ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರ

ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರ

 ವರ್ಷಪೂರ್ತಿ ಇಂಟರ್ನೆಟ್‌ನಿಂದ ದೂರ
ದ ವರ್ಜ್ ಎನ್ನುವ ಪತ್ರಿಕೆಯ ಹಿರಿಯ ಸಂಪಾದಕರಾದ ಪೌಲ್ ಮಿಲ್ಲರ್ ಅವರು ಒಂದು ವರ್ಷ ಪೂರ್ತಿ ಇಂಟರ್ನೆಟ್‌ನಿಂದ ದೂರವುಳಿಯುವ ನಿರ್ಧಾರ ಮಾಡಿದ್ದಾರೆ.ಇಂಟರ್ನೆಟ್ ಮೂಲಕ ಫೇಸ್‌ಬುಕ್,ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲೇ ಕಳೆದುಹೋಗುವ ಯುವಜನತೆಯ ಹಾಗೆಯೇ ಜೀವನ ಸಾಗಿಸುತ್ತಿದ್ದ ಮಿಲ್ಲರ್ ಅವರು,ಪುಸ್ತಕಗಳನ್ನು ಓದುವುದು,ಗ್ರಂಥಾಲಯ ಭೇಟಿ ಮುಂತಾದ ಚಟುವಟಿಕೆಗಳ ಮೂಲಕ ಈ ಒಂದು ವರ್ಷಕಾಲ ಕಳೆಯಲು ಬಯಸುತ್ತಿದ್ದಾರೆ.ಪತ್ರಿಕಾ ಸಂಪಾದಕನಾದ ಈತ ತಂತ್ರಜ್ಞಾನ ಬರಹಗಾರ ಕೂಡಾ ಅಗಿದ್ದಾರೆ.ಹಾಗಾಗಿ,ಅವರ ಕೆಲಸವು ಇಂಟರ್ನೆಟ್‌ರಹಿತ ಜೀವನ ಶೈಲಿಯಿಂದ ಬಾಧಿತವಾಗಿದೆ.ಆದರೆ ಪತ್ರಿಕೆಯ ಆತನ ಸಹೋದ್ಯೋಗಿಗಳು ಆತನ ಅಜ್ಞಾತವಾಸಕ್ಕೆ ಬೆಂಬಲವಿತ್ತು,ಆತನ ಜತೆ ಸಹಕರಿಸುತ್ತಿದ್ದಾರೆ.ಹಾಗಾಗಿ ಆತನ ನೌಕರಿಗೆ ಬಾಧಕವಿಲ್ಲ.
--------------------------------------------------------------------------
ಎಟಿಎಂ,ಎಟಿಪಿ,ಈಗ ಎಟಿಎಫ್
ಹಣ ಪಡೆಯಲು ಎಟಿಎಂ,ವಿದ್ಯುತ್ ಬಿಲ್ ಪಾವತಿಸಲು ಎಟಿಪಿ ನಂತರ ಆದಾಯಕರ ಪಾವತಿಸಲು ಎಟಿಎಫ್-ಅಂದರೆ ಅಟೊಮೇಟೆಡ್ ಟ್ಯಾಕ್ಸ್ ಫೈಲಿಂಗ್ ಬಂದಿದೆ.Taxsmile.com ಕಂಪೆನಿಯು ಟ್ಯಾಕ್ಸ್ ರಿಟರ್ನ್‌ನ್ನು ಸಿದ್ಧ ಪಡಿಸಿ,ಆನ್‌ಲೈನ್‌ನಲ್ಲಿ ಅದರ ಸಲ್ಲಿಕೆಗೆ ಅನುವು ಮಾಡುವ ಎಟಿಎಫ್‌ಗಳನ್ನು ಕೆಫೆ ಡೇ ಹೋಟೆಲಿನ ಸಹಭಾಗಿತ್ವದೊಡನೆ ಸ್ಥಾಪಿಸಿದೆ.ದರ ಇನ್ನೂರೈವತ್ತು ರುಪಾಯಿ.ಆದಾಯಕರ ಪಾವತಿ ವಿವರಗಳನ್ನು ಟೈಪಿಸಿದರೆ,ಎಟಿಎಫ್,ಆದಾಯಕರ ರಿಟರ್ನ್ ಫಾರ್ಮನ್ನು ಸಿದ್ಧ ಪಡಿಸುತ್ತದೆ.ಡಿಜಿಟಲ್ ಸಹಿ ಇದ್ದರೆ ಆನ್‌ಲೈನ್ ಮೂಲಕ ಇಅದನ್ನು ಆದಾಯಕರ ಇಲಾಖೆಗೆ ಸಲ್ಲಿಸಬಹುದು.ಈ ಸೇವೆ ಬೆಂಗಳೂರು ಮತ್ತು ಮುಂಬೈಯಲ್ಲಿ ಸದ್ಯ ಲಭ್ಯವಿದೆ.
-------------------------------------------------
ಅಕ್ಟೋಬರ್‌ನಲ್ಲಿ ವಿಂಡೋಸ್ ಎಂಟು ಬಿಡುಗಡೆ
ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಕಂಪ್ಯೂಟರ್ ಆಪರೇಟಿಂಗ್ ವ್ಯವಸ್ಥೆಯು ಅಕ್ಟೋಬರಿನಲ್ಲಿ ಬಿಡುಗಡೆಯಾಗಲಿದೆಯಂತೆ.ಈಗಿನ ವಿಂಡೋಸ್ ಏಳು ಮೂರು ವರ್ಷದ ಹಿಂದೆ ಬಿಡುಗಡೆಯಾಗಿತ್ತು.ಅದನ್ನೀಗ ಅರುವತ್ತಮೂರು ಕೋಟಿ ಕಂಪ್ಯೂಟರುಗಳಲ್ಲಿ ಬಳಸಲಾಗುತ್ತಿದೆ.ಹೊಸ ಆಪರೇಟಿಂಗ್ ವ್ಯವಸ್ಥೆಯು ಸ್ಮಾರ್ಟ್‌ಪೋನ್,ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಹೀಗೆ ಬಹುಸಾಧನಗಳಲ್ಲಿ ಬಳಕೆಗೆ ಸೂಕ್ತವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ.ಅಂದಹಾಗೆ ಇದೇ ಮೊದಲಬಾರಿಗೆ ಮೈಕ್ರೋಸಾಫ್ಟ್ ಕಂಪೆನಿಯು ತನ್ನ ತ್ರೈಮಾಸಿಕ ಫಲಿತಾಂಶದಲ್ಲಿ ನಷ್ಟ ತೋರಿಸಿಕೊಂಡಿದೆ.ಕಂಪೆನಿ ಆಸ್ತಿತ್ವಕ್ಕೆ ಬಂದ ಮೇಲೆ ಮೊದಲ ಬಾರಿಗೆ ಹೀಗಾಗುತ್ತಿದೆ.ತಾನು ಖರೀದಿಸಿದ ಕಂಪೆನಿಯ ಬೆಲೆಯನ್ನು ತನ್ನ ಲಾಭಾಂಶದಿಂದ ಕಳೆದ ಕಾರಣ ಹೀಗಾಗಿದೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ.ಇದೇ ಅವಧಿಯಲ್ಲಿ ಗೂಗಲ್ ಕಂಪೆನಿಯು ಎರಡೂವರೆ ಬಿಲಿಯನ್ ಡಾಲರಿಗೂ ಹೆಚ್ಚು ಲಾಭಗಳಿಸಿದೆ.ಗೂಗಲ್ ವ್ಯವಹಾರ ತ್ರೈಮಾಸಿಕದ ಅವಧಿಯಲ್ಲಿ ಹನ್ನೆರಡು ಬಿಲಿಯನ್ ಡಾಲರಿಗೂ ಹೆಚ್ಚು ಇದೆ.
------------------------------------------------
ವಿಕಿಲೀಕ್ಸ್ ಭಂಡಾರ ಈಗ ಸಂಪೂರ್ಣ ಲೀಕ್



ಜೂಲಿಯನ್ ಅಸ್ಸಾಂಗೆಯವರ ವಿಕಿಲೀಕ್ಸ್ ಹಲವು ದೇಶಗಳ ನಂಬಲು ಕಷ್ಟವಾದ ರಹಸ್ಯಗಳನ್ನು ಬಯಲಿಗೆಳೆದು ಸರಕಾರಗಳ ವಿರೋಧ ಕಟ್ಟಿಕೊಂಡಿತು.ಅದರ ನೇತಾರ ಜೂಲಿಯನ್ ಅಸಾಂಗೆಯವರ ಮೇಲೆ ಕೇಸು ಜಡಿದು,ಅವರನ್ನು ಜೈಲಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ, ಈ ನಡುವೆ ಇಂಟರ್ನೆಟ್ ತಾಣವನ್ನು ನಡೆಸಲು ಜನರಿಂದ ಚಂದಾ ಮೂಲಕ ಹಣ ಸಂಗ್ರಹಿಸುತ್ತಿದ್ದ ವಿಕಿಲೀಕ್ಸ್‌ಗೆ,ಹಣ ಪಾವತಿ ಸೇವೆ ಒದಗಿಸಲು ಖ್ಯಾತ ಕ್ರೆಡಿಟ್‌ಕಾರ್ಡ್ ಕಂಪೆನಿಗಳಾದ ಅಮೆರಿಕನ್ ಕಾರ್ಡ್,ವೀಸಾ ಮುಂತಾದ ಕಂಪೆನಿಗಳು ನಿಲ್ಲಿಸಿವೆಯಾದ್ದರಿಂದ ಅದೀಗ ತನ್ನ ಹಣಕಾಸಿನ ವಿಚಾರದಲ್ಲಿ ದಿವಾಳಿ ಹಂತವನ್ನು ತಲುಪಿದೆ.ಕ್ರೆಡಿಟ್‌ಕಾರ್ಡ್ ಕಂಪೆನಿಗಳು ಸರಕಾರಗಳ ಒತ್ತಡದ ಕಾರಣ ವಿಕಿಲೀಕ್ಸ್‌ಗೆ ಸೇವೆ ಒದಗಿಸಲು ನಿರಾಕರಿಸುತ್ತಿವೆ.
------------------------------------
ಅಸಲಿಯೋ ನಕಲಿಯೋ?
ನೀವು ಕೊಂಡ ವಸ್ತುವು ಅಸಲಿಯೋ ನಕಲಿಯೋ ಎನ್ನುವುದು ಗೊತ್ತಾಗದಷ್ಟು ಸಾಮ್ಯತೆ ಇರುವ ಹಾಗೆ ನಕಲು ಮಾಡುವ ಕಂಪೆನಿಗಳಿಗಿನ್ನು ಉಳಿಗಾಲವಿಲ್ಲ.ಫಾರ್ಮಾಸೆಕ್ಯೂರ್ ಎನ್ನುವ ಕಂಪೆನಿಯು ಪ್ರತಿ ಅಸಲಿ ವಸ್ತುವಿಗೆ ಒಂದು ಪ್ರತ್ಯೇಕ ಕೋಡ್ ಅನ್ನು ಮುದ್ರಿಸಲು ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡಿದೆ,ಈ ಸಂಖ್ಯೆಯನ್ನು ಫಾರ್ಮಾಸೆಕ್ಯೂರ್ ಕಂಪೆನಿಯ ಮೊಬೈಲ್ ಸ್ಂಖ್ಯೆಗೆ ಎಸೆಮ್ಮೆಸ್ ಮಾಡಿ,ವಸ್ತುವು ಅಸಲಿ-ನಕಲಿ ಎಂದು ತಿಳಿದುಕೊಳ್ಳಬಹುದು.ಹಲವು ಔಷಧ ಕಂಪೆನಿಗಳ ಜತೆ ಒಡಂಬಡಿಕೆ ಈಗಾಗಲೇ ಆಗಿದೆ.ಇನ್ನುಳಿದ ವಸ್ತುಗಳನ್ನು ತಯಾರಿಸುವ ಕಂಪೆನಿಗಳಿಗೂ ಇದನ್ನು ಅಳವಡಿಸಲು ತಯಾರಿ ನಡೆದಿದೆ.
-------------------------------------
ಬೇಡದ ಮಿಂಚಂಚೆ:ಇಳಿಕೆಯಾಗಲಿದೆ
ನಮ್ಮ ಮಿಂಚಂಚೆಯ ಇನ್‌ಬಾಕ್ಸಿಗಿನ್ನು ಕಡಿಮೆ ಬೇಡದ ಅಂಚೆಗಳು ತಲುಪುವುದು ಸಂಭವನೀಯ.ಜಗತ್ತಿನಾದ್ಯಂತ್ಯದ ಜನರ ಮಿಂಚಂಚೆಗೆ ಬೇಡದ ಮಿಂಚಂಚೆ ಕಳುಹಿಸುತ್ತಿದ್ದ ಗ್ರಂ ಬಾಟ್‌ನೆಟ್ ಜಾಲವನ್ನು ಸೈಬರ್ ಭದ್ರತಾ ಪಡೆಯು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಾಟ್‌ನೆಟ್ ಅನ್ನುವುದು ಒಂದು ಸ್ವಯಂಚಾಲಿ ವ್ಯವಸ್ಥೆ.ಈ ವ್ಯವಸ್ಥೆಯ ಸರ್ವರ್‌ಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ಇರುತ್ತವೆ.ಗ್ರಮ್ ಎನ್ನುವ ಬಾಟ್‌ನೆಟ್‌ನ್ನು ಯಾರೋ ದಾಳಿಕೋರರು ನಿರ್ವಹಿಸುತ್ತಿದ್ದರು.ಅವರು ಕಂಪ್ಯೂಟರು ತಂತ್ರಾಂಶವನ್ನು ವಿವಿಧ ಕಂಪ್ಯೂಟರುಗಳಲ್ಲಿ ಬಳಕೆದಾರರ ಗಮನಕ್ಕೆ ಬಾರದ ಹಾಗೆ ಸ್ಥಾಪಿಸಿ,ನಂತರ ಅಂತಹ ಕಂಪ್ಯೂಟರುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು,ಅವುಗಳ ಮೂಲಕ ಬೇಡದ ಮಿಂಚಂಚೆಯನ್ನು ಹರಡುವ ಕೆಲಸ ಮಾಡಿಸುತ್ತಿದ್ದರು.ಈ ಗ್ರಂ ಜಾಲದ ಎಲ್ಲಾ ಸರ್ವರುಗಳ ಮೇಲೆ ಒಟ್ಟಿಗೆ ದಾಳಿ ನಡೆಸಿ,ಇಡೀ ವ್ಯವಸ್ಥೆಯನ್ನೇ ಛಿದ್ರ ಮಾಡಲಿದೀಗ ಸೈಬರ್ ಭದ್ರತಾ ಪಡೆಗಳಿಗೆ ಸಾಧ್ಯವಾಗಿದ್ದು,ಹಾಗಾಗಿ ಬೇಡದ ಮಿಂಚಂಚೆಗಳ ಕಾಟ ಗಣನೀಯವಾಗಿ ಇಳಿಯಲಿದೆ ಎಂಬ ಆಶೆ ಹುಟ್ಟಿದೆ.
---------------------------------------
ಟೆಲಿಕಾಮ್ ಸ್ಪೆಕ್ಟ್ರಮ್ ದರ ಇಳಿಕೆ
ಕೇಂದ್ರ ಸರಕಾರವು ಟೂಜಿ ಮೊಬೈಲ್ ಸ್ಪೆಕ್ಟ್ರಮನ್ನು ಮರು ಹರಾಜು ಹಾಕಬೇಕಿದೆ.ಐದು ಮೆಗಾಹರ್ಟ್ಸ್ ಸ್ಪೆಕ್ಟ್ರಮ್‌ಗೆ ಹದಿನೆಂಟು ಸಾವಿರ ಕೋಟಿ ಮೂಲದರ ನಿಗದಿ ಪಡಿಸಲು ಟ್ರಾಯ್ ಪ್ರಾಧಿಕಾರ ಸರಕಾರವನ್ನು ಕೇಳಿದೆ.ಆದರೆ ಕ್ಯಾಬಿನೆಟ್ ಸಚಿವರ ಸಮಿತಿಯು,ಈ ಬೆಲೆಯನ್ನು ಒಪ್ಪದೆ,ಟೆಲಿಕಾಂ ಕಂಪೆನಿಗಳ ಲಾಬಿಗೆ ಮಣಿದು,ಬೆಲೆಯನ್ನು ಹದಿನಾಲ್ಕರಿಂದ ಹದಿನಾರು ಸಾವಿರ ಕೋಟಿ ರುಪಾಯಿಗಳಿಗೆ ಇಳಿಸಲು ತೀರ್ಮಾನಿಸಿದೆ.ಅಲ್ಲದೆ ಹರಾಜಿನಲ್ಲಿ ಅಂತಿಮವಾಗಿ ನಿರ್ಧಾರವಾಗುವ ಬೆಲೆಯನ್ನು ಕಂತುಗಳಲ್ಲಿ ಪಾವತಿಸುವ ಅನುಕೂಲ ಕಲ್ಪಿಸಲು ಅನುಮತಿಸಿದೆ.ಇದರ ಜತೆಗೆ ಟೆಲಿಕಾಂ ಕಂಪೆನಿಗಳು ತಮ್ಮ ವ್ಯವಹಾರದ ನಿಗದಿತ ಭಾಗವನ್ನು ವರ್ಷವೂ ಬಳಕೆ ಶುಲ್ಕ ಎಂದು ಪಾವತಿಸ ಬೇಕಾಗುತ್ತದೆ.ಈ ಶುಲ್ಕವು ಜಿಎಸೆಂ ಸೇವಾದಾತೃಗಳಿಗೆ ಶೇಕಡಾ ಮೂವತ್ತೈದೂ,ಸಿಡಿಎಂಎ ಸೇವಾದಾತೃಗಳಿಗೆ ಶೇಕಡಾ ಇಪ್ಪತ್ತೈದೂ ಆಗಿರುತ್ತದೆ.ಆದರೆ ಈ ತೀರ್ಮಾನವು ಅಂತಿಮವೇನಲ್ಲ.ಇದನ್ನಿನ್ನು ಸಂಪುಟ ಸಭೆಯು ಅಂಗೀಕರಿಸಬೇಕಿದೆ.ಒಟ್ಟಿನಲ್ಲಿ ಟೆಲಿಕಾಂ ನಿಯಮಗಳ ಬಗ್ಗೆ ಇರುವ ಗೊಂದಲಗಳು ಮುಂದುವರಿದಿದ್ದು,ಅನಿಶ್ಚಿತ ವಾತಾವರಣ ಮುಂದಿದೆ.ಆರ್ಥಿಕ ಹಿಂಜರಿತ ಈ ದಿನಗಳಲ್ಲಿ,ಇಂತಹ ಗೊಂದಲಗಳು ಹೂಡಿಕೆದಾರರನ್ನು ಕಂಗೆಡಿಸಿದೆ.ಈ ವಾತಾವರಣ ಸರಿಯುವುದು ದೇಶಕ್ಕೆ ಹಿತಕರ.
--------------------------------
ತಂತ್ರಜ್ಞಾನ ಬಳಸಿ ಅನೈತಿಕ ವ್ಯವಹಾರಗಳಿಗೆ ತಡೆ:ಗೂಗಲ್ ಯತ್ನ
ಇಂಟರ್ನೆಟ್ ಬಳಸಿಕೊಂಡು ಕ್ರಿಮಿನಲ್‌ಗಳು ಮತ್ತು ಮಾಫಿಯಾ ಗುಂಪುಗಳು ಅಮಲುವಸ್ತುಗಳ ಸಾಗಾಟ ಮತ್ತು ಮಾರಾಟ,ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿವೆ.ಕೆಲವು ಮಾಫಿಯಾ ಕೇಂದ್ರಿತ ಸರಕಾರಗಳೂ ಇಂತಹ ಚಟುವಟಿಕೆಗೆ ಬೆಂಬಲ ನೀಡುತ್ತಿವೆ.ಇಂತಹ ಅನೈತಿಕ ಚಟುವಟಿಕೆಗಳನ್ನು ಪತ್ತೆ ಮಾಡಿ,ಅವುಗಳನ್ನು ತಡೆಯಲು ತಂತ್ರಜ್ಞಾನವನ್ನು ಬಳಸುವುದು ಹೇಗೆ ಎನ್ನುವ ಬಗ್ಗೆ ಚರ್ಚಿಸಲು ಗೂಗಲ್ ಸಮಾವೇಶವೊಂದನ್ನು ಆಯೋಜಿಸಿತ್ತು.ಲಾಸ್ ಏಂಜಲೀಸಿನಲ್ಲಿ ನಡೆದ ಈ ಸಮಾವೇಶದಲ್ಲಿ,ಜನರು ತಮ್ಮ ಯೋಜನೆಗಳನ್ನು ಯುಟ್ಯೂಭಿನಲ್ಲಿ ಅಪಲೋಡ್ ಮಾಡಲು ಪ್ರತ್ಯೇಕ ಚಾನೆಲ್ ಒದಗಿಸಲು ನಿರ್ಧರಿಸಲಾಯಿತು.
ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.
Udayavani 
*ಅಶೋಕ್‌ಕುಮಾರ್ ಎ