ವಸ್ತು ಸಂಗ್ರಹಿಸುವುದಕ್ಕಾಗಿ ಅಲ್ಲ, ಬಳಕೆಗಾಗಿ

ಇದು ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ ಕಥೆ. ಒಂದು ಊರಲ್ಲಿ ಒಬ್ಬ ಶ್ರೇಷ್ಠ ಸನ್ಯಾಸಿ ಇದ್ದನು. ಆತನಿಗೆ ಇಬ್ಬರು ಶಿಷ್ಯಂದಿರು ಇದ್ದರು. ಆ ಇಬ್ಬರೂ ತರುಣರಾಗಿದ್ದರು. ಆಗ ಆ ಸಂತನಿಗೆ ಪ್ರವಾಸ ಹೋಗಬೇಕೆಂಬ ಇಚ್ಛೆಯಾಯಿತು. ಆಗ ಶಿಷ್ಯರನ್ನು ಕರೆದು ಹೇಳಿದರು, " ನೋಡಿ ಶಿಷ್ಯರೇ, ನಾನು 10 ರಿಂದ 15 ವರ್ಷ ಪ್ರವಾಸ ಹೋಗುತ್ತಾ ಇದ್ದೇನೆ. ನೀವು ಆನಂದವಾಗಿ ಇರಿ ಎಂದರು. ಆಗ ಶಿಷ್ಯರು ಹೇಳಿದರು, "ತಾವು ಪ್ರವಾಸ ಹೋಗಲು ತೀರ್ಮಾನ ಮಾಡಿದ್ದೀರಿ, ನೀವು ಹೋಗಬೇಕಾದರೆ ನಮಗೆ ಅನುಗ್ರಹ ನೀಡಬೇಕು" ಎಂದರು. ಆಗ ಸಂತ ತನ್ನ ಜೋಳಿಗೆಯಿಂದ ಒಂದು ಹಿಡಿ ಶೇಂಗಾ ಬೀಜ ಒಬ್ಬ ಶಿಷ್ಯನಿಗೆ, ಇನ್ನೊಂದು ಹಿಡಿ ಶೇಂಗಾ ಬೀಜ ಮತ್ತೊಬ್ಬ ಶಿಷ್ಯನಿಗೆ ನೀಡಿ ಹೇಳಿದ. "ಇದನ್ನು ಚೆನ್ನಾಗಿ ಜೋಪಾನ ಮಾಡಿ, ಅವು ನಿಮ್ಮನ್ನು ಕಾಪಾಡುತ್ತದೆ." ಹೀಗೆ ಹೇಳಿ ಸಂತ ಪ್ರವಾಸಕ್ಕೆ ಹೊರಟು ಹೋದನು.
ಒಬ್ಬ ಶಿಷ್ಯ ಆ ಶೇಂಗಾ ಬೀಜಗಳನ್ನು, ರೇಷ್ಮೆ ಬಟ್ಟೆಯಲ್ಲಿ ಅನೇಕ ಪದರ ಸುತ್ತಿ, ಗಂಟು ಹಾಕಿ, ಪೆಟ್ಟಿಗೆಯಲ್ಲಿ ಇಟ್ಟನು. ಪ್ರತಿದಿನ ಅದಕ್ಕೆ ಪೂಜೆ ಮಾಡುತ್ತಿದ್ದನು. ಮತ್ತೊಬ್ಬ ಶಿಷ್ಯ ಆ ಶೇಂಗಾ ಬೀಜಗಳನ್ನು ಮಠದ ಆವರಣದ ಜಾಗ ಸ್ವಚ್ಛ ಮಾಡಿ, ಉಳುಮೆ ಮಾಡಿ, ನೆಲ ಹದ ಮಾಡಿ, ಭೂಮಿಗೆ ಬಿತ್ತಿದನು. ಅದಕ್ಕೆ ಶ್ರದ್ಧೆಯಿಂದ ನೀರು ಹಾಕುತ್ತಿದ್ದನು. ಮಧ್ಯ ಮಧ್ಯ ಬರುತ್ತಿದ್ದ ಕಳೆಯನ್ನು ತೆಗೆಯುತ್ತಿದ್ದನು. ಉತ್ತಮ ಬೆಳೆ ಬಂದಿತ್ತು. ಆ ಬೆಳೆಯಿಂದ ಮತ್ತಷ್ಟು ಜಾಗ ಹದ ಮಾಡಿ, ಮತ್ತೆ ಬಿತ್ತಿದನು. ಅದನ್ನು ಚೆನ್ನಾಗಿ ಜೋಪಾನ ಮಾಡಿದನು. 10, 15 ವರ್ಷದಲ್ಲಿ ಮಠದ ತುಂಬಾ ಶೇಂಗಾ ಬೆಳೆಗಳನ್ನು ಬೆಳೆದು, ತಾನು ತಿನ್ನುತ್ತಿದ್ದನು. ಊರಿನ ಮನೆ ಮನೆಗೆ ಹಂಚಿದನು.
15 ವರ್ಷದ ನಂತರ ಸಂತ ಬಂದ. ಬಂದವನೆ ಮೊದಲನೇ ಶಿಷ್ಯನ ಬಳಿ ಬಂದನು. "ಎಲ್ಲಿ ನಾನು ನೀಡಿದ ಅನುಗ್ರಹ?." ಎಂದನು. ಆತ ಹೇಳಿದ, "ಗುರುಗಳೆ, ಇನ್ನೊಬ್ಬನಿಗೆ ನೀಡಿದ್ದೀರಲ್ಲ ಆತ, ಆ ಅನುಗ್ರಹವನ್ನು ಭೂಮಿಯಲ್ಲಿ ಹಾಕಿ, ಹಾಳು ಮಾಡಿದ್ದಾನೆ. ನಾನು ಇದನ್ನು ರೇಷ್ಮೆ ಬಟ್ಟೆಯಲ್ಲಿ ಸುರಕ್ಷಿತವಾಗಿ ಸುತ್ತಿ, ಗಂಟು ಹಾಕಿ, ಪ್ರತಿದಿನ ಪೂಜೆ ಮಾಡುತ್ತಿದ್ದೇನೆ, ಗುರುಗಳೇ" ಅಂದನು. "ತೆಗೆ ನೋಡೋಣ" ಎಂದರು ಸಂತ. ಶಿಷ್ಯ ಪೆಟ್ಟಿಗೆಯಿಂದ ಗಂಟನ್ನು ಹೊರ ತೆಗೆದು, ಗಂಟು ಬಿಚ್ಚಿ, ಒಂದೊಂದು ಪದರ ತೆಗೆಯುತ್ತಾ, ಕೊನೆಗೆ ನೋಡಿದನು ಶೇಂಗಾ ಕಾಳು ಹಾಳಾಗಿತ್ತು. ಶಿಷ್ಯನ ಮುಖದಲ್ಲಿ ಏನು ಸಂತೋಷ ತುಂಬಿತ್ತೋ?. ಅದು ಮರೆಯಾಗಿತ್ತು. ಅದೇ ಸಮಯಕ್ಕೆ ಇನ್ನೊಬ್ಬ ಶಿಷ್ಯ ಅಲ್ಲಿಗೆ ಬಂದನು. ಆತನನ್ನು ಗುರುಗಳು ಈತನಿಗೆ ಕೇಳಿದ ಹಾಗೆ ಪ್ರಶ್ನೆ ಕೇಳಿದರು. ಅನುಗ್ರಹ ಏನಾಗಿದೆ? ಎಂದರು. ಆಗ ಆ ಶಿಷ್ಯ ಹೇಳಿದ. ಅದನ್ನು ನೀವು ನೋಡಬೇಕಾದರೆ ಇಲ್ಲಿ ಸಾಧ್ಯವಿಲ್ಲ, ಹೊರಗೆ ಬರಬೇಕು ಎಂದನು. ಆ ಶಿಷ್ಯನು ಈ ಶಿಷ್ಯನನ್ನು ಕುರಿತು ಹೇಳಿದ. ಈತ ಭಿಕ್ಷೆ ಬೇಡಿ, ನೀವು ನೀಡಿದ ಅನುಗ್ರಹ ರಕ್ಷಿಸುತ್ತಿದ್ದಾನೆ, ಗುರುಗಳೇ ಎಂದನು. ಆಗ ಸಂತ ಹೊರಗೆ ಬಂದು ಮಠದ ಸುತ್ತೆಲ್ಲ ತಿರುಗಾಡಿ, ನೋಡಿದ. ಶೇಂಗ ಫಸಲು ಪಳಪಳ ಹೊಳೆಯುತ್ತಿತ್ತು. ಶಿಷ್ಯ ಹೇಳಿದ, "ಗುರುಗಳೇ, ನಿಮ್ಮ ಅನುಗ್ರಹ ನಾನೊಬ್ಬನೇ ಬಳಸಿಲ್ಲ. ಪ್ರತಿ ಮನೆ ಮನೆಯವರು ಬಳಸಿದ್ದಾರೆ". ಅಂದನು. ಆಗ ಸಂತನ ಮುಖದಲ್ಲಿ ಸಂತೋಷ ತುಂಬಿತ್ತು. ಸಂತನ ಅನುಗ್ರಹವನ್ನು ಒಬ್ಬ ಸಂಗ್ರಹಿಸಿ ಇಟ್ಟಿದ್ದ. ಮತ್ತೊಬ್ಬ ಬಳಸಿದ್ದ. ಹೇಗೆ ಬಳಸಿದ್ದ ಅಂದರೆ ತಾನು ಮತ್ತು ಜಗತ್ತು ಸಂತೋಷ ಪಡುವಂತೆ ಬಳಸಿದ್ದನು.
ನಿಸರ್ಗ ನಮಗೂ ಅನುಗ್ರಹ ನೀಡಿದೆ. ದೇಹ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳನ್ನು ನೀಡಿದೆ. ಇವುಗಳನ್ನು ಸುಮ್ಮನೆ ನೀಡಲಿಲ್ಲ. ಇವುಗಳನ್ನು ಬಳಸಿ ನೀನು ಸಂತೋಷ ಪಡು ಹಾಗೂ ಜಗತ್ತು ಸಂತೋಷ ವಾಗುವಂತೆ ಬಳಸು ಅಂತ ನೀಡಿದೆ. ಆದರೆ ನಾವು ದೇಹ ಬಳಸದೆ ಸೋಮಾರಿಯಾಗಿದ್ದೇವೆ. ಇದರಿಂದ ಸ್ಥೂಲ ಕಾಯ, ಸ್ಥೂಲ ಕಾಯದಿಂದ ಮಧುಮೇಹ, ರಕ್ತದೊತ್ತಡ, ಹೃದಯ ವೈಫಲ್ಯ ಅನುಭವಿಸುತ್ತಿದ್ದೇವೆ. ಮನಸ್ಸು ಬುದ್ಧಿ ಇಂದ್ರಿಯಗಳನ್ನು ಕಾಮ, ಕ್ರೋಧ, ಮೋಹ ಮತ್ಸರ ಮತ್ತು ದ್ವೇಷಕ್ಕಾಗಿ ಬಳಸಿ, ನಾವು ಸಂತೋಷ ಪಡುತ್ತಿಲ್ಲ, ನಮ್ಮ ಜೊತೆಯವರು ಸಹ ಸಂತೋಷ ಪಡುತ್ತಿಲ್ಲ. ಏನು ನಿಸರ್ಗ ನೀಡಿದ ಈ ಅನುಗ್ರಹವನ್ನು ನಾವು ಸಂತೋಷವಾಗುವಂತೆ, ಜೊತೆಯವರು ಸಂತೋಷ ಪಡುವಂತೆ ಬಳಸಬೇಕು ಮತ್ತೆ ನಮ್ಮಲ್ಲಿ ಏನೇನಿದೆಯೋ? ಏನೇನೋ ದೊರಕಿದೆಯೋ?. ಅದನ್ನು ಸಂಗ್ರಹಿಸದೆ ಸಂತೋಷಕ್ಕಾಗಿ ಬಳಸಿದರೆ ಬದುಕು ಸಂತೋಷದಿಂದ ಕೂಡಿರುತ್ತದೆ.
ಸಂತೋಷವೇ ಬದುಕು. ಸಂತೋಷವೇ ಶ್ರೀಮಂತ ಬದುಕು. ವಸ್ತುಗಳು, ಬಂಗಾರ, ಹಣ ನಮ್ಮನ್ನು ಶ್ರೀಮಂತ ಮಾಡುವುದಿಲ್ಲ. ಸಂತೋಷ ನಮ್ಮನ್ನು ಶ್ರೀಮಂತ ಮಾಡುತ್ತದೆ. ದೇಹ, ವಸ್ತು, ಹಣ, ಎಲ್ಲಾ ಸಂಗ್ರಹಿಸುವುದಕ್ಕಾಗಿ ಅಲ್ಲ.. ಸಂತೋಷವಾಗುವಂತೆ ಬಳಸುವುದಕ್ಕೆ. ಅಲ್ಲವೇ ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ