ವಾಟ್ಸಾಪ್ ಅಜ್ಜ

ವಾಟ್ಸಾಪ್ ಅಜ್ಜ

      ನಮ್ಮನ್ನು ಖಾಯಂ ಆಗಿ ಕರೆದುಕೊಂಡು ಹೋಗುವ ಆಟೋದವರು ಸಿಗದೇ ಇದ್ದದ್ದರಿಂದ, ಯಾವ ಆಟೋ ಸಿಕ್ಕಿತೋ ಅದನ್ನು ಹತ್ತಿ, ಆಸ್ಪತ್ರೆಯತ್ತ ಅವಸರ ಅವಸರವಾಗಿ ಹೊರಟಿದ್ದೆ. ನಮ್ಮ ಬಂಧುಗಳಿಂದ ಫೋನ್ ಬಂತು :

     “ಕಂಗ್ರಾಟ್ಸ್ ಸಾರ್”

     “ಓ ಕೆ ಥ್ಯಾಂಕ್ಸ್” ಎಂದೆ. ನನ್ನದೊಂದು ಅಭ್ಯಾಸ ಉಂಟು; ತುಸು ಕುಚೋದ್ಯದ ಅಭ್ಯಾಸ ಅದು. ಯಾರಾದರೂ, ಕಂಗ್ರಾಟ್ಸ್ ಹೇಳಿದರೆ, ಮೊದಲು ಸ್ವೀಕರಿಸಿ ಥ್ಯಾಂಕ್ಸ್ ಹೇಳುವುದು. ನಂತರ ಯಾತಕ್ಕೆ ಕಂಗ್ರಾಟ್ಸ್ ಹೇಳ್ತಿದೀರಾ ಎಂದು ಕೇಳುವುದು. ಈಗಲೂ ಹಾಗೇ ಮಾಡಿ, ಯೋಚಿಸತೊಡಗಿದೆ – ಇವರು ಕಂಗ್ರಾಟ್ಸ್ ಹೇಳಿದ್ದು ಯಾಕೆ ಅಂತ ತಕ್ಷಣ ಹೊಳೆಯಲಿಲ್ಲ.

     ಅವರೇ ಕೇಳಿದರು, “ಯಾಕೆ ಅಂತ ಕೇಳಲೇ ಇಲ್ಲವಲ್ಲ ಸಾರ್” “ಯಾಕೆ, ನೀವೇ ಹೇಳಿ” ಎಂದೆ, ತಲೆ ಕೆರೆಯುತ್ತಾ. “ನೀವು ಅಜ್ಜ ಆಗಿದ್ದೀರಂತೆ, ಅದಕ್ಕೆ ಕಂಗ್ರಾಟ್ಸ್” ಎಂದರು ಮುಸಿ ಮುಸಿ ನಗುತ್ತಾ. ಹೌದಾ, ಅಜ್ಜ ಆಗಿದ್ದೀನಂತೆ, ಅದಕ್ಕೇ ಕಂಗ್ರಾಟ್ಸಾ? ಅಜ್ಜ ಆದರೆ, ನಿಜ ಹೇಳಬೇಕೆಂದರೆ, ಅದು ಕಂಗ್ರಾಟ್ಸ್ ಹೇಳುವಂತಹ ಸಾಹಸ ಅಲ್ಲ, ಬದಲಿಗೆ ಒಂದೊಂದೇ ವರ್ಷ ಜಾಸ್ತಿ ಆಗಿ, ಅಜ್ಜ ಅನಿಸಿಕೊಳ್ಳುವುದರಿಂದಾಗಿ, ಜೀವನ ಘಟ್ಟದಲ್ಲಿ ಅದು ಬೇಸರ ಪಡಬೇಕಾದ ಸಂಗತಿ, ಅಲ್ಲವಾ? ಅಜ್ಜ ಆದರೆ, ತಲೆ ಕೂದಲು ಹಣ್ಣು ಆಗುತ್ತೆ, ಬೆನ್ನು ನೋವು ಬರುತ್ತೆ, ಸೊಂಟ ಹಿಡಿದು ಕೊಂಡು ಓಡಾಡುವಂತಾಗುತ್ತೆ, ಕೋಲು ಹಿಡಿದು ನಡೆಯುವ ಸಂದರ್ಭ ಬಂದರೂ ಅದರಲ್ಲಿ ಅಚ್ಚರಿ ಇಲ್ಲ. ಹಾಗಿದ್ದಾಗ, ಇವರು ನನಗೆ ಕಂಗ್ರಾಟ್ಸ್ ಹೇಳುತ್ತಾ, ನಾನು ಅಜ್ಜ ಆದದ್ದು ಅವರಿಗೆ ಒಂದು ಸಂತಸದ ವಿಚಾರವೆನಿಸಿ ಎಂಜಾಯ್ ಮಾಡುತ್ತಿದ್ದಾರಲ್ಲಾ? “ಡೆಲಿವರಿ ಎಲ್ಲಾ ಸುಗಮವಾಗಿ ಆಯ್ತಾ ಸಾರ್?” ಈಗ ಗೊತ್ತಾಯಿತು, ನಾನು ಅಜ್ಜ ಆಗಿದ್ದ ವಿಚಾರ ಇವರಿಗೆ ಹೇಗೆ ಗೊತ್ತಾಯಿತು ಎಂದು. ನನ್ನ ಮಗಳು ಗಂಡು ಮಗುವಿಗೆ ಜನ್ಮವಿತ್ತ ವಿಚಾರ, ಮೊಬೈಲ್ ಮೆಸೇಜ್ ವಾಟ್ಸಪ್ ಇಮೇಜ್ ಮೂಲಕ, ನನಗಿಂತಲೂ ಮೊದಲೇ ಇವರಿಗೆ ಗೊತ್ತಾಗಿರಬಹುದು. ಇನ್ನೂ ಆ ಸುದ್ದಿ ನನಗೆ ಫೋನ್ ಬರುವ ಮುಂಚೆಯೇ, ನನಗೆ ಕಂಗ್ರಾಟ್ಸ ಹೇಳುತ್ತಿದ್ದಾರೆ. ಮಗಳು ಡೆಲಿವರಿಗೆಂದು ಆಸ್ಪತ್ರೆಗೆ ನಡುರಾತ್ರಿಯಲ್ಲಿ ಸೇರಿದ್ದು ಗೊತ್ತು, ಇನ್ನೇನು ಬೆಳಗಿನ ಹೊತ್ತಿನಲ್ಲಿ ಡೆಲಿವರಿ ಆಗಬಹುದು ಎಂದೂ ಗೊತ್ತು. ಆ ಸುದ್ದಿ ಖಚಿತವಾಗಿದ್ದು, “ಅಜ್ಜ” ಆಗಿದ್ದಕ್ಕೆ ಕಂಗ್ರಾಟ್ಸ್ ದೊರೆಯುವ ಮೂಲಕ. “ಹಾಂ, ಆಯಿತು. ಥ್ಯಾಂಕ್ಯು” “ನೀವು ಆಸ್ಪತ್ರೆಯಲ್ಲೇ ಇದೀರಾ, ಅಥವಾ ಮನೆಯಲ್ಲೇ ಇದೀರಾ?” “ಈಗ ಮನೆಯಿಂದ ಹೊರಟು, ಆಸ್ಪತ್ರೆಗೆ ಹೋಗುತ್ತಿದ್ದೇನೆ, ಇನ್ನೊಂದರ್ಧ ಗಂಟೆಯಲ್ಲಿ ಅಲ್ಲಿ ಇರುತ್ತೇನೆ” “ಓ, ಹೌದಾ. ಪಾಪು ಚೆನ್ನಾಗಿದೆ ಸಾರ್, ಚೆನ್ನಾಗಿ ಗುಂಡು ಗುಂಡಗೆ ಬೆಳ್ಳಗೆ ಇದ್ದಾನೆ!” ಎಂದು ಮತ್ತೊಂದು ಸಿಹಿ ಸುದ್ದಿಯನ್ನುಹೇಳಿದರು. ಅದಿರಲಿ, ಮಗುವಿನ “ಅಜ್ಜ” ನಾದ ನಾನು ಇನ್ನೂ ಆಸ್ಪತ್ರೆಯ ದಾರಿಯಲ್ಲೇ ಇದೀನಿ, ಇವರು ಅದಾಗಲೇ ಪಾಪುವನ್ನು ನೋಡಲು ಅಲ್ಲಿಗೆ ಹೋಗಿಯಾಯಿತಾ? ಹಾಗಂತಲೇ ಅಚ್ಚರಿಯಿಂದ ಕೇಳಿದೆ.

     “ಇಲ್ಲಪ್ಪ, ಇಲ್ಲ, ನಾನು ಉಡುಪಿಯಲ್ಲಿ ಇದ್ದೇನೆ, ಆದರೆ, ನಿಮ್ಮ ಮಗುವಿನ ಫೋಟೋ ನೋಡಿದೆ, ತುಂಬಾ ಚೆನ್ನಾಗಿದ್ದಾನೆ, ನಿಮ್ಮ ಮೊಮ್ಮಗ. ತಲೆ ಕೂದಲು ಕಪ್ಪಗೆ ಕಾಣಿಸ್ತಾ ಉಂಟು” ಎಂದರು, ಸಂತಸದಿಂದ. ಪಾಪು ಡೆಲಿವರಿ ಆಗಿ ಇನ್ನೂ ಲೇಬರ್ ರೂಮಿನಿಂದ ಹೊರಗೆ ಬಂದಿದೆಯೋ ಇಲ್ಲವೋ, ಇವರಿಗೆ ಅದಾಗಲೇ ಯಾವ ಮಹಾನುಭಾವ ಫೋಟೋ ಕಳಿಸಿದ್ದಾನೆ?

     “ಎಲ್ಲಿಂದ ಬಂತು ನಿಮಗೆ ಫೋಟೋ?” “ಏ, ವಾಟ್ಸಾಪ್ ಇಮೇಜ್ ಬಂತು ಸಾರ್, ನಿಮಗೆ ಗೊತ್ತಿಲ್ಲವಾ, ವಾಟ್ಸಾಪ್ ನಲ್ಲಿ, ಫೋಟೋ ಕಳಿಸಬಹುದು. ಒಂದೇ ಸೆಕೆಂಡ್, ಇನ್ನೊಬರಿಗೆ ತಲುಪುತ್ತೆ”ಎಂದು ಅಮಾಯಕರಂತೆ ಹೇಳಿದರು, ಉಡುಪಿಯ ಆ ಬಂಧುಗಳು. “ಅದೆಲ್ಲಾ ಗೊತ್ತು ಸಾರ್, ವಾಟ್ಸಾಪ್ ಫೋಟೋ ಕಳಿಸುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಮೂಟೆ ಹೇರುವ ಹಮಾಲಿಗಳು ಸಹಾ, À ಒಂದು ಮೂಟೆಯನ್ನು ಬಸ್‍ನಲ್ಲಿ ಬೆಂಗಳೂರಿಗೆ ಕಳಿಸಿ, ಬಸ್ ನಂಬರ್ ಸಮೇತ ಫೋಟೋ ತೆಗೆದು, ವಾಟ್ಸಾಪ್ ಮೂಲಕ ಬೆಂಗಳೂರಿನಲ್ಲಿರುವವರಿಗೆ ವಾಟ್ಸಾಪ್ ಮಾಡುತ್ತಾರೆ. ಅದಿರಲಿ, ನಿಮಗೆ ಫೋಟೋ ಕಳಿಸಿದ್ದು ಯಾರು?” ನನಗೆ ಕುತೂಹಲವೇನೆಂದರೆ, ಅಷ್ಟು ಬೇಗ ಮಗುವಿನ ಫೋಟೋ ತೆಗೆದು ವಾಟ್ಸಾಪ್ ನಲ್ಲಿ ಕಳಿಸಿದ್ದು ಯಾರಿರಬಹುದು ಎಂದು. ನನ್ನ ಮಗಳು ಇನ್ನೂ ಡೆಲಿವರಿ ವಾರ್ಡ್‍ನಲ್ಲಿ ಇರುವುದರಿಂದಾಗಿ, ಅವಳು ಕಳಿಸಿರಲು ಅಸಾಧ್ಯ. ಇನ್ನುಅಳಿಯಂದಿರು, ಮಗ ಹುಟ್ಟಿದ ಸಂತಸ, ಸಂಭ್ರಮದಲ್ಲಿರುವುದರ ಜೊತೆಗೆ, ರಾತ್ರಿ ಎಲ್ಲಾ ನಿದ್ದೆ ಬಿಟ್ಟು ಸುಗಮವಾಗಿ ಡೆಲಿವರಿ ಆಗಲಿ ಎಂದು ಆಶಿಸುತ್ತಾ ಆಸ್ಪತ್ರೆಯಲ್ಲೇ ಇರುವುದರಿಂದಾಗಿ, ಫೋಟೋ ಕಳಿಸುವ ಮೂಡ್‍ನಲ್ಲಿ ಇರಲಾರರು. ಜೊತೆಗೆ, ಪುಟ್ಟ ಪುಟ್ಟ ಹಸುಳೆಗಳ ಫೋಟೋ ತೆಗೆಯಬಾರದು ಎಂಬ ನಂಬಿಕೆಯೋ , ಮೂಢನಂಬಿಕೆಯೋ ನಮ್ಮ ಕುಟುಂಬಗಳಲ್ಲಿ ಉಂಟು. ಸಣ್ಣ ಮಕ್ಕಳ ಫೋಟೋ ತೆಗೆಯುವುದು ಏನಿದ್ದರೂ, ನಾಮಕರಣದ ನಂತರ ಎಂದು ನಂಬಿಕೊಂಡು ಬಂದವರು ನಾವು. ಅಂಥದ್ದರಲ್ಲಿ, ದೂರದ ಉಡುಪಿಗೆ ಅಷ್ಟು ಬೇಗ ಫೋಟೋ ವಾಟ್ಸಾಪ್ ಮಾಡಿದವರು ಯಾರು?

     “ಅದೇ ಸಾರ್, ನಿಮ್ಮ ಖಾಯಂ ಆಟೋ ಡ್ರೈವರ್, ಅರ್ಜುನ್ ಅಂತ ಇದಾರಲ್ಲಾ, ಅವರೇ ಕಳಿಸಿದರು. ನಾವು ನಿಮ್ಮ ಊರಿಗೆ ಬಂದಾಗಲೆಲ್ಲಾ, ನೀವು ಬಸ್ ಸ್ಟಾಂಡಿಗೆ ಕಳಿಸಿಕೊಡುತ್ತಾ ಇದ್ದಿರಲ್ಲಾ, ಆ ಖಾಯಂ ಆಟೋ ಡ್ರೈವರ್, ಅವರೇ ಕಳಿಸಿದ್ದು. ಅವರ ನಂಬರು ನಮ್ಮಲ್ಲಿ ಉಂಟು. ಅರ್ಜಂಟಿಗೆ ಬೇಕು ಅಂತ ಇಟ್ಟುಕೊಂಡಿದ್ದೆ. ಅವರು ನಮಗೆ ಆಗಾಗ ವಾಟ್ಸಾಪ್ ಫೋಟೋ ಕಳಿಸುತ್ತಾ ಇರ್ತಾರೆ.”

 

     ನಮ್ಮ ಮನೆಗೆ ಯಾರಾದರೂ ಬಂಧುಗಳು ಬಂದರೆ, ಬಸ್ ನಿಲ್ದಾಣಕ್ಕೆ ಬಿಡಲು ಎಂದು ಖಾಯಂ ಆಗಿ ಅರ್ಜುನ್ ಎಂಬ ಆಟೋದವರಿಗೇ ನಾವು ಹೇಳುತ್ತಿದ್ದೆವು. ಆಗಾಗ ಬರುವ ಬಂಧುಗಳ ಬಳಿ ಅವರ ನಂಬರು ಇರುವುದು ಸಹಜ. ಇವರು ಮಾತ್ರ ವಾಟ್ಸಾಪ್ ಮೂಲಕ ಪರಸ್ಪರ ಸಂಪರ್ಕ ಇಟ್ಟುಕೊಂಡಿದ್ದರು, ಅಲ್ಲದೆ ಆಗತಾನೆ ಹುಟ್ಟಿದ ಮಗುವಿನ ಫೋಟೋ ಸಹಾ ವಿನಿಮಯ ಮಾಡಿಕೊಂಡಿದ್ದರು! “ನಿಮ್ಮ ಮಗಳು ಇದ್ದ ಆಸ್ಪತ್ರೆಗೆ ಅವರು ಯಾರನ್ನೋ ಬಿಡಲು ಹೋಗಿದ್ದರಂತೆ. ಆಗ, ನಿಮ್ಮ ಅಳಿಯಂದಿರು ಮಾತನಾಡಲು ಸಿಕ್ಕಿದರಂತೆ, ಅದೇ ಸಮಯದಲ್ಲಿ ಮಗುವನ್ನು ತೋರಿಸಲು ನರ್ಸ್ ಮಗುವನ್ನೆತ್ತಿಕೊಂಡು ಬಂದು, ನಿಮ್ಮ ಅಳಿಯ, ಅವರ ತಂದೆ ತಾಯಿ ನಿಮ್ಮ ಮನೆಯವರು ಅಂತ ಆಸ್ಪತ್ರೆಯಲ್ಲಿ ಯಾರ್ಯಾರಿದ್ದರೋ ಅವರಿಗೆ ತೋರಿಸುತ್ತಾ ಇದ್ದರಂತೆ. ಅಲ್ಲೇ ಇದ್ದ ಆಟೋ ಡ್ರೈವರ್ ಅರ್ಜುನ್ ತಮ್ಮ ಕೆಮರಾದ ಮೂಲಕ ಮಗುವಿನ ಫೋಟೋ ತೆಗೆದು, ನನಗೆ ಮತ್ತು ನಿಮ್ಮ ಕೆಲವು ನೆಂಟರಿಗೆ ಕಳಿಸಿದರಂತೆ. ಪಾಪು ತುಂಬಾ ಮುದ್ದಾಗಿದೆ, ನಿಮಗೆ ಕಂಗ್ರಾಟ್ಸ್. ಅಜ್ಜ ಆಗಿಬಿಟ್ಟಿರಲ್ಲಾ?” ಎಂದು ಫೋನ್ ಇಟ್ಟರು. ಅವರ ಮಾತು ಮುಗಿಯುವ ಸಮಯಕ್ಕಾಗಲೇ, ನಾನು ಆಸ್ಪತ್ರೆಯ ಹತ್ತಿರ ಹೋಗಿದ್ದೆ. ಅವರು ಫೋನ್ ಇಟ್ಟ ಕೂಡಲೆ ಅಳಿಯಂದಿರು ಫೋನ್ ಮಾಡಿದರು, “ಕಂಗ್ರಾಟ್ಸ್, ಈಗ ಡೆಲಿವರಿ ಆಯಿತು. ಗಂಡು ಮಗು” ಎಂದರು. “ಕಂಗ್ರಾಟ್ಸ್ ನಿಮಗೂ, ಪಾಪು ಬಿಳಿ ಬಿಳಿಯಾಗಿ ಮುದ್ದಾಗಿದೆಯಂತೆ? ತುಂಬಾ ಸಂತೋಷ” ಎಂದೆ. ಈಗ ಕಕ್ಕಾಬಿಕ್ಕಿಯಾಗುವ ಸರದಿ ಅವರದ್ದು.

     “ನಿಮಗೆ ಹೇಗೆ ಗೊತ್ತಾಯಿತು?” “ದೂರದ ಉಡುಪಿಯಿಂದ ಫೋನ್ ಬಂದಿತ್ತು, ನಮ್ಮ ಬಂಧುಗಳಿಗೆ ಅದಾಗಲೇ ವಾಟ್ಸಾಪ್ ಫೋಟೋ ಸಿಕ್ಕಿದೆಯಂತೆ, ನಿಮ್ಮ ಮಗುವಿನ ಫೋಟೋ ನೋಡಿ ನನಗೆ ಫೋನ್ ಮಾಡಿದರು. ಜೊತೆಗೆ “ಅಜ್ಜ” ಆಗಿದ್ದಕ್ಕೆ, ನನಗೆ ಕಂಗ್ರಾಟ್ಸ್ ಹೇಳಿದರು.” ಎಂದೆ. “ಹೌದಾ, ಅಷ್ಟು ಬೇಗ ಅವರಿಗೆ ವಾಟ್ಸಾಪ್ ಮಾಡಿದವರು ಯಾರು? ಇರಲಿ ಬಿಡಿ. ಈಗ ಎಲ್ಲಿದೀರಾ, ಹತ್ತಿರ ಬಂದಿರಾ. ಅಂದ ಹಾಗೆ, ನೀವು ಅಜ್ಜ ಆಗಿದ್ದಕ್ಕೆ ಕಂಗ್ರಾಟ್ಸ್” ಎಂದರು ಅಳಿಯಂದಿರು. ಅಜ್ಜ ಆಗಿದ್ದಕ್ಕೆ ಕಂಗ್ರಾಟ್ಸಾ ಎಂದು ಕೇಳಬೇಕೆಂದು ಕೊಂಡು, ಅಲ್ಲೇ ನಾಲಗೆ ಕಚ್ಚಿ ಕೊಂಡೆ. ಅಜ್ಜ ಆದರೂ ಕಂಗ್ರಾಟ್ಸ್ ಹೇಳಿಸಿಕೊಳ್ಳಬೇಕಾದ ಯುಗ ಇದು, ಇದು ವಾಟ್ಸಾಪ್ ಕಾಲ ಎಂದು ಮೊಮ್ಮಗುವನ್ನು ನೋಡಲು, ಆಸ್ಪತ್ರೆಯ ಮೆಟ್ಟಿಲೇರತೊಡಗಿದೆ.

 

 -ಎಂ.ಶಶಿಧರ ಹೆಬ್ಬಾರ್

Comments

Submitted by ಗಣೇಶ Wed, 04/01/2015 - 16:42

ಹೆಬ್ಬಾರರೆ ಕಂಗ್ರಾಟ್ಸ್, ಅಜ್ಜ ಆದುದಕ್ಕೆ... ವಾಟ್ಸಪ್ ನಲ್ಲಿ ನಾನೂ ಮಗುವಿನ ಫೋಟೋ ನೋಡಿದೆ :)

Submitted by bhalle Fri, 04/03/2015 - 05:14

ಬಿಳೀ ಮಗು ತಾನೇ ಸೆಲ್ಫಿ ತೆಗೆದುಕೊಂಡು ಕಳಿಸಿದ ಚಿತ್ರ ನಾನೂ ನೋಡಿದೆ :-)))) ನಿಮ್ಮ ಲೇಖನ ನಿಜವೇ ಆಗಿದ್ದಲ್ಲಿ "ಕಂಗ್ರಾಟ್ಸ್"

ನೀವು ಇನ್ಮುಂದೆ "ವಾಟ್ಸಪ್ಪ್" ಬದಲು "ವಾಟ್ಸ್-ಅಜ್ಜ" ಬಳಸುತ್ತೀರಿ ಅನ್ನಿಸುತ್ತೆ.

Submitted by sasi.hebbar Fri, 04/03/2015 - 10:40

In reply to by bhalle

"ಕಂಗ್ರಾಟ್ಸ್ ಗೆ ಧನ್ಯವಾದಗಳು. ಅಜ್ಜ‌ ಆಗಿದ್ದು ನವೆಂಬರದಲ್ಲಿ. 2.4.15 ರಂದು ಪಾಪುವಿನ್ ನಾಮಕರಣ‌. ಇಂತಿ ನಿಮ್ಮ‌ ‍ವ‌. (ಇದನ್ನು ವಾಟ್ಸ್ಅಪ್ ‍: ಅಲ್ಲ‌ ಅಲ್ಲ‌ " ‍ ವಾಟ್ಸ್ಅಜ್ಜ‌ ಮೂಲಕ‌ ಕಳುಹಿಸಲಾಗಿದೆ) ‍ _ ವಾಟ್ಸಜ್ಜ‌.