ವಸ್ತ್ರಪುರಾಣ
ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ.
ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ ಆಣೆ ಮಾಡಿ ಹೇಳುತ್ತೇನೆ.
ವಸ್ತ್ರಪುರಾಣವನ್ನು ಕೈಗೆತ್ತಿಕೊಂಡಾಗ ಕಾಣುವುದು ಸ್ತ್ರೀಲಿಂಗವೇ ಅಂದರೆ ನೀವು ತಪ್ಪು ತಿಳಿದುಕೊಳ್ಳಬಾರದು.
ನಿಮ್ಮ ಕಣ್ಣೆದುರು ಕೂಡ ಈಗ ಪುಟ್ಟ ಹುಡುಗಿಯರ ,ಯುವತಿಯರ ,ಹೆಂಗಸರ, ಅಜ್ಜಿಯಂದಿರ ಉಡುಪುಗಳು ಕುಣಿಯುತ್ತಿವೆಯೆಂದು ನಾನು ಸರಿಯಾಗಿಯೇ ಊಹಿಸುತ್ತಿದ್ದೇನೆ.
ಯಾಕೆಂದರೆ ವೈವಿಧ್ಯ ಎನ್ನುವುದು ಸ್ತ್ರೀಕುಲಕ್ಕೇ ಮೀಸಲು.
ಅಜ್ಜಿಯರನ್ನು ಸೇರಿಸಿದ್ದಕ್ಕೆ ಯಾರದ್ದಾದರೂ ಆಕ್ಷೇಪ ಇದ್ದರೆ ಈಗಲೇ ಹೇಳಿ. ಇಲ್ಲೇ ಉತ್ತರ ಕೊಟ್ಟು ಬಿಡುತ್ತೇನೆ.ವಿಧವೆಗೆ ಬೇರೆ ಸಧವೆಗೆ ಬೇರೆ ಅಂತ ಹೇಳುತ್ತಿದ್ದ ಸಮಾಜವಲ್ಲವೇ ನಮ್ಮದು? ವಿಧುರನಿಗೆ ಬೇರೆ ಅಂತೇನಾದ್ರೂ ಉಂಟಾ? ಇರಲಿ ಮುಂದೆ ಹೋಗೋಣ.
ಓಟ್ಟಿನಲ್ಲಿ ಮಗುವೇ ಇರಲಿ ಮುದಿಯೇ ಇರಲಿ ವೈವಿಧ್ಯವು ಹೆಣ್ಣಿನ ಸೊತ್ತು.
ಹೆಂಗಸರ ಉಡುಪುಗಳ ಪೈಕಿ ಸೀರೆ ಚಿರ ನೂತನವಾದುದು.ಅದು ಕೇಂದ್ರ ಸ್ಥಾನದಲ್ಲಿದ್ದರೆ,ಚೂಡಿದಾರ ,ಮಿಡಿ ,ಮಿನಿ, ಮ್ಯಾಕ್ಸಿ ಇತ್ಯಾದಿಗಳು ವಿವಿಧ ವಯೋಮಾನದವರಿಂದಾಗಿ ತಮ್ಮತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.ಆದರೆ ಕುತೂಹಲಕರವಾದ ವಸ್ತ್ರವೆಂದರೆ ನೈಟಿ.ಹೆಂಗಸರು ಏರಿಸುವ ನೈಟಿಗೂ ಗಂಡಸರು ಏರಿಸುವ ನೈಂಟಿಗೂ ಏನು ವ್ಯತ್ಯಾಸ ಅಥವಾ ಹೋಲಿಕೆ ಎಂದು ಒಮ್ಮೆ ಪತ್ರಿಕೆಯೊಂದರಲ್ಲಿ ಓದುಗರೊಬ್ಬರು ಪ್ರಶ್ನೆ ಕೇಳಿದ್ದರು.ಉತ್ತರಕುಮಾರರು ನೀಡಿದ ಉತ್ತರ ಎರಡೂ ಮತ್ತೇರಿಸುತ್ತವೆ ಎಂದಾಗಿತ್ತು.ಅದೇನೇ ಇರಲಿ ಹೆಂಗಸರು ನೈಟಿ ಏರಿಸುತ್ತಾರೆ ಎಂದು ಮೇಲಿನ ಪ್ರಶ್ನಕರ್ತರು ಹೇಳಿದ್ದಾರಾದರೂ ನೈಟಿಯನ್ನು ಶರೀರಕ್ಕೆ ಏರಿಸುವುದೋ ಇಳಿಸುವುದೋ ಎಂಬುದನ್ನು ನೋಡಿ ತೀರ್ಮಾನಿಸಲು ಒಂದು ಏಕಸದಸ್ಯ ಆಯೋಗವನ್ನೇ ನೇಮಿಸಬೇಕಾದೀತು. ಒಬ್ಬ ನಿರುದ್ಯೋಗಿ ನಿವೃತ್ತ ನ್ಯಾಯಾಧೀಶರಿಗೆ ಅವಕಾಶ ನೀಡಿದ ಹಾಗೂ ಆಗುತ್ತದೆ.ಆದರೆ ಒಂದು ಸಮಸ್ಯೆಯೆಂದರೆ ಈ ಆಯೋಗಕ್ಕೆ ಶೇ.ನೂರು ಮಹಿಳೆಯರಿಗೆ ಮೀಸಲಾತಿ ನೀಡಬೇಕಾದುದು ಅನಿವಾರ್ಯ!!
ಅದಿರಲಿ. ನೈಟಿಯಷ್ಟು ಬಹೂಪಯೋಗಿ ಮತ್ತು ಬಹುಜನೋಪಯೋಗಿ ಉಡುಪು ಬೇರೆಯಿಲ್ಲ. ಇದು ಎಲ್ಲದಕ್ಕೂಸುಲಭ.ಹೊಲಿಯಲು ಸುಲಭ ಯಾಕೆಮ್ದರೆ ಅಳತೆ ಬೇಕೆಂದಿಲ್ಲ.ಸೀರೆ ಉಡಲು ಕಲಿವ ಹಾಗೆ ಕಲಿಯಬೇಕೆಂದಿಲ್ಲ.ಚಪ್ಪಲಿಯಿಂದ ಹಿಡಿದು ಹೆಂಗಸರು ಉಪಯೋಗಿಸುವ ಎಲ್ಲಾ ವಸ್ತುಗಳ ಬೆಲೆ ಹೆಚ್ಚೇ ಆದರೂ ಕಂಪೇರೆಟಿವ್ಲೀ ನೈಟಿಯ ಬೆಲೆ ಕಡಿಮೆ.
ನೈಟಿ ಧರಿಸಲು ಪ್ರಾಯಭೇದವಿಲ್ಲ.ಅಭಿಪ್ರಾಯಭೇದದಿಂದಾಗಿ ಕೆಲವು ಸಂಪ್ರದಾಯಿಕರ ಮನೆಯಲ್ಲಿ ರಾತ್ರಿಯು ನೈಟಿ ವರ್ಜ್ಯ.!!
ನೈಟಿಯಲ್ಲು ಬಸುರಿಗೊಂದು ಆಕಾರ, ಬಾಣಂತಿಗೊಂದು ಆಕಾರ, ಉದ್ದ ಸ್ಲೀವ್ ,ಗಿಡ್ಡ ಸ್ಲೀವ್,ಸ್ಲೀವ್ ಲೆಸ್ ಇತ್ಯಾದಿ ವೆರೈಟಿಗಳು.!
ನೈಟಿ ಧರಿಸಿ ಮನೆಯಿಂದ ಎಷ್ಟು ದೂರ ಹೋಗಬಹುದು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ನೈಟಿಣಿಯರಲ್ಲಿ ಇದ್ದಂತಿಲ್ಲ.
ಹಾಗಾಗಿಯೇ ಕೆಲವರು ಕಂಪೌಂಡ್ ಗೇಟು ದಾಟಬಾರದು ಎಂಬ ನಿಯಮ ಹಾಕಿಕೊಂಡರೆ ಇನ್ನು ಕೆಲವರು ಹತ್ತಿರದ ಗೂಡಂಗಡಿಯನ್ನೇ ಗಡಿ ಮಾಡಿಕೊಂಡಿರುವುದನ್ನು ಕಾಣುತ್ತೇವೆ.
ಮಹಿಳೆಯರ ನೈಟಿಯ ಹಾಗೆ ಪುರುಷರ ನೈಟಿಯು ಉಂಟು.ಆದ್ರೆ ಸಾಮಾನ್ಯರ ಸೊತ್ತಲ್ಲ.ಸಿನಿಮಾದ ಶ್ರೀಮಂತರು ಅಂಥ ನೈಟಿ ಹಾಕಿ ಸಿಗರೇಟೋ ಸಿಗಾರೋ ಹಿಡಕೊಂಡು ಶಥಪಥ ಹಾಕುವುದನ್ನು ಕಾಣುತ್ತೇವೆ ಅಷ್ಟೆ.
ಪುರುಷರು ಧರಿಸುವ ಬಟ್ಟೆಗಳ ಬಗ್ಗೆ ಅಂಗಡಿಯವರಿಗೂ ಕಾಳಜಿಯಿಲ್ಲ.ಬಟ್ಟೆಯಂಗಡಿಗಳಲ್ಲಿ ಮುಕ್ಕಾಲು ಭಾಗ ಹೆಂಗಸರ ವಸ್ತ್ರಗಳೇ ಇರುತ್ತವೆ.
ಸೇಲ್ಸ್ ಮನ್, ಸೇಲ್ಸ್ ಗರ್ಲ್ ಗಳೂ ಇಡೀದಿನ ಸೀರೆ ,ಚೂಡಿದಾರಗಳನ್ನು ಎಳೆದೂಎಳೆದೂ ಹಾಕಿ ಮತ್ತೆ ಪುನಃ ಮಡಿಚಿ ರೇಕ್ ನಲ್ಲಿ ಇಡುವುದಕ್ಕೆ ಬೇಸರ ಪಡೋದಿಲ್ಲ. ಅದೇಗಂಡಸರು ಶರ್ಟ್ ಪ್ಯಾಂಟ್ ಗಳಿಗಾಗಿ ಹೋದರೆ ಎರಡೇ ನಿಮಿಶಗಳಲ್ಲಿ ಅವರ ಸಹನೆಯ ಕಟ್ಟೆಯೊಡೆಯುತ್ತದೆ.
ಗಂಡಸರ ಉಡುಪಿನಲ್ಲಿ ಯಾವುಡೇ ವೈವಿಧ್ಯವಿಲ್ಲವಾದರಿಂದ,ಅದು ಅತ್ತ ಬಟ್ಟೆಯ ಪ್ರದರ್ಶನವೂ ಅಲ್ಲ ;ಇತ್ತ ದೇಹದ ಪ್ರದರ್ಶನವೂ ಅಲ್ಲ !!!!
ಹೀಗಾಗಿ ಗಂಡಸರ ವಸ್ತ್ರದ ಬಗ್ಗೆ ಯೋಚಿಸುವುದರಲ್ಲಾಗಲೀ ಬರೆಯುವುದರಲ್ಲಾಗಲೀ ಓದುವುದರಲ್ಲಾಗಲೀ ಯಾವುದೇ ಸ್ವಾರಸ್ಯವಿಲ್ಲ.ಮತ್ತೆ ಹೆಂಗಸರ ವಸ್ತ್ರದ ಬಗ್ಗೆ ಬರೆದಷ್ಟೂ ಮುಗಿಯಲಿಕ್ಕಿಲ್ಲ. ಕೇಳಿದಷ್ಟೂ ಸಾಕಾಗಲಿಕ್ಕಿಲ್ಲ.
ಹಾಗಾಗಿ ವಸ್ತ್ರ ಪುರಾಣ ಇಲ್ಲಿಗೆ ಪರಿಸಮಾಪ್ತಿ.!!
ಕೊನೆಬೆಡಿ:
ಚಳಿಗಾಲದ ಮಡಿಕೇರಿ ನನಗಿಷ್ಟ ಯಾಕೆಂದರೆ ಬಟನ್ ಇಲ್ಲದ , ಹರಿದ , ಇಸ್ತ್ರಿಯಿಲ್ಲದ ಅಂಗಿಯ ಮೇಲೊಂದು ಸ್ವೆಟರ್ ಹಾಕಿಕೊಂಡರಾಯಿತು.