ವರ್ಗಾವಣೆಗೊಂದು ನೀತಿ ಯಾಕಿಲ್ಲ....!

ವರ್ಗಾವಣೆಗೊಂದು ನೀತಿ ಯಾಕಿಲ್ಲ....!

ಬರಹ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಸರಕಾರದ ಆಡಳಿತ ಚುಕ್ಕಾಣಿ ಹಿಡಿದಿದೆ. ಹೊಸ ಹೊಸ ಕಾರ್ಯಕ್ರಮ... ಹೊಸ ಹೊಸ ಯೋಜನೆ... ಒಟ್ಟಿನಲ್ಲಿ ಏನೋ ಒಂಥರಾ... ಥರಾ... !
ಸಿನಿಮಾ ಶೋ ನೂರು ದಿನ ಪೂರೈಸಿದರೆ ಶತದಿನೋತ್ಸವ ಆಚರಿಸ್ತಾರೆ. ಹಾಗೇನೆ ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ ನೂರು ದಿನ ಪೂರೈಸಿದ್ದೂ ಆಚರಣೆಯಾಗಿದೆ. ಆಡಳಿತ ಚುಕ್ಕಾಣಿ ಹಿಡಿದಿರೋರು ಇದನ್ನು ಸಮರ್ಥಿಸಿಕೊಂಡರೂ ಸಾರ್ವಜನಿಕ ಟೀಕೆ ಟಿಪ್ಪಣಿಗಳಿಗೇನೂ ಕೊರತೆಯಾಗದಂತೆ ಕಾರ್ಯಕ್ರಮವನ್ನೂ ಆಯೋಜಿಸಿದ್ದರು.
ಆದರೂ ನೂರು ದಿನದಲ್ಲಿ ನಡೆದ ವರ್ಗಾವಣೆಗಳೆಷ್ಟು...! ಸಾವಿರಕ್ಕೂ ಹೆಚ್ಚು...! ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಲ್ಲವೇ? ಉತ್ತಮ ಆಡಳಿತದ ಹಿತದೃಷ್ಟಿಯಿಂದ ವರ್ಗಾವಣೆ ಅನಿವಾರ್ಯ ಎಂಬ ಮಾತು ಆಡಳಿತ ಚುಕ್ಕಾಣಿ ಹಿಡಿದಿರೋರ ಸಮರ್ಥನೆ...! ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂಬುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆರೋಪ ಮತ್ತು ಟೀಕೆ...!

ವರ್ಗಾವಣೆಯಲ್ಲೇನು ರಾಜಕೀಯ?
ವರ್ಗಾವಣೆ ಎಂದಾಕ್ಷಣ ಅಲ್ಲೊಂದಿಷ್ಟು ಕೊಡು-ಕೊಳ್ಳುವ ವ್ಯವಹಾರ ಇದ್ದೇ ಇರುತ್ತದೆ. ಈ ರೀತಿ ವ್ಯವಹಾರ ಮಾಡಿಕೊಳ್ಳುವ ಪ್ರಕ್ರಿಯೆ ಕಳೆದ ಹತ್ತು ವರ್ಷಗಳಲ್ಲಿ ಬೆಳೆದು ಬಂದ್ದಂತದ್ದು...! ರಾಜಕೀಯ ಪುಡಾರಿಗಳು ಅಧಿಕಾರಿಗಳ ವರ್ಗಾವಣೆಯಲ್ಲೂ ಹಣ ಮಾಡುವ ಸಾಧ್ಯತೆ ಕಂಡುಕೊಂಡ ಸಾಧನೆ ಮಾಡಿ ತೋರಿಸಿದರು. ಅದು ಹಾಗೆಯೇ ಮುಂದುವರಿದಿದೆ.
ಇದು ಭ್ರಷ್ಟಾಚಾರದ ಬೇರು ಎಂದು ಹೇಳಲಡ್ಡಿಯಿಲ್ಲ. ಯಾಕೆಂದರೆ ಕೆಲವು "ಆಯಕಟ್ಟಿ"ನ ಹುದ್ದೆಗಳಿಗೆ ಹೋದರೆ ಸಂಬಳದ ಜೊತೆ ಸಾಕಷ್ಟು ಗಿಂಬಳವನ್ನೂ ಮಾಡಿಕೊಳ್ಳಬಹುದು ಎಂಬ ಆಸೆ... ಅಧಿಕಾರಿಗಳದ್ದು... ಅದರ ಮುಂದುವರಿದ ಭಾಗವೇ ಲೋಕಾಯುಕ್ತರ ಬಲೆಗೆ ಬೀಳುವುದು.... ಹೀಗೆ ಬಿದ್ದವರ ಸಮೀಪವರ್ತಿಗಳೇ ಇಂಥ ಸಂದರ್ಭದಲ್ಲಿ ಬಾಯ್ಬಿಡ್ತಾರೆ...! ಹಣದ ಎಲ್ಲಿಂದ ಬಂತು ಎಂದು ! ಝಳಕಿ ಚೆಕ್‌ ಪೋಸ್ಟ್‌ ಸೇರಿದಂತೆ ಕೆಲವು ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಹಣ ಮಾಡೋದು ಹೇಗೆಂಬುದನ್ನು ತೋರಿಸಿಕೊಡ್ತಾರೆ... ! ಇದು ಸಾರಿಗೆ ಇಲಾಖೆ ಕತೆಯಾದರೆ ಸರಕಾರ ಬಹುತೇಕ ಎಲ್ಲ ಇಲಾಖೆಗಳಲ್ಲೂ ಇದು ನಡೆದೇ ಇದೆ....! ಇದನ್ನು ರಾಜಕಾರಣಿಗಳು, ಶಾಸಕರು ಬಳಸಿಕೊಳ್ತಾರೆ... ತಾವು ಕೂಡಾ ಹಣ ಮಾಡೋದು ರೂಢಿಸಿಕೊಳ್ತಾರೆ..!
ಇತ್ತೀಚಿಗೆ ಪೊಲೀಸ್‌ ಇಲಾಖೆಯಲ್ಲಿ ನಡೆದ ವರ್ಗಾವಣೆಯ ಸಂದರ್ಭದಲ್ಲಿ ಶಾಸಕರು ಅಸಮಾಧಾನಗೊಂಡು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಗುಟ್ಟಾಗೇನೂ ಉಳಿದಿಲ್ಲ. ಇದಕ್ಕೆ ಪೂರಕ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಾ, " ಕೆಲವು ಶಾಸಕರನ್ನು ಓಲೈಕೆ ಮಾಡುವ ಪ್ರಯತ್ನ ವರ್ಗಾವಣೆಯಲ್ಲಿ ನಡೆದಿರಬಹುದು" ಎಂಬ ಮಾತನ್ನು ಹೇಳಿದ್ದಾರೆ.
ತಮ್ಮ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ಅನುಕೂಲವಾಗುವಂತೆ ತಮಗೆ ಬೇಕಾದ ಅಧಿಕಾರಿಗಳನ್ನು ಶಾಸಕರು ಬಯಸುತ್ತಾರೆ ಎಂಬ ಸಮರ್ಥನೆ ಕೂಡಾ ಸರಕಾರದ ಕಡೆಯಿಂದ ಆಗಿದೆ. ಅಂದರೆ ಇದರ ಅರ್ಥ ಈಗಿರೋ ಅಧಿಕಾರಿಗಳು ಅಸಮರ್ಥರು ಎಂದಾ ? ಇಲ್ಲಾ ಗುತ್ತಿಗೆದಾರರು ಹೇಳುವಂತೆ ವಿವಿಧ ಯೋಜನೆಗಳಲ್ಲಿ "ಪರ್ಸಂಟೇಜ್‌" ಪಡೆಯೋದು ಕಷ್ಟ ಅಂತನಾ ?
ಒಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಿಂದೆಂದೂ ಕಾಣದಷ್ಟು ವರ್ಗಾವಣೆಗಳು ನಡೆದಿರೋದು ಇದೀಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ರಾಜ್ಯದಲ್ಲಿ ಸರಕಾರಿ ಅಧಿಕಾರಿಗಳ ವರ್ಗಾವಣೆಗೊಂದು ನೀತಿ ಇದುವರೆಗೆ ರೂಪಿಸಲ್ಪಟ್ಟಿಲ್ಲ. ಯಾವುದೇ ಪಕ್ಷದ ಅಧಿಕಾರಕ್ಕೆ ಬಂದರೂ ಈ ಬಗ್ಗೆ ಚಿಂತನೆ ನಡೆಸಿಲ್ಲ.
ವರ್ಗಾವಣೆಯ ಇತಿಹಾಸವನ್ನು ಗಮನಿಸಿದಾಗ ಕೆಲವು ಅಧಿಕಾರಿಗಳಷ್ಟೇ ಪದೆಪದೇ ವರ್ಗಾವಣೆಗೊಳ್ಳುತ್ತಿರುತ್ತಾರೆ... ಇನ್ನು ಕೆಲವರು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಗಣಿಗಾರಿಕೆ ಇರುವಂಥ ಜಿಲ್ಲೆಗಳ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಾಗಲು ಹಾಗೆಯೇ ಅರಣ್ಯ ಇಲಾಖೆ ಉಪನಿರ್ದೇಶಕರಾಗಲು ಬಹುತೇಕ ಎಲ್ಲ ಅಧಿಕಾರಿಗಳೂ ಹಾತೊರೆಯುತ್ತಾರೆ. ಅದಕ್ಕಾಗಿ ಎಷ್ಟು ಹಣ ಬೇಕಾದ್ರೂ ಖರ್ಚು ಮಾಡಲು ಸಿದ್ಧರಿರುತ್ತಾರೆ. ಆಗ ಅವರು ಹುಡುಕೋದು ಸ್ಥಳೀಯ ಪುಡಾರಿಗಳನ್ನು. ಅವರಿಂದ ಸಚಿವರಿಗೆ ಸೂಟ್‌ಕೇಸ್ ವರ್ಗಾವಣೆಯಾಗುತ್ತಿದ್ದಂತೆ ಇವರ ವರ್ಗಾವಣೆ ಆದೇಶವೂ ಸಿದ್ಧವಾಗಿರುತ್ತದೆ. ಹೀಗೆ ವರ್ಗಾವಣೆಗೊಂಡವರು "ಕಾಲಕಾಲಕ್ಕೆ" ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರೆ ಬೇರೊಬ್ಬ ಅಧಿಕಾರಿಗೆ ಅಲ್ಲಿ ಪ್ರವೇಶ ಸಿಗಲ್ಲ.
ಇದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಇಲಾಖೆಗಳಲ್ಲೂ ಈ ರೀತಿ ಪದ್ಧತಿ ಇದ್ದೇ ಇದೆ. ಇದಕ್ಕೆ ಲೋಕಾಯುಕ್ತ ದಾಳಿ ನಡೆದಾಗ ಅಧಿಕಾರಿಗಳ ಮನೆಯಿಂದ ಸಿಗುವ ಸಂಪತ್ತೇ ಸಾಕ್ಷಿ...!
ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಸಚಿವರೊಬ್ಬರು ಅಧಿಕಾರಿಯೊಬ್ಬರನ್ನು ರಾಜಕೀಯ ಒತ್ತಡ ತಂದು ವರ್ಗಾವಣೆ ಮಾಡಿಸಿದ್ದರು. ಆಗ ಕೆ.ಎಸ್.ಸತ್ಯನಾರಾಯಣ ಎಂಬವರು ಹೈಕೋರ್ಟ್‌‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆಗ ಅಂದು ನ್ಯಾಯಾಧೀಶರಾಗಿದ್ದ ಎಸ್.ಕೆ.ಸೋಧಿ ಮತ್ತು ಬಿ.ಪದ್ಮರಾಜ್‌ ಈ ಅರ್ಜಿಯನ್ನು ವಜಾಗೊಳಿಸಿದರೂ ತಮ್ಮ ತೀರ್ಪಿನಲ್ಲಿ ಅಧಿಕಾರಿಗಳ ವರ್ಗಾವಣೆಯ ವಿಷಯದಲ್ಲಿ ಸರಕಾರ ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಕ್ಕೆ ಬಲಿಬೀಳಬಾರದು ಎಂದು ಎಚ್ಚರಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಯಾಕೆ ವರ್ಗಾವಣೆಗೊಂದು ನೀತಿ ರೂಪಿಸಬಾರದು ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿದೆ.

ವರ್ಗಾವಣೆ ನೀತಿ ಹೀಗೇಕೆ ಇರಬಾರದು?

* ಪ್ರತಿಯೊಬ್ಬ ಸರಕಾರಿ ಅಧಿಕಾರಿಗೂ ಕನಿಷ್ಠ ೩ ವರ್ಷಕ್ಕೊಮ್ಮೆ ವರ್ಗಾವಣೆ ಆಗಲಿ.
* ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಇರಬಹುದು ಅಥವಾ ಅದೇ ಇಲಾಖೆಯ ಬೇರೆ ಶಾಖೆಗೆ ಇರಬಹುದು.
* ಅಧಿಕಾರಿ ಅಥವಾ ಗುಮಾಸ್ತ ೩ ವರ್ಷಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಇರಕೂಡದು.
* ಕೌಟುಂಬಿಕ ಕಾರಣ ಅಥವಾ ಆರೋಗ್ಯದ ಕಾರಣ ಸ್ಪಷ್ಟವಾಗಿದ್ದಲ್ಲಿ ಅನುಕಂಪದ ಆಧಾರದ ವರ್ಗಾವಣೆ ಇರಲಿ
* ವರ್ಗಾವಣೆ ಪ್ರಕ್ರಿಯೆ ಹಣಕಾಸು ವರ್ಷದ ಆರಂಭದಲ್ಲಿ ನಡೆಯಲಿ.
* ಸರಕಾರಿ ಸಿಬ್ಬಂದಿಗಳು ವರ್ಗಾವಣೆಗಾಗಿ ರಾಜಕಾರಣಿಗಳ ಅಥವಾ ಪುಡಾರಿಗಳ ಮೊರೆ ಹೋಗುವುದು ತಪ್ಪಬೇಕು.
* ಶಾಸಕರೂ ತಮ್ಮ ಕ್ಷೇತ್ರದಲ್ಲಿರೋ ಹಾಲಿ ಅಧಿಕಾರಿ, ಸಿಬ್ಬಂದಿಗಳಿಂದಲೇ ಕೆಲಸ ಮಾಡಿಸಬೇಕು.
* ರಾಜಕೀಯ ಒತ್ತಡ ತಂದು ವರ್ಗಾವಣೆ ಮಾಡಿಸಿಕೊಳ್ಳುವುದು ತಪ್ಪಬೇಕು.
* ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ನಿರ್ಮಾಣಕ್ಕೆ ವರ್ಗಾವಣೆ ಪ್ರಕ್ರಿಯೆಯಲ್ಲೂ ಪಾರದರ್ಶಕ ವ್ಯವಸ್ಥೆ ಇರಲಿ.
* ಸರಕಾರಿ ಸಿಬ್ಬಂದಿಗಳ ವರ್ಗಾವಣೆಗೊಂದು ಪ್ರತ್ಯೇಕ ನಿರ್ವಹಣಾ ಕೇಂದ್ರ ಸ್ಥಾಪನೆಯಾಗಲಿ
ಈ ಹತ್ತು ಅಂಶಗಳ ವರ್ಗಾವಣೆ ನೀತಿ ರಚನೆಯಾದರೆ ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ಸಾಧ್ಯವಾಗಬಹುದೇನೋ? ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಮನಹರಿಸಿಯಾರೇ ?
-----
ಉಮೇಶ್ ಕುಮಾರ್. ಎಸ್.