*ವಸಂತ ಕಾಲ*

*ವಸಂತ ಕಾಲ*

ಕವನ

ಚೆಲುವಾ ಚೆಲುವಾ ಬಲ್ಲೇ ನಿನ್ನೊಲವಾ

ಕಣ್ಣಂಚಿನಾ ಮಿಂಚಲೀ ಸೆಳೆದೆ ನನ್ನ ಮನವಾ

ಹೃದಯವನೆ ನಿನಗೆ ನೀಡಿರುವೆ ಬಲ್ಲೆಯಾ

ನನ್ನ ಪ್ರೇಮದಾ ಪರಿಯ ನೀನರಿತೆಯಾ

 

ಶೃಂಗಾರದಲಿ ಚತುರ ರಸಿಕ ರಾಜನಂತೆ

ಬಳಿ ನೀನಿರೆ ನಿತ್ಯವೂ ವಸಂತ ಕಾಲದಂತೆ

ಮುನಿದರು ಒಲಿದರೂ ನಾ ನಿನ್ನ ನೆರಳಂತೆ

ನಲ್ಲಾ ಈ ಪ್ರೀತಿಯು ಹಾಲ್ಜೇನು ಬೆರೆತಂತೆ

 

ಸಿರಿವಂತ ನೀನಾದರೆ ಕಳ್ಳರ ಭಯವಿಹುದು

ಮನ್ಮಥ ರೂಪವಿರೆ ಸವತಿಯು ಬರಬಹುದು

ಭೋಗದಾಸೆಯಿರೆ ನಿಷ್ಠೆ ಮರೆಯಾದೀತು

ಕಾಂಚಾಣದಾಸೆಯಿರೆ ಕದಿವಾಸೆ ಬಂದೀತು

 

ಅತ್ಯಾಪ್ತ ಭಾವವು ಒಂದೇ ಸಾಕೆಮಗೆ

ಹುಲ್ಲು ಹೊದಿಕೆಯ ಸೂರು ಅರಮನೆ ನಮಗೆ

ನಿನ್ನ ಮುಖ ಬಾಡಿದರೆ ಅಳುವುದೆನ್ನ ಜೀವ

ಪಡೆವೆ ನಾ ಸಂತಸದಿ ನಿನ್ನೆಲ್ಲ ನೋವ

 

ಇದ್ದರೆ ಮರುಹುಟ್ಟು ನಿನಗಾಗಿ ಜನಿಸುವೆ

ಕೋಟಿ ಜನುಮಕೂ ನಿನ್ನನೇ ಬೇಡುವೆ

ನಿನ್ನ ಬಾಳ ತೋಟದಲಿ ಹೂವಾಗಿ ಅರಳುವೆ

ನಿನ್ನ ಮನೋ ಸರಸ್ಸಿನಲಿ ಮೀನಾಗಿ ಈಜುವೆ.

 

-*ಶಾಂತಾ ಜೆ ಅಳದಂಗಡಿ*

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್