ವರಂಗದ ಕೆರೆ ಬಸದಿ
ಕೊರೋನಾ ಕಾಲದಲ್ಲಿ ಮನೆಯಿಂದ ಹೊರಗೆ ಹೋಗದೇ ಇದ್ದ ನನ್ನ ಗೆಳೆಯ ಶರತ್ ಕೊನೆಗೂ ಬೆಂಗಳೂರು ಬಿಟ್ಟು ತಮ್ಮ ಊರಾದ ಕಾರ್ಕಳಕ್ಕೆ ಬರಲು ಮನಸ್ಸು ಮಾಡಿದರು. ಕೆಲಸ ಹೇಗೂ ಆನ್ ಲೈನ್ ನಲ್ಲೇ ಮಾಡಬಹುದಾದುದರಿಂದ, ಮಗಳಿಗೂ ಶಾಲೆ ಇಲ್ಲದೇ ಮನೆಯಲ್ಲೇ ಇದ್ದು ಬೋರ್ ಆದುದರಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಅವರು ಇತ್ತೀಚೆಗೆ ಕಾರ್ಕಳದ ಸಮೀಪವಿರುವ ವರಂಗ ಅಥವಾ ವಾರಂಗ ಎಂಬ ಊರಿನಲ್ಲಿರುವ ಕೆರೆ ಬಸದಿ (ಜೈನ ಬಸದಿ) ಯ ಚಿತ್ರ ಹಾಗೂ ವಿಡಿಯೋವನ್ನು ಸಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಅದನ್ನು ಗಮನಿಸಿದ ನನಗೆ ಆ ಬಸದಿ ಹಾಗೂ ಅದರ ಸುತ್ತಮುತ್ತಲಿನ ಪರಿಸರ ಬಹಳ ಆಸಕ್ತಿಯನ್ನು ಮೂಡಿಸಿತು. ಅದರ ಬಗೆಗಿನ ಕಿರು ಮಾಹಿತಿ ನಿಮಗಾಗಿ…
೧೨ನೇ ಶತಮಾನದಲ್ಲಿ ನಿರ್ಮಿತವಾದ ಈ ಬಸದಿಯನ್ನು 'ಚತುರ್ಮುಖ ಬಸದಿ' ಎಂದೂ ಕರೆಯುತ್ತಾರೆ. ಈ ಬಸದಿಯ ನಿರ್ಮಾಣ ಕೆರೆಯ ನಡುವೆ ಆಗಿರುವ ಕಾರಣ ‘ಕೆರೆ ಬಸದಿ’ ಎಂಬ ಹೆಸರೂ ಬಂದಿದೆ. ಮೂಲತಃ ಇದು ಜೈನ ತೀರ್ಥಂಕರರ ಬಸದಿ. ಈ ಬಸದಿ ನಾಲ್ಕು ಬಾಗಿಲು (ಮುಖ) ಗಳನ್ನು ಹೊಂದಿದ್ದು ನಾಲ್ಕು ತೀರ್ಥಂಕರರ ಪ್ರತಿಮೆಗಳು ಇವೆ. ಅದರಲ್ಲಿ ಮುಖ್ಯ ಪ್ರತಿಮೆ ೨೩ನೇ ತೀರ್ಥಂಕರರಾದ ಪಾರ್ಶ್ವನಾಥರದ್ದು. ಉಳಿದಂತೆ ನೇಮಿನಾಥ, ಶಾಂತಿನಾಥ ಹಾಗೂ ಅನಂತನಾಥ ತೀರ್ಥಂಕರರ ಪ್ರತಿಮೆಗಳಿವೆ. ಸುಮಾರು ೮೫೦ ವರ್ಷಗಳ ಹಿಂದೆ ಈ ಬಸದಿ ನಿರ್ಮಾಣವಾಗಿದೆ ಎಂದು ಇಲ್ಲಿ ಸಿಕ್ಕ ಶಿಲಾ ಶಾಸನದಿಂದ ಅಂದಾಜಿಸ ಬಹುದಾಗಿದೆ. ಇಲ್ಲಿರುವ ಎಲ್ಲಾ ತೀರ್ಥಂಕರರ ಪ್ರತಿಮೆಗಳು ಕಾಯೋತ್ಸರ್ಗ ಭಂಗಿಯಲ್ಲಿವೆ. ಅಂದರೆ ಇಲ್ಲಾ ಪ್ರತಿಮೆಗಳು ನಿಂತುಕೊಂಡ ಭಂಗಿಗಳಲ್ಲಿ ಇವೆ. ಪ್ರತಿಯೊಬ್ಬ ತೀರ್ಥಂಕರರನ್ನು ಗುರುತಿಸಲು ಪ್ರತ್ಯೇಕವಾದ ಲಾಂಛನ (ಚಿನ್ಹೆ) ಗಳು ಇರುತ್ತವೆ. ತೀರ್ಥಂಕರರ ವಿಗ್ರಹದ ಕೆಳಗಡೆ ನೀವು ಇದನ್ನು ಗಮನಿಸಬಹುದು. ಉದಾಹರಣೆಗೆ ಮೊದಲ ತೀರ್ಥಂಕರರಾದ ವೃಷಭನಾಥ (ಆದಿನಾಥ) ಇವರ ಲಾಂಛನ ಹೋರಿ, ವರಂಗದ ಕೆರೆ ಬಸದಿಯಲ್ಲಿರುವ ೨೩ನೇ ತೀರ್ಥಂಕರರಾದ ಪಾರ್ಶ್ವನಾಥರ ಲಾಂಛನ ಹಾವು. ಹಾಗೆಯೇ ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರ ಲಾಂಛನ ಸಿಂಹ. ಇದು ಎಲ್ಲಾ ಜೈನ ಬಸದಿಗಳಲ್ಲೂ ಒಂದೇ ರೀತಿಯಾಗಿರುತ್ತದೆ. ಈ ಲಾಂಛನದಿಂದ ನೀವು ೨೪ ತೀರ್ಥಂಕರರ ಗುರುತು ಹಿಡಿಯ ಬಹುದಾಗಿದೆ.
ಕೆರೆ ಬಸದಿಯಲ್ಲಿ ಪಾರ್ಶ್ವನಾಥರ ಯಕ್ಷಿ ಪದ್ಮಾವತಿ ದೇವಿಯ ವಿಗ್ರಹವೂ ಇದೆ. ಮದುವೆ ಮುಂತಾದ ಶುಭಕಾರ್ಯದ ಸಮಯದಲ್ಲಿ ಭಕ್ತಾದಿಗಳು ಇಲ್ಲಿಗೆ ಬಂದು ಈ ದೇವಿಯ ಆಶೀರ್ವಾದ ತೆಗೆದುಕೊಂಡು ಹೋದರೆ ಕಾರ್ಯಗಳೆಲ್ಲಾ ನಿರ್ವಿಘ್ನವಾಗಿ ನಡೆಯುತ್ತದೆ ಎಂದು ನಂಬಿಕೆ ಇದೆ. ತಮ್ಮ ಮನದ ಇಚ್ಚೆಯನ್ನು ನೆರವೇರಿಸಲು ಭಕ್ತಾದಿಗಳು ಪದ್ಮಾವತಿ ದೇವಿಯ ಬಳಿ ಗಂಟೆಯ ಹರಕೆಯನ್ನು ಕೇಳಿಕೊಳ್ಳುತ್ತಾರೆ. ಅವರು ಬೇಡಿಕೊಂಡ ಸಂಗತಿಗಳು ನೆರವೇರಿದರೆ ಗಂಟೆಯನ್ನು ತೆಗೆದುಕೊಂಡು ಬಂದು ದೇವಿಯ ಬಳಿ ಪ್ರಾರ್ಥಿಸಿ ಅಲ್ಲೇ ಇರುವ ಕಬ್ಬಿಣದ ಸರಳಿಗೆ ಕಟ್ಟುತ್ತಾರೆ. ನೀವು ಇಲ್ಲಿಗೆ ಹೋದರೆ ಇಂತಹ ಹಲವಾರು ಗಂಟೆಗಳನ್ನು ನೋಡಬಹುದು.
ಈ ಕೆರೆ ಬಸದಿಯನ್ನು ತಲುಪಲು ನೀವು ಮಂಗಳೂರಿನ ಕಡೆಯಿಂದ (೭೯ ಕಿ. ಮೀ) ಬರುವಿರಾದರೆ ಮೂಡಬಿದ್ರೆ ಅಥವಾ ಪಡುಬಿದ್ರೆ ಮಾರ್ಗವಾಗಿ ಕಾರ್ಕಳ ಬಂದು ಅಲ್ಲಿಂದ ೨೪ ಕಿ.ಮೀ ದೂರದಲ್ಲಿದೆ ವರಂಗ ಎಂಬ ಊರು. ಕಾರ್ಕಳ-ಅಜೆಕಾರು-ಮುದ್ರಾಡಿ ಮಾರ್ಗದಲ್ಲಿ ಸಂಚರಿಸಬೇಕು. ಉಡುಪಿ (೪೦ ಕಿ. ಮೀ) ಕಡೆಯಿಂದ ಬರುವಿರಾದರೆ ಮಣಿಪಾಲ (೩೪ ಕಿ.ಮೀ)-ಹೆಬ್ರಿ-ಮುದ್ರಾಡಿ ರಸ್ತೆಯಾಗಿ ಕಾರ್ಕಳ ಸಾಗುವ ದಾರಿಯಲ್ಲಿ ಈ ಬಸದಿಯು ಸಿಗುತ್ತದೆ. ವರಂಗದಲ್ಲಿ ನೀವು ೧೨೦೦ ವರ್ಷಗಳಷ್ಟು ಹಳೆಯ ನೇಮಿನಾಥ ಬಸದಿ, ೧೦೦೦ ವರ್ಷಗಳಷ್ಟು ಹಳೆಯ ಚಂದ್ರನಾಥ ಬಸದಿ (ಮಠದ ಬಸದಿ) ಹಾಗೂ ೮೫೦ ವರ್ಷಗಳಷ್ಟು ಹಳೆಯ ಕೆರೆ ಬಸದಿ ಅರ್ಥಾತ್ ಪಾರ್ಶ್ವನಾಥ ಬಸದಿಯನ್ನು ನೋಡ ಬಹುದು. ಪಾರ್ಶ್ವನಾಥ ಬಸದಿಯನ್ನು ಚತುರ್ಮುಖ ಬಸದಿ ಎಂದೂ ಕರೆಯುತ್ತಾರೆ.
ಇಲ್ಲಿಯ ಬಹುಮುಖ್ಯ ಆಕರ್ಷಣೆಯ ಬಸದಿಯೇ ಕೆರೆ ಬಸದಿ. ಕೆರೆಯ ನಡುವೆ ಇರುವುದರಿಂದ ಇದಕ್ಕೆ ಆ ಹೆಸರು ಬಂದಿದೆ. ಈ ಕೆರೆಯು ಮಾನವ ನಿರ್ಮಿತವಾಗಿದ್ದು, ಇದನ್ನು ಕ್ರಿ.ಶ. ೧೧೬೦-೧೨೨೦ ವರೆಗೆ ಆಳಿದ ರಾಜ ಕುಲಶೇಖರನ ರಾಣಿ ನಿರ್ಮಿಸಿದ್ದಳು ಎಂದು ಶಿಲಾ ಶಾಸನ ಹೇಳುತ್ತದೆ. ಈ ಕೆರೆಯ ನಡುವೆ ಬಸದಿಯನ್ನು ನಿರ್ಮಿಸಲಾಗಿದೆ. ಕೆರೆಯ ಪರಿಸರವು ಅತ್ಯಂತ ನಯನ ಮನೋಹರವಾಗಿದ್ದು ಹಚ್ಚ ಹಸುರಿನ ವಾತಾವರಣದಿಂದ ಕಂಗೊಳಿಸುತ್ತದೆ. ಈ ಬಸದಿಗೆ ಹೋಗಲು ದೋಣಿ ಮುಖಾಂತರ ಮಾತ್ರ ಹೋಗಲು ಸಾದ್ಯ.
ಪ್ರವಾಸಿಗರು ಗಮನಿಸಬೇಕಾದ ಪ್ರಮುಖ ಸಂಗತಿಗಳು:
*ದೋಣಿಯಲ್ಲಿ ಹೋಗಿ ಬರಲು ಮಠದ ಬಸದಿ ಬಳಿ ಇರುವ ಟಿಕೇಟ್ ಕೌಂಟರ್ ನಲ್ಲಿ ಟಿಕೇಟ್ ತೆಗೆದುಕೊಳ್ಳಬೇಕು. ರಜಾ ದಿನಗಳಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ವಾರದ ನಡುವೆ ಸ್ವಲ್ಪ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ದೋಣಿಯಲ್ಲಿ ಪ್ರಯಾಣ ಮಾಡುವಾಗ ಸಣ್ಣ ಮಕ್ಕಳನ್ನು ಜಾಗ್ರತೆಯಾಗಿ ನೋಡಿಕೊಳ್ಳುವುದು ಉತ್ತಮ. ದೋಣಿ ಚಲಿಸುತ್ತಿರುವಾಗ ಅತ್ತ-ಇತ್ತ ಚಲಿಸದೇ ಒಂದೆಡೆ ಕುಳಿತಿರುವುದು ಉತ್ತಮ. ಮೊಬೈಲ್ ನಲ್ಲಿ ಸೆಲ್ಭಿ ತೆಗೆಯುವುದು ಅಪಾಯಕಾರಿ.
*ಬಸದಿಯ ಆವರಣದಲ್ಲಿ ಶಿಸ್ತಿನಿಂದ ವರ್ತಿಸಬೇಕು. ಸುಮ್ಮನೇ ಶಬ್ದ, ಗಲಾಟೆ ಮಾಡುವುದು ಸಲ್ಲದು. ಇಲ್ಲಿ ಆದಷ್ಟು ಶಾಂತ ರೀತಿಯಲ್ಲಿ ವರ್ತಿಸಿ. ಶುಚಿತ್ವವನ್ನು ಕಾಪಾಡಿ. ಆಹಾರವನ್ನು ಸೇವಿಸಿ ಖಾಲಿ ಪೊಟ್ಟಣಗಳನ್ನು ಬಸದಿಯ ಆವರಣದಲ್ಲಿ ಬಿಸಾಕಬೇಡಿ.
*ಇಲ್ಲಿಯ ಶಾಂತ ಪರಿಸರವನ್ನು ಆನಂದಿಸಿರಿ. ನಿಮಗೆ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಆಸಕ್ತಿ ಇದ್ದರೆ ಇಲ್ಲಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಬಹುದು. ಆದರೆ ಮಜಾ ಮಾಡಲು ಇದು ಪಿಕ್ ನಿಕ್ ಸ್ಥಳ ಅಲ್ಲ ಎಂದು ಗಮನದಲ್ಲಿರಲಿ.
* ಕಾರ್ಕಳ, ಉಡುಪಿ, ಮಣಿಪಾಲದಲ್ಲಿ ನಿಮಗೆ ಉತ್ತಮ ಹೋಟೇಲ್ ಮತ್ತು ವಸತಿ ಗೃಹಗಳು ಲಭ್ಯವಿದೆ. ಸ್ವಂತ ವಾಹನ ಅಥವಾ ಬಾಡಿಗೆ ವಾಹನವನ್ನು ಮಾಡಿಕೊಂಡು ಬಂದರೆ ಹತ್ತಿರದ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು.
ಪ್ರವಾಸದಲ್ಲಿ ಹಾಗೂ ನಮ್ಮ ಪರಂಪರೆಗಳಲ್ಲಿ ಆಸಕ್ತಿ ಉಳ್ಳವರು ಭೇಟಿ ನೀಡಲೇ ಬೇಕಾದ ಸ್ಥಳ ಇದು. ವರಂಗದ ಕೆರೆ ಬಸದಿ ಅಲ್ಲದೇ ಉಳಿದ ಎರಡು ಬಸದಿಗಳೂ ಆಕರ್ಷಣೀಯ ಶಿಲ್ಪಕಲೆಯನ್ನು ಒಳಗೊಂಡಿದೆ. ಬಿಡುವು ಮಾಡಿಕೊಂಡು ಒಮ್ಮೆ ಇಲ್ಲಿಗೆ ಹೋಗಿ ಬನ್ನಿ.
ಓದುಗರಲ್ಲಿ ವಿನಂತಿ: ವರಂಗ ಕೆರೆ ಬಸದಿ ಹಾಗೂ ಇನ್ನಿತರ ಬಸದಿಗಳ ಬಗ್ಗೆ ಅಧಿಕ ಮಾಹಿತಿ ಮತ್ತು ಈ ಲೇಖನದಲ್ಲಿ ತಪ್ಪು ಒಪ್ಪುಗಳಿದ್ದರೆ ದಯಮಾಡಿ ಪ್ರತಿಕ್ರಿಯೆ ನೀಡುವುದರ ಮೂಲಕ ತಿಳಿಸಿರಿ.
ಅಧಿಕ ಮಾಹಿತಿ ನೀಡಿದ ಶ್ರೀ ರಾಜೇಶ್ ಹೆಗ್ಡೆ, ಬೆಂಗಳೂರು, ಶ್ರೀ ಶ್ರೀರಾಮ ದಿವಾಣ, ಉಡುಪಿ ಇವರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ.
ಚಿತ್ರಗಳು : ಶ್ರೀ ಶರತ್ ಕುಮಾರ್, ಕಾರ್ಕಳ
ಕೊನೆಯ ಚಿತ್ರ: ನೇಮಿನಾಥ ಬಸದಿ (ಶ್ರೀರಾಮ ದಿವಾಣ, ಉಡುಪಿ)
Comments
ವರಂಗದ ಕೆರೆ ಬಸದಿ ಲೇಖನದ ಬಗ್ಗೆ……
ವರಂಗದ ಕೆರೆ ಬಸದಿ ಲೇಖನದ ಬಗ್ಗೆ…
ಲೇಖನ ಚೆನ್ನಾಗಿ ಮೂಡಿಬಂದಿದೆ.ಅದಕ್ಕೆ ಪೂರಕವಾಗಿ ಒಂದಷ್ಟು ಮಾಹಿತಿಯನ್ನು ನಾನು ಹಂಚಲು ಬಯಸುವೆ.
* ವರಂಗವನ್ನು’ ವರಾಂಗ’ ಎಂದೂ ಕರೆಯುತ್ತಾರೆ.
*ಕೆರೆ ಬಸದಿಯ ಹಿಂಬದಿ ಇರುವ ಕಾಡಿನಲ್ಲಿ, ಅಂದಾಜು ನಾಲ್ಕು ಕಿ. ಮೀ ದೂರ ನಡೆದುಕೊಂಡು ಹೋದರೆ ಸಣ್ಣ ಜಲಪಾತ ನೋಡಬಹುದು
* ಹೆಬ್ರಿ ಬಳಿಯೂ ಲಾಡ್ಜ್ ಇದೆ. ಉತ್ತಮ ಹೊಟೆಲ್ ಗಳು ಇವೆ
* ಮಕ್ಕಳು ಹಾಗೂ ಯುವಕರು ದೋಣಿಯಲ್ಲಿ ಕುಳಿತು ಕೆರೆಯ ನೀರಿಗೆ ಕೈ ಹಾಕಿ ಆಟವಾಡುವುದು ಮಾಡುತ್ತಾರೆ. ಹೀಗೆ ಮಾಡುವುದರಿಂದ ದೋಣಿ ವಾಲುತ್ತದೆ ಮತ್ತು ದುರಂತಕ್ಕೂ ಕಾರಣವಾಗಬಹುದು. ಹೀಗೆ ಮಾಡಲೇಬಾರದು
*ಒಂದು ವರ್ಷದ ಹಿಂದಿನ ವರೆಗೂ ಇಲ್ಲಿಗೆ ಹೆಚ್ಚು ಜನರು ಬರುತ್ತಿರಲಿಲ್ಲ. ಆಗ ಕೆರೆ ಬಸದಿಯ ಅರ್ಚಕರೇ ಬಂದವರನ್ನು ದೋಣಿಯಲ್ಲಿ ಕರೆದೊಯ್ಯುತ್ತಿದ್ದರು. ಕಳೆದ ಒಂದು ವರ್ಷದಿಂದ ಪ್ರವಾಸಿಗರು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಾಗಾಗಿ ಕೆರೆ ಬಸದಿಯ ಬಳಿಯ ನಿವಾಸಿ ಚಂದ್ರಶೇಖರ್ ಅವರನ್ನು ದೋಣಿ ನಡೆಸಲು ನಿಯುಕ್ತಿ ಮಾಡುತ್ತಿದ್ದು , ಇವರು ಒಂದು ವರ್ಷದಿಂದ ಶ್ರದ್ಧೆಯಿಂದ ಪ್ರವಾಸಿಗರನ್ನು ಬಹಳ ಜಾಗ್ರತೆಯಿಂದ ಕರೆದುಕೊಂಡು ಹೋಗಿ ವಾಪಾಸು ಬಿಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ.
*ಎರಡು ಮೂರು ಕಡೆ ಅಕ್ಷರ ದೋಷಗಳಾಗಿವೆ.
*ಒಂದೆರಡು ವಾಕ್ಯಗಳು ರಿಪಿಟ್ ಆಗಿವೆ.