ವಾರದಲ್ಲಿ ಹೊಸ ಮನೆ ರೆಡಿ!

ವಾರದಲ್ಲಿ ಹೊಸ ಮನೆ ರೆಡಿ!

ಬರಹ

home
ಹೊಸ ಮನೆ ಕಟ್ಟಲು ಒಂದು ವಾರ ಕಾಲಾವಧಿ ಸಾಕು. ಅದೂ ಮೂರು ಜನ ಪರಿಣತ ಜನರ ಕೆಲಸದಿಂದ ಇದನ್ನು ಸಾಧಿಸಬಹುದು ಎಂದರೆ "ಇದೇನು..ತಮಾಷೆಗೂ ಒಂದು ಮಿತಿ ಬೇಡವೇ?", ಎಂದು ಕೋಪಿಸಿಕೊಂಡಿರಾ? ಇದು ತಮಾಷೆಯ ಮಾತಲ್ಲ.ಟಾಟಾ ಬ್ಲೂಸ್ಕೋಪ್ ಎಂಬ ಕಂಪೆನಿ ಉಕ್ಕಿನ ರಚನೆಗಳನ್ನು ಬಳಸಿ, ವಾರದಲ್ಲಿ ಸಿದ್ಧವಾಗುವ  ಮಾಡಬಹುದಾದ ಮನೆ ತಯಾರು ಮಾಡಿದೆ. ಎರಡೂವರೆ ಸಾವಿರ ಚದರಡಿಯಷ್ಟು ವಿಸ್ತೀರ್ಣದ ಮನೆಗಳನ್ನು, ತೋಟದ ಮನೆಗಳನ್ನು ಈ ರೀತಿ ನಿರ್ಮಿಸಲು ಸಾಧ್ಯ.ಗೋಡೆ ಮತ್ತು ತಾರಸಿಗೆ ಬೇಕಾದ ವಸ್ತುಗಳನ್ನೂ ಕಂಪೆನಿಯು ಈಗಾಗಲೇ ತಯಾರಿಸಿದೆ. ಮೂರು ತಿಂಗಳಲ್ಲಿ ಈ ರೀತಿಯ ಕಟ್ಟಡಕ್ಕೆ ಬೇಕಾದ ನೆಲಹಾಸುಗಳನ್ನೂ ತಯಾರಿಸುವ ಯೋಚನೆ ಕಂಪೆನಿಗಿದೆ. ಟಾಟಾ ಮತ್ತು ಆಸ್ಟ್ರೇಲಿಯಾ ಮೂಲದ ಬ್ಲೂಸ್ಕೋಪ್ ಕಂಪೆನಿಗಳು ಜಂಟಿಯಾಗಿ ಈ ಸಾಹಸಕ್ಕೆ ಕೈಹಾಕಿವೆ.ಟಾಟಾ ಸ್ಟೀಲಿನ ವಿತರಕರ ಮೂಲಕ ಈ ರೆಡಿಮೇಡ್ ಮನೆಗಳು ಲಭ್ಯವಾಗಲಿವೆ. ಪೂನಾ,ಭಿವಡಿ ಮತ್ತು ಚೆನ್ನೈಯಲ್ಲಿ ಇದರ ತಯಾರಿಕೆ ಮಾಡಲು ಕಾರಖಾನೆಗಳು ಶುರುವಾಗಲಿವೆ.ಬೇಕಾದ ಎಲ್ಲ ಸಾಧನಗಳನ್ನು ಕೊನೆಯ ನಟ್ಟು ಬೋಲ್ಟು ತನಕ ಒದಗಿಸುವುದಲ್ಲದೆ, ಅದನ್ನು ಸ್ಥಾಪಿಸಲು ಬೇಕಾದ ಪರಿಣತರ ಸೇವೆಯನ್ನೂ ಕಂಪೆನಿಯೇ ನೀಡಲಿದೆ. ಉಕ್ಕಿನ ನೆಲಹಾಸನ್ನು ಇದರಲ್ಲಿ ಬಳಸಲಾಗುತ್ತಿದೆ.ಕಟ್ಟಡ ಕಾರ್ಮಿಕರ ಕೊರತೆ, ಕಟ್ಟಡ ಸಾಮಗ್ರಿಗಳ ಅಭಾವಕ್ಕೆ ಈ ಕಟ್ಟಡ ಉತ್ತಮ ಪರಿಹಾರವಾಗಬಲ್ಲುದು.ನಿರ್ಮಾಣದ ತ್ವರಿತ ಗತಿ, ಈ ಬಗೆಯ ನಿರ್ಮಾಣದತ್ತ ಜನರ ಗಮನ ಸೆಳೆಯದೇ ಇರದು.
ಟಿವಿ,ಕಂಪ್ಯೂಟರ್,ಡಿವಿಡಿ ಚಾಲು : ವಿದ್ಯುತ್ ಪೋಲು
ಟಿವಿಯನ್ನು ರಿಮೋಟ್ ಬಳಸಿ ಬಂದು ಮಾಡಿದಾಗ, ಅದಕ್ಕೆ ವಿದ್ಯುತ್ ಸಂಪರ್ಕ ಇರುತ್ತದೆಯಲ್ಲ?ಹಾಗೆಯೇ ಬೇಡವಾದಾಗಲೂ ನಾವು ಕಂಪ್ಯೂಟರನ್ನು ಸ್ಟ್ಯಾಂಡ್‌ಬೈ ಮೋಡಿನಲ್ಲಿ ಇಟ್ಟು ಬಿಡುವುದಿದೆ. ಹೀಗಿಟ್ಟಾಗ ಹೆಚ್ಚೇನೂ ವಿದ್ಯುತ್ ಖರ್ಚು ಬರುವುದಿಲ್ಲ ಎನ್ನುವುದು ಗ್ರಾಹಕನ ಲೆಕ್ಕಾಚಾರ. ಅದು ನಿಜವೂ ಹೌದೆನ್ನಿ.ಆದರೆ ಮಹಾನಗರಿ ಬೆಂಗಳೂರಿನ ಪ್ರತಿ ಮನೆ ಕಚೇರಿಯಲ್ಲಿ ಈ ರೀತಿ ನಡೆಯುವುದರಿಂದ ತಿಂಗಳಿಗೆ ಹದಿನೈದು ದಶಲಕ್ಷ ಯುನಿಟ್ ವಿದ್ಯುಚ್ಛಕ್ತಿ ಪೋಲಾಗುತ್ತಿದೆಯಂತೆ.ಈ ವಿದ್ಯುತ್ ಏನಿಲ್ಲವೆಂದರೂ  ಆರು ಕೋಟಿ ರೂಪಾಯಿ ಬೆಲೆಯದ್ದು.ಗೀಸರನ್ನೂ ಸದಾ ಚಾಲೂ ಇಟ್ಟು ಬೇಕೆಂದಾಗ ಬಿಸಿನೀರು ಬಳಸುವ ಚಾಳಿಯಿಂದಂತೂ ಖರ್ಚಾಗುವ ವಿದ್ಯುತ್ ಬಹಳ.ತಿಂಗಳಿಗೆ ಮನೆಯೊಂದರಲ್ಲಿ ಮೂವತ್ತು ಯುನಿಟ್ ವಿದ್ಯುಚ್ಛಕ್ತಿ ಪೋಲಾಗುದಕ್ಕಿದು ದಾರಿಯಾಗುತ್ತದೆ.
ಇಂಟರ್ನೆಟ್ ಎಕ್ಸ್‌ಪ್ಲೋರರ್ 8
ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶದ ಹೊಸ ಪರೀಕ್ಷಾರ್ಥ ಅವತರಣಿಕೆ ಬಿಡುಗಡೆಯಾಗಿದೆ.ಒಂದೇ ಅಂತರ್ಜಾಲ ತಾಣದ ಹಲವು ಟ್ಯಾಬುಗಳನ್ನು ತೆರೆದಾಗ,ಅವನ್ನೆಲ್ಲಾ ಒಂದೇ ಬಣ್ಣದಲ್ಲಿ ತೋರಿಸುವುದು ಹೊಸ ಅವತರಣಿಕೆಯಲ್ಲಿ ಮಾಡಲಾಗಿರುವ ಒಂದು ಬದಲಾವಣೆ. ಇವನ್ನೆಲ್ಲಾ ಒಟ್ಟಿಗೆ ಮುಚ್ಚುವಂತಹ ನಿಯಂತ್ರಣವೂ ಇದರಲ್ಲಿ ಲಭ್ಯ.ಜಾಲಾಡಿದ ಪುಟಗಳನ್ನು ಗುಪ್ತವಾಗಿಡುವ ಆಯ್ಕೆಯನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ ಒದಗಿಸುತ್ತದೆ.ಇದು ಮೊದಲಿನ ಅವತರಣಿಕೆಗಳಿಂತ ಹೆಚ್ಚು ಸ್ಥಿರವಾಗಿರುವುದು ಇದುವರೆಗಿನ ಪರೀಕ್ಷೆಗಳು ತಿಳಿಸಿವೆಯಂತೆ.ಈ ಬ್ರೌಸರಿನಲ್ಲಿ ಅಂತರ್ಜಾಲತಾಣದ ವಿಳಾಸವನ್ನು ಟೈಪಿಸಲಾರಂಭಿಸಿದಾಗ, ಸಲಹೆ ನೀಡುವ ಸೌಲಭ್ಯವನ್ನು ಮೊದಲಿಗಿಂತ ಉತ್ತಮಪಡಿಸಲಾಗಿದೆ.
ಚಿತ್ರಗಳಿಗೆ ಜೀವ ತುಂಬುವ ಫೊಟೋಸಿಂಥ್ ತಂತ್ರಾಂಶ
ನಿಮ್ಮಲ್ಲಿ ಡಿಜಿಟಲ್ ಕ್ಯಾಮರಾ ಇದೆಯೇ? ಪ್ರವಾಸ ಹೋದಾಗ ತಾಜ್‌ಮಹಲಿನಂತಹ ಸ್ಮಾರಕಗಳ ಚಿತ್ರಗಳನ್ನು ವಿವಿಧ ಕೋನಗಳಿಂದ ಕ್ಲಿಕ್ಕಿಸಿದ್ದೀರಾ? ಇವನ್ನು ಬಳಸಿಕೊಂಡು ತಾಜ್‌ಮಹಲಿನ ಮೂರು ಆಯಾಮದ ಚಿತ್ರವನ್ನು ರಚಿಸುವುದೀಗ ಚಿಟಿಕಿ ಹೊಡೆದಷ್ಟು ಸುಲಭ.ಮೈಕ್ರೋಸಾಫ್ಟ್ ಫೊಟೋಸಿಂಥ್ ಅನ್ನುವ ತಂತ್ರಾಂಶವನ್ನು ಇದಕ್ಕೆ ಒದಗಿಸಿದೆ. ಈ ತಂತ್ರಾಂಶ ನಿಮ್ಮ ಚಿತ್ರಗಳನ್ನು ಬಳಸಿಕೊಂಡು ಅದ್ಭುತ ದೃಶ್ಯವನ್ನು ನಿಮ್ಮ ಕಣ್ಣ ಮುಂದೆ ಇಡಬಲ್ಲುದು. ಚಿತ್ರವನ್ನು ವಿಶ್ಲೇಷಿಸಿ,ಅದು ಯಾವ ಕೋನದಲ್ಲಿ ತೆಗೆದಿರಬಹುದು ಎನ್ನುವುದನ್ನು ಲೆಕ್ಕ ಹಾಕಲು ತಂತ್ರಾಂಶಕ್ಕೆ ಗೊತ್ತು. http://photosynth.net/Default.aspx ಈ ತಾಣದಿಂದ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದರೆ ಮುಗಿಯಿತು. ವಿಸ್ತಾ, ವಿಂಡೋಸ್ ಎಕ್ಸ್‌ಪಿ ಕಾರ್ಯನಿರ್ವಹಣಾ ತಂತ್ರಾಂಶಗಳಲ್ಲಿ ಫೊಟೋಸಿಂಥ್ ಕೆಲಸ ಮಾಡುತ್ತದೆ.
ಈಗ ಕಂಪೆನಿಗಳು ತಮ್ಮ ತಂತ್ರಾಂಶಗಳನ್ನು ಜನರ ಬಳಕೆಗೆ ನೀಡಲು ಮುಂದೆ ಬರುತ್ತಿವೆ. ಕಾರು, ವಿಮಾನಗಳ ವಿನ್ಯಾಸಕ್ಕೆ ಬಳಕೆಯಾಗುವ ತಂತ್ರಾಂಶವನ್ನು ಫ್ರಾನ್ಸಿನ ಕಂಪೆನಿಯೊಂದು ಇದೀಗ ಜನಸಾಮಾನ್ಯರಿಗೂ ನೀಡಹತ್ತಿದೆ. ತಂತ್ರಾಂಶ ಬೇಕಿದ್ದರೆ www.3dvia.com ತಾಣದಿಂದ ಇಳಿಸಿಕೊಳ್ಳಬಹುದು. ಉತ್ಪನ್ನಗಳ ವಿನ್ಯಾಸ ಮಾಡಿ,ಅದನ್ನು ಕಂಪ್ಯೂಟರಿನ ತೆರೆಯಲ್ಲಿ ನೋಡಲು ಈ ತಂತ್ರಾಂಶ ಅನುವು ಮಾಡುತ್ತದೆ.
ಹಾಸಿಗೆಯಿಂದ ವ್ಯಾಯಾಮಕ್ಕೆ!
ಆಸ್ಪತ್ರೆಗಳಲ್ಲಿನ ಹಾಸಿಗೆಗಳನ್ನು ಗಮನಿಸಿದ್ದೀರಾ? ಅಶಕ್ತ ರೋಗಿಗಳಿಗೆ ಕುಳಿತುಕೊಳ್ಳಲಾಗುವಂತೆ, ಆ ಹಾಸಿಗೆಗಳನ್ನು ಎತ್ತಲು ಬರುತ್ತದೆ.ಹಾಸಿಗೆ ಹಿಡಿದವರನ್ನು ಎಬ್ಬಿಸಿ, ನಿಲ್ಲಿಸುವುದು ಬಹಳ ತ್ರಾಸದಾಯಕ. ದಢೂತಿ ದೇಹವಿದ್ದರಂತೂ ಅದಿನ್ನೂ ಕಠಿನ. ಅವರು ನಿಲ್ಲುವಂತೆ ಮಾಡಿ ತುಸು ನಡಿಗೆಯಂತಹ ವ್ಯಾಯಾಮವನ್ನಾದರೂ ಮಾಡದಿದ್ದರೆ ಮುಂದೆ ಅವರು ಸಾಮಾನ್ಯ ಜೀವನ ನಡೆಸುವಂತೆ ಮಾಡುವುದಕ್ಕೆ ತಿಂಗಳೇ ಬೇಕಾಗಬಹುದು.ಒಮಾಹಾದ ಕ್ರೈಟನ್ ವಿಶ್ವವಿದ್ಯಾಲಯದ ಸರ್ಜನ್ ಅಭಿವೃದ್ಧಿ ಪಡಿಸಿದ ಟ್ರೆಡ್ ಮಿಲ್ ವ್ಯಾಯಾಮ ಯಂತ್ರ ಬೇಡವಾದಾಗ ಹಾಸಿಗೆಯ ಒಂದು ತುದಿಯಲ್ಲಿರುತ್ತದೆ. ವ್ಯಾಯಾಮ ಮಾಡಿಸಬೇಕಾದಾಗ, ಹಾಸಿಗೆ ಸರಿದು, ಲಂಬ ಸ್ಥಾನಕ್ಕೆ ಬಂದಂತೆ, ಟ್ರೆಡಲ್ ಮಿಲ್ ನೆಲಕ್ಕಿಳಿಯುತ್ತದೆ. ಜತೆಗೆ ರೋಗಿಯು ಹಾಸಿಗೆಯಿಂದ ಟ್ರೆಡ್ ಮಿಲ್‌ಗೆ ಇಳಿಯಲು ಸುಲಭವಾದ ಸ್ಥಿತಿಗೆ ತಲುಪುವಂತೆ ಇದರ ವಿನ್ಯಾಸ ಮಾಡಲಾಗಿದೆ.
*ಅಶೋಕ್‌ಕುಮಾರ್ ಎ

udayavani

ashokworld

ಇ-ಲೋಕ-90
1/9/2008