ವಶೀಕರಣ
ವಶೀಕರಣ (Hypnotism) ಎನ್ನುವ ಈ ಕಿರು ಪುಸ್ತಕವನ್ನು ಬರೆದವರು ಡಾ. ಎನ್.ಕಪನೀಪತಯ್ಯನವರು. ಬಹಳ ಹಿಂದೆ ಅಂದರೆ ೧೯೯೪ರಲ್ಲಿ ಮುದ್ರಣ ಕಂಡ ಈ ಪುಸ್ತಕ ಆ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿತ್ತು. ಮಾಟ, ಮಂತ್ರ, ದೆವ್ವ, ಭೂತ ಇತ್ಯಾದಿಗಳನ್ನು ನಂಬುವ ಜನರ ನಡುವೆ ಸಂಮ್ಮೋಹನ ಕ್ರಿಯೆಯ ಬಗ್ಗೆ ಬರೆದಿರುವ ಈ ಪುಸ್ತಕ ತುಂಬಾ ಮಾಹಿತಿ ಪೂರ್ಣವಾಗಿದೆ.
ನಮ್ಮ ನಿತ್ಯ ಜೀವನದಲ್ಲಿ ಸಂಮ್ಮೋಹನ ಎಂಬ ಅಧ್ಯಾಯದಲ್ಲಿ ಲೇಖಕರು ಬರೆದಂತೆ ‘ ಹಿಂದಿನ ಕಾಲದಲ್ಲಿ ಜನಗಳು ನಿತ್ಯ ಸಂತೋಷವಾಗಿದ್ದರು. ಒಬ್ಬರನೊಬ್ಬರು ಕಂಡರೆ ಪ್ರೀತಿ ವಾತ್ಸಲ್ಯ, ಪ್ರೇಮ ತುಂಬಿ ಹರಿಯುತ್ತಿತ್ತು. ಅತಿಥಿ ಅಭ್ಯಾಗತರು ಮನೆಗೆ ಬಂದರೆ ತಮ್ಮ ಭಾಗ್ಯವೆಂದು ತಮ್ಮ ಮನೆಯಲ್ಲಿರುವ ವಸ್ತುಗಳಲ್ಲೇ ಆಹಾರವನ್ನು ತಯಾರು ಮಾಡಿ ಅವರಿಗೆ ಸಂತೋಷ ಪಡಿಸುತ್ತಿದ್ದರು. ಅವರ ಆದರದ ವಾಕ್ಯಗಳು ವಿದ್ಯುತ್ ಪ್ರವಾಹದಂತೆ ಬಂದವನಿಗೆ ಸ್ವರ್ಗೀಯ ನಿತ್ಯಾನಂದವನ್ನು ಕೊಡುತ್ತಿದ್ದವು. ಊಟಕ್ಕಿಂತ ಅವರ ಮಾತುಗಳೇ ಹೊಟ್ಟೆ ತುಂಬುತ್ತಿತ್ತು. ಸತ್ಕಾರ ಮಾಡುವುದರಲ್ಲಿ ದ್ವೇಷ, ಅಸೂಯೆ, ಸಂಕೋಚ ಮನೋಭಾವಗಳೇ ಇರಲಿಲ್ಲ. ಆದರೆ ಇಂದಿನ ಸಮಾಜದಲ್ಲಿ ಆದರ್ಶಗಳು ವಿರಳವಾಯಿತು. ಜನರಲ್ಲಿ ಸಾತ್ವಿಕ ಮನೋಭಾವವು ಕೃಶವಾಯಿತು. ತಾನು ಬದುಕಬೇಕೆಂಭ ಉದ್ದೇಶಕ್ಕಾಗಿ ಹಾತೊರೆಯುವುದು ಅತಿಯಾಯಿತು. ಮೋಸ, ವಂಚನೆ, ಲಂಚಗಳು ತಾಂಡವವಾಡಲು ಉಪಕ್ರಮಿಸಿದವು. ನೀತಿಯೂ ಮೂಲೆ ಗುಂಪಾಯಿತು.
ಮಾನವ ತನ್ನ ವೇದನೆಯನ್ನು ಮರೆಯಲು ಸುಖ ಶಾಂತಿಯನ್ನು ಬಯಸುತ್ತಿದ್ದಾನೆ. ಸಮತೋಲನ ಜೀವನದ ಆಶೆ ಅಂಕುರಿಸಿದೆ. ಸಮ್ಮೋಹನ ಶಾತ್ರದಲ್ಲಿ ಆಂತರಿಕ ಮನಸ್ಸು ಚುರುಕುಗೊಳಿಸಿ ನಮಗೆ ಬೇಕಾದ ಅನುಕೂಲತೆಗಳನ್ನು ಪಡೆಯುವುದು. ಇದರಿಂದ ವಿಶ್ರಾಂತಿ, ಸುಖ ಶಾಂತಿ ದೊರಕುವುದು. ಇದೇ ಯೋಗಿಗಳ ಮತ. ಹಿಂದೆ ಯೋಗಿಗಳು ಈ ವಿದ್ಯೆಯನ್ನು ಕರಗತ ಮಾಡಿಕೊಂಡು ಜೀವನದ ಜಂಜಾಟಗಳನ್ನು ಮರೆತು ಅತ್ಮಾನಂದವನ್ನು ಅನುಭವಿಸುತ್ತಿದ್ದರು.’
ಲೇಖಕರು ನಮ್ಮ ಜೀವನದಲ್ಲಿ ಬರುವ ಹಲವಾರು ಜಂಜಾಟಗಳ ಬಗ್ಗೆ, ಅವುಗಳನ್ನು ಪರಿಹರಿಸುವ ಸುಲಭ ಸಾಧ್ಯತೆಗಳ ಬಗ್ಗೆ ವಿವರವಾಗಿ ಹೇಳುತ್ತಾ ಹೋಗುತ್ತಾರೆ. ಸರಳ ಭಾಷೆಯಲ್ಲು ಬರೆದಿರುವುದರಿಂದ ಸಾಮನ್ಯರಿಗೂ ಅರ್ಥವಾಗುತ್ತದೆ. ವಶೀಕರಣದ ಬಗ್ಗೆ, ಅದರ ಪ್ರಯೋಜನಗಳ ಬಗ್ಗೆ ಅವರು ಈ ಪುಸ್ತಕದಲ್ಲಿ ಹೇಳುತ್ತಾರೆ. ಮದ್ಯಪಾನ, ಧೂಮಪಾನ ವ್ಯಸನಿಗಳನ್ನು ವಶೀಕರಣ ವಿದ್ಯೆಯಿಂದ ಸರಿಪಡಿಸಬಹುದು. ಅದೇ ರೀತಿ ಆರೋಗ್ಯದ ಹಲವಾರು ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು. ಸಂಸಾರದಲ್ಲಿರುವ ಗಂಡ ಹೆಂಡತಿಯ ವೈಮನಸ್ಸನ್ನೂ ಬಗೆಹರಿಸಬಹುದು ಎಂದು ಉದಾಹರಣೆಗಳ ಮೂಲಕ ತಿಳಿಸುತ್ತಾರೆ.
ಔಷಧೀಯ ರೂಪದಲ್ಲಿ ವಶೀಕರಣ ಹೇಗೆ ಪರಿಣಾಮಕಾರಿ ಎಂದು ತಿಳಿಸುತ್ತಾರೆ. ನಿದ್ರಾಹೀನತೆ, ಪ್ರಸವದ ಸಮಯದಲ್ಲಿ, ದಂತ ಚಿಕಿತ್ಸೆ, ಮಾನಸಿಕ ರೋಗಿಗಳಲ್ಲಿ, ನೆನಪು ನಾಶದ ಪ್ರಕರಣಗಳಲ್ಲಿ, ಕ್ಷಯ, ಶಸ್ತ್ರಚಿಕಿತ್ಸೆ, ಚರ್ಮ ವ್ಯಾಧಿ, ಹೊಟ್ಟೆಯ ಸಮಸ್ಯೆ, ನೋವು ಮುಂತಾದ ಹಲವು ಸಮಸ್ಯೆಗಳಿಗೆ ವಶೀಕರಣ ವಿದ್ಯೆಯು ಪರಿಹಾರ ನೀಡುತ್ತದೆ. ಶಿಕ್ಷಣ ಕ್ಷೇತ್ರದಲ್ಲೂ ಈ ವಿದ್ಯೆ ಪರಿಣಾಮಕಾರಿ. ಕೆಲವರಿಗೆ ಕಲಿಯುವುದೆಂದರೆ ತಲೆನೋವು. ಆದರೆ ವಶೀಕರಣ ವಿದ್ಯೆಯಿಂದ ಕಲಿಯುವಿಕೆಯ ಭಯವನ್ನು ಹೊಡೆದೋಡಿಸಬಹುದಾಗಿದೆ. ನಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ವಶೀಕರಣವು ನೆರವಾಗುತ್ತದೆ. ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ವಶೀಕರಣ ವಿದ್ಯೆಯು ಮಾನವನಿಗೆ ಹೇಗೆ ಉಪಕಾರಿ ಎಂದು ಈ ಪುಸ್ತಕದಲ್ಲಿ ಲೇಖಕರು ಹೇಳಲು ಹೊರಟಿದ್ದಾರೆ.
ಪುಸ್ತಕ ಸುಮಾರು ೭೦ ಪುಟಗಳನ್ನು ಒಳಗೊಂಡಿದೆ. ತುಂಬಾ ಹಳೆಯ ಮುದ್ರಣವಾದುದರಿಂದ ಪ್ರಸ್ತುತ ಪ್ರತಿಗಳು ದೊರೆಯಬಹುದೇ ಎಂಬ ಸಂಶಯವಿದೆ. ಸಿಕ್ಕಿದರೆ ಒಮ್ಮೆ ಓದಲು ಅನುಕೂಲ.