ವಾಕ್ಮನ್....

ವಾಕ್ಮನ್....

ಸಣ್ಣ ಊರಿನಲ್ಲಿಯೇ ಹತ್ತನೇ ತರಗತಿಯನ್ನೋದಿ ಅದ್ಭುತವಲ್ಲದಿದ್ದರೂ ಉತ್ತಮ ಅಂಕಗಳನ್ನು ಪಡೆದು ತನ್ನದೇ ಊರಿನಲ್ಲಿದ್ದ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸೇರಿದವನು ರಾಘವೇಂದ್ರ. ಆವತ್ತಿಗೆ ಹತ್ತನೇಯ ತರಗತಿ ಪಾಸಾದವರು ವಿಜ್ಞಾನ ವಿಭಾಗಕ್ಕೆ ಸೇರಿಕೊಂಡರೆ ಅವರು ತಮ್ಮ ಬದುಕಿನ ಅತಿದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆನ್ನುವುದು ಊರಿನ ಹಿರಿಯ ಲಫಂಗ ವಿದ್ಯಾರ್ಥಿಗಳ ಅಂಬೋಣ.ಆದರೆ ರಾಘುವಿನ ಕಲ್ಪನೆಗಳೇ ಬೇರೆ.ಹತ್ತನೇ ತರಗತಿಯಲ್ಲಿ ಎಂಬೈತ್ತದು ಅಂಕಗಳನ್ನು ತೆಗೆದುಕೊಂಡು ತಾನು ವಿಜ್ಞಾನ ವಿಭಾಗಕ್ಕೆ ಸೇರಿಕೊಳ್ಳದಿದ್ದರೇ ಅದು ತನಗಾಗುವ ಅವಮಾನವೆನ್ನುವುದು ಅವನ ಲೆಕ್ಕಾಚಾರ.ರಾಘು ತನ್ನ ತರಗತಿಯಲ್ಲೇ ಅತೀ ಬುದ್ದಿವಂತ ಹುಡುಗನೇನೂ ಅಲ್ಲ.ಆದರೆ ತರಗತಿಯ ಬುದ್ಧಿವಂತ ಹುಡುಗರ ಪೈಕಿ ಅವನೂ ಒಬ್ಬ.ವಿಜ್ಞಾನ ವಿಷಯದ ಆಯ್ಕೆಗೆ ಬಂದಾಗ ಕೊಂಚ ಗೊಂದಲ ಅವನಿಗೂ ಇತ್ತಾದರೂ ಅವನ ಜೊತೆಯಾಗಿದ್ದು ಅವನ ಗೆಳೆಯರಾದ ಮಹೇಶ ಮತ್ತು ರವಿ.ಮೂವರು ಆತ್ಮೀಯ ಗೆಳೆಯರು.ಮೂವರು ಹೆಚ್ಚುಕಡಿಮೆ ಸರಿಸಮಾನ ಬುದ್ಧಿವಂತರು ಎನ್ನುವುದು  ಸಹ ಸುಳ್ಳಲ್ಲ.ಪರೀಕ್ಷೆಗಳಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಅಂಕಗಳನ್ನು ತೆಗೆದಾಗಲೆಲ್ಲ,ಪರಸ್ಪರರು ಸಣ್ಣ ಅಸೂಯೆಯಿಂದ ಉರಿದುಕೊಂಡಿದ್ದು ಹೊರತುಪಡಿಸಿದರೇ ಒಳ್ಳೆಯ ಗೆಳೆಯರೇ.

ಎಸ್ಸೆಲ್ಸಿಯ ಫಲಿತಾಂಶದ ಮೂರನೇಯ ದಿನಕ್ಕಿಲ್ಲ ಇವರುಗಳ ಸಂಭ್ರಮ ಮುಗಿದಿತ್ತು.ಊರಿಗೆಲ್ಲ ಸಿಹಿ ಹಂಚಿ,ಶಬ್ಭಾಶಗಿರಿ ಪಡೆದುಕೊಂಡು,ಇನ್ಯಾರದ್ದೋ ಮಕ್ಕಳೂ ಫೇಲಾಗಿದ್ದಕ್ಕೆ ಇವರ ಅಪ್ಪಂದಿರು ಹೆಮ್ಮೆಪಟ್ಟುಕೊಂಡದ್ದು,ಸಂಬಂಧಿಕರ ಮಗನೊಬ್ಬ ಬೇರೊಂದು ಊರಿನ ಶಾಲೆಯಲ್ಲಿ ಅಗ್ರಸ್ಥಾನಿಯಾಗಿದ್ದಕ್ಕೆ ,’ದರಿದ್ರ ಮುಂಡೆದು,ಓದು ಅಂತ ಬಡ್ಕೊಂಡ್ರು ಸರಿಯಾಗಿ ಓದಲೇ ಇಲ್ಲ,ನಮ್ಮವರ ಮುಂದೆ ಮರ್ಯಾದೆ ಹರಾಜಿಗೆ ಹಾಕಿಬಿಟ್ಟ’ಎಂದು ಬಯ್ಯಿಸಿಕೊಂಡದ್ದು ಎಲ್ಲವೂ ಮುಗಿದ ಮೇಲೆ ಮುಂದೇನು ಎಂಬ ಪ್ರಶ್ನೆ ಕಾಡಿತ್ತು ಹುಡುಗರಿಗೆ. ಸ್ನೇಹಿತರ ಮೊದಲ ಆಯ್ಕೆ ವಿಜ್ಞಾನವೇ ಆಗಿದ್ದರೂ ಕೊನೆಯ ಕ್ಷಣಕ್ಕೆ ಊರಿನ ಅಬ್ಬೇಪಾರಿ ಹಿರಿಯ ಹುಡುಗರು,’ಆಂ..!! ಸೈನ್ಸ್ ತಗೊಳ್ತಿಯಾ ,ಫುಲ್ ಇಂಗ್ಲಿಷು,ಭಯಂಕರ ಕಷ್ಟ,ಹುಷಾರು ಮಾರಾಯಾ..’ಎಂಬ ಅನಗತ್ಯದ ಕಾಳಜಿಗೆ ಮೂವರು ಒಂದೆಡೆ ಕೂತು ಸಣ್ಣಗೆ ಯೋಚಿಸುವಂತಾಗಿತ್ತು.ಅದರಲ್ಲೂ ರವಿಯ ಸಂಬಂಧಿಯೊಬ್ಬ ಎಸ್ಸೆಲ್ಸಿಯಲ್ಲಿ ತೊಂಬತ್ತು ಪ್ರತಿಶತ:ದಷ್ಟು ಅಂಕಗಳನ್ನು ಗಳಿಸಿ,ಪಿಯುಸಿಯಲ್ಲಿ ಡುಮ್ಕಿ ಹೊಡೆದ ಎಂಬ ವಿಷಯವನ್ನು ಕೇಳಿದಾಗ ಪಿಯುಸಿಯ ವಿಷಯದ ಆಯ್ಕೆ ಭಾರತ ಪಾಕಿಸ್ತಾನದ ಗಡಿವಿವಾದದಷ್ಟೇ ಗಂಭೀರ ವಿಷಯವೆನ್ನಿಸಿಬಿಟ್ಟಿತ್ತು.ಇಷ್ಟಾಗಿಯೂ  ’ಸೈನ್ಸ್ ಓದುವ ಹುಡುಗ ಕಣೋ,ಬಾರಿ ಬುದ್ದಿವಂತ’ಎಂಬ ಮಾತುಗಳನ್ನು ಅವರು ಆಗಾಗ ಊರಿನ ಉಳಿದ ಹಿರಿಯ ವಿದ್ಯಾರ್ಥಿಗಳ ಬಗ್ಗೆ ಕೇಳಿದ್ದುಂಟು.ಬುದ್ಧಿವಂತ ಎನ್ನುವ ಹಣೆಪಟ್ಟಿ ಯಾರಿಗೆ ತಾನೇ ಇಷ್ಟವಾಗದು.ಹಾಗಾಗಿ ಏನೇ ಕಷ್ಟವಾದರೂ ಸರಿ ವಿಜ್ಞಾನವೇ ತಮ್ಮ ಆಯ್ಕೆ ಎಂದುಕೊಂಡ ಸ್ನೇಹಿತರು ಕಾಲೇಜು ಸೇರಿಕೊಂಡರು. ಮೊದಲ ದಿನ ಕೈಯಲ್ಲೊಂದು ನೋಟ್‌ಬುಕ್ ಹಿಡಿದು ಕಾಲೇಜಿನತ್ತ ನಡೆದರೆ , ತಮ್ಮನ್ನು ನೋಡಿದವರೆಲ್ಲ,ತಮ್ಮ ಬಗ್ಗೆ  ’ಬುದ್ದಿವಂತರು ಕಾಲೇಜಿನತ್ತ ಹೊರಟಿದ್ದಾರೆ’ಎಂದುಕೊಳ್ಳುತ್ತಿದ್ದಾರೆ  ಎಂಬ ಭಾವ ಸ್ನೇಹಿತರಿಗೆ.

ಮಲೆನಾಡಿನ ಚಿಕ್ಕ ಊರು ಅದು.ಇಡೀ ಕಾಲೇಜಿನಲ್ಲಿ ಮೊದಲ ವರ್ಷಕ್ಕೆ  ವಿಜ್ಞಾನ,ವಾಣಿಜ್ಯ,ಕಲೆಯಂಥಹ ಎಲ್ಲ ವಿಭಾಗಗಳೂ ಸೇರಿ ಇನ್ನೂರು ಹುಡುಗರಿದ್ದ ಪುಟ್ಟ ಸರ್ಕಾರಿ ಕಾಲೇಜು.ವಿಜ್ಞಾನ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಮೂವತ್ತು.ಊರ ಹೊರಗಿನ ಸಣ್ಣ ಗುಡ್ಡದ ಮೇಲಿದ್ದ ಕಾಲೇಜಿಗೆ ಪುಟ್ಟ ಕಾಡಿನ ದಾರಿ. ನವೀಕರಣಗೊಂಡು ಅದ್ಯಾವ ಕಾಲವಾಗಿತ್ತೋ.ಮಳೆಗೆ ಹಸಿಯಾಗಿ,ಕಪ್ಪಾಗಿದ್ದ ಮಂಗಳೂರು ಹೆಂಚಿನ ಕಟ್ಟಡ,ಬಣ್ಣಗೆಟ್ಟ ಗೋಡೆಗಳು,ಅವೇ ಬಣ್ಣಗೆಟ್ಟ ಕಾಲೇಜಿನ ಗೋಡೆಯ ಮೇಲೆ ’ಗೀತಾ ಐ ಲವ್‌ಯೂ’ ಎಂಬ ಕೆಂಡದಿಂದ ಗೀಚಿದ ಗೀತಾ ಎಂಬ ಅನಾಮಿಕ ಸುಂದರಿಯ ಭಗ್ನ ಅಥವಾ ಏಕಮುಖಿ ಪ್ರೇಮಿಯೊಬ್ಬನ ಹೃದಯದ ಕಪ್ಪು ರೇಖಾ ಚಿತ್ರ, ಬಾಗಿಲುಗಳಿಲ್ಲದ ಕಿಟಕಿ.ದೂರದಿಂದ ನೋಡಿದರೇ ಶಿರ್ಲೆ ಜಾಕ್ಸನ್ನಳ ಕಾದಂಬರಿ ’ಹಾಂಟಿಂಗ್ ಆಫ್ ಅ ಹಿಲ್ ಹೌಸ್’ನ ಭೂತಬಂಗಲೆಯೇ. ಮೊದಲ ದಿನ ಸ್ನೇಹಿತರು ತರಗತಿಯ ಒಳ ಹೊಕ್ಕಾಗ  ಮೇಲ್ಛಾವಣಿಯ ಎರಡು ಹೆಂಚು ಮಾಯವಾಗಿ ಅಲ್ಲಿಂದ ಬಿಸಿಲು ನೇರ ತರಗತಿಯ ನೆಲಕ್ಕೆ ಬಿದ್ದಿದ್ದನ್ನು ಕಂಡು ಗಾಬರಿಯಾಗಿ ’ ’ಇದೇನ್ಲೇ ,ಹೈಸ್ಕೂಲ್‌ ಇದಕ್ಕಿಂತ ಸಮಾ ಇತ್ತಲ್ಲ’ಎಂದು ಉದ್ಗಾರ ತೆಗೆದವನು ಮಹೇಶ.

ಮೊದಲ ದಿನ ತರಗತಿಯ ನಡುಮಧ್ಯವಿದ್ದ ಬೆಂಚೊಂದನ್ನು ಆಯ್ದುಕೊಂಡು ಕೂತವರಿಗೆ ಇಂಗ್ಲೀಷಿನದ್ದೇ ಭಯ.ಹೇಳಿಕೇಳಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ,ಪ್ರೌಢಶಾಲೆಯ ಶಿಕ್ಷಣ ಮುಗಿಸಿದ ಅಪ್ಪಟ ಕನ್ನಡ ಶಾಲೆಯ ಹುಡುಗರು.ಇದ್ದೊಂದು ಇಂಗ್ಲೀಷ್ ಎಂಬ ವಿಷಯದ ಪಠ್ಯಗಳನ್ನೆಲ್ಲ ಸರಿಯಾಗಿ ಬಾಯಿಪಾಠ ಮಾಡಿ,ವ್ಯಾಕರಣವನ್ನು ಕಂಠಸ್ಥವಾಗಿಸಿ ಗೊತ್ತಿದ್ದಿದ್ದಷ್ಟನ್ನೂ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿಳಿಸಿ ಉತ್ತಮ ಅಂಕಗಳನ್ನು ಗಳಿಸಿ,ಇಂಗ್ಲೀಷಿನಲ್ಲಿಯೂ ಬುದ್ದಿವಂತ ಹುಡುಗರು ಎನ್ನಿಸಿಕೊಂಡವರಾದರೂ ಅವರ ಬುದ್ಧಿವಂತಿಕೆ ಅವರಿಗೆ ಮಾತ್ರ ಗೊತ್ತಿತ್ತು.ಹೀಗಿರುವಾಗ ಕಲಿಯಬೇಕಿರುವ ಅಷ್ಟೂ ವಿಷಯಗಳು ಇಂಗ್ಲೀಷಿನಲ್ಲಿಯೇ ಎಂದಾಗ ಭಯವಾಗದೇ ಇದ್ದೀತೇ..?

ಮೊದಲ ದಿನದ ಮೊದಲ ಘಂಟೆಯ ಸಮಯ.ತರಗತಿ ಆರಂಭವಾಗಲು ಇನ್ನೂ ಹತ್ತು ನಿಮಿಷಗಳ ಸಮಯವಿತ್ತು.ಅಸಲಿಗೆ ಮೊದಲ ತರಗತಿ ಯಾವುದೆನ್ನುವುದು ಸಹ ಹುಡುಗರಿಗೆ ಗೊತ್ತಿರಲಿಲ್ಲ.ಕುಳಿತಲ್ಲಿಯೇ ಒಮ್ಮೆ ಬೆಕ್ಕಿನಂತೆ ಆಕಳಿಸಿದ ರಾಘು.ಹೊಸ ಬದುಕಿನ ಮೊದಲ ದಿನವೆನ್ನುವ ಉತ್ಸಾಹಕ್ಕೆ ಹಿಂದಿನ ರಾತ್ರಿ ಸರಿಯಾದ ನಿದ್ರೆಯಿರಲಿಲ್ಲ ಅವನಿಗೆ.ದುರದೃಷ್ಟವೆಂಬಂತೆ ಹಾಗೆ ಆಕಳಿಸುವಾಗ,’ಹ್ವಾಆಆಆಅ..’ಎಂದು ಸದ್ದು ಹೊರಬಂದು ,ಪಕ್ಕದಲ್ಲಿ ಕೂತಿದ್ದ ಸ್ನೇಹಿತರೂ ಸೇರಿದಂತೆ  ತರಗತಿಯಲ್ಲಿದ್ದ ಅಷ್ಟೂ ವಿದ್ಯಾರ್ಥಿಗಳು ಇವನತ್ತಲೇ ಬೆರಗುಗಣ್ಣುಗಳಿಂದ  ನೋಡಲಾರಂಭಿಸಿದ್ದರಿಂದ ಗಾಬರಿಯಲ್ಲಿ ಇವನ ಆಕಳಿಕೆಯೂ ಅರ್ಧಕ್ಕೆ ಸತ್ತಿತ್ತು.ಅವಮಾನವಾದಂತಾಗಿ ತಲೆ ಕೆಳಗಾಗಿ ಅವನು ಕೂತರೇ ತರಗತಿಯನ್ನೊಮ್ಮೆ ಕೂಲಂಕುಶವಾಗಿ ಪರಿಶೀಲಿಸಿದವನು ರವಿ.ಹಾಗೆ ನೋಡಿದವನಿಗೆ ಎಲ್ಲರೂ ತನಗಿಂತ ದೊಡ್ಡವರಂತೆ ಭಾಸವಾಗಿದ್ದರು.ಅಲ್ಲೆಲ್ಲೋ ಮೂಲೆಯಲ್ಲಿ ಕೂತ ಚಾಳಿಸುಧಾರಿ ವಿದ್ಯಾರ್ಥಿಯೊಬ್ಬ ಘನಗಂಭೀರವಾಗಿ ಪುಸ್ತಕವೊಂದರ ಪುಟ ತಿರುವುತ್ತಿದ್ದ.ಅವನೇ ತಮ್ಮ ತರಗತಿಯ ಅಗ್ರಸ್ಥಾನಿ ಎಂದೆನ್ನಿಸಿತ್ತು ರವಿಗೆ.ಮತ್ತೊಂದು ಮೂಲೆಯಲ್ಲಿ ಕುಳಿತು,ಎಲ್ಲರಿಗಿಂತ ಎತ್ತರಕ್ಕೆ ಕಾಣುತ್ತಿದ್ದ ವಿದ್ಯಾರ್ಥಿಯೊಬ್ಬ ಪೆನ್ನಿನಿಂದ ತನ್ನ ಹೆಬ್ಬೆರಳಿಗೆ ಗೀಚಿಕೊಳ್ಳುತ್ತಿದ್ದರೆ ಅವನ ಪಕ್ಕ ಕುಳಿತ ಹಳದಿ ಟೀ ಶರ್ಟಿನವನೊಬ್ಬ ಸುಖಾಸುಮ್ಮನೇ ನಗುತ್ತಿದ್ದ. ಇಬ್ಬರೂ ಗ್ಯಾರಂಟಿ ಪಿಯುಸಿ ಫೇಲ್ ಎಂಬ ಹಣೆಪಟ್ಟಿಗರು ಎನ್ನಿಸಿತ್ತು.ಎರಡು ವಿಶೇಷಣಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಗಂಭೀರವದನಗಳೇ.ವಿಚಾರಣೆ ಮುಗಿದು ತಮ್ಮ ಪಾಲಿನ ಶಿಕ್ಷೆಗಾಗಿ ಕೋರ್ಟಿನ ಆವರಣದಲ್ಲಿ ಕಾಯುತ್ತಿರುವ ಅಪರಾಧಿಗಳ ಮುಖಭಾವದ ಮುಗ್ದರು.ತನಗೇ ಸಂಬಂಧವೇ ಇಲ್ಲವೇನೋ ಎಂಬಂತೆ ಕೈಯಲ್ಲಿದ್ದ ನೋಟುಬುಕ್ಕಿನ ಮೊದಲ ಪುಟದ ಮೇಲುಭಾಗದಲ್ಲಿ  ತನ್ನ ಹೆಸರು ಬರೆದು,ಬರೆದಿದ್ದ ಹೆಸರನ್ನು ನಿಧಾನಕ್ಕೆ ಅಲಂಕರಿಸುತ್ತ ಕುಳಿತಿದ್ದವನು ಮಹೇಶ.

ಅಷ್ಟರಲ್ಲಿ ತರಗತಿಯ ಹೊರಗೆ ರಪರಪ ಚಪ್ಪಲಿಯ ಸದ್ದು.ಯಾರೋ ತರಗತಿಯನ್ನು ಸಮೀಪಿಸುತ್ತಿದ್ದಾರೆನ್ನುವುದು ವಿದ್ಯಾರ್ಥಿಗಳಿಗೆ ಅರ್ಥವಾಗಿತ್ತು.ಕುತ್ತಿಗೆಯನ್ನು ಎತ್ತರಿಸಿ ತರಗತಿಯ ಹೊರನೋಡಲು ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿಗಳ ಕುತೂಹಲದ ತಣಿಕೆಗಾಗಿಯೇನೋ ಎಂಬಂತೆ ಆ ಮನುಷ್ಯ ಸರಸರ ತರಗತಿಯನ್ನು ಪ್ರವೇಶಿಸಿಬಿಟ್ಟ.ಐವತ್ತು ಐವತ್ತೈದರ ಪ್ರಾಯವಿರಬಹುದು ಆ ವ್ಯಕ್ತಿಗೆ.ಮಾಸಲು ಬಿಳಿಯ ಅಂಗಿ ಧರಿಸಿದ್ದ ವ್ಯಕ್ತಿಯ ಜೇಬಿನ ಕೊನೆಯ ತುದಿಗೆ ಕಂಡರೂ ಕಾಣದಂತಿರುವ ಪೆನ್ನಿನ ಇಂಕಿನ ಸಣ್ಣದ್ದೊಂದು ಕಲೆ.ಬಕ್ಕತಲೆಯ ಮೇಲೆ ಉಳಿದ ಹೋಗಿದ್ದ ಬೆರಳೆಣಿಕೆಯಷ್ಟು ಕಪ್ಪು ಬಿಳಿಯ ಕೂದಲುಗಳು ಒಂದು ಕಾಲಕ್ಕೆ ತಲೆಯ ತುಂಬ ಇದ್ದಿರಬಹುದಾದ ಕೂದಲುಗಳಿಗೆ ಸಾಕ್ಷಿಯಂತಿದ್ದವು.ಮಾಸಲು ಅಂಗಿಗೆ ಜೋಡಿಯಾಗಿ ಮಾಸಲು ಕರಿವರ್ಣದ ಪ್ಯಾಂಟು ಧರಿಸಿದ್ದ  ಔಟ್ ಶರ್ಟಿಗ ವ್ಯಕ್ತಿ ಕಾಲುಗಳಲ್ಲಿ ಸ್ಲಿಪ್ಪರ್ ಧರಿಸಿದ್ದರು.ಕಣ್ಣಿಗೊಂದು ಕನ್ನಡಕ.ತರಗತಿ ಬಂದವರ ಮುಖದಲ್ಲೊಂದು ಸಣ್ಣ ಮಂದಹಾಸ.’ಗುಡ್ ಮಾರ್ನಿಂಗ್ ಫ್ರೆಂಡ್ಸ್,ವೆಲ್ಕಮ್ ಟು ಕಾಲೇಜ್’ಎಂದವರ ಇಂಗ್ಲೀಷು ಕೇಳಿ ಸ್ನೇಹಿತರ ಎದೆಯಲ್ಲೊಮ್ಮೆ ಸಣ್ಣ ನಡುಕ

ಕಾಲೇಜಿನಲ್ಲಿ ಪಠ್ಯವೆಲ್ಲವೂ ಇಂಗ್ಲೀಷು ಎಂದು ಗೊತ್ತಿತ್ತು.ಆದರೆ ತೀರ ಕಾಲೇಜಿನ ಅಟೆಂಡರ್ ಸಹ ಇಂಗ್ಲೀಷು ಮಾತನಾಡುತ್ತಾನೆಂದಾಗ ಕನ್ನಡದ ಮಾಧ್ಯಮದ ಹುಡುಗರಿಗೆ ತಾವು ಬುದ್ಧಿವಂತರೆನ್ನುವ ಭ್ರಮೆ ಕಳಚಿ ಬಿದ್ದಂತಾಗಿ ಸೋತ ಭಾವ.ಒಂದರೇಕ್ಷಣ ಸುಮ್ಮನೇ ಕುಳಿತುಬಿಟ್ಟರು ಸ್ನೇಹಿತರು.ಆದರೆ ಇಲ್ಲೇನೋ ಸರಿಯಿಲ್ಲ ಎನ್ನಿಸಿದ್ದು ಹತ್ತು ನಿಮಿಷಗಳ ನಂತರ.ಆಂಗ್ಲದಲ್ಲಿ ಶುಭೋದಯ ಕೋರಿದವರು ಮೇಜಿನ ಮೇಲಿದ್ದ ಚಾಕ್‌ಪೀಸನ್ನೆತ್ತಿ ನೇರವಾಗಿ ಜೀವಶಾಸ್ತ್ರದ ಪಾಠವನ್ನಾರಂಭಿಸಿದ ಮೇಲೂ ಸಣ್ಣ ಅನುಮಾನ ಗೆಳೆಯರಿಗೆ.ಮೊದಲ ತರಗತಿ ಮುಗಿದು,’ಐ ಆಮ್ ಮಿ.ಕಾಮತ್,ಯುವರ್ ಬಯೊಲಜಿ ಲೆಕ್ಚರರ್’ಎಂದಾಗಲೇ ಸರಳಜೀವಿಯ ಸರಳ ಉಡುಗೆಯನ್ನು ಗಮನಿಸಿ ತಮ್ಮಿಂದಾದ ಯಡವಟ್ಟಿನ ಅರಿವಾಗಿದ್ದು ಮಿತ್ರರಿಗೆ.ಮುಂದೆ ನಿಧಾನಕ್ಕೆ ಒಂದೊಂದಾಗಿ ತರಗತಿಗಳು ನಡೆದಂತೆಲ್ಲ ಕ್ಲಾಸಿನ ಬಿಗುವೆಲ್ಲ ಕಡಿಮೆಯಾಗಿ,ಬಿಗುಮಾನವೆಲ್ಲ ಕರಗಿ ಮೊದಲ ವರ್ಷದ ಎಲ್ಲ ವಿದ್ಯಾರ್ಥಿಗಳೂ ಸ್ನೇಹಿತರಾಗುವ ಹೊತ್ತಿಗೆ ಮೊದಲ ವಾರದ ಪಾಠಗಳು ಮುಗಿದಿದ್ದವು.

ಮೊದಲ ವಾರವೇನೋ ಮುಗಿದಿತ್ತು.ಆದರೆ ತಾವು ಕಾಲೇಜಿಗೆ ಹೋಗುವ ಹುಡುಗರು ಎನ್ನುವ ಸಣ್ಣದ್ದೊಂದು ಅಹಂಕಾರ ಆಗಷ್ಟೇ ಶುರುವಾಗಿತ್ತು ತ್ರಿಮೂರ್ತಿಗಳಿಗೆ.ಹೆತ್ತವರು ಏನನ್ನಾದರೂ ಕೇಳಿದಾಕ್ಷಣ ಸಿರ್ರನೇ ಸಿಡುಕುವ ಕಾಲದಾರಂಭ.ಹೊಸಹೊಸ ತರಲೆಗಳು ತಲೆಯಲ್ಲಿ ಮೂಡುವ ಹೊತ್ತು.ಅದೇ ದಿನಗಳಲ್ಲಿ ಮೊದಲ ಬಾರಿಗೆ ಹೆತ್ತವರನ್ನು ಕಾಡಿಸಿ ಪೀಡಿಸಿ ವಾಕ್‍ಮನ್ ಎಂಬ ಸಂಗೀತದುಪಕರಣ ಖರೀದಿಸಿದ್ದ ರಾಘು.ಸಾವಿರದ ನಾಲ್ಕುನೂರು ರೂಪಾಯಿಯಷ್ಟು ದುಬಾರಿ ಬೆಲೆ ಕೊಟ್ಟು ಖರೀದಿಸಿದ್ದ ಸೋನಿ ಕಂಪನಿಯ ವಾಕ್‌ಮನ್ ಆವತ್ತಿಗೆ ಸ್ನೇಹಿತರ ನಡುವೆ ಮಾಯಾಪೆಟ್ಟಿಗೆಗೆ ಸಮನಾದದ್ದು.ಒಬ್ಬರ ಹಿಂದೊಬ್ಬರಂತೆ ಸ್ನೇಹಿತರು ವಾಕ್ಮನ್ನಿನ ಸೊಂಟಕ್ಕೆ ಚುಚ್ಚಿದ್ದ ಇಯರ್ ಫೋನ್‌ನ್ನು ತಮ್ಮ ಕಿವಿಗಿಟ್ಟುಕೊಂಡು  ಸಂಗೀತವನ್ನು ಕೇಳುತ್ತಿದ್ದರೇ ,ತಾತ್ಕಾಲಿಕವಾಗಿ  ಅವರಲ್ಲೊಬ್ಬ ಸಂಗೀತದ ವಿಮರ್ಶಕ ಹುಟ್ಟಿಕೊಳ್ಳುತ್ತಿದ್ದ.ಹಾಡು ಕೇಳಿ ಇಯರ್ ಫೋನ್ ತೆಗೆದ ನಂತರ ,ವಾಕ್ಮನ್ ಎನ್ನುವ ಮಾಯಾಪೆಟ್ಟಿಗೆಯಲ್ಲಿ ಹೇಗೆ ಹಾಡುಗಳು ಟೇಪ್ ರಿಕಾರ್ಡರ್‌ಗಳಿಗಿಂತ ವಿಭಿನ್ನವಾಗಿಯೂ,ಸುಶ್ರಾವ್ಯವಾಗಿಯೂ ಕೇಳುತ್ತವೆನ್ನುವುದರ ವಿಮರ್ಶೆಯನ್ನು ಪುಟಗಟ್ಟಲೇ ವಿವರಿಸುತ್ತಿದ್ದರು ಮಹೇಶ ಮತ್ತು ರವಿ.ಆದರೆ ಅದೆಷ್ಟು ಕಾಲ ತನ್ನಿಬ್ಬರು ಗೆಳೆಯರದ್ದೇ ಹೊಗಳಿಕೆ ಕೇಳಿಯಾನು ರಾಘು..? ಅವನಿಗೂ ಹೊಸ ಗೆಳೆಯರ ಹೊಗಳಿಕೆ ಬೇಕಿತ್ತು. ತನ್ನ ಬಳಿ ಮಾತ್ರವಿರುವ ವಾಕ್ಮನ್ ಎಂಬ ದಿವ್ಯಯಂತ್ರದ ಕುರಿತು ತನ್ನ ಕಾಲೇಜು ಸ್ನೇಹಿತರ ಬೆರಗು,ಅದರೆಡೆಗಿನ ಪ್ರಶಂಸೆಯನ್ನು ತಿಳಿದುಕೊಳ್ಳುವ ಹಂಬಲ ಅವನಿಗಿತ್ತು,ಹಾಗಾಗಿಯೇ ಅದನ್ನು ಆತ ತರಗತಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು.ಹಾಗವನು ಕಾಲೇಜಿಗೆ  ವಾಕ್ಮನ್ ತೆಗೆದುಕೊಂಡು ಹೋಗಿದ್ದು ಹೊಸವಾರದ ಮೊದಲ ದಿನಕ್ಕೆ.

ಸೋಮವಾರದ ಬೆಳಿಗ್ಗೆ ಕಾಲೇಜಿನ ಆವರಣದಲ್ಲಿ ವಾಕ್ಮನ್‌ನಲ್ಲಿ ಹಾಡು ಕೇಳುತ್ತ ನಿಂತಿದ್ದ ರಾಘು  ಸ್ನೇಹಿತರಿಗೆ ಒಬ್ಬ ಸೆಲೆಬ್ರಿಟಿಯಂತೆ ಗೋಚರಿಸುತ್ತಿದ್ದ.ಹತ್ತೇ ನಿಮಿಷದಲ್ಲಿ ಹುಡುಗರು ದಂಡು ಅವನನ್ನು ಸುತ್ತವರೆದಿತ್ತು.ಒಬ್ಬರ ಕಿವಿಯಿಂದ ಇನ್ನೊಬ್ಬರ ಕಿವಿಗೆ ವಾಕ್ಮನ್ನಿನ ಇಯರ್ ಫೋನ್ ದಾಟುತ್ತಿದ್ದರೇ ಒಬ್ಬೊಬ್ಬ ಸ್ನೇಹಿತರದ್ದು ಒಂದೊಂದು ಬಗೆಯ ಆಹಾ,ಓಹೋ.ಕೊಂಚ ದೂರದಲ್ಲಿಯೇ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ತರಗತಿಯ ಹುಡುಗಿಯರಿಗೂ ವಾಕ್ಮನ್ನಿನಲ್ಲಿ ಹಾಡು ಕೇಳುವ ಆಸೆಯಾದರೂ ಅದೇನೋ ಅವ್ಯಕ್ತ ಸಂಕೋಚದಿಂದಾಗಿ ಅವರು ಹಾಡು ಕೇಳುವ ಸುಖದಿಂದ ವಂಚಿತರಾಗಬೇಕಾಯಿತು.ಅಷ್ಟರಲ್ಲಿ ತರಗತಿ ಆರಂಭಕ್ಕೆ ಮೊದಲ ಗಂಟೆಯ ಸದ್ದು.ಕಾಲೇಜು ಆವರಣದಲ್ಲಿ ಕೊಂಚವೇ ದೂರ ಬಯಲಜಿ ಶಿಕ್ಷಕರು ನಡೆಯುತ್ತ ಬರುತ್ತಿರುವುದು ಕಾಣಿಸಿದ್ದರಿಂದ ಎಲ್ಲರೂ ಲಗುಬಗನೇ ತರಗತಿಗೆ ದೌಡಾಯಿಸಿ ತಮ್ಮತಮ್ಮ ಆಸೀನಗಳಲ್ಲಿ ಕುಳಿತುಕೊಂಡರು.

ಮೊದಲೇ ಅದು ಜೀವಶಾಸ್ತ್ರದ ಪಾಠ.ಮೇಲಾಗಿ ವಿಜ್ಞಾನ ವಿಭಾಗದ ಅತ್ಯಂತ ನೀರಸ ಶಿಕ್ಷಕರು ಎಂದು ಹೆಸರಾಗಿದ್ದ  ಕಾಮತ್‌ರ ಕ್ಲಾಸು.ಎಲ್ಲಕ್ಕಿಂತ ಹೆಚ್ಚಾಗಿ ತಲೆಯ ತುಂಬ ವಾಕ್ಮನ್ ಎಂಬ ಮೋಹಿನಿ.ಹದಿನೈದು ನಿಮಿಷಕ್ಕೆಲ್ಲ ಸಣ್ಣಗೆ ಆಕಳಿಸತೊಡಗಿದ ಮಹೇಶ,’ಎಂತಾ ಬೋರಿಂಗ್ ಪಾಠ ಮಾರಾಯಾ..’ಎಂದು ಮುಖ ಗಂಟಿಕ್ಕಿ ರಾಘುವಿನೆಡೆಗೆ ತಿರುಗಿದರೆ ರಾಘುವಿನ ಕಿವಿಯಲ್ಲಿ ಶ್ವೇತವರ್ಣದ ಇಯರ್ ಫೋನ್.’ಅಯ್ಯೊ..ಬಡ್ಡಿಮಗನೇ ನೀನೊಬ್ನೇ ಕೇಳ್ತಿಯೇನಾ..ನಂಗೂ ಕೊಡು ಇಲ್ಲಿ’ಎಂದವನೇ ಸರ್ರಕ್ಕನೇ ರಾಘುವಿನ ಕಿವಿಯಿಂದ ಇಯರ್ ಫೋನೆಳುದುಕೊಂಡವನು ಡೆಸ್ಕಿನಲ್ಲಿ ವಾಕ್ಮನ್ ಇರಿಸಿ,ಶರ್ಟಿನ ಕೆಳಭಾಗದಿಂದ ತೂರಿಸಿಕೊಂಡ ಇಯರ್ ಫೋನ್‌ನ್ನು ಕತ್ತಿನಪಟ್ಟಿಯ ಪಕ್ಕದಿಂದೆಳೆದು ತನ್ನೆರಡೂ ಕಿವಿಗೆ ಸಿಲುಕಿಸಿಕೊಂಡು ಗಂಭೀರವಾಗಿ ಪಾಠ ಕೇಳುವವರ ಮುಖಭಾವವಿಟ್ಟುಕೊಂಡು ಕುಳಿತುಬಿಟ್ಟ ಮಹೇಶ್.ಹಾಗೆ ಕುಳಿತವನಿಗೆ ಮುಂದಿನ ಹತ್ತು ನಿಮಿಷಗಳಲ್ಲಿ ನಡೆಯಬಹುದಾದ ಬಹುದೊಡ್ಡ ಎಡವಟ್ಟೊಂದರ ಸಣ್ಣ ಸುಳಿವೂ ಇರಲಿಲ್ಲ.

ಸಣ್ಣಗೆ ಹಾಡು ಕೇಳುತ್ತ ಕುಳಿತ ಮಹೇಶನನ್ನು ಕಂಡು ಕೀಟಲೆ ಮಾಡುವ ಮನಸ್ಸಾಗಿತ್ತು ರಾಘುವಿಗೆ.ನಿಧಾನಕ್ಕೆ ಕೈಯನ್ನು ಮೇಜಿನ ಮೂಲೆಯಿಂದ ಸರಿಸುತ್ತ ವಾಕ್ಮನ್‌ನ್ನು ತೆಗೆದುಕೊಂಡವನು  ಗುಂಡಿಯನ್ನು ಸರ್ರನೇ ತಿರುಗಿಸಿ ವ್ಯಾಲ್ಯೂಮ್ ಹೆಚ್ಚಿಸಿಬಿಟ್ಟ ರಾಘು.ಬೆಚ್ಚಿಬಿದ್ದ ಮಹೇಶ್ ಕುಳಿತಲ್ಲಿಯೇ ಟಣ್ಣೆಂದು ಜಿಗಿದು ಮೇಜಿನ ಕೆಳಗಿದ್ದ ವಾಕ್ಮನ್ನಿಗಾಗಿ ತಡಕಾಡಿದರೆ ಅದು ಅಲ್ಲಿಲ್ಲ.ಪಕ್ಕದಲ್ಲಿದ್ದ ರಾಘುವಿನ ಕೈಯಲ್ಲಿದೆ.ಕಿವಿಯಲ್ಲಿ ಕೇಳಿಸುತ್ತಿರುವ ಘನಘೋರ ಶಬ್ದಕ್ಕೆ ಮಹೇಶನ ತಲೆ ಓಡದಂತಾಗಿದೆ.ಕಿವಿಯಲ್ಲಿನ ಇಯರ್ ಫೋನ್ ಕಿತ್ತೆಸೆದರೆ ಮುಗಿಯಿತು ಎಂಬುದು ಆ ಕ್ಷಣಕ್ಕೆ ಹೊಳೆಯದೆ’ಬಂದ ಮಾಡಲೇ ಬೋಳಿಮಗನೇ,ಬಂದ್ ಮಾಡು...ಕಿವಿಯಲ್ಲಿ ರಕ್ತ ಬಂದಂಗ್ ಆಗ್ತಾ ಉಂಟು,ಸಾಯ್ಸಬೇಡ್ವೋ ನಾಯಿ’ಎಂದುಬಿಟ್ಟಿದ್ದಾನೆ ಮಹೇಶ್.

ಬೆನ್ನು ತಿರುಗಿಸಿ ಕಪ್ಪುಹಲಗೆಯ ಮೇಲ್ತುದಿಯಲ್ಲಿ ಏನನ್ನೋ ಬರೆಯುತ್ತಿದ್ದ ಶಿಕ್ಷಕರಿಗೆ ಸಿಡಿಲು ಬಡಿದ ಆಘಾತ.ಚಾಕ್ ಎತ್ತಿ ಹಿಡಿದ ಕೈಯನ್ನು ಕೆಳಗಿಳಿಸದೆಯೇ ನಟರಾಜನ ಶೈಲಿಯಲ್ಲಿಯೇ ನಿಧಾನಕ್ಕೆ ಮುಂದೆ ತಿರುಗಿದ್ದಾರೆ ಬಯಾಲಜಿಯ ಶಿಕ್ಷಕರು.ತಾವು ಪಾಠ ಚೆನ್ನಾಗಿ ಮಾಡುವುದಿಲ್ಲವೆನ್ನುವುದು ಅವರೂ ಸಹ ಪರೋಕ್ಷವಾಗಿ ಅಲ್ಲಲ್ಲಿ ಕೇಳಿದ್ದು ಇದೆಯಾದರೂ ನಿವೃತ್ತಿಯ ಅಂಚಿನಲ್ಲಿರುವ ತಮ್ಮನ್ನು ಹೀಗೆ ತರಗತಿಯಲ್ಲಿಯೇ ,ಇಷ್ಟು ಅವಾಚ್ಯ ಶಬ್ದಗಳಿಂದ ನಿಂದಿಸುವುದೆಂದರೇ ಏನು.. ? ತಿರುಗಿ ನಿಂತ ಶಿಕ್ಷಕರ ಕಣ್ಣುಗಳು ಅದಾಗಲೇ ಕೆಂಡದುಂಡೆ.ಅವರು ತನ್ನತ್ತ ದುರುಗುಡುತ್ತಲೇ ಮಹೇಶ್ ಸಹ ಅವರನ್ನೇ ದಿಟ್ಟಿಸಿದ್ದಾನೆ. ಗಂಭೀರವಾಗಿ ಪಾಠ ಕೇಳುತ್ತಿದ್ದ ತರಗತಿಯ ಅಷ್ಟೂ ಮಕ್ಕಳು ಬಾಂಬ್ ದಾಳಿಯಲ್ಲಿ ನೂರಾರು ಜನರನ್ನು ಕೊಂದು  ಸಿಕ್ಕಿಬಿದ್ದ ಉಗ್ರಗಾಮಿಯೊಬ್ಬನನ್ನು ಜನ ಸಾಮಾನ್ಯರು ನೋಡುವಂತೆ  ಭಯಮಿಶ್ರಿತ ಅಚ್ಚರಿಯ ಕಣ್ಗಳಲ್ಲಿ ಮಹೇಶನನ್ನೇ ನೋಡುತ್ತಿದ್ದಾರೆ.ಮಹೇಶನ ಮತ್ತೊಂದು ಮಗ್ಗುಲಲ್ಲಿ ಕೂತ ರವಿ ದಿಕ್ಕೆಟ್ಟವನಂತೆ ಎದ್ದೋಡಿ ಮತ್ತೊಂದು ಮೇಜಿನಲ್ಲಿ ಕೂತು ,ತನಗೂ ನಡೆದ ಘಟನೆಗೂ ಸಂಬಂಧವೇ ಇಲ್ಲವೆನ್ನುವುದನ್ನು ಆ ಕ್ಷಣಕ್ಕೆ ಶಿಕ್ಷಕರಿಗೆ ನಿರೂಪಿಸಿ ತೋರಿಸಿದ್ದಾನೆ.  ಒಂದರೆಕ್ಷಣ ವಿಷಯವೇನೆನ್ನುವುದು ಮಹೇಶನಿಗೆ ಅರಿವಾಗಿಲ್ಲ.ಅರಿವಾದಾಗ ಅಕ್ಷರಶ: ಕಾಲಿನಡಿ ಬಾಂಬು ಸಿಡಿದ ಅನುಭವ.

ಕೇಳುಗನ ಕಿವಿಗಳಿಗೆ ಭಯಂಕರ ಗುಡುಗಾಗಿ ಕೇಳಿಸಿದರೂ ಉಳಿದವರಿಗೆ ವಾಕ್ಮನ್ನಿನ ಶಬ್ದ ಇಯರ್ ಫೋನ್ ದಾಟಿ ತೀರ ದೊಡ್ಡದಾಗಿಯೇನೂ ಕೇಳಿಸದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ.ಅಸಲಿಗೆ ಮಹೇಶ ಕಳ್ಳನಂತೆ ವಾಕ್ಮನ್ನಿನಲ್ಲಿ ಹಾಡು ಕೇಳುತ್ತಿದ್ದ ವಿಷಯ ರಾಘುವಿನ ಹೊರತು ಇನ್ಯಾರಿಗೂ ತಿಳಿಯದು.ರಾಘುವಿನ ಕಿತಾಪತಿಯಿಂದ ಏಕಾಏಕಿ ವಾಕ್ಮನ್ನಿನ ಸದ್ದು ದೊಡ್ಡದಾದಾಗ ಅದರ ಸದ್ದಿಗೆ ತಕ್ಕಂತೆ ತನ್ನ ಧ್ವನಿಯನ್ನೂ ಎತ್ತರಿಸಿಬಿಟ್ಟಿದ್ದಾನೆ ರಾಘು.ಪರಿಣಾಮವಾಗಿ ಪ್ರಶಾಂತವಾಗಿದ್ದ ತರಗತಿಯಲ್ಲಿ ’ಬಂದ್ ಮಾಡು ಬೋಳಿಮಗನೇ ’ಎಂಬ ಕಿರುಚು ಸಾಲುಗಳು ಅವನು ರಾಘುವಿಗೆ ಹೇಳಿದ್ದು ಎನ್ನುವುದು ಯಾರಿಗೂ ಅರ್ಥವಾಗಿಲ್ಲ.ಪಾಠದಲ್ಲಿ ಮಗ್ನನಾಗಿದ್ದ ಮಲೆನಾಡಿನ ಸಭ್ಯ ವಿದ್ಯಾರ್ಥಿಗಳಿಗೆ , ಸರಳಜೀವಿ ಶಿಕ್ಷಕರನ್ನು ಏಕವಚನದಲ್ಲಿ ಅವಾಚ್ಯವಾಗಿ ಸಂಬೋಧಿಸಿದ ರೌಡಿ ವಿದ್ಯಾರ್ಥಿಯಾಗಿ ಮಹೇಶ್ ಗೋಚರಿಸಿದ್ದಾನೆ.

ಮಹೇಶ್‌ನ ತಲೆ ಆ ಕ್ಷಣಕ್ಕೆ ಖಾಲಿಖಾಲಿ.ಕೋಪದಲ್ಲಿ ಅವನತ್ತ ನೋಡಿ ಕೈಯಲ್ಲಿ ಡಸ್ಟರ್ ಹಿಡಿದು ಸರಸರನೇ ಕ್ಲಾಸಿನಿಂದ ಹೊರನಡೆದ ಶಿಕ್ಷಕರ ನಡಿಗೆಯನ್ನು ಕಂಡೇ ಅವನಿಗೆ ಹೃದಯಾಘಾತದ ಅನುಭವ.ಅವರು ಖಂಡಿತ ಪ್ರಿನ್ಸಿಪಾಲರ ಕೋಣೆಯತ್ತ ನಡೆಯುತ್ತಿದ್ದಾರೆನ್ನುವುದು ಅವನ ಊಹೆ.ಪ್ರಿನ್ಸಿಪಾಲರ ಕೋಣೆಗೆ ನಡೆದು,ಅಲ್ಲಿ ತನ್ನ ಹೆಸರು ಹೇಳಿ,ತಾನು ಅವರ ಹೆತ್ತಮ್ಮನನ್ನು ಬಯ್ದ ವಿಷಯವನ್ನರುಹಿ,ಅದನ್ನು ಕೇಳಿ ಗಾಬರಿಯಾದ ಪ್ರಾಂಶುಪಾಲರು  ತನ್ನನ್ನು ಬರಹೇಳಿ,ತನ್ನಪ್ಪನ ಹೆಸರು ಕೇಳಿ,ತನ್ನನ್ನು ಡಿಸ್ಮಿಸ್ ಮಾಡಿ ಕಳಿಸಿದರೆ ತನ್ನ ಗತಿಯೇನು ಎಂಬ ಪ್ರಶ್ನೆ ಮನದಲ್ಲಿ ಮೂಡಿ ಚಳಿಗಾಲದಲ್ಲಿಯೂ ಸಣ್ಣಗೆ ನಡುಗಿದ್ದ ಮಹೇಶ.ಡಿಸ್ಮಿಸ್ ಮಾಡಿದರೆ ಹಾಳಾಗಿ ಹೋಗಲಿ,ಆದರೆ ಮಗ ಕಾಲೇಜಿನಿಂದ ಡಿಸ್ಮಿಸ್ ಆದನೆಂಬ ಸುದ್ದಿಗೆ ಮೃದು ಸ್ವಭಾವದ ಹೆತ್ತವರು ನೇಣು ಹಾಕಿಕೊಂಡು,ಆತ್ಮಹತ್ಯೆಯ  ಸುದ್ದಿ ಊರ ತುಂಬೆಲ್ಲ ಹರಡಿ, ಮರುದಿನದ ಪತ್ರಿಕೆಗಳಲ್ಲಿ,’ಅಪ್ಪ ಅಮ್ಮನನ್ನು ಕೊಂದ ಯುವಕ’ ಎಂಬ ದೊಡ್ಡಕ್ಷರಗಳ ಶೀರ್ಷಿಕೆಯಡಿ ತನ್ನ ಚಿತ್ರಸಮೇತ ವರದಿಯೊಂದು ಪ್ರಕಟವಾದರೆ ರಾಜ್ಯಾದ್ಯಂತ ಮಾಡದ ತಪ್ಪಿಗೆ  ತನ್ನ ಮಾನ ಮರ್ಯದೆ ಹರಾಜಾದರೇ..?ಆಮೇಲೆ ತಾನೂ ನೇಣು ಹಾಕಿಕೊಂಡು ಸಾಯಬೇಕಷ್ಟೇ.ದೊಡ್ಡ ಕ್ರಿಕೆಟ್ ಆಟಗಾರನಾಗಿ ದೇಶಕ್ಕಾಗಿ ಒಂದೈವತ್ತು ಶತಕಗಳನ್ನು ಬಾರಿಸುವ ಕನಸಿಟ್ಟುಕೊಂಡವನು ,ಯಕಶ್ಚಿತ,’ಬೋಳಿಮಗ’ಎಂಬ ಪದಪ್ರಯೋಗಕ್ಕಾಗಿ ಸಾಯುವುದಾ..? ಛೇ ಛೇ ಸಾಧ್ಯವೇ ಇಲ್ಲ ಎನ್ನಿಸಿತು ಅವನಿಗೆ.ತರಗತಿಯ ವಿದ್ಯಾರ್ಥಿಗಳ ಗುಜುಗುಜು ಸದ್ದಿನ ನಡುವೆಯೇ  ಮೇಜಿನ ಮೇಲಿಂದ ಜಿಗಿದು ತರಗತಿಯ ಹೊರಗೋಡಿದ್ದ ಮಹೇಶ.ಓಡುತ್ತ ಪ್ರಾಂಶುಪಾಲರ ಕೋಣೆಯತ್ತ ನಡೆದವನಿಗೆ ಜೀವಶಾಸ್ತ್ರದ ಶಿಕ್ಷಕರು ಅಲ್ಲಿರದೇ ತಮ್ಮದೇ ಕೋಣೆಯಲ್ಲಿ ಸುಮ್ಮನೇ ಕೂತಿರುವುದು ಗೋಚರಿಸಿತ್ತು.

ಒಂದರೆಘಳಿಗೆಯೂ ತಡಮಾಡದೇ ಅವರ ಕಾಲಿಗೆ ಸಾಷ್ಟಾಂಗ್ ಬಿದ್ದುಬಿಟ್ಟ ಮಹೇಶ.ಹಾಗೆ ಬಿದ್ದವನನ್ನು ಕೈ ಹಿಡಿದೆತ್ತುವ ಪ್ರಮೆಯಕ್ಕೆ ಹೋಗದ ಕಾಮತ್‌ರ ಕೋಪವಿನ್ನೂ ಆರಿರಲಿಲ್ಲ.ಅದು ಅವನಿಗೂ ಅರಿವಾಗಿತ್ತು.ಎದ್ದು ನಿಂತು ದೈನೇಸಿ ಭಾವದಿಂದ ಅವರೆಡೆಗೆ ನೋಡಿದರೆ ಅವನನ್ನೇ ದಿಟ್ಟಿಸುತ್ತಿದ್ದರು ಗುರುಗಳು.’ಅಲ್ವೋ ನಾನು ಪಾಠ ಮಾಡೋದು ಬೇಜಾರಾಗಿದ್ದರೆ ಕ್ಲಾಸಿಗೆ ಬರಬಾರ್ದಿತ್ತು.ಉಳಿದವರಾದರೂ ಕೇಳ್ತಿದ್ರು ಪಾಠ.ಅದುಬಿಟ್ಟು  ಅಷ್ಟು ಕೆಟ್ಟಮಾತಲ್ಲಿ ಬಯ್ದರೆ ಎಂತಾ ಅರ್ಥ.ನನ್ನಮ್ಮ ಏನು ಮಾಡಿದ್ರು ನಿನಗೆ..?’ಎಂದು ಶಿಕ್ಷಕರು ಕೇಳುತ್ತಿದ್ದರೆ ಅವನಿಗೆ ಮೈಯೆಲ್ಲ ಹಿಂಡಿದ ಅನುಭವ.ಏನೂ ಸುಳ್ಳು ಹೇಳಿದರೂ ತಪ್ಪಿಸಿಕೊಳ್ಳಲಾಗದು ಎಂದುಕೊಂಡವನು ಸಾಧ್ಯಂತವಾಗಿ ನಡೆದ ಘಟನೆಯನ್ನು ಗುರುಗಳಿಗೆ ವಿವರಿಸಿ ಮತ್ತೊಮ್ಮೆ ಕೈ ಮುಗಿದುಬಿಟ್ಟ.ಕೇಳುವಷ್ಟು ಹೊತ್ತು ಗಂಭೀರವದನರಾಗಿದ್ದ ಗುರುಗಳು ವಿಷಯ ಅರ್ಥವಾಗುತ್ತಿದ್ದಂತೆ ಸೂರು ಕಿತ್ತು ಹೋಗುವಂತೆ ಗಹಗಹಿಸಿಬಿಟ್ಟಿದ್ದರು.ಸಿಬ್ಬಂದಿ ಕೋಣೆಯಲ್ಲಿ ಕೂತಿದ್ದ ಉಳಿದ ಕೆಲವರು ನಗುವಿನ ಕಾರಣ ಕೇಳಿದರಾದರೂ ವಿವರಿಸುವುದು ಕಷ್ಟವೆನ್ನಿಸಿ ’ಏನಿಲ್ಲ’ಎನ್ನುವುದಷ್ಟೇ ಉತ್ತರವಾಯಿತು ಕಾಮತ್‌ರದ್ದು.ಜೀವಶಾಸ್ತ್ರದ ಶಿಕ್ಷಕರ ನಗು ಕಂಡು ಜೀವ ಮರಳಿ ಬಂದ ಭಾವ ಮಹೇಶನಿಗೆ.ಒಂದೆರಡು ಬುದ್ಧಿಮಾತು ಹೇಳಿ ಮಹೇಶನ ತಲೆಯ ಮೇಲೆ ಮೃದುವಾಗಿ ಮೊಟಕಿ ಕ್ಲಾಸಿಗೆ ಮರಳುವಂತೆ ಶಿಕ್ಷಕರು ಹೇಳುವಷ್ಟರಲ್ಲಿ ಮಹೇಶನದ್ದು ನಾಗಾಲೋಟ.ಮುಂದೆ ಕ್ರಿಕೆಟ್ಟಿಗನಾಗದಿದ್ದರೂ ಮಹೇಶ್ ಎನ್ನುವ ಪ್ರಥಮ ಪಿಯುಸಿಯ ವಿದ್ಯಾರ್ಥಿ ತುಂಬ ವರ್ಷಗಳ ಕಾಲ ನೆಮ್ಮದಿಯಿಂದ ಬದುಕಿದ್ದ ಎಂಬಲ್ಲಿಗೆ ಕಥೆಯೊಂದು ಸುಖಾಂತ್ಯವಾಯಿತು.