ವಾಡಿವಾಸಲ್

ವಾಡಿವಾಸಲ್

ಪುಸ್ತಕದ ಲೇಖಕ/ಕವಿಯ ಹೆಸರು
ತಮಿಳು ಮೂಲ: ಚಿ.ಸು.ಚೆಲ್ಲಪ್ಪ, ಕನ್ನಡಕ್ಕೆ: ಸತ್ಯಕಿ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು. ದೂ: ೯೮೪೪೪೨೨೭೮೨
ಪುಸ್ತಕದ ಬೆಲೆ
ರೂ.೭೦.೦೦, ಮುದ್ರಣ: ೨೦೨೧

‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು ಜೀವನಶೈಲಿ. ಪ್ರಾಚೀನ ತಮಿಳು ಸಾಹಿತ್ಯವಾದ ‘ಕಲಿತ್ತೊಗೈ’ ನಲ್ಲಿ ಆಯರ್ ಗಳು ಬಾಳುವ ಮುಲ್ಲೈ ನೆಲದಲ್ಲಿ ನಡೆಯುವ ಜಲ್ಲಿಕಟ್ಟಿನ ಕುರಿತು ಸಾಕಷ್ಟು ವರ್ಣಿಸಲಾಗಿದೆ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು ‘ಏರು ತಳುವುದರ್'. ಏರು ಎಂಬ ಶಬ್ದಕ್ಕೆ ಎತ್ತು ಅಥವಾ ಗೂಳಿ ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ.

ಚಿ.ಸು.ಚೆಲ್ಲಪ್ಪ ‘ವಾಡಿವಾಸಲ್' ಅನ್ನು ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೈಜ ಚಿತ್ರಣ - ಇವುಗಳಿಂದ ಅವರು ಎಂಥಾ ಶ್ರೇಷ್ಣ ಸಾಹಿತಿಯೆಂಬುದನ್ನು ತೋರಿಸುತ್ತದೆ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆಯೆಂದು ವಿಮರ್ಶಿಸುವ ಪ್ರಾಣಿದಯಾ ಗುಂಪಿನವರು, ಒಮ್ಮೆ ‘ವಾಡಿವಾಸಲ್' ಅನ್ನು ಓದಬೇಕು' ಎನ್ನುತ್ತಾರೆ ಈ ಪುಸ್ತಕಕ್ಕೆ ಬೆನ್ನುಡಿ ಬರೆದ ಪೆರುಮಾಳ್ ಮುರುಗನ್. 

ಚಿ.ಸು.ಚೆಲ್ಲಪ್ಪ (೧೯೧೨-೧೯೯೮) ಇವರು ತಮಿಳು ಭಾಷೆಯಲ್ಲಿ ಬರೆದ ಕೃತಿಯನ್ನು ಸತ್ಯಕಿ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಾದಂಬರಿಯನ್ನು ಚೆಲ್ಲಪ್ಪ ಇವರು ೧೯೫೯ರಲ್ಲಿ ಬರೆದಿದ್ದರು. ಜಲ್ಲಿಕಟ್ಟು ಕುರಿತ ಅದ್ಭುತ ಮಾಹಿತಿ ಹೊಂದಿರುವ ಈ ಕೃತಿ ತಮಿಳಿನ ಕ್ಲಾಸಿಕ್ ಕಾದಂಬರಿ ಎಂದೇ ಹೆಸರುವಾಸಿಯಾಗಿದೆ. ಮಧುರೈ ಜಿಲ್ಲೆಯ ವತ್ತಲಗುಂಡು ತಾಲೂಕಿನ ಚಿನ್ನ ಮಣೂರ್ ಗ್ರಾಮದಲ್ಲಿ ಹುಟ್ಟಿದ್ದ ಚೆಲ್ಲಪ್ಪ ಸಣ್ಣ ಕಥೆ, ಕಾದಂಬರಿ, ವಿಮರ್ಶೆ, ಕವಿತೆ, ಅನುವಾದ ಬರಹಗಳಲ್ಲಿ ಎತ್ತಿದ ಕೈ. ಇವರು ಅಪಾರ, ಚಂದ್ರೋದಯಂ, ದಿನಮಣಿ ಮುಂತಾದ ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದಾರೆ.

‘ಎಳತ್ತು’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ ಇವರು ಆರ್ಥಿಕ ಸಂಕಷ್ಟವನ್ನು ಅನುಭವಿಸಿದರು. ಆದರೂ ಛಲ ಬಿಡದೇ ಸುಮಾರು ಹತ್ತು ವರ್ಷಗಳ ಕಾಲ ಪತ್ರಿಕೆಯನ್ನು ನಡೆಸಿದ್ದರು. ಹಣ, ಹೊಗಳಿಕೆ, ಪ್ರಶಸ್ತಿಗಳಿಂದ ದೂರವೇ ಉಳಿದ ಚೆಲ್ಲಪ್ಪನವರು ಉತ್ತಮ ಛಾಯಾಗ್ರಾಹಕರೂ ಆಗಿದ್ದರು. ಇವರ ‘ವಾಡಿವಾಸಲ್' ಕೃತಿ ಜಲ್ಲಿಕಟ್ಟಿನ ಕುರಿತ ಮೊದಲ ಕಾದಂಬರಿ ಎಂದರೆ ತಪ್ಪಾಗಲಾರದು. 

‘ವಾಡಿವಾಸಲ್' ಕಾದಂಬರಿಯ ಒಳಪುಟಗಳಲ್ಲಿ ಕಂಡುಬರುವ ಸೊಗಸಾದ ರೇಖಾ ಚಿತ್ರಗಳನ್ನು ರಚಿಸಿದವರು ಖ್ಯಾತ ಚಿತ್ರ ಕಲಾವಿದರಾದ ಕೆ.ಎಂ. ಆದಿಮೂಲನ್ (೧೯೩೮-೨೦೦೮) ಇವರು. ಇವರು ರಚಿಸಿದ ಮಹಾತ್ಮ ಗಾಂಧಿಯವರ ನೂರಕ್ಕೂ ಅಧಿಕ ರೇಖಾಚಿತ್ರಗಳು ಬಹಳ ಖ್ಯಾತಿಯನ್ನು ಪಡೆದಿವೆ. ರಾಷ್ಟೀಯ ಲಲಿತ ಕಲಾ ಅಕಾಡೆಮಿ ಹಾಗೂ ಇನ್ನಿತರ ಸಂಸ್ಥೆಗಳಿಂದ ಇವರಿಗೆ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. 

ವಾಡಿವಾಸಲ್ ಕೃತಿಯ ಬಗ್ಗೆ ಲೇಖಕರು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ ‘ಒಂದು ಜಿಗಿತ, ಎರಡು ಜಿಗಿತ; ಮೂರನೇ ಜಿಗಿತಕ್ಕೆ ಆತ ನಿಂತು ಬಿಟ್ಟ. ಮೂರು ಬಾರಿಯೂ ಗೂಳಿಯು ಅವನನ್ನು ತಿವಿದು ಎಸೆಯಲು ಯತ್ನಿಸಿತ್ತು. ಮನುಷ್ಯನಿಗೂ ಮೃಗಕ್ಕೂ ನಡೆಯುವ ಈ ಕಾಳಗಕ್ಕೆ ಜಲ್ಲಿಕಟ್ಟು ಎಂದು ಹೆಸರು. ಅದು ನಡೆಯುವ ಜಾಗ- ವಾಡಿವಾಸಲ್.

ಅಪ್ಪನ ಬಯಕೆಗೆ ಮಾತ್ರವಲ್ಲ, ಬದುಕಿಗೆ ಯಮನಾಗಿ ನಿಂತ ಕಾರಿಯ ಕೊಂಬಿನಲ್ಲಿ ಈಗಲೂ ತಂದೆಯ ರಕ್ತ ಅಂಟಿದಂತೆ ಭ್ರಮೆ ಉಂಟಾಯಿತು. ಆ ಭ್ರಮೆಯಿಂದ ಹೊರ ಬಂದು ತನ್ನ ಎದುರಿಗೆ ನೋಡಿದನು ಪಿಚ್ಚಿ. ಆತನ ಎದುರಿಗೆ ಕಾರಿ ನಿಂತಿತ್ತು.

ವಾಡಿವಾಸಲ್ ನಲ್ಲಿ ಮನುಷ್ಯನ ರಕ್ತ ಬೀಳಬಹುದು. ಆದರೆ ಗೂಳಿಯ ರಕ್ತ ಬೀಳುವಂತಿಲ್ಲ. ಮನುಷ್ಯನಿಗೆ ಇದು ಆಟವೇ ಆಗಿರಬಹುದು. ಆದರೆ ಗೂಳಿಗೆ ಇದು ಆಟವಲ್ಲ. ಮದುರೈ, ರಾಮನಾಥಪುರ ಸುತ್ತಮುತ್ತಲು ಈಗಲೂ ಜಲ್ಲಿಕಟ್ಟು ವಿಶೇಷ ಕ್ರೀಡೆಯೇ ಆಗಿದೆ. ಅದನ್ನು ಕಥಾವಸ್ತುವಾಗಿ ಬಳಸಿಕೊಂಡು ಬರೆದ ಕಥೆ ಇದು. ಕಥೆ ಓದಿ ಮುಗಿಸಿದ ನಂತರವೂ ಅ ಗೂಳಿಗಳು, ಜನರು, ವಾಡಿವಾಸಲ್ -ಇವೆಲ್ಲಾ ನಿಮ್ಮ ನೆನಪಿನಲ್ಲಿ ಖಂಡಿತವಾಗಿಯೂ ಉಳಿಯುತ್ತವೆ. ಈ ಕಥೆಯ ಮೂಲಕ ಹೊಸ ಜಗತ್ತನ್ನು ನಿಮಗೆ ಪರಿಚಯಿಸುತ್ತಿದ್ದೇನೆಂದು ನಾನು ನಂಬುತ್ತೇನೆ' 

ಕನ್ನಡಕ್ಕೆ ಅನುವಾದ ಮಾಡಿದ ಲೇಖಕರಾದ ಸತ್ಯಕಿ ಅವರು ‘ಜಲ್ಲಿಕಟ್ಟು ಎಂದರೆ ಏನೆಂದು ತಿಳಿಯದವರಿಗೂ ಈ ಕೃತಿ ಮುಟ್ಟುತ್ತದೆ, ಕಾರಣ, ಗಟ್ಟಿಯಾದ ಕಥೆ.’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸುಮಾರು ೭೦ ಪುಟಗಳ ಪುಟ್ಟ ಕಾದಂಬರಿಯಾದ ವಾಡಿವಾಸಲ್ ಅನ್ನು ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದು. ಆದರೆ ಇದರಲ್ಲಿಯ ಪಾತ್ರಗಳು, ಘಟನೆಗಳು, ಭಾಷೆ ನಮ್ಮ ಮನದಲ್ಲಿ ಬಹಳ ಸಮಯ ಉಳಿದು ಬಿಡುತ್ತದೆ. ಸಾಹಿತಿ ಬಿ.ಆರ್.ಶಂಕರ್ ಅನುವಾದ ಸಾಹಿತ್ಯ ಮಾಲೆ ಹಾಗೂ ಛಂದ ಪುಸ್ತಕ ಜೊತೆಯಾಗಿ ಈ ಪುಸ್ತಕವನ್ನು ಸಾಹಿತ್ಯಾಸಕ್ತರಿಗೆ ಹೊರತಂದಿದೆ.

ವಾಡಿವಾಸಲ್ ಕಾದಂಬರಿಯನ್ನು ಮೂಲ ಲೇಖಕರಾದ ಚೆಲ್ಲಪ್ಪ ಅವರು ತಮ್ಮ ಸೋದರ ಮಾವನಾದ ವತ್ತಲಗುಂಡು ಬಿ.ಎಸ್. ಮುತ್ತುಸಾಮಿ ಅಯ್ಯರ್ ಇವರಿಗೆ ಅರ್ಪಣೆ ಮಾಡಿದ್ದಾರೆ. ಅನುವಾದಕರಾದ ಸತ್ಯಕಿ ಅವರು ಈ ಕೃತಿಯನ್ನು ತಮ್ಮನ್ನು ಕನ್ನಡ ಮೀಡಿಯಂಗೆ ಸೇರಿಸಿದ ಅವರ ಅಜ್ಜಿ ಆಲಮೇಲು ಹಾಗೂ ತಮಿಳು ಕಲಿಸಿದ ಅಜ್ಜ ಸುಂದರಂ ಅವರಿಗೆ ಅರ್ಪಿಸಿದ್ದಾರೆ. ಶ್ವೇತಾ ಆಡುಕಳ ಅವರ ರಚನೆಯ ಸೊಗಸಾದ ಮುಖಪುಟ ಗಮನ ಸೆಳೆಯುವಂತಿದೆ.