ವಾಚನಶಾಲೆ
ಕನ್ನಡದ ಖ್ಯಾತ ಚಿಂತಕ, ಬರಹಗಾರ ಕೆ ವಿ ತಿರುಮಲೇಶ್ ‘ವಾಚನಶಾಲೆ' ಎನ್ನುವ ಹೊಸ ಕೃತಿಯನ್ನು ಹೊರತಂದಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಎನ್ನುವ ವಿಷಯವನ್ನು ಒಳಗೊಂಡ ಪುಸ್ತಕ ಸುಂದರ ಮುಖಪುಟದಿಂದ ಗಮನ ಸೆಳೆಯುತ್ತಿದೆ. ಯಾವುದು ಒಳ್ಳೆಯ ಸಾಹಿತ್ಯ, ಯಾವುದು ಸಾಮಾನ್ಯದ್ದು ಎನ್ನುವ ಅಳತೆಗೋಲು ಇಲ್ಲ, ನಿಜ. ಹೆಚ್ಚಿನಮಟ್ಟಿಗೆ ಅದು ನಮ್ಮ ನಮ್ಮ ಅನುಭವಕ್ಕೆ ಬರಬೇಕಾದ ಸಂಗತಿ. ಕೆಲವು ಓದುಗರು ಓದುತ್ತ ಬೆಳೆಯುತ್ತಾರೆ. ಆದರೆ ದಿನವೂ ಪತ್ರಿಕೆಗಳನ್ನಷ್ಟೇ ಓದುವ ವ್ಯಕ್ತಿಗಳ ಕುರಿತು ಯೋಚಿಸಿ ನೋಡಿ. ಅವರು ಅಷ್ಟಕ್ಕೆ ತೃಪ್ತರಾಗುತ್ತಾರೆ. ಅಲ್ಲದೆ ಇಲ್ಲೊಂದು ಅಪಾಯವೂ ಇದೆ: ಗ್ರೆಶರ್ ಲಾ! ಕೆಟ್ಟ ಹಣ ಒಳ್ಳೆಯ ಹಣವನ್ನು ಕೊಚ್ಚಿಕೊಂಡು ಹೋಗುವಂತೆ, ಸಾಮಾನ್ಯ ಸಾಹಿತ್ಯ ಉತೃಷ್ಟ ಸಾಹಿತ್ಯವನ್ನು ಒತ್ತರಿಸಬಹುದು. ಆಗ ನಮಗೆ ಶೇಕ್ಸ್‌ಪಿಯರ್ ಓದುವುದಕ್ಕೆ ಆಗುವುದಿಲ್ಲ. ಯಾಕೆ ಓದಬೇಕು? ಪಂಪ ರನ್ನರು ನಮಗೆ ಇಂದು ಯಾಕೆ ಬೇಕು? ಎಂದು ಮುಂತಾದ ಮಾತುಗಳು ಕೇಳಿಬರುತ್ತದೆ. ಇಂದಿನ ಅತಿವೇಗದ ಯುಗದಲ್ಲಿ ಈ ಅಪಾಯ ಇನ್ನಷ್ಟು ತೀವ್ರವಾಗಿದೆ. ಇಂಥ ಹಿನ್ನೆಲೆಯಲ್ಲಿ ಸಾಹಿತ್ಯದ ಸಮಾಧಾನಕರ ಓದಿಗೆ- ತಕ್ಷಣದ ತುರ್ತನ್ನು ಮೀರಿ ಇನ್ನೊಂದು ವಲಯಕ್ಕೆ ನಮ್ಮನ್ನು ಒಯ್ಯುವ ಜಾದುವಿಗೆ - ಈ 'ವಾಚನಶಾಲೆ' ಅಗತ್ಯವಿದೆ ಎಂದು ಕೃತಿಯಲ್ಲಿ ಹೇಳಲಾಗಿದೆ.
ಲೇಖಕ ಕೆ ವಿ ತಿರುಮಲೇಶ್ ಅವರು ಈ ಕೃತಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳನ್ನು ಆಯ್ದು ಇಲ್ಲಿ ನೀಡಲಾಗಿದೆ.
“ನಾನು ಸ್ನಾತಕೋತ್ತರ ಪದವಿಗಾಗಿ ಓದುತ್ತಿರುವಾಗ ನನಗೆ ಅನೇಕ ಪಠ್ಯ ಪುಸ್ತಕಗಳು ಅಗತ್ಯವಾದವು; ಕೆಲವನ್ನು ನಾನು ಕೊಂಡುಕೊಂಡೆ, ಕೆಲವನ್ನು ತಾತ್ಕಾಲಿಕವಾಗಿ ಲೈಬ್ರರಿಯಿಂದ ಇಸಿದುಕೊಂಡೆ, ಅಥವಾ ಅಲ್ಲೇ ಕುಳಿತು ಓದಿದೆ. ಯಥಾಪ್ರತಿ ಮಾಡುವ ತಾಂತ್ರಿಕ ಸೌಲಭ್ಯ ಆ ಕಾಲದಲ್ಲಿ ಇರಲಿಲ್ಲ. ಇಂಟರ್ನೆಟ್ ಅಂತೂ ಕನಸಿನಲ್ಲೂ ಇರಲಿಲ್ಲ. ತಿರುವನಂತಪುರ ಶೈಕ್ಷಣಿಕವಾಗಿ ಮುಂದುವರಿದ ನಗರವಾಗಿದ್ದರಿಂದ ಅಲ್ಲಿ ಉತ್ತಮ ಪುಸ್ತಕದಂಗಡಿಗಳಿದ್ದುದು ಒಂದು ಅನುಕೂಲವಾಯಿತು; ಅವುಗಳಲ್ಲಿ ಕೆಲವು ಇಂಗ್ಲಿಷ್ ಓದುವ ವಿದ್ಯಾರ್ಥಿಗಳ ಸೌಲಭ್ಯವನ್ನು ನೋಡಿಕೊಳ್ಳುತ್ತಿದ್ದವು. ಆಗ ನಾನು ಖರೀದಿಸಿದ ಹತ್ತಾರು ಪುಸ್ತಕಗಳು ಇನ್ನೂ ನನ್ನ ಬಳಿ ಉಳಿದುಕೊಂಡಿವೆ: ಮಿಲ್ಟನ್ನ Paradise Lost ಕಾವ್ಯದ ಕೆಲವು ಬಿಡಿ ಭಾಗಗಳು (‘ಬುಕ್ಸ್’), ಅಲೆಕ್ಸಾಂಡರ್ ಪೋಪ್ನ Epistle to Dr Arbuthnot,, ಟೆನ್ನಿಸನ್ನ In Memoriam ಮುಂತಾದುವು, ಸಾಕಷ್ಟು ಕಠಿಣವಾದ ಪಠ್ಯಗಳು. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಪ್ರಸ್ತಾವನೆ, ಪಠ್ಯ ಮತ್ತು ಟಿಪ್ಪಣಿ ಇತ್ಯಾದಿಗಳ ಸಮೇತ ವಿದ್ವಾಂಸರಿಂದ ಸಂಪಾದಿತವಾಗಿದ್ದ ಈ ಆವೃತ್ತಿಗಳು ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಸಮನಾಗಿ ಸಹಾಯವಾಗುವಂಥ ಪ್ರಕಟಣೆಗಳಾಗಿದ್ದವು. ಇಂಥ ಪುಸ್ತಕಗಳು, ನಿಘಂಟುಗಳು ಮತ್ತು ಎನ್ಸೈಕ್ಲೋಪೇಡಿಯಾಗಳು ಇಲ್ಲದಿರುತ್ತಿದ್ದರೆ ಅಂದಿನ ಕಾಲದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಅಭ್ಯಾಸ ನಮಗೆ ಅಸಾಧ್ಯವೇ ಆಗಿರುತ್ತಿತ್ತು. (ಆ ಕಾಲಕ್ಕೆ ದೊರಕುತ್ತಿದ್ದ ಮಾರ್ಕೆಟ್ ಗೈಡ್ ಪುಸ್ತಕಗಳನ್ನೂ ಇಲ್ಲಿ ಪ್ರಸ್ತಾಪಿಸಬೇಕು. ಭಾರತೀಯ ಪ್ರೊಫೆಸರುಗಳೇ ಪರೀಕ್ಷೆಯ ದೃಷ್ಟಿಯಿಂದ ಸಿದ್ಧಪಡಿಸುತ್ತಿದ್ದ ಅವು ಗುಣಮಟ್ಟದ ದೃಷ್ಟಿಯಿಂದ ಅಷ್ಟೇನೂ ಉತ್ತಮವಲ್ಲದೆ ಇದ್ದರೂ ಅಗತ್ಯವೊಂದನ್ನು ಪೂರೈಸುತ್ತಿದ್ದವು.)
ನಾನಿಲ್ಲಿ ಸೂಚಿಸಬಯಸುವುದು ಸಾಮಾನ್ಯವಾಗಿ ಯುರೋಪಿಯನ್, ಮುಖ್ಯವಾಗಿ ಇಂಗ್ಲಿಷ್, ಶಿಕ್ಷಣ ಸಂಸ್ಕೃತಿಯ ಬಗ್ಗೆ. ಶಿಕ್ಷಣ ಸಂಸ್ಕೃತಿಯಲ್ಲಿ ಪುಸ್ತಕ ಪ್ರಕಟಣೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಒಂದು ದೇಶದ ಸಾಹಿತ್ಯ ಸಂಸ್ಕೃತಿಗೆ ಸೇರಿದ ಕೃತಿಗಳು ಜನಸಾಮಾನ್ಯರಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ ತಲುಪಬೇಕು. ಬರೇ ಪಠ್ಯವನ್ನು ಪ್ರಕಟಿಸಿದರೆ ಸಾಲುವುದಿಲ್ಲ. ಆ ಪಠ್ಯ (ಕೃತಿ) ಯಾರು ಬರೆದರು, ಯಾವಾಗ ಬರೆದರು, ಅದರ ಮಹತ್ವವೇನು, ಅದರ ಬಗ್ಗೆ ಯಾರೇನು ಹೇಳಿದ್ದಾರೆ, ಅದನ್ನು ಇನ್ನಿತರ ಯಾವ ಕೃತಿಗಳ ಜತೆ ಹೋಲಿಸಬಹುದು, ಅದು ಯಾವ ರೀತಿಯ ಪ್ರಭಾವ ಬೀರಿದೆ, ಅದನ್ನು ಅರ್ಥಮಾಡುವುದಕ್ಕೆ ಏನು ವಿವರಗಳು ಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ಸಂಪಾದಿಸಿಕೊಡುವ ವಿದ್ವಾಂಸರು ಬೇಕು, ಪ್ರಕಟಿಸುವ ಪ್ರಕಾಶನ ಸಂಸ್ಥೆಗಳು ಬೇಕು. ಕೃತಿ, ಓದು, ಶಿಕ್ಷಣ, ವಿಶ್ವವಿದ್ಯಾಲಯ, ಅಧ್ಯಯನ, ವಿಮರ್ಶೆ, ಪ್ರಕಟಣೆ, ವಿತರಣೆ ಎಲ್ಲವೂ ಪರಸ್ಪರ ಅವಲಂಬಿತ ಮತ್ತು ಪೂರಕ; ಇದನ್ನು ಇಂಗ್ಲಿಷ್ ಪುಸ್ತಕ ಸಂಸ್ಕೃತಿ ಇತರರಿಗೆ ಮಾದರಿಯಾಗುವಂತೆ ಅಭಿವೃದ್ಧಿಪಡಿಸಿಕೊಂಡಿದೆ. ಕೃತಿಯೊಂದು ಮುಖ್ಯವೆನಿಸಿದಾಗ, ಇಂಗ್ಲಿಷ್ ಸಂಸ್ಕೃತಿ ಅದರ ಬಗ್ಗೆ ಕುತೂಹಲ ತಾಳುತ್ತದೆ, ಚರ್ಚಿಸುತ್ತದೆ, ಬರೆಯುತ್ತದೆ, ಅದನ್ನು ಹೆಚ್ಚೆಚ್ಚು ಜನಕ್ಕೆ ತಲಪಿಸಲು ಶ್ರಮಿಸುತ್ತದೆ. ಇಂಗ್ಲಿಷ್ ನಲ್ಲಿ ಸಾಹಿತ್ಯಕ್ಕಿರುವ ಬೆಂಬಲ ವ್ಯವಸ್ಥೆಗಳು (‘ಸಪೋರ್ಟ್ ಸಿಸ್ಟಮುಗಳು’) ಅದ್ಭುತವಾದುವು. ಅವು ಆ ಭಾಷಿಕರ ಸಂಸ್ಕೃತಿಯಮಟ್ಟವನ್ನು ತೋರಿಸುತ್ತವೆ. ಅವರಿಗೆ ಹಣ ಇದೆ, ಮಾರ್ಕೆಟ್ ಇದೆ, ಮಾಡುತ್ತಾರೆ ಎಂದು ಈ ಮಾತನ್ನು ಒತ್ತರಿಸಿಬಿಡಬಹುದು; ಆದರೆ ಇದು ಪೂರ್ತಿ ಉತ್ತರವಾಗುವುದು ಸಾಧ್ಯವಿಲ್ಲ. ಮೇಲೆ ಉದಾಹರಿಸಿದಂಥ ಕೃತಿಗಳ ಸಂಪಾದಕರಲ್ಲಿ ಹಲವರು ಯುನಿವರ್ಸಿಟಿ ಪ್ರೊಫೆಸರುಗಳೇನೂ ಅಲ್ಲ, ಹೈಸ್ಕೂಲು ಮೇಷ್ಟರುಗಳು; ಅದರೆ ಅವರ ಪಾಂಡಿತ್ಯ ಮತ್ತು ಸಾಹಿತ್ಯಪ್ರೀತಿ ಮಾತ್ರ ಯಾರಿಗಿಂತಲೂ ಕಡಿಮೆಯದಲ್ಲ. ಹಣ ಮತ್ತು ಮಾರ್ಕೆಟ್ ಒಂದೇ ಇದನ್ನೆಲ್ಲ ಮಾಡಲಾರದು.
ಕ್ಲಿಷ್ಟತೆಯ ಮಾತು ಬಂದಾಗ ಹತ್ತೊಂಬತ್ತನೆಯ ಶತಮಾನದ ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್ ನೆನಪಾಗುತ್ತಾನೆ. ತನ್ನ ಕಾಲಕ್ಕೆ ಇತರರೆಲ್ಲರಿಗಿಂತ ಭಿನ್ನವಾಗಿ ಬರೆದವನು ಅವನು. ಜನ ಅವನನ್ನು ಸ್ವೀಕರಿಸುವುದಕ್ಕೆ ಕಾಲಾವಕಾಶ ಬೇಕಾಯಿತು. ಆದರೆ ಅವನ ಜೀವಿತ ಕಾಲದಲ್ಲೇ ಅಮೆರಿಕ, ಕೆನಡ ಮತ್ತು ಇಂಗ್ಲೆಂಡ್ ಗಳ ಯುನಿವರ್ಸಿಟಿಗಳಲ್ಲಿ ಅಲ್ಲಲ್ಲಿ ‘ಬ್ರೌನಿಂಗ್ ಸೊಸೈಟಿಗಳು ಅಸ್ತಿತ್ವಕ್ಕೆ ಬಂದವು. ಅವು ಕವಿಯ ಬರಹಗಳನ್ನು ಚರ್ಚಿಸುವುದಲ್ಲದೆ, ಅವನ ಕೃತಿಗಳನ್ನು ಕಡಿಮೆ ಖರ್ಚಿನಲ್ಲಿ ಮುದ್ರಿಸಿ ಜನರಿಗೆ ಒದಗಿಸುವ ಕೆಲಸವನ್ನೂ ಮಾಡುತ್ತ ಬಂದಿವೆ.
ಇನ್ನು ಈಚಿನ ಯುಗದ ವಿದ್ಯಾರ್ಥಿಗಳ ಅಗತ್ಯವನ್ನು ತುಂಬುವ ಕ್ಲಿಫ್ಸ್ ನೋಟ್ಸ್, ಮೊನಾರ್ಕ್ ನೋಟ್ಸ್ ಎಂಬ ಸಂಸ್ಥೆಗಳಿವೆ; ಸ್ಪಾರ್ಕ್ ನೋಟ್ಸ್ ವೆಬ್ಸೈಟ್ ಅಂತೂ ಅತ್ಯುತ್ತಮವಾಗಿದೆ. ಶೇಕ್ಸ್ಪಿಯರನ ಹಲವಾರು ನಾಟಕಗಳು ಇಲ್ಲಿ ಸರಳ ಆಧುನಿಕ ಇಂಗ್ಲಿಷ್ನಲ್ಲಿ ಸಿಗುತ್ತವೆ. ಬೃಹತ್ತಾದ ಕಾದಂಬರಿಗಳನ್ನು ಓದಲು ನಿಮಗೆ ಬಿಡುವಿಲ್ಲವೆಂದಾದರೆ, ಅವುಗಳ ಸಾರಾಂಶ, ಪಾತ್ರ ಪರಿಚಯ ಇತ್ಯಾದಿಗಳನ್ನು ನೀವಿಲ್ಲಿ ನೋಡಬಹುದು. ವೆಬ್ಸೈಟಿನಲ್ಲಂತೂ ಇಂಗ್ಲಿಷ್ ಮತ್ತು ಯುರೋಪಿಯನ್ ಸಾಹಿತ್ಯಕ್ಕೆ ಮೀಸಲಾದ ಇನ್ನೂ ಎಷ್ಟೋ ತಾಣಗಳಿವೆ.
ಶೇಕ್ಸ್ ಪಿಯರ್ ನಾಟಕಗಳ ಬಗ್ಗೆ ನಾವು ಮಾತಾಡುತ್ತೇವೆ, ಅದರೆ ಅವುಗಳನ್ನು ಮೂಲದಲ್ಲಿ ಓದಿದವರು ಕಡಿಮೆ. ಈಗ No Fear Shakespeare ಎಂಬೊಂದು ಜಾಲತಾಣವಿದೆ. ಇದರಲ್ಲಿ ಮೂಲ ನಾಟಕದ ಪಠ್ಯದ ಬದಿಯಲ್ಲೇ ಅದರ ಆಧುನಿಕ ‘ಅನುವಾದ’ವನ್ನು ಸರಳ ಸುಲಭ ಇಂಗ್ಲಿಷಿನಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಸಾಮಾನ್ಯ ಇಂಗ್ಲಿಷ್ ಜ್ಞಾನವುಳ್ಳವರು ಕೂಡಾ ಈ ಸರಳ ರೂಪದ ಮೂಲಕ ಶೇಕ್ಸ್ಪಿಯರನ ನಾಟಕಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ನಾನಿದನ್ನೆಲ್ಲ ಇಂಗ್ಲಿಷ್ ನ ಮೋಹದಿಂದ ಹೇಳುತ್ತಿಲ್ಲ, ಕನ್ನಡದ ಕಳಕಳಿಯಿಂದ ಹೇಳುತ್ತಿದ್ದೇನೆ. ಮಾತು ಮಾತಿಗೆ ನಾವು ಕನ್ನಡದ ಉದ್ಧಾರದ ಬಗ್ಗೆ ಮಾತೆತ್ತುತ್ತೇವೆ, ಆದರೆ ಇಂಗ್ಲಿಷ್ ನವರಲ್ಲಿ ಕಾಣುವಷ್ಟು ಕಾರ್ಯಾಸಕ್ತಿ ಕನ್ನಡ ಸಂಸ್ಕೃತಿಯಲ್ಲಿ ಇದೆಯೇ? ಈಚೆಗೆ ಕನ್ನಡ ಲೇಖಕರಲ್ಲಿ ಒಂದು ದಿಗಿಲನ್ನು ನಾನು ಗಮನಿಸಿದ್ದೇನೆ: ಅದು ತಮ್ಮ ಕೃತಿಗಳು ಥಟ್ಟನೆ ಇಂಗ್ಲಿಷ್ ಗೆ ಭಾಷಾಂತರಗೊಳ್ಳಬೇಕು ಎನ್ನುವ ಹಂಬಲದಿಂದ ಹುಟ್ಟಿದ್ದು. ಒಳ್ಳೆಯದೇ. ಆದರೆ ಕನ್ನಡಿಗರೇ ಓದದಿರುವಾಗ ಇಂಗ್ಲಿಷ್ ನಲ್ಲಿ ಅವತರಿಸಿ ಅವು ಯಾವ ಮೋಕ್ಷ ಸಾಧಿಸುತ್ತವೆ? ಬೇರೇನು ಬೇಕಾದರೂ ಮಾಡಿ, ಆದರೆ ಜತೆ ಜತೆಗೇ ಕನ್ನಡದಲ್ಲಿ ಅಕ್ಷರ ಸಂಸ್ಕೃತಿ ಬೆಳೆಯುವಂತೆಯೂ ಆಗಲಿ ಎನ್ನುವುದು ನನ್ನ ಇರಾದೆ. ಯಾವ ಯಾವುದೋ ಕಾರಣಗಳಿಗೆ ಕ್ಲಿಷ್ಟ ಬರಹಗಾರರು ಎಂದು ಹೇಳಲಾಗುವ ಅಡಿಗ, ರಾಮಾನುಜನ್, ಶರ್ಮ, ಅನಂತಮೂರ್ತಿ ಮುಂತಾದವರ ಕುರಿತು ನಾನು ಮೇಲೆ ಹೇಳಿದಂಥ ಪುಸ್ತಕಗಳು ಕನ್ನಡದಲ್ಲಿ ಬಂದಿವೆಯೇ? ದೇವನೂರ ಮಹಾದೇವರ “ಕುಸುಮಬಾಲೆ” ಯಾರಿಗೂ ಅರ್ಥವಾಗುವುದಿಲ್ಲ ಎನ್ನುವ ಟೀಕೆ ಅದು ಪ್ರಕಟವಾದಾಗಿಂದಲೇ ಕೇಳಿಬರುತ್ತಿದೆ; ಆದರೆ ಅದನ್ನು ಅರ್ಥಮಾಡಿಕೊಡುವ ಪ್ರಯತ್ನವನ್ನು ಯಾರಾದರೂ ಮಾಡಿದ್ದಾರೆಯೇ? ಅದು ಇಂಗ್ಲಿಷಿಗೇನೋ ಭಾಷಾಂತರವಾಗಿದೆ, ಆದರೆ ಕನ್ನಡದ ಓದುಗರಿಗೆ ದಕ್ಕಿದೆಯೇ ಎನ್ನುವುದರ ಬಗ್ಗೆ ನನಗೆ ಅನುಮಾನವಿದೆ. ಅದೇ ರೀತಿ, ನಮ್ಮ ದಿಗ್ಗಜರಾದ ಕಾರಂತ, ಅನಕೃ, ತರಾಸು, ಕುವೆಂಪು, ಬೇಂದ್ರೆ, ಗೋಕಾಕ ಮುಂತಾದವರನ್ನು ಆರಾಧಿಸುತ್ತೇವೆಯೇ ಹೊರತು ಅವರ ಬದುಕು ಮತ್ತು ಸಾಹಿತ್ಯ ಕೃತಿಗಳನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಸಾಕಷ್ಟು ಮಾಡಿಲ್ಲ. ಗೋಕಾಕರ “ಭಾರತ ಸಿಂಧುರಶ್ಮಿ” (ಎರಡು ಸಂಪುಟಗಳು) ಬಂದು 35 ವರ್ಷಗಳಾದುವು; ಆದರೂ ಅದರ ಬಗ್ಗೆ ಯಾವುದೇ ಒಂದು ಕಿರು ಕೈಪಿಡಿ ಕೂಡ ಇದುವರೆಗೆ ಬಂದಂತೆ ತೋರುವುದಿಲ್ಲ. ಯೋಚಿಸಬೇಕಾದ ವಿಷಯ.”