ವಾಜಪೇಯಿ ಹೇಳಿದ ಫ್ರೂಟ್ ಸಲಾಡ್ ಕಥೆ !

ವಾಜಪೇಯಿ ಹೇಳಿದ ಫ್ರೂಟ್ ಸಲಾಡ್ ಕಥೆ !

ಭಾರತ ಕಂಡ ಮೇರು ಮುತ್ಸದ್ದಿಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ವಾಜಪೇಯಿಯವರದ್ದು ಕವಿ ಹೃದಯ. ಆದರೆ ಮಾತನಾಡಲು ನಿಂತರೆ ಬಹಳ ತೀಕ್ಷ್ಣವಾಗಿ, ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಇವರ ಭಾಷಣ ಕೇಳಲೆಂದೇ ದೂರದೂರದ ಊರುಗಳಿಂದ ಅವರ ಪ್ರಚಾರ ಸಭೆಗಳಿಗೆ ಜನರು ಬರುತ್ತಿದ್ದರು. ಇವರ ವಾಕ್ ಚಾತುರ್ಯವನ್ನು ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರೇ ಮೆಚ್ಚಿಕೊಂಡಿದ್ದರು. ವಾಜಪೇಯಿಯವರು ತಮ್ಮ ಭಾಷಣದಲ್ಲಿ ಹಲವಾರು ಕಥೆ, ಕವನ, ಉಪಕಥೆಗಳನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳುತ್ತಿದ್ದರು. ಅಂತಹ ಒಂದು ಸಂದರ್ಭದ ಸ್ವಾರಸ್ಯಕರವಾದ ವಿವರಣೆ ಹಳೆಯ ‘ವಿಶ್ವವಾಣಿ' ಪತ್ರಿಕೆಯಲ್ಲಿ ಓದಿದೆ. ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನಿಸಿತು. ಓದಿಕೊಳ್ಳಿ…

ಒಮ್ಮೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ ಸರಕಾರದ ನೀತಿ, ಕಾರ್ಯಕ್ರಮಗಳ ಕುರಿತು ಮಾತನಾಡುತ್ತಿದ್ದರು. ‘ಸರಕಾರ ನಡೆಸುವವರಿಗೆ ಬುದ್ಧಿ ಇಲ್ಲ, ಯಾವ ಕಾರ್ಯಕ್ರಮವೂ ಜಾರಿಗೆ ಯೋಗ್ಯವಾದುದಲ್ಲ, ಅಲೆಮಾರಿಗಳಿಗೆ ಮನೆಕಟ್ಟಿಕೊಡುತ್ತೇವೆ ಅಂತಾರೆ. ಆದರೆ ಅವರಿಗೆ ಭೂಮಿ ಇರಬೇಕೆಂದು ಸರಕಾರ ಅಪೇಕ್ಷಿಸುತ್ತದೆ. ಭೂಮಿ ಇದ್ದಿದ್ದರೆ ಅವರು ಅಲೆಮಾರಿಗಳಾಗುತ್ತಿದ್ದರಾ? ಬಡವರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುತ್ತೇವೆ ಅಂತ ಘೋಷಿಸುತ್ತಾರೆ. ಆದರೆ ತಂದೆ - ತಾಯಿ ಮದುವೆಯಾಗಿದ್ದಕ್ಕೆ ಸರ್ಟಿಫಿಕೇಟ್ ಸಲ್ಲಿಸಬೇಕು ಎಂಬ ಷರತ್ತನ್ನು ಸರಕಾರ ಹಾಕುತ್ತದೆ. ಸ್ಕಾಲರ್ ಶಿಪ್ ಪಡೆಯದೇ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸುವುದು ಸುಲಭ. ಆದರೆ ಸರಕಾರದ ಷರತ್ತನ್ನು ಈಡೇರಿಸುವುದು ಕಷ್ಟ.’ ಎಂದು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಮಾತನ್ನು ಮುಂದುವರೆಸಿದ ವಾಜಪೇಯಿ. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರ ಬೇಕು, ಆದರೆ ಆಡಳಿತ ಬೇಡ. ಮತದಾರರು ಬೇಕು, ಆದರೆ ಜನ ಬೇಕಾಗಿಲ್ಲ. ಯೋಜನೆ-ಕಾರ್ಯಕ್ರಮ ಬೇಕು, ಅದು ಜಾರಿಯಾಗಬೇಕಿಲ್ಲ. ಸರಕಾರ ಏನು ಮಾಡುತ್ತಿದೆ ಎಂಬುದು ಅದರ ಹೊರಗಿನವರಿಗೆ ಗೊತ್ತಿಲ್ಲ. ಒಳಗಿನವರಿಗೂ ಗೊತ್ತಿಲ್ಲ. ಸರಕಾರ ಒಂದು ರೀತಿಯಲ್ಲಿ ಡ್ರೈವರ್ ಇಲ್ಲದ ರೈಲಿನ ಥರ ಹೊರಟಿದೆ. ರೈಲು ಚಾಲಕನಿಲ್ಲದೇ ನೂರಾರು ಕಿ.ಮೀ. ಪ್ರಯಾಣಿಸಬಹುದು. ಹಾಗಂತ ರೈಲಿಗೆ ಚಾಲಕನೇ ಬೇಡ ಎಂದರ್ಥವಲ್ಲ. ಆದರೆ ಕಾಂಗ್ರೆಸ್ ಸರಕಾರವನ್ನು ನೋಡಿದರೆ ಇವೆರಡೂ ನಿಜ ಎನಿಸುತ್ತಿದೆ.‘ ಎಂದು ಹೇಳಿದರು. ಆಗ ಸದನದಲ್ಲಿ ನಗೆ ಅಲೆ ಉಕ್ಕಿತು.

ಅಷ್ಟಕ್ಕೇ ಸುಮ್ಮನಾಗದ ವಾಜಪೇಯಿ, ಒಂದು ಕಥೆ ಹೇಳ್ತೇನೆ ಎಂದರು. ಒಮ್ಮೆ ಕಾಲೇಜು ಪ್ರೊಫೆಸರ್ ರೈಲಿನಲ್ಲಿ ಪ್ರವಾಸ ಹೊರಟಿದ್ದ. ಕೈಯಲ್ಲೊಂದು ಬ್ಯಾಗ್ ಮತ್ತು ಪಿಕ್ ನಿಕ್ ಬಾಸ್ಕೆಟ್ ಇತ್ತು. ರೈಲು ಚಲಿಸಲಾರಂಭಿಸಿದ ಅರ್ಧ ಗಂಟೆಯ ಬಳಿಕ, ಪ್ರೊಫೆಸರ್ ಪಿಕ್ ನಿಕ್ ಬಾಸ್ಕೆಟ್ ತೆಗೆದ. ಅದನ್ನು ಒಬ್ಬ ಪ್ರಯಾಣಿಕ ಗಮನಿಸಿದ. ಪ್ರೊಫೆಸರ್ ಅದರೊಳಗಿನಿಂದ ಟವೆಲ್ ಒಂದನ್ನು ತೆಗೆದು ತೊಡೆಯ ಮೇಲೆ ಹಾಸಿಕೊಂಡ. ನಂತರ ಒಂದು ಚಾಕುವನ್ನು ಹೊರತೆಗೆದ. ನಂತರ ಸೇಬು ಹಣ್ಣನ್ನು ತೆಗೆದು ಕತ್ತರಿಸಿ ಸ್ಟೀಲ್ ಪಾತ್ರೆಗೆ ಹಾಕಿದ. ನಂತರ ಅನನಾಸ್ ಹಣ್ಣನ್ನು ತೆಗೆದ. ಅದರ ಸಿಪ್ಪೆಯನ್ನು ತೆಗೆದು, ಹೋಳುಗಳಾಗಿ ಕತ್ತರಿಸಿ, ಅದನ್ನೂ ಪಾತ್ರೆಗೆ ಹಾಕಿದ. ನಂತರ ಮಾವಿನ ಹಣ್ಣನ್ನು ತೆಗೆದ. ಅದರ ಸಿಪ್ಪೆಯನ್ನೂ ತೆಗೆದು, ಹೋಳು ಮಾಡಿ, ಪಾತ್ರೆಗೆ ಹಾಕಿದ. ದ್ರಾಕ್ಷಿ ಹಣ್ಣುಗಳನ್ನು ಕಿಟಕಿಯಿಂದಲೇ ತೊಳೆದು ಅದನ್ನೂ ಪಾತ್ರೆಗೆ ಹಾಕಿದ. ಬಳಿಕ ಬಾಳೆಹಣ್ಣನ್ನು ತೆಗೆದು, ಅದರ ಸಿಪ್ಪೆಯನ್ನು ಸುಲಿದ. ನಂತರ ಅದನ್ನು ಕತ್ತರಿಸಿ ಪಾತ್ರೆಗೆ ಹಾಕಿದ. ಬರುವಾಗಲೇ ಅರ್ಧ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಹೊರ ತೆಗೆದು, ಅದನ್ನೂ ಕತ್ತರಿಸಿ ಪಾತ್ರೆಗೆ ಹಾಕಿದ. ಅಷ್ಟರಲ್ಲಿ ಪಾತ್ರೆ ತುಂಬಿತು. ಅದಕ್ಕೆ ಒಂದು ನಿಂಬೆಹಣ್ಣನ್ನು ಕತ್ತರಿಸಿ, ಅದರ ರಸವನ್ನು ಹಿಂಡಿದ. ಸ್ವಲ್ಪ ಉಪ್ಪು, ಖಾರದ ಪುಡಿಯನ್ನು ಸಿಂಪಡಿಸಿದ. ಇವನ್ನೆಲ್ಲಾ ಪ್ರಯಾಣಿಕ ದಿಟ್ಟಿಸುತ್ತಲೇ ಇದ್ದ. ಇನ್ನೇನು ಆ ಪಾತ್ರೆಯಲ್ಲಿದ್ದ ಹಣ್ಣುಗಳನ್ನು ಪ್ರೊಫೆಸರ್ ತಿನ್ನಲು ಆರಂಭಿಸಬಹುದು ಎಂದು ಅಂದುಕೊಳ್ಳುತ್ತಿರುವಾಗಲೇ, ಅವನ್ನೆಲ್ಲಾ ಕಿಟಕಿಯಿಂದ ಹೊರ ಚೆಲ್ಲಿ ಬಿಟ್ಟ. ಪ್ರಯಾಣಿಕನಿಗೆ ಆಶ್ಚರ್ಯವಾಯಿತು. ‘ಸರ್, ಇದೇನು? ಇಪ್ಪತ್ತು ನಿಮಿಷಗಳಿಂದ ಹಣ್ಣುಗಳನ್ನು ಕತ್ತರಿಸಿ, ಇನ್ನೇನು ಸೇವಿಸುತ್ತೀರಿ ಅಂದುಕೊಳ್ಳುವಷ್ಟರಲ್ಲಿ ಹೊರಗೆ ಬಿಸಾಡಿ ಬಿಟ್ಟರಲ್ಲ, ಏನಿದು?’ ಎಂದು ಕೇಳಿದ. 

‘ಹೌದು, ಫ್ರೂಟ್ ಸಲಾಡ್ ಮಾಡುತ್ತಿದ್ದೆ, ನನಗೆ ಫ್ರೂಟ್ ಸಲಾಡ್ ಮಾಡುವುದೆಂದರೆ ಬಹಳ ಇಷ್ಟ.’ ಎಂದ ಫ್ರೊಫೆಸರ್. ‘ಸರಿ, ಅದು ನಿಮಗೆ ಇಷ್ಟ ಅಂತಾಯ್ತು. ಆದರೆ ಅದನ್ನೇಕೆ ಕಿಟಕಿಯಿಂದ ಚೆಲ್ಲಿದಿರಿ? ‘ ಎಂದು ಕೇಳಿದ ಪ್ರಯಾಣಿಕ. ಅದಕ್ಕೆ ಫ್ರೊಫೆಸರ್ ‘ನನಗೆ ಫ್ರೂಟ್ ಸಲಾಡ್ ಮಾಡುವುದೆಂದರೆ ಇಷ್ಟ. ಆದರೆ ಅದು ನನಗೆ ಸೇರೊಲ್ಲ.’ ವಾಜಪೇಯಿ ಮಾತು ನಿಲ್ಲಿಸುತ್ತಿದ್ದಂತೆ ಸದಸ್ಯರೆಲ್ಲ ಹೋ ಎಂದು ಜೋರಾಗಿ ನಕ್ಕರು. ‘ಕಾಂಗ್ರೆಸ್ ಸರಕಾರದ ಯೋಜನೆಗಳೂ ಫ್ರೊಫೆಸರ್ ನ ಫ್ರೂಟ್ ಸಲಾಡ್ ನಂತೆ' ಎಂದು ಹೇಳಿಕುಳಿತುಕೊಂಡರು. ಇಡೀ ಸದನ ನಗೆಗಡಲಲ್ಲಿ ತೇಲುತ್ತಿತ್ತು.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ್ ತಾಣ