ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 2)

ಒಂದು ಕಥೆ, ಬಹಳ ಹಿಂದೆ ಒಂದು ಊರು. ವಾಹನಗಳು ಇರಲಿಲ್ಲ. ಒಬ್ಬ ಪ್ರವಾಸಿ ಬಂದ. ಆ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಬಾವಿ ಇತ್ತು. ಆ ತೋಟದ ಮಾಲೀಕ ಅಲ್ಲೇ ಕುಳಿತಿದ್ದನು. ಆ ಪ್ರವಾಸಿ ಮಾಲೀಕನ ಬಳಿ ಬಂದು ಕುಳಿತು ಮಾತನಾಡಿದ. ಆ ಮಾಲಿಕ ನಾಲ್ಕು ರೊಟ್ಟಿ ಮೊದಲು ನೀಡಿ ನಂತರ ಯಾವೂರು ಅಂದ. ಇದು ಭಾರತೀಯ ಸಂಸ್ಕೃತಿ. ಮೊದಲು ನೀರು, ಊಟ ಆಮೇಲೆ ನೀವು ಯಾರು. ಮೊದಲೇ ನೀವು ಯಾರು ಅಂದರೆ ಸಂಸ್ಕೃತಿ ಹೋಯಿತು. ಹಾಗೆ ಮಾಲೀಕ ಕೇಳಿದ ನೀವು ಯಾರು?. ಆಗ ಪ್ರವಾಸಿ ಹೇಳಿದ ನಾನು ಶಿಕ್ಷಕ. ನನಗೆ ಈ ಊರಿಗೆ ವರ್ಗವಾಗಿದೆ. ಅದಕ್ಕೆ ಊರು ನೋಡಿ ಹೋಗೋದಕ್ಕೆ ಬಂದಿದ್ದೇನೆ. ನೀವು ಸಿಕ್ಕಿದ್ದು ಬಹಳ ಸಂತೋಷ. ಹೇಳಿ ನಿಮ್ಮ ಊರು ಹೇಗಿದೆ ಎಂದ ಪ್ರವಾಸಿ. ಏಕಂದರೆ ಆ ಊರಲ್ಲಿ ನಾಲ್ಕಾರು ವರ್ಷ ಇದ್ದು ಮಕ್ಕಳಿಗೆ ಕಲಿಸಬೇಕಾಗಿದೆ. ಅದಕ್ಕೆ ಕೇಳಿದ. ಅದಕ್ಕೆ ಆ ಮಾಲಿಕ ಹೇಳಿದ. ನಮ್ಮೂರು ಶುದ್ಧ ಕನ್ನಡಿಯಂತೆ ಇದೆ. ಆಗ ಶಿಕ್ಷಕ ಕೇಳಿದ. ಹಾಗಂದರೆ ಏನು?. ಅಂದನು. ಮಾಲಿಕ ಹೇಳಿದ, ಅದೇನು ನೀನು ಹೇಗೆ ನೋಡುತ್ತಿಯೊ ಹಾಗೆ ಇದೆ. ನೀನು ಚೆನ್ನಾಗಿ ನಗುತ್ತಾ ಇದ್ದರೆ ನಮ್ಮೂರು ನಗುತ್ತಾ ಇರುತ್ತದ್ದೆ. ನೀನೇನಾದರೂ ಮಾಡಿದರೆ ನಮ್ಮೂರು ಹಾಗೆ ಇದೆ. ನೀ ಹೆಂಗೋ ನಮ್ಮೂರು ಹಂಗೆ. ಎಂತಹ ಸುಂದರ ಮಾತು. ಈಗೇನಾದ್ರೂ ಕೇಳಿದರೆ, ಊರಿನ ದೋಷಗಳನ್ನು ಹೇಳಿ, ಊರಿಗೆ ಬರದಂತೆ ಮಾಡುತ್ತಿದ್ದರು. ಆಗ ಮಾಲೀಕ ಹೇಳಿದ ನೀವು ಹೇಗಿದ್ದೀರಿ ಹಾಗೆ ನಮ್ಮೂರು ಅಂದನು. ಆಗ ಶಿಕ್ಷಕ ಹೇಳಿದ ನನಗೆ ಅಂತಹ ಊರೆ ಬೇಕಾಗಿದೆ ಎಂದನು. ವಸ್ತು ಒಂದೇ ಆದರೂ ಮನಸ್ಸು ಭಿನ್ನ ಭಿನ್ನವಾಗಿರುವುದರಿಂದ ಪ್ರತಿಯೊಬ್ಬರಿಗೂ ಭಿನ್ನ-ಭಿನ್ನವಾಗಿ ಕಾಣಿಸುತ್ತದೆ.
ಕೌಶಿಕ ಮಹಾರಾಜ ಅಕ್ಕಮಹಾದೇವಿಯನ್ನು ವಿವಾಹ ಆಗಲು ಬಯಸಿದ. ಅಕ್ಕಮಹಾದೇವಿಗೆ ಕಣ್ಣಿಗೆ ಕಂಡದ್ದೆಲ್ಲಾ ದೇವರು. ಕೌಶಿಕನಿಗೆ ಕಂಡಿದ್ದೇ ಬೇರೆ. ಪಾತಂಜಲ ಮಹರ್ಷಿ ಹೇಳುತ್ತಾನೆ, "ಜಗತ್ತು ಹೇಗಿದೆಯೋ ಹಾಗೆ ಇದೆ. ನೀನು ಹೇಗೆ ನೋಡಬೇಕು ಅನ್ನುವುದು ಮಹತ್ವದ್ದು. ನಾವು ಸೂರ್ಯ, ಚಂದ್ರ, ಆಕಾಶ ಬದಲು ಮಾಡಲು ಆಗುವುದಿಲ್ಲ. ನೀನು ನಿನ್ನ ಸುತ್ತಮುತ್ತ ಇರುವ ನಾಲ್ಕು ಗಿಡ ನಾಶ ಮಾಡಬಹುದು ವಿನಹ ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ನೀನು ಈ ಜಗತ್ತನ್ನು ಸತ್ಯಂ ಶಿವಂ ಸುಂದರಂ ಅಂತ ನೋಡು. ಸಂತೋಷ ಪಡು" ಎಂದರು. ಅದು ಯೋಗ ಎಂದರು. ನಿನ್ನ ಜಗತ್ತು ನಿನ್ನ ಕೈಯೊಳಗೆ. ಹೊರಗಿನ ಜಗತ್ತು ನಿನ್ನ ಕೈಯೊಳಗೆ ಇಲ್ಲ. ನಿನಗೆ ಏನು ಕಾಣಿಸುತ್ತದೆ?. ಹೇಗೆ ಕಾಣಿಸುತ್ತದೆ?. ಅದು ನಿನ್ನ ಕೈಯೊಳಗೆ ಇದೆ. ನೀನು ಅದನ್ನು ಕೆಟ್ಟದ್ದು ಮಾಡಬಲ್ಲೆ , ಒಳ್ಳೆಯದು ಮಾಡಬಲ್ಲೆ. ನೀನು ಮನಸ್ಸು ಮಾಡಿದರೆ ನೀನು ಅದನ್ನು ಸ್ವರ್ಗ ಮಾಡಬಲ್ಲೆ. ಇಲ್ಲ ನರಕ ಮಾಡಬಲ್ಲೆ. ಮನುಷ್ಯನೇ ನಿನ್ನ ಮನಸ್ಸು ರೂಪಿಸಿಕೋ ಎಂದನು. ಎಂತಹ ಅರ್ಥಪೂರ್ಣ ಸಂಶೋಧನಾತ್ಮಕ ಮಾತನ್ನು ಹೇಳಿದನು.
ಭೂಮಿ ಹೇಗಿದೆಯೋ ಹಾಗೆ ಇದೆ. ನಾವೇ ಬರುವುದು. ನಾವೇ ಹೊಡೆದಾಡುವುದು. ಇದು ನನ್ನದು, ಇದು ನಿನ್ನದು ಅನ್ನುವುದು. ನಾವೇ ವಿನಹ ಭೂಮಿಯಲ್ಲ. ಭೂಮಿ ಯಾರ ಜೊತೆ ಹೋಗಿಲ್ಲ. ಹೋಗೋದು ಇಲ್ಲ. ನಾವು ನಮ್ಮ ಮನಸ್ಸನ್ನು ತಿದ್ದಿಕೊಳ್ಳಬೇಕು ವಿನಹ ಹೊರಗಡೆಯದ್ದನಲ್ಲ. ಕೆಲವರು ಹೇಳುತ್ತಾರೆ ನಮ್ಮ ಮನೆ ವಾಸ್ತು ಸರಿ ಇಲ್ಲ. ಜಗಳ ಕಾದಾಟ ಅಂತ. ಮನೆ ಅಂದರೆ ನಾಲ್ಕು ಗೋಡೆ. ಮನೆದು ತಪ್ಪಲ್ಲ ನಮ್ಮ ಮನಸ್ಸಿನಲ್ಲಿ ತಪ್ಪು. ಸರಿ ಮಾಡಬೇಕಿರುವುದು ನಮ್ಮ ಮನಸ್ಸನ್ನು. ನಮಗೆಲ್ಲರಿಗೂ ಒಂದೇ ಜಗತ್ತು ನನಗೊಂದು ನಿನಗೊಂದು ಇಲ್ಲ. ಈ ಜಗತ್ತೆಲ್ಲ ನಮ್ಮದೇ ಯಾರೊಬ್ಬರದೂ ಅಲ್ಲ. ನಮ್ಮ ದೃಷ್ಟಿಕೋನದ ಪ್ರಕಾರ ಜಗತ್ತಿಲ್ಲ. ಜಗತ್ತು ತನ್ನಷ್ಟಕ್ಕೆ ತಾನೇ ಇರುತ್ತದೆ. ನಾವು ಅದನ್ನು ಇದ್ದಂತೆಯೇ ನೋಡಿದರೆ ತತ್ವಜ್ಞಾನಿಯಾಗುತ್ತೇವೆ. ದಾರ್ಶನಿಕರಾಗುತ್ತೇವೆ. ಒಳ್ಳೆಯ ರೀತಿ ಒಳ್ಳೆಯದು ಅಂತ ನೋಡಿದರೆ ಸಂತರಾಗುತ್ತೇವೆ, ಶರಣರಾಗುತ್ತೇವೆ ಕವಿಗಳಾಗುತ್ತೇವೆ. ಜಗತ್ತು ಸುಂದರ ಅದೇ ಅಂತ ನೋಡುವುದು ಅಥವಾ ಇದ್ದಕ್ಕಿದ್ದಂತೆ ನೋಡಿದರೆ ಸತ್ಯ ದರ್ಶನ. ಒಳ್ಳೆಯದು ಅಂತ ನೋಡಿದರೆ ಸಾತ್ವಿಕ ದರ್ಶನವಾಗುತ್ತದೆ. ಆನಂದವಾಗುತ್ತದೆ. ಪಾತಂಜಲ ಮಹರ್ಷಿ ಹೇಳುವುದು "ಜಗತ್ತನ್ನು ಬೈಯ ಬೇಡ. ಮನಸ್ಸಿನ ಕಡೆ ಲಕ್ಷ್ಯ ಕೊಡು. ಜಗತ್ತು ವೈವಿಧ್ಯ. ಎಲ್ಲವೂ ಇರಬೇಕಾಗುತ್ತದೆ. ಸಾಗರದ ನೀರು ಉಪ್ಪು ಇದೆ, ಅದನ್ನು ಕುಡಿಯಲು ಆಗುವುದಿಲ್ಲ, ಆದ್ದರಿಂದ ಇದು ಬೇಡ ಅಂದರೆ, ಮಳೆನೇ ಇಲ್ಲ. ಮಳೆ ಬರುವುದು ಸಾಗರದಿಂದ. ಮಳೆಯೇ ಇಲ್ಲದಿದ್ದರೆ ಗಿಡಮರ ಇಲ್ಲ, ಕೊನೆಗೆ ನಾವೇ ಇಲ್ಲ. ಎಲ್ಲವನ್ನು ಆ ರೀತಿ ನೋಡುವುದು. ಸಣ್ಣ ಗುಡ್ಡವನ್ನು ಬೆಟ್ಟದಂತೆ ನೋಡಬಹುದು. ಹಿಮಾಲಯವನ್ನು ಕ್ಷುಲ್ಲಕ ಅಂತ ನೋಡಬಹುದು. ನಾವು ನಮ್ಮ ದೃಷ್ಟಿ ತಿದ್ದಿಕೊಳ್ಳಬೇಕು. ಆಗ ಸಂಸ್ಕಾರಗಳಿಂದ ನಮ್ಮ ಮನಸ್ಸು ಕೆಡುವುದಿಲ್ಲ. ದೇವರು, ನಿಸರ್ಗ ಎಲ್ಲರಿಗೂ ಒಂದೇ ಭೂಮಿ, ಒಂದೇ ಸೂರ್ಯ, ಒಂದೇ ಚಂದ್ರ, ಒಂದೇ ನೀರು ಕೊಟ್ಟಿದ್ದಾನೆ. ಚಂದ್ರನತ್ತ ನೋಡು ತಂಪನ್ನು ಅನುಭವಿಸು. ಅದ್ಭುತವನ್ನು ಅನ್ನು. ನಿನ್ನ ಬದುಕು ಅದ್ಭುತವಾಗುತ್ತದೆ. ನಿನ್ನ ಬದುಕನ್ನು ಕಟ್ಟಿಕೊಳ್ಳುವುದು, ಅದನ್ನು ಸುಂದರಗೊಳಿಸುವುದು, ಅದನ್ನು ಶ್ರೀಮಂತ ಗೊಳಿಸುವುದು, ಶೃಂಗರಿಸುವುದು, ನಮ್ಮ ಕೈ ಒಳಗಿದೆ." ಎಂದ ಪಾತಂಜಲ ಮಹರ್ಷಿ.
ಬದುಕಿರುವವರೆಗೆ ನಗುತ್ತಾ ಇರಬೇಕು ಎಂದು ಹೇಳಿದನು. ಜಗತ್ತಿನ ಸೌಂದರ್ಯ ಆಸ್ವಾದಿಸುತ್ತ ಇರಬೇಕು. ಜಗತ್ತು ಅತ್ಯದ್ಭುತ ಅನ್ನು. ದೇವಲೋಕ ಮರ್ತ್ಯ ಲೋಕ ಬೇರಿಲ್ಲ ಕಾಣಿರೋ ಎಂದರು ಶರಣರು. ಇಂತಹ ಅದ್ಭುತ ಭೂಮಂಡಲದಲ್ಲಿ ದೇವಲೋಕ ಕಾಣದೆ ಇದ್ದರೆ ಇನ್ನೆಲ್ಲಿ ಕಾಣುವುದು. ಭೂಮಿ ಬಿಟ್ಟು ಬೇರೆ ಯಾವುದೇ ಗ್ರಹಕ್ಕೆ ಹೋದರು, ಒಂದು ಕಪ್ಪು ನೀರು ಸಿಗುವುದಿಲ್ಲ. ಒಂದು ಹೂವು, ಒಂದು ಹಣ್ಣು ಇಲ್ಲ. ಇದನ್ನು ಸುಂದರ ಮಾಡೋದಿಕ್ಕೆ ಆಗದಿದ್ದರೆ ಇನ್ನೆಲ್ಲಿ ಹೋಗಿ ಸುಂದರ ಮಾಡುವುದು. ಈ ಭೂಮಿಯೇ ಸ್ವರ್ಗ. ನಮಗೆ ಬದುಕುವುದಕ್ಕೆ ಬೇಕಾದದ್ದು ಎಲ್ಲಾ ಇದೆ. ಈ ಭೂಮಿ ನರಕ ಆಗಿದ್ರೆ ಅದಕ್ಕೆ ನಾವೇ ಕಾರಣ. ನಮ್ಮ ಮನಸ್ಸೇ ಕಾರಣ. ನಮ್ಮ ಮನಸ್ಸನ್ನು ಸುಂದರಗೊಳಿಸಿದರೆ ಜಗತ್ತು ಸುಂದರವಾಗಿ ಕಾಣುತ್ತದೆ. ಜಗತ್ತು ಇದ್ದಕ್ಕಿದ್ದ ಹಾಗೆ ಇರುವುದು. ಇದನ್ನು ನಾವು ರಚಿಸಿದ್ದಲ್ಲ. ಇದು ನಮ್ಮ ನಿಯಂತ್ರಣದಲ್ಲಿ ಇಲ್ಲ. ಇದು ನಮ್ಮ ಮನಸ್ಸಿನ ರಚನೆಯಲ್ಲ. ನಾವು ಭಾವಿಸಿದಂತೆಯೂ ಇಲ್ಲ. ಇದ್ದ ಹಾಗಾದರೂ ನೋಡು. ಸುಂದರವಾಗಿ ಆದರೂ ನೋಡು. ಆಗ ಜೀವನ ಸಾರ್ಥಕವಾಗುತ್ತದೆ ಎಂದನು ಪಾತಂಜಲ ಮಹರ್ಷಿ.
(ಮುಗಿಯಿತು)
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೇಟ್ ತಾಣ