ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 1)

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 1)

ಪತಂಜಲ ಯೋಗ ಸೂತ್ರದ ನಾಲ್ಕನೇ ಅಧ್ಯಾಯ, 15ನೇ ಸೂತ್ರದಲ್ಲಿ ಇದು ಬರುತ್ತದೆ. ಜಗತ್ತಿನ ಜ್ಞಾನ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ. ಅದೇ ರೀತಿ ಜಗತ್ತನ್ನು ಅನುಭವ ಮಾಡಿಕೊಳ್ಳುವವನ ಜ್ಞಾನವೂ ಅಗತ್ಯ. ಹೊರಗೆ ಜಗತ್ತು, ಒಳಗೆ ನಾವು. ನಮ್ಮಲ್ಲಿ ಜ್ಞಾನ ಇದೆ. ಜಗತ್ತಿನಲ್ಲಿ ನಾವು ಅನುಭವಿಸಬಹುದಾದ ಎಲ್ಲವೂ ಇದೆ. ಜ್ಞಾನ ಇಲ್ಲ, ಅನುಭವ ಇಲ್ಲ. ವಸ್ತು ಇಲ್ಲದೆ ಹೋದರೆ ವಸ್ತುವಿನ ಅನುಭವ ನಮಗಾಗುವುದಿಲ್ಲ. ಜಗತ್ತು ಬೇಕಾಗುತ್ತದೆ. ಜಗತ್ತನ್ನು ಅನುಭವಿಸುವ ನಾವು ಬೇಕಾಗುತ್ತದೆ. ಹೂಗಳು ಇರಬೇಕು, ಹೂಗಳನ್ನು ನೋಡುವ ವ್ಯಕ್ತಿಯು ಬೇಕು. ಆಗ ಹೂವಿನ ವೈಭವ ಮನುಷ್ಯನಿಗೆ ಆಗುತ್ತದೆ. ಜಗತ್ತು ಇರುವುದು ಏತಕೆ?. ಅನುಭವಿಸುವುದಕ್ಕೆ. ಜಗತ್ತಿನ ಸಾರ್ಥಕತೆ ಇರುವುದೇ ಅದನ್ನು, ಅದರ ಸ್ವರೂಪ ತಿಳಿದು, ಅನುಭವಿಸುವುದಕ್ಕಾಗಿ. ಜಗತ್ತು ವಿಸ್ತಾರ. ಅಷ್ಟೇ ವೈಭವದಿಂದ ಕೂಡಿದೆ. ಇದು ಪ್ರತಿಕ್ಷಣ ಕ್ಷಣ ಬದಲಾಗುತ್ತಾ ಹೋಗುತ್ತದೆ. ಹೊಸ ಹೊಸ ರೂಪ ತೊಡುತ್ತಾ ಹೋಗುತ್ತದೆ. ಜಗತ್ತು ಯಾವಾಗಲೂ ಹಳೆಯದಲ್ಲ. ನದಿ ಹರಿಯುವಾಗ ಕ್ಷಣ ಕ್ಷಣ ಹೊಸ ನೀರು ಬರುತ್ತದೆ. ಹಳೆ ನೀರು ಮುಂದಕ್ಕೆ ಹೋಗುತ್ತದೆ. ಹಾಗೆ ಜಗತ್ತಿನಲ್ಲಿ ಹೊಸದು ಹೊಸದು ಕಾಣಬರುತ್ತದೆ. ಹಳೆಯದು ನಿಧಾನವಾಗಿ ಹೋಗುತ್ತಾ ಇರುತ್ತದೆ. ಆದ್ದರಿಂದ ಜಗತ್ತು ತಾಜಾ ತಾಜಾ ಹೊಸತು. ನೋಡುವವರ ದೃಷ್ಟಿ ಹಳೆಯವೇ ವಿನಃ, ಜಗತ್ತು ಅಲ್ಲ. 

ಸೂರ್ಯ ಪ್ರತಿದಿನ ಹೊಸತು. ಸೂರ್ಯೋದಯ ಸೂರ್ಯಾಸ್ತ ದಿನ ಹೊಸತು. ಹಳೆಯ ಜಗತ್ತು ಮತ್ತೆ ಬರುವುದಿಲ್ಲ. ಹೊಸದು ಬರದೇ ಇರುವುದಿಲ್ಲ. ಇದು ಜಗತ್ತಿನ ವೈಶಿಷ್ಟ್ಯ. ಇಂತಹ ಜಗತ್ತನ್ನ ನೋಡಬೇಕು, ಅದನ್ನು ಅನುಭವಿಸಬೇಕು. ಹೇಗೆ ಅನುಭವಿಸಬೇಕು ಅಂದರೆ ಜೀವನ ಪೂರ್ಣಗೊಳ್ಳುವಂತೆ ಅನುಭವಿಸಬೇಕು. ಒಂದು ಪಕ್ಷಿ, ಪತಂಗ ಜಗತ್ತನ್ನು ಅನುಭವಿಸುತ್ತದೆ. ಒಂದು ಪಕ್ಷಿ ಹಾಡಿ ಹಾಡಿ ಜಗತ್ತನ್ನು ಅನುಭವಿಸುತ್ತದೆ. ಒಂದು ಪತಂಗ ಹೂಗಳನ್ನು ಸ್ಪರ್ಶ ಮಾಡಿ ಹೂವಿನಂತೆ ಆಗುತ್ತದೆ. ಎಷ್ಟು ಮೃದು?. ಎಷ್ಟು ಸುಂದರ ಬಣ್ಣಗಳು?. ಹೂವಿನ ಮಧ್ಯೆ ಹಾರಾಡಿಕೊಂಡು ಇದ್ದರೆ ಸ್ವರ್ಗ ಹೇಳಿದಂತೆ ಅದು ಬದುಕುತ್ತದೆ. ಅನುಭವಿಸುತ್ತದೆ. ಬದುಕನ್ನು ಹೂ ಮಾಡಿಬಿಟ್ಟಿದೆ. ಹಕ್ಕಿ ಪಕ್ಷಿಗಳು ಜೀವನವನ್ನು ಹಾಡು ಮಾಡಿದ್ದಾವೆ. ಮನುಷ್ಯ ಏನು ಮಾಡಿದ?. ಬದುಕನ್ನು ರಣರಂಗ ಮಾಡಿದ. ನಾವು ಬುದ್ಧಿವಂತರು, ಜಾಣರು ವಿಕಾಸದ ತುತ್ತ ತುದಿಯಲ್ಲಿ ನಾವು ಇದ್ದೇವೆ. ಪ್ರಾಣಿಗಳು ನಮ್ಮಷ್ಟು ವಿಕಸಿತ ಆಗಿಲ್ಲ. ನಮ್ಮಷ್ಟು ಬುದ್ಧಿ ಇಲ್ಲ. ಮನುಷ್ಯ ಮಾಡುವಂತೆ ವಿಚಾರ ಅವುಗಳಿಗಿಲ್ಲ. ನಾವು ಜಗತ್ತನ್ನೇ ಸುತ್ತಬಲ್ಲವಿ. ಆಕಾಶಕ್ಕೆ ಏರಬಲ್ಲವಿ. ಆದರೆ ಬದುಕು ಗೊತ್ತಿಲ್ಲ. ಪ್ರಾಣಿ ಪಕ್ಷಿಗಳಿಗೆ ಬದುಕುವುದು ಗೊತ್ತಿದೆ. ಅವು ಬದುಕನ್ನು ಹಾಡು ಮಾಡಿದ್ದಾವೆ. ನಾವು ಬದುಕನ್ನು ರಕ್ತಸಿಕ್ತ ಮಾಡಿದ್ದೇವೆ.

ಪಾತಂಜಲ ಮಹರ್ಷಿ ಹೇಳಿದನು, ವಸ್ತುಗಳು ಹಾಗೆ ಇರುತ್ತವೆ. ನೋಡೋ ಮನಸ್ಸುಗಳು ಬೇರೆ ಬೇರೆ ಇರುತ್ತದೆ. ಅದಕ್ಕೆ ಹೇಳಿದ್ದು "ವಸ್ತುಸಾಮ್ಯ ಚಿತ್ತ ಬೇಧ" ಎಂದು. ವಸ್ತು ಸಾಮ್ಯ ಅಂದರೆ ಜಗತ್ತು ಒಂದೇ ಇದೆ. ನನಗೊಂದು ನಿನಗೊಂದು ಅವನಿಗೊಂದು ಜಗತ್ತು ಇಲ್ಲ. ವಸ್ತು ಒಂದೇ ನೋಡುವ ಕಣ್ಣು ಬೇರೆ ಬೇರೆ. ನೋಡೋ ಮನಸ್ಸುಗಳು ಭಿನ್ನಭಿನ್ನ ಇರುವುದರಿಂದ ವಸ್ತು ಬೇರೆ ಬೇರೆಯಾಗಿ ಕಾಣಿಸುತ್ತದೆ. ಇರೋ ವಸ್ತು ಮಾತ್ರ ಒಂದೇ. ವಸ್ತು ಒಂದೇ ಇದ್ದರೂ ಜಗತ್ತಿನಲ್ಲಿ ಬದುಕುವವರ ಅನುಭವ ಬೇರೆ ಬೇರೆ. ಒಬ್ಬರಿಗೆ ಒಂದು ರೀತಿ ಕಾಣಿಸುತ್ತದೆ ಮತ್ತೊಬ್ಬರಿಗೆ ಮತ್ತೊಂದು ರೀತಿ ಕಾಣಿಸುತ್ತದೆ. ಏಕೆಂದರೆ ಅವರ ಮನಸ್ಸು ಭಿನ್ನವಿದೆಯ ವಿನಃ ಜಗತ್ತಲ್ಲ. ಜಗತ್ತು ಕೆಟ್ಟಿಲ್ಲ ಚಂದಾಗಿನು ಇಲ್ಲ. ಅದು ಇದ್ದ ಹಾಗೆ ಇದೆ. ಕೆಟ್ಟಿರುವುದು ಸುಂದರವಾಗಿರುವುದು ನಮ್ಮ ಮನಸ್ಸು. ಚಿತ್ತಬೇದ ಅಂದರೆ ನೋಡುವವರ ದೃಷ್ಟಿ ಬೇರೆ ಬೇರೆ. ಎಲ್ಲಾ ರೀತಿಯಿಂದ ನೋಡಲಿಕ್ಕೆ ಬರುತ್ತದೆ. ಒಂದು ಹೂವನ್ನು ಎಲ್ಲಾ ದೃಷ್ಟಿಯಿಂದ ನೋಡಬಹುದು. ಹಣದ ದೃಷ್ಟಿಯಿಂದ ನೋಡಲಿಕ್ಕೆ ಬರುತ್ತದೆ. ಹೂ ನೋಡಿ ಬೆಲೆ ಕಟ್ಟಬಹುದು. ಅವನ ದೃಷ್ಟಿಯಲ್ಲಿ ಈ ಹೂವು ಒಂದು ರೂಪಾಯಿ ಅಥವಾ ಐದು ರೂಪಾಯಿ. ಇನ್ನೊಬ್ಬ ವಿಜ್ಞಾನಿ ಹೂ ನೋಡಿದ, ವಿಮರ್ಶೆ ಮಾಡಿದ, ಅದರ ಒಳ ರಚನೆಯನ್ನೇ ಶೋಧಿಸಿದ, ಅವನಿಗೆ ಎಂತಹ ಜ್ಞಾನ ಸಂತೋಷವಾಗಿತ್ತು. ವಿಜ್ಞಾನಿಗೆ ಬೇರೆ ರೀತಿ ಕಂಡಿದ್ದು, ಒಬ್ಬ ಹುಡುಗಿ ಅದೇ ಹೂವು ಹಿಡಿದು ತಲೆಗೆ ಏರಿಸಿದಳು. ಅದೇ ಹೂವು ದೇವರಿಗೆ ಏರಿಸಿದಳು. ಎಲ್ಲರಿಗೂ ಹಂಚಿದಳು. ಆಕೆಗೆ ಆ ಹೂ ಎಂದರೆ ಅದ್ಭುತ ವಸ್ತು. ಯಾರು ಯಾರಿಗೆ ಏನೇನು ಕಾಣಿಸುತ್ತದೋ?.  ಹೂ ಮಾತ್ರ ಒಂದೇ. ನಮ್ಮ ಮನಸ್ಸು ಬದಲಿರುವುದರಿಂದ ಹೀಗೆ ಕಾಣುತ್ತದೆ. 

ಹಾಗೆ ಜಗತ್ತು ಕೆಟ್ಟಿತು ಅಂತೀವಿ, ಒಳ್ಳೆಯದು ಅಂತೀವಿ ಇದೆಲ್ಲ ನಮ್ಮ ನಮ್ಮ ಭ್ರಮೆ. ನಾವು ನೋಡುವ ದೃಷ್ಟಿಕೋನ. ಮಹಾಭಾರತದಲ್ಲಿ ದುರ್ಯೋಧನರಿಗೆ, ಧರ್ಮರಾಜನಿಗೆ ಜಗತ್ತು ಹೇಗಿದೆ ಅಂತ ಕೇಳಿದರು. ಅದೇ ಆರ್ಯವರ್ತ, ಉತ್ತರ ಭಾರತ, ಗಂಗಾ ನದಿ ತಟ, ಅದೇ ಹಿಮಾಲಯ, ಅದೇ ಭೂಪ್ರದೇಶ, ಇಬ್ಬರೂ ನೋಡಿದರು. ಬೇರೆ ಬೇರೆ ಕಂಡರು. ಇಬ್ಬರಿಗೂ ಬೇರೆ ಬೇರೆ ಕಂಡಿತು. ನಾವು ನಮ್ಮ ದೃಷ್ಟಿಯಲ್ಲಿ ನೋಡಿ ಜಗತ್ತು ಹೀಗಿದೆ ಎಂದು ಭಾವಿಸುತ್ತೇವೆ. ಜಗತ್ತು ಹಾಗಿಲ್ಲ, ನಮ್ಮ ಮನಸ್ಸು ಹಾಗಾಗಿದೆ ಅಷ್ಟೇ. ಜಗತ್ತು ಇದ್ದಹಾಗೆ ಇರೋದು, ಯಾರು ಬಂದರು. ಈ ಮಣ್ಣು ಮಣ್ಣೇ. ಈ ನೀರು ನೀರೆ. ನಾವು ಬಹಳ ಬುದ್ಧಿವಂತರೆಂದು ನೀರನ್ನು ಬದಲು ಮಾಡಲು ಬರುತ್ತದೆಯೇ?. ಇದನ್ನು ಪವಿತ್ರ ಅಂತ ಕುಡಿಯಬಹುದು. ಅತ್ಯಂತ ಮಹತ್ವದ ವಸ್ತು ಎಂದು ಕುಡಿಯಬಹುದು. ಅದೇನು ನೀರು ಅಂತ ಕುಡಿಯಬಹುದು. ಅದೇನು ನೀರು ಅಂದರೆ ಅದಕ್ಕೆ ಬೆಲೆ ಇಲ್ಲ. ಬಿಸಿಲು ನೀರಡಿಕೆಯಾಗಿದೆ. ಒಂದು ಕಪ್ ನೀರು ಅಮೃತ. ನೀರೇ ಇಲ್ಲದೆ ಇದ್ದಾಗ ನೀರೇ ದೇವರು. ಎಲ್ಲಾ ಸಂಪತ್ತು ಇದೆ. ನೀರೇ ಇಲ್ಲ, ಬದುಕು ಹೋಗ್ತದೆ. ಜೀವನ ನಿಂತಿದ್ದು ಅನ್ನ ನೀರಿನ ಮೇಲೆ ಹೊರತು ಬೇರೆ ಸಂಪತ್ತಿನಿಂದ ಅಲ್ಲ. ಇಂತಹ ನೀರಿನ ಬೆಲೆ ಎಷ್ಟು ಹೇಳುವುದು. ಬೆಲೆ ಕಟ್ಟಲು ಆಗುವುದಿಲ್ಲ. ಆ ದೃಷ್ಟಿಯಿಂದ ನೋಡಿದರೆ ನೀರು ಅಷ್ಟು ಮಹತ್ವದ್ದು ಅಮೃತ. ಮತ್ತೊಂದು ದೃಷ್ಟಿಯಿಂದ ನೋಡಿದರೆ ಅದೇನು. ನೀರು ಮಾತ್ರ ಒಂದೇ. ನೋಡುವ ನಾವು ಬೇರೆ ಬೇರೆ. ಮನುಷ್ಯ ಜಗತ್ತಿಗೆ ಬೆಲೆ ಕಟ್ಟುತ್ತಾನೆ. ಆ ಬೆಲೆ ಜಗತ್ತಿನದಲ್ಲ, ಆತನ ಮನಸ್ಸಿನ ಬೆಲೆ. ಕೆಟ್ಟದ್ದು ಅಂದರೆ ಅದು ಅವನ ಮನಸ್ಸು ಅಷ್ಟೇ. 

(ಇನ್ನೂ ಇದೆ)

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೇಟ್ ತಾಣ