ವಾಲಿದ ತಲೆಯ ಟೆಡ್ಡಿ ಕರಡಿ

ವಾಲಿದ ತಲೆಯ ಟೆಡ್ಡಿ ಕರಡಿ

ಪುಟ್ಟಣ್ಣ ದಂಪತಿಯ ಗೊಂಬೆ ಮಳಿಗೆಯಲ್ಲಿ ಹತ್ತುಹಲವು ಬಗೆಯ ಬೊಂಬೆಗಳು. ಮಳಿಗೆಯ ಹಿಂಭಾಗದ ಕೋಣೆಯಲ್ಲಿ ಅವರು ಕೈಯಿಂದಲೇ ಗೊಂಬೆಗಳನ್ನು ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ.

ಪುಟ್ಟಣ್ಣನ ಪತ್ನಿ ಪದ್ಮಿನಿ ಹೇಳಿದಳು, “ನಾವಿನ್ನು ಯಾರಿಗಾದರೂ ಗೊಂಬೆ ಮಾಡುವುದನ್ನು ಕಲಿಸಬೇಕು." ಕೆಲವೇ ದಿನಗಳಲ್ಲಿ ಅವರು ತಂಗಣ್ಣ ಎಂಬ ಯುವಕನನ್ನು ಗೊಂಬೆ ಮಾಡುವುದರಲ್ಲಿ ತರಬೇತಿ ಪಡೆಯಲಿಕ್ಕಾಗಿ ನೇಮಿಸಿಕೊಂಡರು. ತಂಗಣ್ಣ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದ. ಮೊದಲನೆಯ ವಾರದಲ್ಲಿ ಅವನು ಟೆಡ್ಡಿ (ಗೊಂಬೆ) ಕರಡಿಗಳನ್ನು ಮಾಡಿದ.

ತಾನು  ಮಾಡಿದ ಮೊದಲ ಟೆಡ್ಡಿ ಕರಡಿಯನ್ನು ಅವನು ಪುಟ್ಟಣ್ಣ ದಂಪತಿಗೆ ತೋರಿಸಿದ. “ಓ, ಮುದ್ದುಮುದ್ದಾಗಿ ಕಾಣಿಸುತ್ತದೆ" ಎಂದಳು ಪದ್ಮಿನಿ. ತಂಗಣ್ಣನಿಗೆ ತನ್ನ ಮೊದಲ ಗೊಂಬೆಯನ್ನು ಪುಟ್ಟಣ್ಣ ದಂಪತಿ ಮೆಚ್ಚಿದ್ದರಿಂದಾಗಿ ಖುಷಿಯಾಯಿತು.

“ತಂಗಣ್ಣ ಮಾಡಿದ ಟೆಡ್ಡಿ ಕರಡಿ ಚಂದವಾಗಿದೆ. ಆದರೆ ತಲೆ ಸ್ವಲ್ಪ ವಾಲಿದೆ" ಎಂದ ಪುಟ್ಟಣ್ಣ. "ಹೌದು. ಆದರೆ ಇದು ತಂಗಣ್ಣನ ಮೊದಲ ಗೊಂಬೆ. ಆದ್ದರಿಂದ ಪರವಾಗಿಲ್ಲ. ಇದನ್ನು ಬೇರೆ ಟೆಡ್ಡಿ ಕರಡಿಗಳ ಜೊತೆ ಷೆಲ್ಪಿನಲ್ಲಿ ಇಡೋಣ" ಎಂದಳು ಪದ್ಮಿನಿ.

ಅವತ್ತು ರಾತ್ರಿ ಷೆಲ್ಪಿನಲ್ಲಿದ್ದ ವಾಲಿದ ತಲೆಯ ಟೆಡ್ದಿ ಕರಡಿ ಅಳಲು ಶುರು ಮಾಡಿತು. ಪುಟ್ಟಣ್ಣ ದಂಪತಿ ತನ್ನ ಬಗ್ಗೆ ಹೇಳಿದ್ದನ್ನು ಇದು ಕೇಳಿಸಿ ಕೊಂಡಿತ್ತು. ಪಕ್ಕದಲ್ಲಿದ್ದ ಕಂದು ಟೆಡ್ಡಿ ಕರಡಿ "ಯಾಕೆ ಅಳುತ್ತಿದ್ದಿ?” ಎಂದು ಕೇಳಿದಾಗ "ನನ್ನ ತಲೆ ಸ್ವಲ್ಪ ವಾಲಿದೆ" ಎಂದು ಉತ್ತರಿಸಿತು. “ಅದರಿಂದಾಗಿ ನಿನಗೆ ನೋವಾಗುತ್ತಿದೆಯೇ?” ಎಂಬ ಕಂದು ಟೆಡ್ದಿ ಕರಡಿಯ ಪ್ರಶ್ನೆಗೆ “ಇಲ್ಲ, ಇಲ್ಲ” ಎಂದಿತು ವಾಲಿದ ತಲೆಯ ಟೆಡ್ಡಿ ಕರಡಿ. "ಮತ್ಯಾಕೆ ಅಳುತ್ತಿದ್ದೀಯಾ?” ಪುನಃ ಕೇಳಿತು ಕಂದು ಕರಡಿ. “ಯಾಕೆಂದರೆ ವಾಲಿದ ತಲೆಯ ಟೆಡ್ಡಿ ಕರಡಿಯನ್ನು ಖರೀದಿಸಲು ಯಾರೂ ಇಷ್ಟ ಪಡುವುದಿಲ್ಲ. ನಾನು ಯಾವತ್ತೂ ಈ ಮಳಿಗೆಯಲ್ಲಿಯೇ ಇರಬೇಕಾಗುತ್ತದೆ; ನನ್ನನ್ನು ಯಾರೂ ಖರೀದಿಸಿ ತಮ್ಮ ಮನೆಗೆ ಒಯ್ದು ಪ್ರೀತಿಸುವುದಿಲ್ಲ” ಎಂದು ತನ್ನ ಗೋಳು ಹೇಳಿತು.

"ಹಾಗೆಲ್ಲ ಚಿಂತೆ ಮಾಡಬೇಡ. ನಮ್ಮೆಲ್ಲರಲ್ಲಿಯೂ ಏನಾದರೊಂದು ಲೋಪ ಇದ್ದೇ ಇರುತ್ತದೆ. ನನಗಂತೂ ನೀನು ಚೆನ್ನಾಗಿ ಕಾಣಿಸುತ್ತಿದ್ದೀಯಾ. ಮುದ್ದಾಗಿ ಮತ್ತು ಚಂದವಾಗಿ ಕಾಣಿಸಲು ನಿನ್ನಿಂದಾದಷ್ಟು ಪ್ರಯತ್ನ ಮಾಡು. ಆಗ ನಿನ್ನನ್ನು ಯಾರಾದರೂ ಬೇಗನೇ ಖರೀದಿಸಿ ಮನೆಗೊಯ್ದು ಪ್ರೀತಿಸುತ್ತಾರೆ” ಎಂದು ಸಮಾಧಾನ ಮಾಡಿತು ಕಂದು ಕರಡಿ. ಇದನ್ನು ಕೇಳಿದ ವಾಲಿದ ತಲೆಯ ಟೆಡ್ಡಿ ಕರಡಿ ಸಂತೋಷದಿಂದ ನಿದ್ದೆಗೆ ಜಾರಿತು.

ಮರುದಿನ ಆ ಗೊಂಬೆ ಮಳಿಗೆಯಲ್ಲಿ ಜನವೋ ಜನ. ಆದರೆ ಯಾರೂ ವಾಲಿದ ತಲೆಯ ಟೆಡ್ಡಿ ಕರಡಿಗೆ ಗಮನ ಕೊಡಲಿಲ್ಲ. ಆಗ ಪುಟ್ಟ ಹುಡುಗನೊಬ್ಬ ಆ ಷೆಲ್ಪಿನತ್ತ ಬಂದ ಮತ್ತು ತಲೆಯೆತ್ತಿ ನೋಡಿ, “ಓ, ಎಷ್ಟು ಚಂದದ ಟೆಡ್ಡಿ ಕರಡಿ! ನನಗೆ ಇದನ್ನು ತೆಗೆಸಿ ಕೊಡುತ್ತೀಯಾ ಅಪ್ಪ?” ಎಂದು ಕೇಳಿದ.

ಆ ಹುಡುಗನ ತಂದೆ ಷೆಲ್ಪಿನತ್ತ ತನ್ನ ಕೈ ಚಾಚಿದಾಗ, ವಾಲಿದ ತಲೆಯ ಟೆಡ್ದಿ ಕರಡಿಗೆ ಖುಷಿಯೋ ಖುಷಿ. ಆದರೆ ತಂದೆ ವಾಲಿದ ತಲೆಯ ಟೆಡ್ದಿ ಕರಡಿಯ ಬದಲಾಗಿ ಕಂದು ಕರಡಿ ಗೊಂಬೆಯನ್ನು ಎತ್ತಿ, ತನ್ನ ಮಗನಿಗೆ ಕೊಟ್ಟ. ವಾಲಿದ ತಲೆಯ ಟೆಡ್ದಿ ಕರಡಿಗೆ ಬಹಳ ದುಃಖವಾಯಿತು. ಯಾರೂ ಅದನ್ನು ಖರೀದಿಸಲಿಲ್ಲ. ಬೇರೆ ಗೊಂಬೆಗಳನ್ನೆಲ್ಲ ಗ್ರಾಹಕರು ಖರೀದಿಸಿ ಮಳಿಗೆಯಿಂದ ಒಯ್ಯುತ್ತಿದ್ದರು. ಆದರೆ ವಾಲಿದ ತಲೆಯ ಟೆಡ್ದಿ ಕರಡಿ ಮಳಿಗೆಯಲ್ಲಿಯೇ ಉಳಿದು ಧೂಳು ತಿನ್ನುತ್ತಿತ್ತು.

ಪುಟ್ಟಣ್ಣ ದಂಪತಿಗೆ ಪುಟ್ಟಿ ಎಂಬ ಮೊಮ್ಮಗಳಿದ್ದಳು. ಅವಳು ಆಗಾಗ ಗೊಂಬೆ ಮಳಿಗೆಗೆ ಬಂದು ಗೊಂಬೆಗಳೊಂದಿಗೆ ಆಟವಾಡುತ್ತಿದ್ದಳು. ಎಲ್ಲ ಗೊಂಬೆಗಳಿಗೂ ಅವಳೆಂದರೆ ಅಚ್ಚುಮೆಚ್ಚು ಯಾಕೆಂದರೆ ಅವಳು ಮೃದು ಮನಸ್ಸಿನವಳು. ಆ ದಿನ ಅವಳು ತನ್ನ ಹುಟ್ಟುಹಬ್ಬದಂದೇ ಗೊಂಬೆ ಮಳಿಗೆಗೆ ಬಂದಳು. ಆಗ ಪುಟ್ಟಣ್ಣ ದಂಪತಿ, "ನಿನಗೆ ಇಷ್ಟವಾದ ಒಂದು ಗೊಂಬೆ ತಗೋ. ಅದು ನಮ್ಮಿಂದ ನಿನಗೆ ಹುಟ್ಟುಹಬ್ಬದ ಉಡುಗೊರೆ” ಎಂದರು.
ಇದನ್ನು ಕೇಳಿಸಿಕೊಂಡ ವಾಲಿದ ತಲೆಯ ಟೆಡ್ದಿ ಕರಡಿ, “ಇಲ್ಲಿ ಇಷ್ಟೆಲ್ಲ ಚಂದದ ಗೊಂಬೆಗಳಿರುವಾಗ ಅವಳು ನನ್ನನ್ನಂತೂ ಎತ್ತಿಕೊಳ್ಳುವುದಿಲ್ಲ” ಎಂದು ಚಿಂತೆ ಮಾಡಿತು. ಆದರೆ ವಾಲಿದ ತಲೆಯ ಟೆಡ್ದಿ ಕರಡಿಗೆ ಅಚ್ಚರಿಯಾಯಿತು. ಪುಟ್ಟಿ ತಲೆಯೆತ್ತಿ ನೋಡಿ, “ನನಗೆ ಆ ವಾಲಿದ ತಲೆಯ ಟೆಡ್ದಿ ಕರಡಿಯೇ ಬೇಕು. ಯಾಕೆಂದರೆ ಇಂತಹ ಟೆಡ್ದಿ ಕರಡಿ ಯಾರ ಹತ್ತಿರವೂ ಇರುವುದಿಲ್ಲ” ಎಂದಳು.

ಪುಟ್ಟಣ್ಣ ಮುಗುಳ್ನಗುತ್ತಾ ವಾಲಿದ ತಲೆಯ ಟೆಡ್ಡಿ ಕರಡಿಯನ್ನು ಷೆಲ್ಪಿನಿಂದ ತೆಗೆದು ಪುಟ್ಟಿಗೆ ಕೊಟ್ಟರು. ಪುಟ್ಟಿ ಅದನ್ನು ತಬ್ಬಿಕೊಂಡು ಮುದ್ದಿಸಿದಳು. ವಾಲಿದ ತಲೆಯ ಟೆಡ್ಡಿ ಕರಡಿಗೆ ಎಷ್ಟು ಸಂತೋಷವಾಯಿತು ಎಂದರೆ ಅದಕ್ಕೆ ಅಳುವೇ ಬಂತು. ಪುಟ್ಟಿ ಅದನ್ನು ತನ್ನ ಮನೆಗೆ ಒಯ್ದಳು ಮತ್ತು ಅದರ ಕುತ್ತಿಗೆಗೆ ಒಂದು ಚಂದದ ಕೆಂಪು ರಿಬ್ಬನನ್ನು ಕಟ್ಟಿದಳು - ತನ್ನ ಹುಟ್ಟುಹಬ್ಬದ ಸಂತೋಷಕೂಟಕ್ಕೆ ಒಯ್ಯಲಿಕ್ಕಾಗಿ. ವಾಲಿದ ತಲೆಯ ಟೆಡ್ದಿ ಕರಡಿಗೆ ಬಹಳ ಹೆಮ್ಮೆ ಅನಿಸಿತು.

ಸ್ವಲ್ಪ ಹೊತ್ತಿನಲ್ಲಿ ಅವಳ ಮನೆಗೆ ಇತರ ಮಕ್ಕಳು ತಮ್ಮತಮ್ಮ ಟೆಡ್ಡಿ ಕರಡಿಗಳೊಂದಿಗೆ ಬಂದರು. ಅಗೋ, ಅದೇ ಪುಟ್ಟ ಹುಡುಗನೊಂದಿಗೆ ಕಂದು ಕರಡಿಯೂ ಅಲ್ಲಿಗೆ ಬಂತು! ವಾಲಿದ ತಲೆಯ ಟೆಡ್ದಿ ಕರಡಿಗೆ ಇದನ್ನು ನಂಬಲಿಕ್ಕೇ ಆಗಲಿಲ್ಲ.

ವಾಲಿದ ತಲೆಯ ಟೆಡ್ಡಿ ಕರಡಿಯನ್ನು ಅಪ್ಪಿಕೊಳ್ಳುತ್ತಾ ಪುಟ್ಟಿ ಹೇಳಿದಳು,“ನಾವೀಗ ಟೆಡ್ಡಿ ಕರಡಿಗಳೊಂದಿಗೆ ನನ್ನ ಹುಟ್ಟುಹಬ್ಬದ ಸಂತೋಷಕೂಟ ಆಚರಿಸಲಿದ್ದೇವೆ.” ಅನಂತರ ಎಲ್ಲ ಮಕ್ಕಳೂ ಅವಳ ಮನೆಯ ಅಂಗಳದಲ್ಲಿ ಒಟ್ಟು ಸೇರಿದರು. ಅವರೆಲ್ಲರೂ ಆಟವಾಡಿದರು. ಹರುಷದಿಂದ ಕೈಕೈ ಹಿಡಿದು ಕುಣಿದಾಡಿದರು.

ವಾಲಿದ ತಲೆಯ ಟೆಡ್ಡಿ ಕರಡಿಗಂತೂ ಬಹಳಬಹಳ ಸಂತೋಷವಾಯಿತು. ಅದಕ್ಕೆ ಪ್ರೀತಿಯ ಮನೆಯೊಂದು ಸಿಕ್ಕಿತ್ತು, ಹಳೆಯ ಗೆಳೆಯನೂ ಸಿಕ್ಕಿದ ಮತ್ತು ಹಲವಾರು ಹೊಸ ಗೆಳೆಯರೂ ಸಿಕ್ಕಿದರು.

ಕಂದು ಕರಡಿ "ನಿನಗೆ ನಾನು ಚಿಂತೆ ಮಾಡಬೇಡ ಎಂದಿದ್ದೆ” ಎಂದು ಜ್ನಾಪಿಸಿದಾಗ, ವಾಲಿದ ತಲೆಯ ಟೆಡ್ಡಿ ಕರಡಿ "ಹೌದು, ಹೌದು. ಇನ್ನೆಂದೂ ನಾನು ಚಿಂತೆ ಮಾಡೋದಿಲ್ಲ" ಎನ್ನುತ್ತಾ ಖುಷಿಯಿಂದ ತಲೆಯಾಡಿಸಿತು.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ