ವರಸಿದ್ಧಿವಿನಾಯಕ ವ್ರತ.

ವರಸಿದ್ಧಿವಿನಾಯಕ ವ್ರತ.

ಬರಹ

ವರಸಿದ್ಧಿವಿನಾಯಕ ವ್ರತ :

ಭಾದ್ರಪದ ಶುಕ್ಲ ಚತುರ್ಥೀ ಮದ್ಯಾನ್ಹ ವ್ಯಾಪಿನಿ ಮತ್ತು ಯಾಮದ್ವಯವ್ಯಾಪಿನಿಯಿರುವದಿನ, [೧೫, ಶುಕ್ರವಾ
ರ, ಸೆಪ್ಟೆಂಬರ್, ೨೦೦೭ ] ಆಚರಿಸತಕ್ಕ ವ್ರತ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರುಸ್ಸರ ಪೂಜಿಸಿ, ಮೋದಕಗಳನ್ನೂ, ನೈವೇದ್ಯಮಾಡಿ, ಸ್ಯಮಂತಕೋಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ, ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ ಇಷ್ಟಾರ್‍ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ, ಪ್ರತಿಮನೆಯಲ್ಲೂ ಗಣಪತಿಮೂರ್ತಿಯನ್ನು ತಂದು, ಆರಾಧಿಸುವ ಪದ್ಧತಿ ಕರ್ನಾಟಕದಲ್ಲಿದೆ.

ಮುಂಬೈ ನಲ್ಲಿ ಗಣೇಶೋತ್ಸವಗಳು :

ದೇಶದ ಎಲ್ಲೆಡೆ ಗಣಪತಿ ಪೂಜೆ ನಡೆಯುತ್ತಿದ್ದರೂ ಮಹಾರಾಷ್ಟ್ರದ ಗಣಪತಿಯದೇ ಒಂದು ವಿಶಿಷ್ಠ ಸ್ಥಾನ. ಸಹಸ್ರಾರು ಗಣಪತಿಗಳ ಪೆಂಡಾಲುಗಳನ್ನು ಈಗಾಗಲೇ ರಚಿಸಿದ್ದು, ಈ ವರ್ಷವೂ ವಿಜೃಂಭಣೆಯಿಂದ ಪೂಜೆಯನ್ನು ಮಾಡಲಾಗುತ್ತದೆ. ಮಹಾರಾಷ್ಟ್ರದ ಜನತೆಗೆ ಈ ವರ್ಷ, ಬಹಳ ಸಂಭ್ರಮ. ಕಾರಣ, ಮೊದಲನೆಯದಾಗಿ ಮಹಾರಾಷ್ಟ್ರದ ಮಣ್ಣಿನಮಗಳಾದ ಶ್ರೀಮತಿ ಪ್ರತಿಭಾಪಾಟೀಲ್ ರಾಷ್ಟ್ರಾಧ್ಯಕ್ಷೆಯಾಗಿರುವುದು. ಇನ್ನೊಂದು ಮರಾಠೀಜನರ ಆಶೋತ್ತರಗಳನ್ನು ಬಿಂಬಿಸಲು ಹೋರಾಡುತ್ತಿರುವ ಶಿವಸೇನಾ, ಮುಂಬೈ ನಗರಪಾಲಿಕೆಯ ಆಡಳಿತವನ್ನು ಸತತವಾಗಿ ಮುಂದಿನ ೫ ವರ್ಷಗಳವರೆಗೆ ನಿರ್ವಹಿಸುವಲ್ಲಿ ಮುಂದಾಳಾಗಿರುವುದು. ಶರದ್ ಪವಾರ್ ಮುಂತಾದ ರಾಜಕೀಯ ನೇತಾಗಣ, ಕೇಂದ್ರದಲ್ಲಿ ಪ್ರಮುಖ ಪಾತ್ರವಹಿಸಿರುವುದು.
ಒಟ್ಟಿನಲ್ಲಿ ರಾಜಕೀಯ, ಕೃಷಿ, ಉದ್ಯಮ, ಸಿನಿಮಾರಂಗಗಳಲ್ಲಿ ದೇಶದಲ್ಲೇ ಮಂಚೂಣಿಯಲ್ಲಿರು ರಾಜ್ಯ- ಮಹಾರಾಷ್ಟ್ರ. ಇದು ಸಹಜವಾಗಿಯೇ ಮರಾಠೀ ಜನರಿಗೆ, ಮುಂಬೈಕರರಿಗೆ ಹೆಮ್ಮೆತರುವಂತಹವಿಷಯ. ಸಾರ್ವಜನಿಕ ಗಣಪತಿ ಉತ್ಸವ, ಲೋಕಮಾನ್ಯ ತಿಳಕರಕಾಲದಿಂದ ಅತ್ಯಂತ ಪ್ರಮುಖ ಸಾರ್ವಜನಿಕ ಉತ್ಸವದ ರೂಪದಲ್ಲಿ ರೂಪಗೊಂಡ ಬಗೆ, ಸರ್ವವಿದಿತವಾಗಿದೆ. ಅಂತಹ ಪ್ರಥಮ ಗಣಪತಿಉತ್ಸವವನ್ನು, ಮುಂಬೈನ ಕೇಶವ್ಜೀ ನಾಯಕ್ ಚಾಲ್ ನಲ್ಲಿ ೧೮೯೩ ರಲ್ಲಿ ಪ್ರಾರಂಭಮಾಡಿದವರು ಸ್ವತಃ ತಿಳಕರೇ.

ಯಾವ ಆಡಾಂಬರವೂ ಇಲ್ಲದ ಸರಳ ಶೈಲಿಯ ಈ ೨.೫ ಮೀಟರ್ ಎತ್ತರದ್ದು. ಪೂಜೆಯನ್ನೂ ವಿಧಿವತ್ತಾಗಿ ನೆರವೇರಿಸುವುದು, ಇಲ್ಲಿಯ ವೈಶಿಷ್ಟ್ಯ. ವಿನೋದ್ ಸತ್ಪುತೆ ಮತ್ತು ಅವರ ವೃಂದದವರು, ಇದೇ ಅಳತೆಯ ಮೂರ್ತಿಯನ್ನೇ ದಶಕಗಳಿಂದ ಆರಾಧಿಸುತ್ತಾಬಂದಿದ್ದಾರೆ. ಲಿಕರ್ ವ್ಯಾಪಾರಿಗಳ ದೇಣಿಗೆಯನ್ನು ಅವರು ಮುಟ್ಟುವುದೂ ಇಲ್ಲ. ಚಲನಚಿತ್ರ ಪ್ರಪಂಚದವರನ್ನೂ ಅವರು ಸ್ವಲ್ಪ ದೂರದಲ್ಲಿಟ್ಟಿದ್ದಾರೆ. ೧೯೩೨ ರಲ್ಲಿ ರೂಪಿಸಿಕೊಂಡ ಕಾನೂನಿನಂತೆ, ಆ ಗಲ್ಲಿ ಯ ಚಾಲುಗಳಲ್ಲಿ ವಾಸಿಸುವ ಹಿತ-ಮಿತವಾದ ಸದಸ್ಯರ ಒಡನಾಟದೊಂದಿಗೆ ಸದ್ದುಗದ್ದಲವಿಲ್ಲದೆ ಗಣಪನ ಆರಾಧನೆ ನಡೆಯುತ್ತದೆ. ಮ್ಯೂಸಿಕ್ ಡೈರೆಕ್ಟರ್ ಆನಂದ್ಜೀ, ಹೇಗೋ ಈ ಸದಸ್ಯರಜೊತೆಗೆ ಸೇರಿಕೊಂಡಿದ್ದಾರೆ. ಅವರೂ ಸಂಘದ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದಾರೆ.

ಲಾಲ್ಬಾಗ್ಚಾ ರಾಜಾ :

ಅತ್ಯಂತ ಭಾರಿಎತ್ತರದ ಗಣಪತಿಯ ಪೂಜೆ, ಈ ಗಣೇಶ ಮಂಡಲಿಯ ವಿಶೇಷತೆ. ಇವರೂ ಒಂದು ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಾರೆ. ೧೯೩೪ ರಲ್ಲಿ ಸ್ಥಳೀಯ ಮೀನುಗಾರರ ತಂಡ, ಗಣೇಶೋತ್ಸವವನ್ನು ಮೊಟ್ಟಮೊದಲು ಆಯೋಜಿಸಿತು. ೨೦೦೬ ರಲ್ಲಿ, ಗಣೇಶೋತ್ಸವದ ವಾರದಲ್ಲಿ ಸುಮಾರು ೧ ಮಿಲಿಯನ್ ಭಕ್ತರು ಗಣಪನನ್ನು ನೋಡಿ ಆನಂದಿಸಿದ ದಾಖಲೆಯಿದೆ. ಹುಂಡಿಯಲ್ಲಿ ಹಾಕುವ ಭಕ್ತರ ಕಾಣಿಕೆಗೆ ಸೀಮೆಯಿಲ್ಲ. ಬಂಗಾರ, ಬೆಳ್ಳಿ ಹಾಗೂ ಹಣದ ಸುರಿಮಳೆಯೇ ಆಗುತ್ತದೆ. ಅದರ ಮೊತ್ತ ಕೋಟಿಗಟ್ಟಲೆ ರೂಪಾಯಿಗಳದು. ೧೧ ನೇ ದಿನ ಮೂರ್ತಿಯನ್ನು ವಿಸರ್ಜಿಸಿದ ಮೇಲೆ, ಆ ಸ್ಥಳ ಮೀನುಗಾರರ ಮಾರಾಟದ ಮಾರುಕಟ್ಟೆಯ ಸ್ಥಳವಾಗಿರುತ್ತದೆ. ಗಣಪತಿ ಹಬ್ಬವನ್ನು ಬಿಟ್ಟರೆ ಅಲ್ಲಿ ಮೀನಿನ ಮಾರುಕಟ್ಟೆ, ವರ್ಷಪೂರ್ತಿ ಇರುತ್ತದೆ.

ಮಾಟುಂಗದ ಗೌಡಸಾರಸ್ವತ ಬ್ರಾಹ್ಮಣರು ಸ್ಥಾಪಿಸಿ ಪೂಜಿಸುವ ಗಣಪತಿ :

ಹಣ, ವಿಜೃಂಭಣೆಗೆ ಹೆಸರಾದ ಗೌಡಸಾರಸ್ವತ ಬ್ರಾಹ್ಮಣರು ಇಡುವ ಗಣೇಶನ ಉತ್ಸವ, ಮುಂಬೈನ ಭಕ್ತಗಣವನ್ನು ಆಕರ್ಶಿಸುತ್ತದೆ. ಗಣಪನಿಗೆ ಹಾಕುವ ಒಡವೆಗಳ ಬೆಲೆ, ಸುಮಾರು ೭ ಕೋಟಿಯೆಂದು ಅಂದಾಜುಮಾಡಲಾಗಿದೆ. ಇದನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಬದಲು ಮಣ್ಣಿನಲ್ಲೇ ಮಾಡಿದ್ದಾರೆ. ಪರಿಸರ ಸಂರಕ್ಷಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಇದು ೫೨ ನೆಯ ವರ್ಷ. ಸುಮಾರು ೫೦ ಸಾವಿರ ಭಕ್ತಜನರು ಪ್ರತಿದಿನ ವೀಕ್ಷಿಸುತ್ತಾರೆ. ಭಕ್ತಾದಿಗಳ ಸಂಖ್ಯೆ, ಮುಖ್ಯವಾದ ದಿನದಂದು ೧ ಲಕ್ಷಕ್ಕೂ ಮಿಗಿಲಾಗಿರುತ್ತದೆ.

ಅಂಧೇರೀಚಾ ರಾಜ :

೮.೫ ಅಡಿ ಎತ್ತರದ, ಈ ಗಣೇಶಮೂರ್ತಿ, ಮುಂಬೈನ ಉಪನಗರ ಅಂಧೇರಿಯ ವೀರಾದೇಸಾಯಿರೋಡಿನಲ್ಲಿದೆ. ಈ ಮೂರ್ತಿಯನ್ನು ವಿಸರ್ಜಿಸುವುದಿಲ್ಲ. ಬದಲಾಗಿ, ಇದನ್ನು ೨೦ ಲಕ್ಷ ಗಾಜಿನ ತುಂಡುಗಳಿಂದ ಮಾಡಿದ " ಶೀಶ್ ಮಹಲ್" ನ ಒಳಗೆ ಕೂರಿಸಿ, ಸುಮಾರು ೧೮ ಗಂಟೆಗಳಕಾಲ ಮೆರೆವಣಿಗೆಯಲ್ಲಿ ವರ್ಸೋವಾ ಬೀಚಿಗೆ ಮಾರನೆಯದಿನ ಕರೆದೊಯ್ಯುತ್ತಾರೆ. ಪ್ರತಿಗಾಜಿನ ಕನ್ನಡಿ ಚೂರಿನಲ್ಲೂ ವಿಜ್ಞೇಶ್ವರ ಪ್ರತಿಬಿಂಬ ಪ್ರಜ್ವಲಿಸುತ್ತದೆ.

ತಿಳಕ್ ನಗರದ ಸಹ್ಯಾದ್ರಿ ಕ್ರೀಡಾಮಂಡಲ್ :

ಇದನ್ನು ನಿರ್ವಹಿಸುವ ವ್ಯಕ್ತಿ ಬೇರೆ ಯಾರೂ ಅಲ್ಲ- ಕುಖ್ಯಾತ, ಭೂಗತ ಕಾರ್ಯಾಚರಣೆಗಾರ, ಛೋಟಾ ರಾಜನ್. ಇದೇ ಪರಿಸರದಲ್ಲಿ ಹುಟ್ಟಿಬೆಳೆದ ರಾಜನ್ ಗೆ, ಗಜವದನನಮೇಲೆ ಎಲ್ಲಿಲ್ಲದ ಆತ್ಮೀಯತೆ. ಹಲವು ವರ್ಷಗಳ ಹಿಂದೆ, ಫುಟ್ಬಾಲ್ ಮೈದಾನದವನ್ನೆಲ್ಲಾ ಆವರಿಸುತ್ತಿದ್ದ ಪಂಡಾಲ್, ಈಗ ಒಂದು ಮೂಲೆಗೆ ಮಾತ್ರ ಸೀಮಿತವಾಗಿದೆ. ಅತ್ಯಂತ ಭಾರಿ ಎತ್ತರದ ಕೋಟೆ, ಅರಮನೆ, ದೇವಸ್ಥಾನಗಳನ್ನು ರಚಿಸಿ, ಝಗಝಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಿ ಪೂಜಿಸುವ ಪದ್ಧತಿ ಇಲ್ಲಿನದು. ಪೋಲೀಸರ ಉಸ್ತುವಾರಿಯಲ್ಲಿ ಇದು ನಡೆಯುತ್ತದೆ. ಆದರೆ ಎಲ್ಲಾ ಸಹಕಾರ ಮತ್ತು ಸಿದ್ಧತೆ, ಛೋಟಾರಾಜನ ಕಡೆಯಿಂದಲೇ ಬರುವುದು ಒಂದು ವಿರೋಧಾಭಾಸ. ಏಕೆಂದರೆ ಈ ಗಣೇಶೋತ್ಸವ ರಾಜನ್ ನ ಪ್ರಚಂಡ ಕುಖ್ಯಾತ ಜಗತ್ತಿನ ವಹಿವಾಟುಗಳ ವಿಸ್ತಾರದ ಜನಮನ್ನಣೆಯತರಹದ್ದು, ಎಂದು ವಿವೇಕಿಗಳ ಅಂಬೋಣ !

ಇವಷ್ಟೇ ಅಲ್ಲದೆ, ಇನ್ನೂ ನೂರಾರು ಗಣಪತಿ ಉತ್ಸವಗಳು ನಗರದ ಉದ್ದಗಲಕ್ಕೂ ಹಮ್ಮಿಕೊಂಡಿದ್ದು, ಪ್ರತಿದಿನದ ದೈನಂದಿಕಗಳ ಮುಖ್ಯಗ್ರಾಸ, ತಮ್ಮ ಪ್ರಮುಖ ಪುಟಗಳ ಬಹುಭಾಗ, ಈಉತ್ಸವಗಳನ್ನು ವೀಕ್ಷಿಸಿದ ಜನಸಮೂಹದ ವಿವರಣೆಯೇ ಆಗಿರುತ್ತದೆ.