ವಲಸೆ ಹಕ್ಕಿಗಳ ಪವಾಡ ಪ್ರಪಂಚ!!

ವಲಸೆ ಹಕ್ಕಿಗಳ ಪವಾಡ ಪ್ರಪಂಚ!!

ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿದ ಬಳಿಕ ನಾವು ವಲಸೆ ಪದವನ್ನು ಸಾವಿರಾರು ಬಾರಿ ಟಿವಿಯ ವಾರ್ತೆ, ಕಾರ್ಯಕ್ರಮಗಳಲ್ಲಿ ಕೇಳಿಯೇ ಇರುತ್ತೇವೆ. ವಲಸೆ ಕಾರ್ಮಿಕರು ಎಂಬ ಪದವನ್ನು ನಾವು ಕೇಳುವುದಕ್ಕೂ ಮೊದಲು ವಲಸೆ ಹಕ್ಕಿಗಳು ಎಂಬ ಪದವನ್ನು ಶಾಲಾ ಪಾಠ ಪುಸ್ತಕಗಳಿಂದ ತಿಳಿದು ಕೊಂಡಿರುತ್ತೇವೆ. ವಿದೇಶಗಳಿಂದ ಸಾವಿರಾರು ಮೈಲು ಪ್ರಯಾಣ ಮಾಡಿ ನಮ್ಮ ದೇಶಕ್ಕೆ ಬಂದು, ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಆ ಮರಿಗಳ ರೆಕ್ಕೆ ಬಲಿತ ಕೂಡಲೇ ತಮ್ಮ ದೇಶಕ್ಕೆ ಮರು ಪ್ರಯಾಣ ಮಾಡುತ್ತವೆ. 

ಶಾಲಾ ಶೈಕ್ಷಣಿಕ ಪ್ರವಾಸದಲ್ಲೂ ನಾವು ಮಂಡ್ಯದ ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಗಿ ಅಲ್ಲಿಗೆ ಪ್ರತೀ ವರ್ಷ ವಿದೇಶಗಳಿಂದ ಬರುವ ಹಕ್ಕಿಗಳ ಸೊಬಗನ್ನು ಕಂಡೇ ಇರುತ್ತೀರಿ. ಸಾವಿರಾರು ಮೈಲುಗಳ ದೂರದಿಂದ ಹಾರಾಡಿಕೊಂಡು ಹೋಗಿ ಬೇರೊಂದು ಕಡೆ ತಮ್ಮ ಜೇವನವನ್ನು ಸಾಗಿಸುವುದೇ ಒಂದು ನೈಸರ್ಗಿಕ ಪವಾಡವಲ್ಲವೇ? ಬನ್ನಿ ಈ ಬಗ್ಗೆ ಸ್ವಲ್ಪ ತಿಳಿದು ಕೊಳ್ಳೋಣ.

ಬಹುತೇಕ ಹಕ್ಕಿಗಳು ಚಳಿಗಾಲದ ಸಮಯದಲ್ಲಿ ವಲಸೆ ಹೋಗುತ್ತವೆ. ಹಿಮ ಬೀಳುವ ಪ್ರದೇಶಗಳಿಂದ ದೂರಕ್ಕೆ ಹೋಗಿ ತಮ್ಮ ಸಂತಾನವನ್ನು ವೃದ್ದಿ ಮಾಡಿಕೊಳ್ಳುತ್ತವೆ. ಹಕ್ಕಿಗಳು ಗುಂಪು ಗುಂಪಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆರಳುವುದನ್ನು ವಲಸೆ ಎನ್ನುತ್ತೇವೆ. ಇದಕ್ಕೆ ಬಹುತೇಕ ಎರಡು ಕಾರಣಗಳನ್ನು ಕೊಡಲಾಗುತ್ತದೆ. ಅತ್ಯಂತ ಚಳಿ ಇರುವುದರಿಂದ ಮತ್ತು ಹಿಮ ಬೀಳುವುದರಿಂದ ಹಕ್ಕಿಗಳು ಆಹಾರದ ಅಲಭ್ಯತೆಯ ಕಾರಣದಿಂದ ಹಾಗೂ ತಮ್ಮ ಮುಂದಿನ ಪೀಳಿಗೆಯನ್ನು ಮುಂದುವರೆಸುವುದಕ್ಕಾಗಿ ವಲಸೆ ಹೋಗುತ್ತವೆ. ಕೆಲವು ಹಕ್ಕಿಗಳು ಅತ್ಯಂತ ಚಳಿಯನ್ನು ತಡೆದುಕೊಳ್ಳಲಾರವು. ಆದರೆ ಯಾವುದೇ ನಿರ್ದಿಷ್ಟ ಗುರಿ ಇಲ್ಲದೇ ಪ್ರತೀ ವರ್ಷ ನಿಗದಿತ ಪ್ರದೇಶಕ್ಕೆ ವಲಸೆ ಹೋಗೋದು ಹಕ್ಕಿಗಳ ಒಂದು ಪವಾಡ ಪ್ರಪಂಚವೇ ಸರಿ.

ಬಹುತೇಕ ಹಕ್ಕಿಗಳು ಸೂರ್ಯನ ಚಲನೆಯ ಆಧಾರ ಹಾಗೂ ಬೆಳಕಿನ ಲಭ್ಯತೆಯನ್ನು ಗಮನಿಸಿಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಹಕ್ಕಿಗಳು ತಮ್ಮದೇ ಆದ ಕೆಲವು ನಿರ್ದಿಷ್ಟ ಮಾಪಕ, ಹೋಗುತ್ತಿರುವ ಪ್ರದೇಶದ ವಾಸನೆ ಮತ್ತು ಭೂಮಿಯ ಅಯಸ್ಕಾಂತೀಯ ಗುಣಗಳನ್ನು ಅಳವಡಿಸಿಕೊಂಡು ಪ್ರಯಾಣ ಬೆಳೆಸಿ ವಲಸೆ ಹೋಗುತ್ತವೆ. ಸಾವಿರಾರು ಮೈಲು ಹಾರುತ್ತಾ ಹೋಗಿ ನಿರ್ದಿಷ್ಟ ಜಾಗವನ್ನು ಸೇರುವುದು ಮತ್ತು ಅಲ್ಲಿ ತಮ್ಮ ಚಳಿಗಾಲವನ್ನು ಕಳೆದು ಮತ್ತೆ ಹಿಂದೆ ತಮ್ಮ ಸ್ವದೇಶಕ್ಕೆ ತೆರಳುವುದು ಒಂದು ರೀತಿಯಲ್ಲಿ ಹಕ್ಕಿಗಳಿಗೆ ನೈಸರ್ಗಿಕವಾಗಿ ದೊರೆತ ವರವೇ ಸರಿ ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ