ವರಮಹಾಲಕ್ಷ್ಮಿ ವ್ರತ
ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದಲಿ ಅವರೂ ಸಹಾಯ ನಿರತರೆ. ಅವರೆಲ್ಲರ ಪರವಾಗಿ , ಮುಖ್ಯ ಸಂಪದದ ವನಿತಾ ಬಳಗದ ಪರವಾಗಿ ಶ್ರೀ ಮಹಾಲಕ್ಷ್ಮಿಗೆ ಈ ಕವನ ರೂಪದ ಹಾಡಿನ ಅರ್ಪಣೆ. ಬಾಲ್ಯದಲ್ಲಿ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡುತ್ತಿದ್ದ ಮಸುಕು ಮಸುಕು ನೆನಪು. ಏನೆಲ್ಲಾ ಮಾಡುತ್ತಿದ್ದರೆಂಬ ವಿವರ ಸ್ಪಷ್ಟವಾಗಿ ನೆನಪಿಲ್ಲವಾದರೂ, ಮಬ್ಬಿನ ನೆನಕೆಗೆ ಕವನ ರೂಪ ಕೊಡಲೆತ್ನಿಸಿದ್ದೇನೆ - ನಾಗೇಶ ಮೈಸೂರು
ವರಮಹಾಲಕ್ಷ್ಮಿ ವ್ರತ
____________________________
ಶ್ರಾವಣದೀ ಶುಕ್ರವಾರ ವರಮಹಾಲಕ್ಶ್ಹ್ಮಿ ವ್ರತ
ಹೆಜ್ಜೆ ಮೇಲ್ಹೆಜ್ಜೆಯಿಟ್ಟು ಬರುವಳು ತಾಹರಸುತ
ಶ್ರೀಹರಿಯ ವಕ್ಷದಿಂದ ಇಳಿದುಬಂದ ಸುಭೀಕ್ಷ
ತೆರೆದಿಡು ಮನೆಮನಬಾಗಿಲ ಮಾಡದೆ ಅಲಕ್ಷ್ಯ!
ಮಡಿಯುಟ್ಟು ಮನದೊಳಗೆ ಭಕ್ತಿ ಎದೆಯೊಳಗೆ
ರೇಷ್ಮೆ ಬೆಳ್ಳಿ ಬಂಗಾರದೊಡವೆ ಫಳಫಳ ಹೊರಗೆ
ಕಲಶದಲಿ ತುಂಬಿಸಿ ನಾಣ್ಯ ಐಶ್ವರ್ಯ ಬಿನ್ನಾಣ
ಬಾಳೆಲೆಗ್ಹರಡಿದ ಅಕ್ಕಿಯ ಮೇಲೆ ಕುಳಿತ ಚೆನ್ನ!
ಹಾರವಾಗಿ ಕಲಶಕೆ ತಳಿರು ಮಾವಿನೆಲೇ ತೆಕ್ಕೆ
ಅರಿಶಿನ ಕುಂಕುಮ ಚಂದನ ಹೂವ್ವಲಂಕಾರಕ್ಕೆ
ಸರ್ವಾಲಂಕಾರಭೂಷಿತೆ ಲಕ್ಷ್ಮಿದೇವಿ ನಗುವಂತೆ
ಹೆಣ್ಣು ಹೆಂಗಳೆ ಬಾಲೆಯರೆಲ್ಲ ಸಡಗರದಮಾತೆ!
ಕರೆದ ಅರಿಶಿನ ಕುಂಕುಮಕೆ ವನಿತೆಯರ ಆಗಮ
ಹಂಚಿ ತಾಂಬೂಲ ಪ್ರಸಾದ ನಾರಿಲಕ್ಷ್ಮಿ ಸಂಭ್ರಮ
ಬಂದವರೆಲ್ಲರ ಭಾಗ್ಯ ನೆಲೆ ನಿಲಿಸಲಿರೆ ಸೌಭಾಗ್ಯ
ಐಶ್ವರ್ಯ ಸಂಪದ ಸಮೃದ್ಧಿಗೆಲ್ಲ ಆಗುತ ಯೋಗ್ಯ!
ಶ್ರೀಹರಿಗಂಚುವವಳ ಪ್ರೀತಿ ಹಂಚುವಳೊಲೈಸಿರೆ
ಹರಿಯ ಮುಟ್ಟುವ ಹಾದಿ ತೆರೆದೆ ಸಂಪತ್ತಿನಾಸರೆ
ಭಕ್ತಿ ಮಾರ್ಗದೆ ಮುಕ್ತಿ ಐಶ್ವರ್ಯದ ಜತೆ ಕರುಣಿಸಿ
ಮುತ್ತೈದೆಯೆಲ್ಲರ ಬಾಳಲಿ ನೆಮ್ಮದಿ ಮಳೆಸುರಿಸಿ!
ಮಕ್ಕಳಿಗೆಲ್ಲ ಕೊಬ್ಬರಿ ಸಕ್ಕರೆಯೆ ತಾಂಬೂಲವಾಗಿ
ನೆರಿಗೆಯ ಜರಿ ರೇಷ್ಮೆ ಲಂಗ ದಾವಣಿಯ ಹುಡುಗಿ
ಮನೆಯೊಳಗ್ಹೊರಗೆಲ್ಲ ಓಡಾಡುತಿರಲಾ ಸಂತಾನ
ಇಷ್ಟ ಅಷ್ಟ ಲಕ್ಷ್ಮಿಗಳೆಲ್ಲ ಒಂದೇ ಅಂಗಳಕಾಗಮನ!
ಇಷ್ಟಾರ್ಥಕೋಟಿ ಸಿದ್ಧಿಯಾಗೊ ಫಲಶ್ರುತಿ ಕೊಟ್ಟು
ಮನೆಮನಗಳೆಲ್ಲರಲಿ ತುಂಬಿಸಮ್ಮ ಕರುಣೆಯಿಟ್ಟು
ಬೇಡದಿದ್ದರು ಕೊಡುತ ವರಗಳ ಹರ್ಷದ ಹಾಡು
ಎಲ್ಲಾ ನಾರಿ ಮನೆಮನ ಮಹಾಲಕ್ಷ್ಮಿಯಾಗಿಬಿಡು!
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ವರಮಹಾಲಕ್ಷ್ಮಿ ವ್ರತ
In reply to ಉ: ವರಮಹಾಲಕ್ಷ್ಮಿ ವ್ರತ by makara
ಉ: ವರಮಹಾಲಕ್ಷ್ಮಿ ವ್ರತ