ವರ್ಷದುಡುಕು.....
ಹುಡುಕಾಟ ಪ್ರತಿಯೊಬ್ಬರ ಜೀವನದ ಅಗೋಚರ ಪ್ರಕ್ರಿಯೆ. ಪ್ರತಿಯೊಬ್ಬರು ಒಂದಲ್ಲ ಒಂದರ ಹುಡುಕಾಟದಲ್ಲಿ ತೊಡಗಿಕೊಂಡು ತೊಳಲಾಡಿ ಬಳಲುವವರೆ. ಬಹುಪಾಲು ಹುಡುಕಾಟಗಳು ಲೌಕಿಕವಾದರೆ, ಮಿಕ್ಕ ಕೆಲವು ಅಲೌಕಿಕ, ಪಾರಮಾರ್ಥಿಕ ಬಗೆಯದು. ಇವೆರಡರ ನಡುವಿನ ಗೊಂದಲದ ಮಧ್ಯಮ ಸ್ಥಿತಿಯೂ ಅಪರೂಪವೇನಲ್ಲ.
ಹುಡುಕಾಟಗಳು ತಾಳುವ ವಿವಿಧ ರೂಪ, ಆಕಾರಗಳು ಸೋಜಿಗವೆ. ಪ್ರಬುದ್ಧವಲ್ಲದ, ಅಪಕ್ವ ಪರಿಸರದಲ್ಲಿ ಹುಡುಗಾಟದ ಸ್ವರೂಪ ತಾಳುವುದರಿಂದ ಹಿಡಿದು, ಅತೀ ಪ್ರಬುದ್ಧ ಚಿಂತನಾಶೀಲ ಸ್ತರದವರೆಗೆ ಅದರ ವಿಶ್ವರೂಪ ವ್ಯಾಪ್ತಿ. ಕೀಟಲೆಯಾಡುವ ಹುಡುಗರಲ್ಲಿನ ಹುಡುಕಾಟಕ್ಕೆ ಯಾವುದೆ ಗಮ್ಯದ ಸಾಧನೆಗಿಂತ ಆ ಹೊತ್ತಿನ ಕ್ಷಣಿಕ ಆಹ್ಲಾದ ಪ್ರೇರಣೆಯಾದರೆ, ಮಿಕ್ಕವರ ಹುಡುಕಾಟ ಬಹುತೇಕ ಯಾವುದೊ ಒಂದು ಗಮ್ಯದ ನೆಲೆಗಟ್ಟಿನಿಂದ ಪ್ರೇರಿತವಾದಂತದ್ದು. ಯಾಕೆಂದು ಅರಿವಿರದಿದ್ದರು, ಜೀವನದಲ್ಲಿ ಏನನ್ನಾದರು ಸಾಧಿಸಬೇಕೆನ್ನುವ ತಪನೆ ಬಗೆಬಗೆಯ ಹುಡುಕಾಟಗಳಿಗೆ ಹಚ್ಚಿಬಿಡುತ್ತದೆ. ವಿದ್ಯಾವಂತರಾಗುವ ಹುಡುಕಾಟ, ಅದರಿಂದ ನಿರ್ಮಿತವಾದ ವೇದಿಕೆಯಡಿ ಸೂಕ್ತ ಉದ್ಯೋಗದ ಬೇಟೆಯ ಹುಡುಕಾಟ, ನೆಲೆ ನಿಂತಂತೆನಿಸಿದಾಗ ಸಂಸಾರದ ಬಂಧಗಳಿಗಾಗಿ ಹುಡುಕಾಟ, ಬಂಧಗಳು ತಂದ ಹೊಸ ನಂಟು-ಜವಾಬ್ದಾರಿಗಳ ನಿಭಾವಣೆಯ ಹುಡುಕಾಟ, ಸಮಾಜದ ಅಂಗವಾಗಿ ನಿರ್ವಹಿಸಬೇಕಾದ ಪಾತ್ರದ ಹುಡುಕಾಟ - ಹೀಗೆ ಈ ನಿಲ್ಲದ ಹುಡುಕಾಟದಲ್ಲಿ ಇರುವ ಒಂದೆ ಸಾಮಾನ್ಯ ಮೂಲ ತಂತುವೆಂದರೆ - ಆ ಹುಡುಕಾಟದ ತಪನೆಯೆ. ಆ ಶೋಧನೆಗಳ ಮೂಲಕವೆ ತನ್ನ ಅರಿಯದ ಯಾವುದೊ ತನ್ನದೇ ಮೂಲವನ್ನು ಹುಡುಕಿಕೊಂಡು ಹೊರಟ ಹಾಗಿರುತ್ತದೆ ಅದರ ಯಾತ್ರೆ. ಅದು ಹುಡುಕಾಟವೆಂದು ಗೊತ್ತೆ ಇರದಷ್ಟು ಯಾಂತ್ರಿಕವಾಗಿ ನಡೆದಿರುತ್ತದೆ ಅದರ ಶೋಧ.
ವಿಪರ್ಯಾಸವೆಂದರೆ, ನಿಖರ ಗಮ್ಯದ ಸ್ಪಷ್ಟ ಕಲ್ಪನೆಯಿರದ ಈ ಹುಡುಕಾಟದಲ್ಲಿ ಅದೇನು ಸರಿಯಾದ ಹುಡುಕಾಟವೆ, ಅಲ್ಲವೆ ಎಂದು ತೀರ್ಮಾನಿಸಲು ಬೇಕಾದ ಯಾವುದೆ ಪರಿಸರ, ಪರಿಕರಗಳು ಇರುವುದಿಲ್ಲ. ಅದೊಂದು ಕಾಟಾಚಾರಕ್ಕೊ, ಮತ್ಯಾವುದೊ ಕಾಟಕ್ಕೊ ಮಾಡುವ ಆಚಾರವೆಂದು ಕಡೆಗಣಿಸಲು ಆಗದು. ಅದರ ಫಲಾಫಲಗಳನ್ನು ನಾವೆ ಅನುಭವಿಸುವ ಕಾರಣ ಪೂರಾ ನಿರ್ಲಕ್ಷಿಸುವಂತಿರುವುದಿಲ್ಲ. ಆಧುನಿಕ ಜಗದ ಭಾಷೆಯಲ್ಲಿ ಹೇಳುವುದಾದರೆ ಅದೊಂದು ರೀತಿಯ 'ಪೋರ್ಕ್ಯಾಸ್ಟ್'; ನಿಖರ ಪ್ರಕ್ಷೇಪ ಸಾಧ್ಯವಿರದಿದ್ದರು, ಕೆಲವು ಊಹೆ, ಅವಲಂಬಿತ ಆಧಾರಗಳನ್ನೆ ಪರಿಗಣಿಸಿ ಅದರ ಪರಿಧಿಯಲ್ಲೆ ಒಂದು ದೂರದ ರೂಪುರೇಷೆಯನ್ನು ನಿರ್ಧರಿಸುವುದು. ಆ ನಿರ್ಧಾರದ ಅಡಿಯಾಳಾಗಿ ಒಂದು ಸ್ಪಷ್ಟ ಗಮ್ಯದ ಚಿತ್ರಣ ಬರೆಯುವುದು - ತಕ್ಷಣದ ಗುರಿ, ಮಧ್ಯಮ ಗುರಿ, ಅಂತಿಮ ಗುರಿಗಳೆಂಬ ವಿಭಾಗಗಳನ್ನಾಗಿಸಿ. ನಂತರ ಎಲ್ಲಾ ಕ್ರಿಯೆ ಪ್ರಕ್ರಿಯೆಗಳನ್ನು ಅದರನುಸಾರ ನಡೆಸುತ್ತ, ಆಗ್ಗಾಗ್ಗೆ ಅದು ಸರಿಯೆ? ತಪ್ಪೆ? ಎನ್ನುವ ಮಧ್ಯಂತರ ಪರೀಕ್ಷೆ ನಡೆಸುತ್ತ, ಅಲ್ಲಲ್ಲಿ ತಿದ್ದಿ ತೀಡುತ್ತ ಹುಡುಕಾಟ ಮುಂದುವರೆಸುವ ಬಗೆ. ಇಲ್ಲಿ ಗಮ್ಯದ ನಿಖರತೆಗಿಂತ ಯಾವುದೊ ಒಂದು ಗಮ್ಯವಿದೆಯೆನ್ನುವುದು ಮುಖ್ಯ. ಉದಾಹರಣೆಗೆ ನಿವೃತ್ತಿಯಾಗಿಬಿಡುವುದರೊಳಗೆ ಒಂದು ಪೂರ್ತಿ ಸ್ವಂತದ ನೆಲೆ (ಮನೆ) ಮಾಡಿಕೊಂಡುಬಿಡಬೇಕೆನ್ನುವುದು ದೂರದ ಗಮ್ಯವಾದರೆ, ಪ್ರತಿ ಹುಡುಕಾಟವು ಅದರ ಸಾಧನೆಯತ್ತ ಕೇಂದ್ರೀಕೃತವಾಗುತ್ತದೆ. ಅಂತಿಮವಾಗಿ ಸಿಕ್ಕುವ ಯಶಸ್ಸಿನ ಪರಿಮಾಣ ಬೇರೆಯದಿದ್ದರು ಗುರಿಯತ್ತ ನಡೆಯುವುದಂತು ಸಾಧ್ಯವಾಗುತ್ತದೆ. ಆ ತಲುಪಿದ ಗುರಿ ಗುಡಿಸಲೆ, ಬಂಗಲೆಯೆ, ತೋಟದ ಮನೆಯೆ ಎಂಬುದು ಹುಡುಕಾಟದಲ್ಲಿರುವಾಗ ಸ್ಪಷ್ಟವಾಗಿರದಿದ್ದರೂ, ಹುಡುಕಾಟದುದ್ದಕ್ಕೂ ಆಗಾಗ್ಗೆ ಪರಿಶೀಲಿಸುತ್ತ ನಡೆದಿದ್ದರೆ ನಮ್ಮ ಹುಡುಕಾಟ ನಮ್ಮನ್ನೆಲ್ಲಿ ಒಯ್ಯುತ್ತಿದೆ ಎನ್ನುವ ಸ್ಥೂಲ ಕಲ್ಪನೆ ಸಿಗುತ್ತದೆ. ಆ ಅರಿವಿಗನುಸಾರವಾಗಿ ಹೊಂದಾಣಿಕೆ ಮಾಡಿಕೊಂಡೊ, ಬದಲಿಸಿಕೊಂಡೊ ಮುನ್ನಡೆಯಲು ಇಂಗಿತವನ್ನು ಒದಗಿಸುತ್ತದೆ ಈ ಹುಡುಕಾಟದಲ್ಲಿನ ಮಧ್ಯಂತರ ಪರಿಶೀಲನೆ.
ಈ ಜೀವನದ ಹುಡುಕಾಟದಲ್ಲಿ 'ವರ್ಷದುಡುಕು' ಎನ್ನುವುದು, ಅಂತದ್ದೆ ಪರಿಶೀಲನೆಯ ಅವಕಾಶ. ವರ್ಷ ಪೂರ್ತಿ ಹಿಂದೆ ಮುಂದೆ ಅಕ್ಕ ಪಕ್ಕ ನೋಡದೆ ಏನನ್ನೊ ಹುಡುಕುತ್ತ ಓಡಿರುತ್ತೇವೆ. ಯುಗಾದಿಯ ಹೊಸ ವರ್ಷದ ದಿನದ ಆಚರಣೆ ಸಂಭ್ರಮಗಳೆಲ್ಲ ಮುಗಿದ ತರುವಾಯ ಮತ್ತೆ ಓಟ ಶುರುವಾಗುವ ಸಮಯ. ಆ ಓಟ, ಹುಡುಕಾಟ ಆರಂಭವಾದರೆ ಮತ್ತೆ ಅದೇ ನಿಲ್ಲದ ಓಟವಾಗುವ ಕಾರಣ, ಆ ಆರಂಭದ ಮೊದಲು ಒಂದು ಅಂತರ್ವೀಕ್ಷಣೆ, ಒಂದು ಪಕ್ಷಿನೋಟ, ಒಂದು ಸರಿತಪ್ಪಿನ ತಾಳೆ ನೋಡುವ ಅವಕಾಶ ಸಿಕ್ಕಿದರೆ ಓಟಕ್ಕೆ ಮೊದಲು ಕೊಂಚ 'ಕ್ಯಾಲಿಬ್ರೇಟ್' ಮಾಡಿಕೊಂಡು ದುರಸ್ತಿಗೊಂಡ ಸುಸ್ಥಿತಿಯಲ್ಲಿ ಓಡಲು ಸಾಧ್ಯವಾಗುತ್ತದೆ. ಆ ಅವಕಾಶವನ್ನೀಯಲೆಂದೆ 'ವರ್ಷದುಡುಕಿನಂತಹ' ಅರ್ಥಪೂರ್ಣ ಆಚರಣೆಗೆ ಎಡೆ ಮಾಡಿಕೊಟ್ಟಿರುವುದು. ಅಂತಿಮ ಗುರಿಯತ್ತ ನಡೆಯುವ ಹಾದಿಯಲ್ಲಿ ಈ ವರ್ಷವರ್ಷದ ಮಧ್ಯಮ ಪರಿಶೀಲನೆ, ಪ್ರಸ್ತುತ ಪರಿಸ್ಥಿತಿಯ ಅರಿವು ಮಾಡಿಕೊಡುವುದರಿಂದ ಹುಡುಕಾಟದ ವೇಗ, ವೇಗೋತ್ಕರ್ಷಗಳನ್ನು ಆದ್ಯತೆ, ಅನುಕೂಲಕ್ಕನುಸಾರ ಹೊಂದಾಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜತೆಗೆ ಅದುವರೆವಿಗು ಸರಿಯಾದ ಹುಡುಕಾಟ ನಡೆಸದವರಿಗೆ, ಹುಡುಕಾಟವನ್ನೆ ಇನ್ನು ಆರಂಭಿಸದವರಿಗೆ, ಏನು ಹುಡಕಬೇಕೆಂಬ ಗೊಂದಲದಲ್ಲಿರುವವರಿಗೆ - ಎಲ್ಲರಿಗು ಸ್ವಪರಾಮರ್ಶೆ, ಸ್ವವಿಮರ್ಶೆಗೆ ಸಕಾಲವನ್ನೊದಗಿಸುತ್ತದೆ.
ಅಂತದ್ದೊಂದು ವರ್ಷದುಡುಕಿನ ಈ ದಿನ ಎಲ್ಲರ ಹುಡುಕಾಟ ಸತ್ವಯುತವಾಗಲಿ, ಸದುದ್ದೇಶ ಪ್ರೇರಿತವಾಗಲಿ, ಯಶಸ್ಸಿನತ್ತ ಸಾಗಲಿ ಎನ್ನುವ ಆಶಯದದೊಂದಿಗೆ ಈ ಕವನ 'ಹುಡು'ಕಾಟ' :-)
ಹುಡು'ಕಾಟ'
________________
ಹುಡುಕು ಹುಡುಕುಡುಕು
ಈ ಹೊತ್ತೆ ವರ್ಷದುಡುಕು
ಹರಿಯನ್ನೊ ಹರನನ್ನೊ
ಸೃಷ್ಟಿಕರ್ತ ಬ್ರಹ್ಮನನ್ನೊ ||
ಸೃಷ್ಟಿ ಸ್ಥಿತಿ ಲಯದ ಋತು
ಮರುಕಳಿಸೊ ಸೂಕ್ಷ್ಮ ತಂತು
ಹುಡುಕು ಕಣಕಣ ತ್ರಿಗುಣ
ಅಡಗಿದೆ ಜನ್ಮಾಂತರ ಋಣ ||
ಬದುಕಲೇನೇನಿದೆ ಹುಡುಕು
ಹುಡುಕಲೇನು? ಅರಿಯಲ್ಹುಡುಕು !
ಬಂದಿತ್ತೇನೇನು, ಬರಲುಂಟಿನ್ನೇನು ?
ಬಂದ ಗಳಿಗೆಯೊಳಗಡಗಿದ್ದೇನೇನು ||
ವರ್ಷಕಲ್ಲ, ಜೀವನ ಪರ್ಯಂತ
ಹುಡುಕಾಟವವರ ಸ್ವಂತ, ಸ್ವಗತ
ಸಾಧು-ಸಂತರಲ್ಲ, ಋಣವಂತರೆಲ್ಲ
ತಡಕಾಡದೆ ಸಿಗದೇನು, ತಡವಲ್ಲ ||
ಹುಡುಕಿದ್ದರೆ ಸರಿ ಹುಡುಕಿ ನಡೆ
ಹುಡುಕದ ಮಿಡುಕಿಗೆಲ್ಲಿ ಅಡೆತಡೆ ?
ಹೊರಡೀಗಲೂ ಹುಡುಕಬಹುದು
ವರ್ಷದುಡುಕಲಿ ದುಡುಕದೆ ನಡೆದು ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ವರ್ಷದುಡುಕು.....
ನಾಗೇಶ ಮೈಸೂರುರವರಿಗೆ ವಂದನೆಗಳು
ಜೀವನದ ಹುಡುಕಾಟ ಕುರಿತು ಓದುಗನನ್ನು ಒಂದು ಕ್ಷಣ ಯೋಚಿಸುವಂತೆ ಮಾಡುತ್ತವೆ ಧನ್ಯವಾದಗಳು.
In reply to ಉ: ವರ್ಷದುಡುಕು..... by H A Patil
ಉ: ವರ್ಷದುಡುಕು.....
ಪಾಟೀಲರೆ ನಮಸ್ಕಾರ. ಹುಡುಕಾಟವೆ ಜೀವನವಾದರು ಅದನ್ನು ಸಾಂಸಾರಿಕ ತೊಳಲಾಟಗಳ ಮುಸುಕಲಿಟ್ಟು ಆಡಿಸುವ ವಿಧಿಯ ಚಳಕ ಊಹೆಗೆ ಮೀರಿದ್ದು. ಆ ಹುಡುಕಾಟದ ಕೊನೆ ಸಫಲವಾದರೆ ಜೀವನವೂ ಸಫಲವಾದಂತೆ - ಪ್ರತಿಕ್ರಿಯೆಗೆ ಧನ್ಯವಾದಗಳು :-)
ಉ: ವರ್ಷದುಡುಕು.....
ವರ್ಷದೊಡಕು, ವರ್ಷತೊಡಕು ಎಂದೂ ಅನ್ನುವ ವರ್ಷದುಡುಕುಗೆ ಹೊಸ ಅರ್ಥ 'ಹುಡುಕು' ಎಂಬರ್ಥದಲ್ಲಿ ಬರೆದಿರುವುದು ನವೀನವೆನಿಸಿದೆ. ವರ್ಷತೊಡಕಿನ ದಿನ ಹೇಗೆ ಇರುತ್ತದೋ ಹಾಗೆ ವರ್ಷಪೂರ್ತಿ ಇರುತ್ತದೆಂಬುದು ಸಾಮಾನ್ಯ ಕಲ್ಪನೆ. ಹಬ್ಬದ ದಿನ ಮಾಡದ ಮಾಂಸದಡುಗೆಯನ್ನು ಹಬ್ಬದ ಮರುದಿನ ವರ್ಷತೊಡಕಿನ ಹೆಸರಿನಲ್ಲಿ ಭರ್ಜರಿಯಾಗಿ ಮಾಡಿ ತಿಂಗು ತೇಗುತ್ತಾರೆ. ಮಾಂಸ ತಿನ್ನುವವರಿಗೆ ಹಬ್ಬಕ್ಕಿಂತ ಹಬ್ಬದ ಮರುದಿನವೇ ಸಂಭ್ರಮ ಜಾಸ್ತಿ. ಮಾಂಸಾಹಾರಿಗಳ ವಿವಾಹದಲ್ಲಿ 'ಬೀಗರ ಊಟ' ಇರುತ್ತಲ್ಲಾ, ಹಾಗೆ.
In reply to ಉ: ವರ್ಷದುಡುಕು..... by kavinagaraj
ಉ: ವರ್ಷದುಡುಕು.....
ಕವಿಗಳೆ ನಿಮ್ಮ ಮಾತು ನಿಜ - ಯುಗಾದಿಯ ದಿನಕ್ಕಿಂತ ಅದರ ಮರುದಿನದ 'ಬಾಡಿನ ಹಬ್ಬದೂಟ' ವೆ ಜೋರು. ನಾನಿದ್ದ ಕಡೆಯಂತು ಹಬ್ಬದ ದಿನ ರಾಮಮಂದಿರಗಳ ಮುಂದೆ ದೊಡ್ಡ ಚಪ್ಪರ ಹಾಕಿಬಿಡುತ್ತಿದ್ದರು, ಸುತ್ತಲೂ ಗರಿಗಳಿಂದ ಮುಚ್ಚಿ ಅದನ್ನೆ ಖಾಸಗಿ ಹಜಾರವಾಗಿಸುತ್ತ. ಅಲ್ಲಿ ಯುಗಾದಿಯ ಬೆಳಗಿನಿಂದ ಮರುದಿನ ಬೆಳಿಗ್ಗೆಯವರೆಗೆ ಮಹಾನ್ ಪಂಥದಾಟ (ಅರ್ಥಾತ್ ಎಕ್ಕಾ, ರಾಣಿ, ರಾಜ, ಜೋಕರ್, ಆಟಿನ್, ಡೈಮಂಡಾದಿಗಳ ಇಸ್ಪೀಟೆಲೆಯಾಟ!). ಎಷ್ಟು ಕಳೆದುಕೊಳ್ಳುತ್ತಿದ್ದರೊ, ಎಷ್ಟು ಗಳಿಸುತ್ತಿದ್ದರೊ - ಆಟ ಮಾತ್ರ ರಾತ್ರಿಯೆಲ್ಲ ನಡೆಯುತ್ತಿತ್ತು,ಸುಮಾರು ಕಡೆ ಮರುದಿನ ಮುಂದುವರೆದಿದ್ದೂ ಉಂಟು!
ಅಂದಹಾಗೆ, ಆ ವರ್ಷದುಡುಕಿನ ದಿನ ಮಾಡಿದ್ದು ವರ್ಷವೆಲ್ಲ ಪುನರಾವರ್ತನೆ ಮಾಡುವೆನೆಂಬ ನಂಬಿಕೆಯಲ್ಲೆ (?), ಮರೆಯದೆ ಒಂದೆರಡು ಕವನ ಬರೆದು, ಸಂಪದದಲ್ಲೂ ಪ್ರಕಟಿಸಿದೆ. ವರ್ಷವೆಲ್ಲಾ ಮಾಡುತ್ತೇನೊ ಇಲ್ಲವೆ ಯಾರಿಗೆ ಗೊತ್ತು ? ಆದರೆ ನಂಬಿಕೆ ಕಾಡುವ ಶನಿಯಾಗಬಾರದಲ್ಲಾ - ಎಂದು ಆ ದಿನ ತಪ್ಪಿಸದೆ ಬರೆದೆ!
ಅಲ್ಲದೆ ಮಾಮೂಲಿನ ಅರ್ಥದ ಜತೆಗೆ ಬರುವ ವರ್ಷದಲ್ಲೇನಿದೆ ಎನ್ನುವ ಕುತೂಹಲದ ಹುಡುಕಾಟವೂ ಈ ದಿನಕ್ಕೆ ಒಪ್ಪಿಗೆಯಾಗುವ ವಿವರಣೆಯೆ ಎನಿಸಿ, ಅದನ್ನೆ ವಿಸ್ತರಿಸಿ ಬರೆದೆ. ಅದೆ ಲಾಘವದಲ್ಲಿ ಒಂದು ಕಡೆ 'ದುಡುಕನ್ನು' ದುಡಿಸಿಕೊಂಡೆ :-)