಾಗುತ್ತಾರೆ’ ಎಂದು ಹೇಳಿದ ಮೇಪ್ಪಾಡಿ ಮಾರಿಯಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷೆ, ವಕೀಲೆ ಬಬಿತಾ ಗೋಪಿನಾಥ್ ಮತ್ತು ‘ನಮ್ಮೊಳಗಿನ ರಾಜಕಾರಣಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಹೊರಬರುತ್ತಾನೆ’ ಎಂದು ಹೇಳಿದ ಜೀಪ್ ಚಾಲಕ ಸೈನುದ್ದೀನ್ ಕುನಿಯೆ ಅವರ ಮಾತುಗಳು ಅಲ್ಲಿ ಕಂಡ ಚಿತ್ರಣಕ್ಕೆ ಪುಟವಿಟ್ಟಂತಿದ್ದವು. ಇದೆಲ್ಲದರ ನಡುವೆಯೂ ವಯನಾಡ್ ಎಂದ ಕೂಡಲೇ ಈ ದುರಂತದ ಛಾಯೆ ಸ್ಥಾಯಿಭಾವವಾಗಿ ಉಳಿದಿದೆ. ಅದು ಮಾಸಿಹೋಗಲು ಇನ್ನೆಷ್ಟು ಕಾಲ ಬೇಕಾದೀತೋ... “
ವಯನಾಡು ದುರಂತದ ಬಗ್ಗೆ ಇರುವ ಈ ಪುಟ್ಟ ಕೃತಿಯನ್ನು ಓದುವಾಗ ಕಣ್ಣಾಲಿಗಳು ತೇವಗೊಳ್ಳುವುದು ಬಹುತೇಕ ಖಾತರಿ ಎನ್ನಬಹುದು.