ವಸಂತಗೀತ....ಯುಗಾದಿ ಶುಭಾಶಯಗಳು
ಬರಹ
**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. ****
ವಸಂತ ಗೀತ
-----------
ವಸಂತ ಋತುರಾಜ
ಒಲಿದು ಬರುತಿಹನೆಂದು
ಚೆಲುವ ಚಪ್ಪರವಾಯ್ತು
ಭೂರಮೆಯ ಒಡಲು.
ಹೊಸ ಚಿಗುರ ಹಸೆಯಿಟ್ಟು
ಹೊಸ್ತಿಲಲಿ ಕಾದಿಹಳು.
ನಸುಗೆಂಪು ಹೂಬಳೆ ತೊಟ್ಟು
ಆರತಿಯ ಬೆಳಗುವಳು.
ಉಷೆಯ ಓಕುಳಿಯಲ್ಲಿ
ಎಳೆಬಿಸಿಲ ಹಣತೆ.
ಮಿಡಿಯರಳಿ ನಾಚಿದ
ಮಾವು ಹೂವಿನ ಅಕ್ಷತೆ.
ಹೊಸಯುಗದ ಹೊಸಗೀತ
ಹಾಡಿ ನಲಿದಿರೆ ವಸುಂಧರೆ;
ಚೆಲುವ ಚಂದ್ರಮ, ಚುಕ್ಕಿಯ
ಬಾನಲಿ - ಬೆಳಕಿನ ಬೆಳ್ಳಿಗೆರೆ.
- ೦ -