ವರ್ತಮಾನ ಭಾರತ

ವರ್ತಮಾನ ಭಾರತ

ಪುಸ್ತಕದ ಲೇಖಕ/ಕವಿಯ ಹೆಸರು
ಪುರುಷೋತ್ತಮ ಬಿಳಿಮಲೆ
ಪ್ರಕಾಶಕರು
ಚಿರಂತ್ ಪ್ರಕಾಶನ, ಕೋರಮಂಗಲ, ಬೆಂಗಳೂರು
ಪುಸ್ತಕದ ಬೆಲೆ
ರೂ. ೩೨೫.೦೦, ಮುದ್ರಣ: ೨೦೨೪

‘ವರ್ತಮಾನ ಭಾರತ' ಎನ್ನುವ ನೂತನ ಕೃತಿಯಲ್ಲಿ ಖ್ಯಾತ ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಇವರು ಪ್ರಕಟ ಮಾಡಿದ್ದಾರೆ. ಸಮಕಾಲೀನ ಘಟನೆಗಳ ಬಗ್ಗೆ ಇವರು ಬರೆದ ಪುಟ್ಟ ಪುಟ್ಟ ಬರಹಗಳೇ ಸಂಗ್ರಹಗೊಂಡು ‘ವರ್ತಮಾನ ಭಾರತ’ ಎನ್ನುವ ಕೃತಿಯಾಗಿ ಹೊರಬಂದಿದೆ. ಈ ಕೃತಿಗೆ ಬರೆದ ಲೇಖಕರ ಮಾತಿನಲ್ಲಿ ಪುರುಷೋತ್ತಮ ಬಿಳಿಮಲೆ ಅವರು ವ್ಯಕ್ತ ಪಡಿಸಿದ ಕೆಲವು ಮಾತುಗಳು ನಿಮ್ಮ ಓದಿಗಾಗಿ...

“ಸಂಸ್ಥೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದುದರಿಂದ ವೈಯಕ್ತಿಕವಾಗಿ ಹೆಚ್ಚು ಬರೆಯಲಾಗಲಿಲ್ಲ. ೨೦೨೦ರಲ್ಲಿ ವೃತ್ತಿಯಿಂದ ನಿವೃತ್ತನಾದ ಮೇಲೆ ಒಂದಷ್ಟು ಸಮಯ ದೊರಕಿತು. ಅದನ್ನು ಸದುಪಯೋಗಪಡಿಸಿಕೊಂಡು 'ಕನ್ನಡ ಕಥನಗಳು' ಬರೆದೆ. ಕೊರೋನಾ ಸಮಯದಲ್ಲಿ ನನ್ನ ಆತ್ಮಕಥನ 'ಕಾಗೆ ಮುಟ್ಟಿದ ನೀರು' ಬಿಡುಗಡೆ ಆಯಿತು. ಇವೆರಡೂ ಕೃತಿಗಳು ಓದುಗರ ಮೆಚ್ಚುಗೆ ಗಳಿಸಿದ್ದರಿಂದ ಇನ್ನಷ್ಟು ಬರೆಯಬಹುದು ಎಂಬ ಉತ್ಸಾಹ ಬಂತು. ಈ ವಿಶ್ವಾಸದಲ್ಲಿ 'ಅಮರ ಸುಳ್ಯದ ರೈತ ಹೋರಾಟ' ಮತ್ತು 'ಕನ್ನಡ ಕೈಫಿಯತ್ತುಗಳು' ಪುಸ್ತಕಗಳನ್ನು ಬರೆದೆ.

ಇವುಗಳಿಗೂ ಒಳ್ಳೆಯ ಪ್ರತಿಕ್ರಿಯೆಗಳು ಬಂದುವು. ಸಮಕಾಲೀನ ಘಟನೆಗಳ ಬಗ್ಗೆ ಗೆಳೆಯರು ಕೇಳಿದಾಗಲೆಲ್ಲ ಸಣ್ಣಪುಟ್ಟ ಲೇಖನಗಳನ್ನು ಬರೆಯುತ್ತಲೇ ಇದ್ದೆ. ಹೀಗೆ ಸಾಂದರ್ಭಿಕವಾಗಿ ಬರೆದ ಲೇಖನಗಳು ಇದೀಗ ಸ್ವಲ್ಪ ವಿಸ್ತೃತಗೊಂಡು ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಅಗತ್ಯವಿರುವ ಕಡೆ ಲೇಖನದ ಕೊನೆಯಲ್ಲಿ ಆಸಕ್ತರು ಓದಬಹುದಾದ ಕೆಲವು ಪುಸ್ತಕಗಳ ಪಟ್ಟಿಯನ್ನೂ ನೀಡಿದ್ದೇನೆ.

ನಾನು ಬರವಣಿಗೆಯನ್ನೇ ಅಂತಿಮ ಎಂದು ಭಾವಿಸಿದವನಲ್ಲ. ಹಾಗಂತ ಬರವಣಿಗೆಯ ಮಹತ್ವವನ್ನು ಗೌಣ ಗೊಳಿಸುವವನೂ ಅಲ್ಲ. ಜನಪರವಾದ ಹೋರಾಟಗಳು, ಉಪನ್ಯಾಸಗಳು, ಸಂಘಟನೆ, ಓದು, ಓಡಾಟಗಳು, ಕರಪತ್ರಗಳ ರಚನೆ, ಗೋಡೆ ಬರೆಹ ಇತ್ಯಾದಿಗಳು ಅಗತ್ಯವೆಂದೇ ನನ್ನ ಭಾವನೆ. 2023ರ ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ 'ಎದ್ದೇಳು ಕರ್ನಾಟಕ' ಸಂಘಟನೆಯ ಭಾಗವಾಗಿ ಕೆಲಸ ಮಾಡುತ್ತಿದ್ದಾಗ ನಾನು ಎರಡು ತಿಂಗಳುಗಳಲ್ಲಿ ಒಂದು ಸಾವಿರದಷ್ಟು ಡಿಜಿಟಲ್ ಪೋಸ್ಟರುಗಳನ್ನು ಬರೆದಿದ್ದೆ. ಹೀಗೆ ಮಾಡುವುದರಿಂದಾಗಿ ಎಷ್ಟೋ ಬಾರಿ ನನ್ನ ಬರೆಹಗಳ ಭಾಷೆ ಮತ್ತು ಶೈಲಿಯು ಶೈಕ್ಷಣಿಕವಾಗಿರುವುದಿಲ್ಲ. ಆದರೆ ಹಾಗೆ ಬರೆಯುವುದು ಇಂದಿನ ಅಗತ್ಯವೋ ಏನೋ!

ನನ್ನಂಥ ಹಲವರಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯ ವಿದ್ವಾಂಸರಾದ ಡಾ. ಜಿ. ರಾಮಕೃಷ್ಣ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಹಸ್ತಪ್ರತಿಯನ್ನು ಓದಿ, ಪ್ರತಿಕ್ರಿಯಿಸುತ್ತಿದ್ದ ಶ್ರೀನಿವಾಸ ಕಾರ್ಕಳ ಬೆನ್ನುಡಿ ಬರೆದಿದ್ದಾರೆ. ಕ್ರಿಯಾದ ಗೆಳೆಯ ರಾಮು ಮುಖಪುಟ ಸಿದ್ಧಪಡಿಸಿದ್ದಾರೆ. ನಿಡುಗಾಲದ ಗೆಳೆಯ ಎಚ್. ಪರಮೇಶ್ವರ ತುಂಬಾ ಆಸ್ಥೆ ವಹಿಸಿ ಪುಸ್ತಕವನ್ನು ಪ್ರಕಟ ಮಾಡುತ್ತಿದ್ದಾರೆ. ನೀವು ಹಲವರು ಎಲ್ಲ ಕಾಲದಲ್ಲಿಯೂ ಜೊತೆ ನಿಂತಿದ್ದೀರಿ. ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಕನಸು ಕಾಣುತ್ತಾ ಹೋರಾಡುತ್ತಿರುವ ನಿಮಗೆಲ್ಲ ನಾನು ಕೃತಜ್ಞನಾಗಿದ್ದೇನೆ”

ಸುಮಾರು ೩೦೦ ಪುಟಗಳ ಈ ಕೃತಿಯನ್ನು ಓದಿದರೆ ಪ್ರಸ್ತುತ ವಿಷಯಗಳ ಮಾಹಿತಿ ದೊರೆಯುತ್ತದೆ.