ವರ್ಧಮಾನ ಮಹಾವೀರ…!

ವರ್ಧಮಾನ ಮಹಾವೀರ…!

ಅಹಿಂಸೆಯ ಪ್ರತಿಪಾದಕ ಕ್ರಿಸ್ತಪೂರ್ವ 6 ನೇ ಶತಮಾನದ ವರ್ಧಮಾನ ಮಹಾವೀರ ಜಯಂತಿ ( ಏಪ್ರಿಲ್ 4 )...., ದಿನದಂದು ವರ್ತಮಾನದ ಕೆಲವು ಸುದ್ದಿಗಳ ವಿಶ್ಲೇಷಣೆ.

ವಾರಸುದಾರರಿಲ್ಲದ ಬ್ಯಾಂಕುಗಳಲ್ಲಿ ಕೊಳೆಯುತ್ತಿದ್ದ ಸುಮಾರು ‌35000 ಕೋಟಿ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ವರ್ಗಾಯಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶ್ರೀರಾಮ ನವಮಿಯ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ, ಒಂದು ಹೆಣ್ಣಿನ ಪ್ರೀತಿಯ ಪ್ರೇಮ ಪತ್ರದ ಮನವಿಗೆ ಮನಸೋತು ಕೊಲೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಯುವಕನನ್ನು ಮದುವೆಯಾಗಲು ಪೆರೋಲ್ ಮೇಲೆ ಬಿಡುಗಡೆ ಮಾಡಿದ ಕರ್ನಾಟಕದ ಉಚ್ಚ ನ್ಯಾಯಾಲಯ, ಸೈಬೀರಿಯಾ ಪ್ರಾಂತ್ಯದಲ್ಲಿ ರಷ್ಯಾದಿಂದ ಅತ್ಯಂತ ವಿನಾಶಕಾರಿ ಅಣು ಬಾಂಬುಗಳ ಯುದ್ಧ ತಯಾರಿ  ಪ್ರಯೋಗಾತ್ಮಕ ಕಾರ್ಯಾಚರಣೆ.

ಕ್ರಿಸ್ತ ಪೂರ್ವದಲ್ಲಿಯೇ  ಗೌತಮ ಬುದ್ಧ - ಮಹಾವೀರರು ಹಿಂಸೆಯ ವಿರುದ್ಧ, ದುರಾಸೆಯ ವಿರುದ್ಧ, ಅಸತ್ಯದ ವಿರುದ್ಧ ತಮ್ಮ ಚಿಂತನೆಗಳನ್ನು ಕೇಂದ್ರೀಕರಿಸಿ ಮಾತನಾಡಿದ್ದಾರೆ ಎಂದರೆ ಸುಳ್ಳು ಹಿಂಸೆ ವಂಚನೆಗಳು ಯಾವ ಪ್ರಮಾಣದಲ್ಲಿ ಮನುಷ್ಯ ಸಮಾಜವನ್ನು ಕಾಡಿರಬೇಕು ಎಂದು ಆಶ್ಚರ್ಯವಾಗುತ್ತದೆ. ಬದುಕಿನ್ನು ಸಂಕೀರ್ಣವಾಗದೆ ಸರಳವಾಗಿದ್ದ ಸಮಯದಲ್ಲೇ ಒಳ್ಳೆಯ ಜ್ಞಾನ, ಒಳ್ಳೆಯ ನಡತೆ, ಒಳ್ಳೆಯ ಚಿಂತನೆ, ಸದಾಚಾರ, ಧ್ಯಾನಗಳ ಕುರಿತು ಅತ್ಯಂತ ಆಳವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆಂದರೆ ನಾವಿನ್ನು ಕ್ರಿಸ್ತ ಪೂರ್ವದ ದಿನಗಳಲ್ಲೇ ಇದ್ದೇವೆ ಎನಿಸುತ್ತದೆ.

ಈಗಲೂ ಮನುಷ್ಯ ಸಮಾಜವನ್ನು ಅಂದು ಕಾಡಿದ ಸಮಸ್ಯೆಗಳೇ ಇನ್ನೂ ಗಂಭೀರವಾಗಿ ಕಾಡುತ್ತಿವೆ. ಹಾಗಾದರೆ ಮನುಷ್ಯನ ವಿಕಾಸದ ಹಾದಿಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಇಲ್ಲ ಎಂದು ಪರಿಗಣಿಸಬಹುದೆ. ವಸ್ತು ಮತ್ತು ತಂತ್ರಜ್ಞಾನದ ಬೆಳವಣಿಗೆ ಅನಿವಾರ್ಯ ಕ್ರಿಯೆಗಳು. ಅದು ಅನುಭವ ಮತ್ತು ಅನುಕೂಲಕ್ಕೆ ತಕ್ಕಂತೆ ಸೃಷ್ಟಿಯಾಗುತ್ತದೆ. ಆದರೆ ಮಾನಸಿಕ ನಿಯಂತ್ರಣದ ವಿಷಯದಲ್ಲಿ, ನೋವು ಸಂಕಷ್ಟಗಳ ನಿವಾರಣೆಯಲ್ಲಿ, ಜೀವನದ ನೆಮ್ಮದಿಯ ಹುಡುಕಾಟದಲ್ಲಿ ಯಾವುದೇ ಪ್ರಮುಖ ಬದಲಾವಣೆ ಸಾಧ್ಯವಾಗಿಲ್ಲ. ಈಗಲೂ ಹೆಣ್ಣು ಹೊನ್ನು ಮಣ್ಣು ಅಧಿಕಾರ, ಆಸ್ತಿ, ಪ್ರಶಸ್ತಿ, ಪ್ರಚಾರ, ಅಹಂಕಾರಗಳಿಂದ ಮನುಷ್ಯ ನರಳುತ್ತಲೇ ಇದ್ದಾನೆ. ಎಲ್ಲಾ ತಿಳಿವಳಿಕೆಗಳ ನಂತರವೂ ಆತನ ನಡವಳಿಕೆಯು ಅತ್ಯಂತ ಕೆಳಮಟ್ಟದಲ್ಲೇ ಇದೆ.

ಜೈನ ಧರ್ಮದ 24 ನೆಯ ತೀರ್ಥಂಕರ ಮಹಾವೀರ ಬಹುತೇಕ ಬುದ್ದನಂತೆಯೇ ಸಿಂದೂ ನದಿ ನಾಗರಿಕತೆಯ ಜನರ ನಾಡಿ ಮಿಡಿತ ಬಲ್ಲ ಮನಃಶಾಸ್ತ್ರಜ್ಞ. ತನ್ನ ದೇಹ ಮನಸ್ಸುಗಳನ್ನು ದಂಡಿಸಿ ಬದುಕಿನ ನೆಮ್ಮದಿಗೆ ಕಾರಣವಾಗುವ ಅನೇಕ ಮೌಲ್ಯಯುತ ಸೂತ್ರಗಳನ್ನು ನೀಡಿದ್ದಾರೆ. ಒಂದಷ್ಟು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳಲ್ಲಿ ಬುದ್ದರ ಚಿಂತನೆಗಳಿಗಿಂತ ಭಿನ್ನತೆಯನ್ನು ಮತ್ತು ಕಠೋರ ನಿಲುವುಗಳನ್ನು ಮಹಾವೀರರ ಚಿಂತನೆಗಳಲ್ಲಿ ಕಾಣಬಹುದಾದರು ಸಕಲ ಜೀವಗಳಿಗೆ ಲೇಸನೇ ಬಯಸುವ ಶರಣ ಸಂಸ್ಕೃತಿಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ್ದರು.

ವಾಮ ಮಾರ್ಗದಲ್ಲಿ ಕೋಟಿ ಕೋಟಿ ಹಣ ಸಂಪಾದನೆ, ಸಾಯುವವರೆಗೂ ನಿರಂತರ ಅಧಿಕಾರ ದಾಹ, ತನ್ನ ರಕ್ತ ಸಂಬಂಧಿಗಳ ಬಗೆಗಿನ ಪಕ್ಷಪಾತ, ದುಡ್ಡಿಗಾಗಿ ತಮ್ಮನ್ನೇ ಮಾರಿಕೊಳ್ಳುವ ಗುಲಾಮಿತನದ ಮನೋಭಾವ ಎಲ್ಲವನ್ನೂ ಗಮನಿಸಿದಾಗ ಮಹಾವೀರರು ಸದಾ ನೆನಪಾಗುತ್ತಲೇ ಇರುತ್ತಾರೆ. ವಿಶ್ವ ಮೂರನೇ ಯುದ್ಧದ ಆತಂಕದಲ್ಲಿ ವಿನಾಶದ ಮುನ್ಸೂಚನೆಯಂತೆ ಅಣು ಬಾಂಬುಗಳ ತಾಲೀಮು ನಡೆಯುತ್ತಿರುವಾಗ ಮಹಾವೀರ ಮನದಲ್ಲಿ ಹಾದು ಹೋಗುತ್ತಾರೆ.

ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲದಾಗಿದೆ. 35 ಸಾವಿರ ಕೋಟಿ ಹಣಕ್ಕೆ ಈ ಆಧುನಿಕ ಕಾಲದಲ್ಲಿಯೇ ವಾರಸುದಾರರು ಇಲ್ಲ ಎಂದಾದರೇ ಮನುಷ್ಯ ಸಂಬಂಧಗಳು ಎಲ್ಲಿ ಮರೆಯಾದವು. ಬದುಕಿರುವಾಗ ಹಣವನ್ನು ದಾನ ಮಾಡದೆ ಅಥವಾ ಸತ್ಪಾತ್ರಕ್ಕೆ ಉಪಯೋಗಿಸದೆ ಬ್ಯಾಂಕಿನಲ್ಲಿ ಇಟ್ಟು ಇಡೀ ವಂಶವೇ ಇಲ್ಲದಂತಾಗುವ ಕ್ರಿಯೆ ಅಥವಾ ಅವರ ಕರುಳು ಬಳ್ಳಿಗಳನ್ನೇ ನಂಬದ ಅಥವಾ ಕೊನೆಯ ದಿನಗಳಲ್ಲಿ ಅನಾಥರಾಗುವ ಮನುಷ್ಯ ಜೀವನದ ಬಗ್ಗೆಯೇ ಜಿಗುಪ್ಸೆ ಮೂಡುತ್ತದೆ.

ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ನ್ಯಾಯಾಧೀಶರು ಒಂದು ಪ್ರೇಮ ಪತ್ರಕ್ಕೆ ಮನಸೋತು ಖೈದಿಗೆ ಪೆರೋಲ್ ನೀಡುವಷ್ಟು ಸೂಕ್ಷ್ಮ ಸಂವೇದನೆಯ ಸುದ್ದಿಯನ್ನು ಕೇಳುವುದು ಮರುಳುಗಾಡಿನಲ್ಲಿ ಓಯಾಸಿಸ್ ಕಂಡಂತೆ ಭಾಸವಾಗುತ್ತದೆ. ಆಕೆ ಬರೆದ ಹೃದಯಾಂತರಾಳದ ಮಾತುಗಳು, ಪ್ರೀತಿಯ ಉತ್ಕಟತೆ ನ್ಯಾಯಾಧೀಶರ ಮನ ಕಲುಕಿತು ಎಂದಾದರೆ ನಿಜ ಪ್ರೀತಿಯ ಶಕ್ತಿ ಅದ್ಬುತ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಧಾರ್ಮಿಕ ಸಂಸ್ಥೆಗಳು, ಮಾಧ್ಯಮಗಳು, ಶಿಕ್ಷಕರು, ಸಮಾಜ ಸುಧಾರಕರು, ಮಕ್ಕಳು ಮತ್ತು ಯುವಕರಿಗೆ ಬುದ್ದ ಮಹಾವೀರರ ಉದಾತ್ತ ಚಿಂತನೆಗಳನ್ನು ನಿರಂತರವಾಗಿ ತಿಳಿಸುವ ಕೆಲಸ ಮಾಡಬೇಕಾಗಿದೆ. ಸಿನಿಮಾ ನಟನಟಿಯರು, ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ದುಡ್ಡಿನ ದಾಹದ ಉದ್ಯಮಿಗಳು, ಕಪಟ ಸನ್ಯಾಸಿಗಳು ಮುಂತಾದವರನ್ನೇ ಸಮಾಜದ ಗಣ್ಯ ಸಾಧಕರಂತೆ ಚಿತ್ರಿಸಿ ಇಡೀ ಸಮೂಹ ಪ್ರಜ್ಞೆಯನ್ನೇ ಮಲಿನಗೊಳಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಆತ್ಮಹತ್ಯೆಗೆ ಯತ್ನಿಸುವ ಮೂರ್ಖ ವಾತಾವರಣದಲ್ಲಿ ಆಸೆಗಳನ್ನು ಅಂಕೆಯಲ್ಲಿಟ್ಟುಕೊಂಡು ತ್ಯಾಗದ ಸಂಕೇತವಾಗಿ ಮಹಾವೀರರು ಸದಾ ನೆನಪಾಗುತ್ತಲೇ ಇರಲಿ ಎಂದು ಆಶಿಸುತ್ತಾ...

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ