ವರಮಹಾಲಕ್ಷ್ಮೀ ವ್ರತದ ಹಿನ್ನಲೆ ಮತ್ತು ಮಹತ್ವ

ವರಮಹಾಲಕ್ಷ್ಮೀ ವ್ರತದ ಹಿನ್ನಲೆ ಮತ್ತು ಮಹತ್ವ

ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲಿ ಸಾಲು ಸಾಲು ಹಬ್ಬಗಳ ಪರ್ವ.ಹಬ್ಬಗಳ ಮಾಸವೆಂದೇ ಹೇಳಬಹುದು.ಅದರಲ್ಲೂ ಸಂಭ್ರಮ-ಸಡಗರ ಹೆಣ್ಣು ಮಕ್ಕಳಿಗೆಂದೇ ಹೇಳಬಹುದು. ಹಬ್ಬಗಳ ಆಚರಣೆಯ ಹಿಂದೆ ಅನೇಕ ದೂರದೃಷ್ಟಿಯಿರುತ್ತದೆ. ದೇವ-ದೇವಿಯರ ಆರಾಧನೆ ಮನಸ್ಸಿನ ಶಾಂತಿ, ನೆಮ್ಮದಿ, ಸುಖ ಸೌಭಾಗ್ಯಗಳನ್ನು ನೀಡುತ್ತದೆ ಎಂಬ ನಂಬಿಕೆ. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬದ ಹಿಂದೆಯೂ ಒಂದೊಂದು ಕಥೆಯಿದೆ. ಶ್ರಾವಣ ಮಾಸಕ್ಕೂ ಹೆಣ್ಣು ಮಕ್ಕಳಿಗೂ ಹತ್ತಿರದ ನಂಟು. ಕುಟುಂಬ ಕ್ಷೇಮ, ಕೈಹಿಡಿದವರ, ಮನೆಮಂದಿ ಮಕ್ಕಳ ಹಿರಿ -ಕಿರಿಯರ ಆಯುಷ್ಯ, ನೆಮ್ಮದಿಗಾಗಿ ಅನೇಕ ವ್ರತ ಪೂಜೆಗಳಿವೆ.

ವರಮಹಾಲಕ್ಷ್ಮೀ ವ್ರತ ಅಥವಾ ಹಬ್ಬದಲ್ಲಿ ಸಂಪತ್ತಿನ ದೇವಿ ಲಕ್ಷ್ಮೀಗೆ ಮೊದಲ ಮನ್ನಣೆ. ಅಷ್ಟ್ಯೆಶ್ವರ್ಯ ಕರುಣಿಸೆಂಬ ಪ್ರಾರ್ಥನೆ. ದೇವಿಯನು ಪ್ರತಿಷ್ಠಾಪಿಸಿ, ವಿಧವಿಧವಾಗಿ ಸಿಂಗರಿಸಿ ಕೂರಿಸುವುದೂ ಕೆಲವೆಡೆ ಇದೆ. ‘ವರಮಹಾಲಕ್ಷ್ಮೀ ಮನೆಗೆ ಬಾ ತಾಯೇ’ ಎಂದು ಕೇಳಿಕೊಳ್ಳುವರು. ತೆಂಗಿನಕಾಯಿಯಲ್ಲಿ ದೇವಿಯ ಆವಾಹನೆ ಮಾಡಿ ಭಕ್ತಿಭಾವದಿಂದ ಪೂಜಿಸುವುದಿದೆ. ದೇವಿಗೆ ಪ್ರಿಯವಾದ ಆಭರಣ, ಹೂವೂ, ಹಣ್ಣು, ನೈವೇದ್ಯ ಸಮರ್ಪಿಸುವರು.

ವ್ರತಾಚರಣೆಯ ಹಿಂದೆ ಪೌರಾಣಿಕ ಹಿನ್ನೆಲೆಯಿದೆ. ಸಮುದ್ರಮಥನದಲ್ಲಿ ಉದಯಿಸಿದ ಶ್ರೀಲಕ್ಷ್ಮೀ, ಐಶ್ವರ್ಯ ದೇವತೆ. ಆಕೆ ಇದೇ ಮಾಸದಲ್ಲಿ ಮೇಲೆದ್ದು ಬಂದವಳೆಂಬ ಮಾಹಿತಿಯಿದೆ. ಸಂಪತ್ತು,ಐಶ್ವರ್ಯ, ಆಯುಷ್ಯ, ಆರೋಗ್ಯವೃದ್ಧಿಗಾಗಿ ದೇವಿಯ ಆರಾಧನೆಯಲ್ಲಿ ‘ವರಮಹಾಲಕ್ಷ್ಮೀ ಪೂಜೆ’ ಯೂ ಒಂದು.

ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠ ಸುರಪೂಜಿತೇ/

ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ//

ಸಕಲ ಲೋಕಗಳ ಹಿತ ಚಿಂತಕನೂ, ರಕ್ಷಿಸುವವನೂ, ಲಯಾಧಿಕಾರಿಯೂ, ಜಗದ ತಂದೆಯೂ ಆಗಿರುವ ಪರಮೇಶನಲ್ಲಿ ಮಂಗಳಕರವಾದ ವ್ರತದ ಬಗ್ಗೆ ಪಾರ್ವತಿ ಕೇಳಿದಾಗ ಶಿವಶಂಕರನು ಹೇಳಿದ ವ್ರತವೇ ‘ವರಮಹಾಲಕ್ಷ್ಮೀ ಮಹಾವ್ರತ’.

ಕುಂಡಿನವೆಂಬ ಪಟ್ಟಣದಲ್ಲಿ ವಾಸವಿದ್ದ ಪರಮ ಪತಿವ್ರತೆ, ಸಕಲ ಗುಣ ಸಂಪನ್ನೆ, ಮಧುರ ಭಾಷಿಣಿ, ನಿರ್ಮಲ ಮನಸ್ಸು ಹೊಂದಿದ ಬ್ರಾಹ್ಮಣ ಹೆಣ್ಣುಮಗಳೊಬ್ಬಳಿಗೆ ರಾತ್ರಿ ಕನಸಿನಲ್ಲಿ ಮಹಾಲಕ್ಷ್ಮಿಯು ದರ್ಶನವಿತ್ತು ಹರಸಿದಳಂತೆ. ಆಕೆಯ ಗುಣ, ಮನೆಯವರ, ಹಿರಿಯವರ ಸೇವೆ, ಪತಿಭಕ್ತಿಯನ್ನು ಮೆಚ್ಚಿ ಮಂಗಳಕರವಾದ ವ್ರತವನ್ನು ಮಾಡಿ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳೆಂದು ಹರಸಿದಳಂತೆ. ಮಹಾಲಕ್ಷ್ಮಿಯ ಸ್ತೋತ್ರವನ್ನು ಮಾಡಿದ ಚಾರುಮತಿಗೆ ವರಗಳನ್ನು ನೀಡಿ, ಶ್ರಾವಣ ಶುಕ್ರವಾರದಂದು ಪೂಜೆ ಕೈಗೊಳ್ಳೆಂದು ಹೇಳಿ ಅಂತರ್ಧಾನಳಾದಳಂತೆ.

ಮರುದಿನ  ಚಾರುಮತಿ ತನ್ನ ಬಂಧುಗಳಲ್ಲಿ ವಿಷಯ ತಿಳಿಸಿ ಶ್ರಾವಣ ಶುಭ ಶುಕ್ರವಾರದಂದು ಮಿಂದು ಮಡಿಯುಟ್ಟು ವ್ರತ, ಪೂಜೆಯನ್ನು ಎಲ್ಲರೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಆಚರಿಸಿದಳಂತೆ. ವರಲಕ್ಷ್ಮಿಯನ್ನು ವಿಧವಿಧವಾಗಿ ಜಾಜಿ ಮಲ್ಲಿಗೆ, ಕರವೀರ, ಸಂಪಿಗೆ, ಸಿಂಗಾರ, ಕಮಲದ ಪುಷ್ಪಗಳಿಂದ ಅಲಂಕರಿಸಿ, ಪ್ರಿಯವಾದ ಕಡಲೆಬೇಳೆಯ ಹಯಗ್ರೀವ ತಯಾರಿಸಿ, ನೈವೇದ್ಯ ಮಾಡುತ, ಅರ್ಚಿಸಿ, ಭಜಿಸಿ, ಧ್ಯಾನಿಸಿದರಂತೆ.

ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೇ/

ನಾರಾಯಣಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ//

ಎಂದು ಸ್ತೋತ್ರವನ್ನು ಪಠಿಸಿ ಪ್ರಾರ್ಥಿಸಿದರು. ನವಗ್ರಂಥಿಗಳ ದಾರವನ್ನು ಪೂಜಿಸಿ ಬಲತೋಳಿಗೆ ಕಟ್ಟಿದರು. ತುಪ್ಪದಲ್ಲಿ ಮಾಡಿದ ಭಕ್ಷ್ಯಗಳನ್ನು ಅರ್ಪಿಸಿ ಮಂಗಳಾರತಿ ಎತ್ತಿದರು. ದಾನ, ಬಾಗೀನ ನೀಡಿದ ಮೇಲೆ ಪ್ರಸಾದ ಸೇವಿಸಿದರು.ಧನ, ಧಾನ್ಯ ಸಂಪತ್ತಿನ ಅಭಿವೃದ್ಧಿ, ಆರೋಗ್ಯ ಜೀವನವನ್ನು ಕುಂಡಿನ ಪಟ್ಟಣದವರೆಲ್ಲರೂ ಚಾರುಮತಿಯೊಂದಿಗೆ ಅನುಭವಿಸಿದರಂತೆ.

ಈ ರೀತಿಯಾಗಿ ಪರಮಪವಿತ್ರವಾದ ವ್ರತವೇ ವರಮಹಾಲಕ್ಷ್ಮೀ ವ್ರತವಾಗಿದೆ ಎಂದು ಭಗವಾನ್ ಶಂಕರನು ಪಾರ್ವತಿಗೆ ತಿಳಿಸಿದನು. ಇಲ್ಲಿ ಆಡಂಬರಕ್ಕಿಂತ ಶ್ರದ್ಧಾಭಕ್ತಿಗಳೇ ಮುಖ್ಯ. ಎಲ್ಲರೊಂದುಗೂಡಿ ಆಚರಿಸುವುದರಿಂದ ಪರಸ್ಪರ ಬಾಂಧವ್ಯದ ಬೆಸುಗೆಯಾಗುವುದು. ದೂರವಾದ ಬಂಧುತ್ವ, ಒಡೆದ ಮನಸ್ಸುಗಳು ಒಂದಾಗುವ ಅವಕಾಶ. ಲೋಕದ ಸಂಕಷ್ಟ ದೂರವಾಗಲಿ. ಮಾನವ ಮಾನವನಾಗಿಯೇ ವ್ವವಹರಿಸಲಿ. ಮಾನವೀಯತೆ ತಲೆಯೆತ್ತಿ ವಿಜೃಂಭಿಸಲಿ. ನೈತಿಕತೆಯ ತಿರುಳ ಪಾಯ ಪ್ರತಿಯೋರ್ವರ ಮನೆಮನಗಳಲ್ಲಿ ಗಟ್ಟಿಗೊಳಲಿ. ನಮ್ಮೆಲ್ಲರ ಪಾಲಿಗೆ ಮುಂದೆ ಸುದಿನಗಳೇ ಕಾಣುವಂತಾಗಲಿ. ದೈವ ಭಕ್ತಿಯ ಜೊತೆ ಜೊತೆಗೆ ಶ್ರಮಸೇವೆ, ಪ್ರಾಮಾಣಿಕ ದುಡಿಮೆ, ಕಾಯಕ ನಿಷ್ಠೆ ಸೇರಿ ಸಂಪತ್ತು ವೃದ್ಧಿಯಾಗುವಂತೆ, ಮನೆಮನೆಯಲ್ಲೂ ಸಂತೋಷ, ಸಹಭಾಗಿತ್ವದ ವಾತಾವರಣ ಕಾಣಲೆಂಬ ‌ಹಾರೈಕೆ. ದುಡಿಮೆಯಲ್ಲಿಯೇ ದೇವರನ್ನು ಕಾಣು ಅಲ್ಲವೇ? ಇದೊಂದು ಮೌಲಿಕವಾದ ವಜ್ರಾಭರಣದಷ್ಟು ತೂಕವುಳ್ಳ ಮಾತು.

ಆ ಮಹಾಮಾತೆಯ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ. ಸರ್ವರಿಗೂ ಒಳ್ಳೆಯದಾಗಲಿ.

-ರತ್ನಾ ಕೆ.ಭಟ್ ತಲಂಜೇರಿ,ಪುತ್ತೂರು

(ವಿವಿಧ ಮೂಲಗಳಿಂದ ಸಂಗ್ರಹ)

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು