ವರ್ಧಮಾನ

ವರ್ಧಮಾನ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ. ಗೋಪಾಲಕೃಷ್ಣ ಅಡಿಗ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೨೨.೦೦, ಮುದ್ರಣ: ಜೂನ್ ೨೦೧೦

ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ೧೯೫೯-೭೧ರ ಅವಧಿಯಲ್ಲಿ ಬರೆದ ಅಮೂಲ್ಯ ಕವನಗಳ ಸಂಕಲನವೇ ‘ವರ್ಧಮಾನ'. ಇದೊಂದು ಹತ್ತು ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ. ಈ ಪುಸ್ತಕಕ್ಕೆ ಪ್ರಸ್ತಾವನೆ ಬರೆದಿದ್ದಾರೆ ಖ್ಯಾತ ಸಾಹಿತಿಗಳಾದ ಸುಮತೀಂದ್ರ ನಾಡಿಗರು. ಇವರು ತಮ್ಮ ‘ಪ್ರಸ್ತಾವನೆ' ಯಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ.

“ಭಾರತಕ್ಕೆ ಬರಬಹುದಾದ ಅನಿಷ್ಟ, ನಮಗೆ ಬೇಕಾದ ಆದರ್ಶ ನಾಯಕರು, ತಲೆಮಾರುಗಳ ಸಂಬಂಧ ಮತ್ತು ಕ್ರಿಯಾಶಕ್ತಿಯ ಸ್ವರೂಪ- ಇವು 'ವರ್ಧಮಾನ' ಸಂಗ್ರಹದ ಕಾವ್ಯ ವಸ್ತುಗಳು. ಸಂಗ್ರಹದ ಮೊದಲ ಮೂರು ಕವನಗಳಾದ 'ಬರುತ್ತಾರೆ' ' ಎಡ-ಬಲ'  ಮತ್ತು 'ಗಜೇಂದ್ರ ಮೋಕ್ಷ' ನಮ್ಮಲ್ಲಿ ಕಾಣಿಸಿಕೊಂಡ ಎಡಪಂಥೀಯ ಧೋರಣೆಗಳಿಂದ ಭಾರತಕ್ಕೆ  ಒದಗಬಹುದಾದ ಅಪಾಯಗಳನ್ನು  ಸೂಚಿಸುತ್ತವೆ.

'ಬರುತ್ತಾರೆ' ಎನ್ನುವುದರ ಮೊದಲ ಭಾಗ ಬರುವವರು ಯಾರು ಎನ್ನುವ ಕುತೂಹಲವನ್ನು ಹುಟ್ಟಿಸುತ್ತದೆ, ಬರುವವರ ವೇಷಭೂಷಣಗಳನ್ನು ತೋರಿಸಿ ಅವರ ಬಗ್ಗೆ ನಗೆಯನ್ನು ಹುಟ್ಟಿಸುವುದು ಈ ಭಾಗದ ಉದ್ದೇಶವಾಗಿದೆ. ಬರುವವರು ವೇಷಧಾರಿಗಳು ಎನ್ನುವುದು ಸ್ಪಷ್ಟವಾಗುತ್ತದೆ. ಗಡ್ಡ ಮೀಸೆ ಕಟ್ಟಿಕೊಂಡು, ಋಷಿಮುನಿ ಮುಖವಾಡ ತೊಟ್ಟು, ತಾವೇ ಮಂತ್ರಿಗಳು, ಶಾಸಕರು, ಬಲ್ಲವರು ಎಂದು ಹೇಳಿಕೊಳ್ಳುವ ಜನರು ಬರುತ್ತಾರೆ. ಹೀಗೆ ತಾವೇ ತಾವಾಗಿಲ್ಲದವರನ್ನು ಕಂಡು ನಗು ಬರುತ್ತದೆ ಎನ್ನುವಲ್ಲಿಗೆ ಮೊದಲ ಭಾಗ ಮುಗಿಯುತ್ತದೆ. ‘ಬರುತ್ತಾರೆ ಬರುತ್ತಾರೆ’ ಎಂದು ಹೇಳುವ ಡಂಗೂರ ಬಡಿಯುತ್ತ ಸಾರಿ ಹೇಳುವುದನ್ನು ನೆನಪಿಗೆ ತರುತ್ತದೆ.

ಎರಡನೇ ಭಾಗ ‘ಬರುತ್ತಾರೆ ಬರುತ್ತಾರೆ’ ಎಂದು ಹೇಳುತ್ತಲೇ ಬರುವವರ ಬಾಂದಿನವರ ಕೆಲಸ ಅದನ್ನು ನಿರ್ದೇಶಿಸುತ್ತ, ಅವರ ಬಗ್ಗೆ ಎಚ್ಚರದಿಂದಿರಬೇಕೆನ್ನುವುದನ್ನು ಸ್ಪಷ್ಟಪಡಿಸುತ್ತದೆ. ಈ ಬಾಂದಿನವರ ಕೈಯಲ್ಲಿ ರೈತರಿಗೂ ಬೇಕಾಗುವ ಹಾರೆ, ಸಲಿಕೆ, ಗೋಲು, ಕೊಡಲಿ, ಗುದ್ದಲಿ, ಕತ್ತಿ ಮುಂತಾದ ಉಪಕರಣಗಳಿವೆ. ಈ ಬಾಂದಿನವರು ದಿಲ್ಲಿಯಿಂದ ಹಳ್ಳಿಗೆ ಬರುತ್ತಿದ್ದಾರೆ. ಈ ಸಂಗ್ರಹದ 'ಶ್ರೀರಾಮನವಮಿಯ ದಿವಸ' ಮತ್ತು ' ಆನಂದ ತೀರ್ಥರಿಗೆ' ನಿನ್ನ ಕವನಗಳು ಬೇಕಾದ  ಆದರ್ಶ ನಾಯಕರನ್ನು ಚಿತ್ರಿಸುತ್ತವೆ. 'ವರ್ಧಮಾನ', 'ಅಜ್ಜ ನೆಟ್ಟಾಲ'  ಮತ್ತು 'ನೆನಪುಗಳೇ ಹಾಗೆ' ಎನ್ನುವ ಕವನಗಳಲ್ಲಿ ತಲೆಮಾರುಗಳ ಸಂಬಂಧ ಹೇಗೆ ಬದಲಾಗುತ್ತಿದೆ ಎನ್ನುವ ಚಿತ್ರಣವಿದೆ. ಮೇಲೆ ಹೇಳಿದ ಸಂಬಂಧ ಇನ್ನಷ್ಟು ವ್ಯಾಪಕವಾಗಿ ಕಾಣುವುದು. 'ಕೂಪಮಂಡೂಕ' ಎನ್ನುವ ಕವನದಲ್ಲಿ.

ನಮ್ಮ ಪ್ರಪಂಚ ಎಷ್ಟೇ ಚಿಕ್ಕದಾದರೂ, ಅಲ್ಲಿಂದಲೇ ಸೃಷ್ಟಿ ಮೂಲವಾದ ಚೈತನ್ಯದ ಸಂಪರ್ಕವನ್ನು ಅನುಭವಿಸಬಹುದು  ಅಂತಲೂ, ನಮ್ಮ ನಮ್ಮ ಮಿತಿಗಳನ್ನು ಒಪ್ಪಿಕೊಂಡು ನಮ್ಮ ನಮ್ಮ ಕೆಲಸಗಳನ್ನು ಮಾಡುವುದರಲ್ಲಿಯೇ  ತೃಪ್ತಿಯನ್ನು ಕಾಣಬೇಕೆಂದು ಈ ಕವನಗಳ ಆಶಯವಿದೆ.

೧೯೭೨ರಲ್ಲಿ ಪ್ರಕಟವಾದ ' ವರ್ಧಮಾನ' ಸಂಗ್ರಹಕ್ಕೆ  ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಿಕ್ಕವು. ಕನ್ನಡದ ಉತ್ತಮ ಕವನಗಳಾದ 'ಶ್ರೀ ರಾಮನವಮಿಯ ದಿವಸ', 'ಕೂಪಮಂಡೂಕ' ಮತ್ತು 'ವರ್ಧಮಾನ' ಈ ಸಂಗ್ರಹದಲ್ಲಿವೆ. ಎಡ ಪಂಥದವರ ಪ್ರಾಬಲ್ಯ ಭಾರತದಲ್ಲಿ ಹೆಚ್ಚಾಗಿದ್ದನ್ನು ಕಂಡು, ನಮ್ಮ ರೋಷವನ್ನು ಬುದ್ಧಿಯ ಕುಲುಮೆಯಲ್ಲಿ ಕಾಸಿ, ಬಡಿದು, ವೈಚಾರಿಕ ವ್ಯಂಗ್ಯವನ್ನಾಗಿ ಪರಿಸಿದ್ದು ಕೆಲವು ಕವನಗಳಲ್ಲಿ ಕಾಣಿಸುತ್ತದೆ. ' ವರ್ಧಮಾನ' ಸಂಕಲನ ಅಡಿಗರ ಅತ್ಯುತ್ತಮ ಕವನ ಸಂಕಲನಗಳಲ್ಲಿ ಒಂದಾಗಿದೆ." 

ಪುಸ್ತಕದ ಅನುಕ್ರಮಣಿಕೆಯಲ್ಲಿ ೧೦ ಕವನಗಳಿವೆ. ಬರುತ್ತಾರೆ, ಎಡ-ಬಲ, ಗಜೇಂದ್ರ ಮೋಕ್ಷ, ಕೂಪಮಂಡೂಕ, ಶ್ರೀ ರಾಮನವಮಿಯ ದಿವಸ, ಆನಂದತೀರ್ಥರಿಗೆ, ವರ್ಧಮಾನ, ಡೊಂಕು ಬಾಲಕ್ಕೆ ಚಿನ್ನದ ನಳಿಕೆ, ನೆನಪುಗಳೆ ಹಾಗೆ, ಅಜ್ಜ ನೆಟ್ಟಾಲ. ೫೨ ಪುಟಗಳ ಈ ಪುಟ್ಟ ಕವನ ಸಂಕಲನವನ್ನು ಕಾವ್ಯಾಸಕ್ತರೆಲ್ಲರೂ ಓದಲೇ ಬೇಕು.