ವಾಲ್ಮೀಕಿ ಜಯಂತಿ : ಈ ದಿನ ಯಾರನ್ನು ಸ್ಮರಿಸೋಣ…? (ಭಾಗ 1)
ರಾಮ - ಲಕ್ಷ್ಮಣ - ಭರತ - ಶತ್ರುಜ್ಞ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ....... ಹೀಗೆ ಸಾಗುವ ಪಾತ್ರಗಳೋ, ಅಥವಾ ರಾಮಾಯಣವೆಂಬ ಬೃಹತ್ ಗ್ರಂಥವನ್ನೋ ಅಥವಾ ಅದರ ಕರ್ತೃ ವಾಲ್ಮೀಕಿಯನ್ನೋ ಅಥವಾ ವಾಲ್ಮೀಕಿಯ ನಾಯಕ ಜನಾಂಗವನ್ನೋ ಅಥವಾ ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ…?
ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ ಭರತ ಶತೃಘ್ಞರಂತ ಆದರ್ಶ ಸಹೋದರರನ್ನು, ರಾವಣನೆಂಬ ಪಾತ್ರವನ್ನು ದುಷ್ಟತನದ ಸಂಕೇತವಾಗಿ ಬಳಸಿ, ಹನುಮಂತನೆಂಬ ಪಟ್ಟ ಶಿಷ್ಯನಂತ ನಂಬುಗೆಯ ವ್ಯಕ್ತಿತ್ವವನ್ನು ಮತ್ತೂ ಹಲವಾರು ಪಾತ್ರಗಳನ್ನು ತುಂಬಾ ಸೂಕ್ಷ್ಮವಾಗಿ ಸೃಷ್ಟಿಸಿರುತ್ತಾರೆ.
ಕೇವಲ ಪಾತ್ರಗಳ ಸೃಷ್ಟಿ ಮಾತ್ರವಲ್ಲದೆ ಆಗಿನ ಕಾಲದ ವ್ಯವಸ್ಥೆಯ ಎಲ್ಲಾ ಮಗ್ಗುಲುಗಳನ್ನು ಮತ್ತು ನಂಬಿಕೆಗಳನ್ನು, ಆಚರಣೆಗಳನ್ನು, ಅಗಸನ ಮಾತು, ರಾಜ ಪುರೋಹಿತರ ಸಲಹೆ, ಶಂಬೂಕನ ಹತ್ಯೆ ಮುಂತಾದ ಅನೇಕ ಅಂಶಗಳನ್ನು ಮತ್ತು ಬಹುಮುಖ್ಯವಾಗಿ ಆಗಿನ ಕಾಲದ ಭೌಗೋಳಿಕ ಪ್ರದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಇದ್ದನ್ನೆಲ್ಲಾ ಗಮನಿಸಿದಾಗ ನಾವು ನಿಜವಾಗಲೂ ಸ್ಮರಿಸಬೇಕಾಗಿರುವುದು…
ವಾಲ್ಮೀಕಿ ಎಂಬ ವ್ಯಕ್ತಿಯನ್ನು, ಮತ್ತು ಆತನ ಅತ್ಯದ್ಭುತ ಕ್ರಿಯಾತ್ಮಕ ಬುದ್ದಿ ಶಕ್ತಿಯನ್ನು, ಶತಶತಮಾನಗಳು ಕಳೆದರು ಇಂದಿಗೂ ಹೊಸ ಹೊಸ ಹೊಳಹುಗಳನ್ನು ನೀಡುತ್ತಿರುವ ಆ ಮಹಾನ್ ಗ್ರಂಥವನ್ನು ಸೃಷ್ಟಿಸಿದ ಆತನ ಚಿಂತನಾ ಪ್ರಜ್ಞೆಯನ್ನು....
ಆ ಕಾರಣಕ್ಕಾಗಿ ವಾಲ್ಮೀಕಿಯನ್ನು ನೆನೆಯುತ್ತಾ… ಎಲ್ಲಾ ರೀತಿಯ ಕಲೆಗಾರರಿಗೆ ವಾಲ್ಮೀಕಿ ಕ್ರಿಯಾತ್ಮಕತೆಯಲ್ಲಿ ಮುಗಿಯದ ಅಕ್ಷಯ ಪಾತ್ರೆಯಂತ ಸ್ಪೂರ್ತಿಯ ಚಿಲುಮೆಯಾಗಲಿ ಎಂದು ಆಶಿಸುತ್ತಾ… ಹಾಗೆಯೇ ಆತನು ಸೃಷ್ಠಿಸಿದ ಶ್ರೀರಾಮರ ಕುರಿತು ಒಂದಷ್ಟು… ಶ್ರೀರಾಮ...
ಮಹಾತ್ಮ ಗಾಂಧಿಯವರ ಶ್ರೀರಾಮ ಮತ್ತು ರಾಮರಾಜ್ಯ, ಬಾಬಾ ಸಾಹೇಬರ ಶ್ರೀರಾಮ ಮತ್ತು ಭೀಮ ರಾಜ್ಯ, ವಾಲ್ಮೀಕಿಯವರ ರಾಮಾಯಣದ ಶ್ರೀರಾಮ, ಸ್ವಾಮಿ ವಿವೇಕಾನಂದರ ಭಾರತದ ಸಾಂಸ್ಕೃತಿಕ ಶ್ರೀರಾಮ, ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿಯವರ ಪೌರಾಣಿಕ ಶ್ರೀರಾಮ, ರಾಜಕೀಯ ಪಕ್ಷಗಳ ಶ್ರೀರಾಮ,
ಮುಸ್ಲಿಮರ ಶ್ರೀರಾಮ, (ಅಯೋಧ್ಯೆ ಬಾಬರಿ ಮಸೀದಿ ಧ್ವಂಸದ ನಂತರ ಅವರಲ್ಲಿ ರಾಮರ ಬಗೆಗಿನ ಅಭಿಪ್ರಾಯ ) ಅಯೋಧ್ಯೆಯ ಈಗಿನ ಶ್ರೀರಾಮ, ಜನಸಾಮಾನ್ಯರ ಮನಸ್ಸಿನ ಶ್ರೀರಾಮ. ಈ ಶ್ರೀರಾಮ ಐತಿಹಾಸಿಕ ಪುರುಷರೇ ಅಥವಾ ಪೌರಾಣಿಕ ಪಾತ್ರವೇ ? ರಾಮಾಯಣ ಐತಿಹಾಸಿಕ ಎನ್ನಲು ಆ ಬೃಹತ್ ಗ್ರಂಥ ಇತಿಹಾಸದ ಮಾನದಂಡಗಳನ್ನು ಪೂರೈಸುತ್ತದೆಯೇ ?
ಈ ಪ್ರಶ್ನೆಗೆ ಉತ್ತರ ಸುಲಭವಾದರು ಇಂದಿನ ಮನಸ್ಥಿತಿಯಲ್ಲಿ ತುಂಬಾ ಸಂಕೀರ್ಣ ಸಹ ಆಗಿದೆ. ಮನಸ್ಸನ್ನು ತುಂಬಾ ಮುಕ್ತವಾಗಿ ಇಟ್ಟುಕೊಂಡು ಸತ್ಯದ ಹುಡುಕಾಟ ಮಾತ್ರ ಆದ್ಯತೆಯಾಗಿದ್ದರೆ, ಎಲ್ಲಾ ಭಾವ ಭಕ್ತಿ ಭಯ ಪೂರ್ವಾಗ್ರಹಗಳನ್ನು ಮೀರಿದರೆ ಉತ್ತರ ಸುಲಭವಾಗಬಹುದು. ಕನಿಷ್ಠ ಭಾರತದ ನೆಲದಲ್ಲಿ ಅದರ ಬಗ್ಗೆ ವಿಮರ್ಶಿಸುವ ಸ್ವಾತಂತ್ರ್ಯ ಇರುವುದು ಅತ್ಯಂತ ಹೆಮ್ಮೆಯ ವಿಷಯ. ಶ್ರೀರಾಮ ಎಂದರೆ ಯಾರು ?
ರಾಮ ಒಬ್ಬ ದೇವರು, ಅವರು ಐತಿಹಾಸಿಕ ವ್ಯಕ್ತಿ. ದಶರಥ - ಕೌಸಲ್ಯರ ಹಿರಿಯ ಪುತ್ರ. ಅಯೋಧ್ಯೆಯಲ್ಲಿ ಜನಿಸಿದರು. ಅವರ ವ್ಯಕ್ತಿತ್ವ ಮತ್ತು ಆಡಳಿತವೇ ಒಂದು ಆದರ್ಶ. ಆತ ಒಬ್ಬ ಮರ್ಯಾದಾ ಪುರುಷೋತ್ತಮ. ದೇಶ ಕಂಡ ಮಹಾನ್ ಚಿಂತಕ ಮಹಾತ್ಮ ಗಾಂಧಿ ಸಹ ರಾಮ ರಾಜ್ಯದ ಕನಸು ಕಂಡವರು. ಆದ್ದರಿಂದ. ರಾಮನ ಹುಟ್ಟಿದ ಊರಿನಲ್ಲಿ ರಾಮ ಮಂದಿರವನ್ನು ಬಾಬರ್ ಉರುಳಿಸಿ ಕಟ್ಟಿಸಿದ್ದ ಮಸೀದಿಯನ್ನು ಮತ್ತೆ ಉರುಳಿಸಿ ಈಗ ಭವ್ಯ ರಾಮ ಮಂದಿರ ನಿರ್ಮಿಸಿರುವುದು ಸ್ವಾಭಿಮಾನಿ ಹಿಂದೂಗಳ ಹೆಮ್ಮೆ. ಅಲ್ಲಿ ಸ್ಥಾಪಿತವಾಗಿರುವ ಮಂದಿರವನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂದು ಸಂತೋಷದಿಂದ ಪಡುತ್ತಿರುವ ಎಲ್ಲರಿಗೂ ಅಭಿನಂದನೆಗಳು ಮತ್ತು ಆ ಸ್ವಾತಂತ್ರ್ಯ ನಿಮಗಿದೆ. ನಿಮ್ಮ ಭಕ್ತಿ ನಂಬಿಕೆ ಭಾವನೆಗಳು ನಿಮ್ಮ ಸ್ವಂತ ಚಿಂತನೆಯಿಂದ ರೂಪಗೊಂಡಿರುತ್ತದೆ. ಅದು ನಿಮ್ಮ ಅಭಿಪ್ರಾಯ. ಅದನ್ನು ಗೌರವಿಸುತ್ತಾ...
ಅದರ ಜೊತೆಗೆ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ. ವಾಲ್ಮೀಕಿ ಎಂಬ ಬರಹಗಾರ ಅಂದಿನ ಸಾಮಾಜಿಕ ವ್ಯವಸ್ಥೆ ಪ್ರತಿಬಿಂಬಿಸುವ ಕಲ್ಪನಾ ಲೋಕವನ್ನು ಅಕ್ಷರಗಳಲ್ಲಿ ಮೂಡಿಸಿದ್ದಾರೆ. ಅದನ್ನೇ ದೇವರೆಂದು ಭ್ರಮಿಸಲಾಗಿದೆ. ಆ ಭ್ರಮಾಲೋಕದ ನಂಬಿಕೆಯನ್ನೇ ರಾಜಕೀಯಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷ ಆಡಳಿತ ನಡೆಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅದರ ಭವ್ಯತೆಯ ವಿಜೃಂಭಣೆ ಬಗ್ಗೆ ಪ್ರಶ್ನೆ ಮಾಡುವವರನ್ನೂ ಪ್ರಶ್ನಿಸಲು ಬಿಡಿ.
ಸನಾತನ ಧರ್ಮ ಇತರ ಧರ್ಮಗಳಂತೆ ತನ್ನದೇ ಶ್ರೇಷ್ಠ ಎಂದು ಹೇಳುವುದಿಲ್ಲ. ಪ್ರಶ್ನಿಸುವುದನ್ನು ಪ್ರೋತ್ಸಾಹಿಸುತ್ತದೆ. ಹಿಂದೂ ಧರ್ಮದ ಮೂಲ ವೇದ ಉಪನಿಷತ್ತುಗಳು ಸೃಷ್ಟಿಯಾಗಿರುವುದೇ ಪ್ರಶ್ನೆಗಳ ಮೂಲಕವೇ, ಭಗವದ್ಗೀತೆ ರೂಪ ತಳೆದಿರುವುದೇ ಪ್ರಶ್ನೆಗಳ ಮೂಲಕ, ಬೌದ್ಧ, ಜೈನ, ಸಿಖ್ ಧರ್ಮಗಳು ಜನ್ಮ ತಳೆದಿರುವುದೇ ಪ್ರಶ್ನೆಗಳ ಮುಖಾಂತರ, ಬಸವ, ವಿವೇಕಾನಂದ, ರಮಣ ಮಹರ್ಷಿ, ಗಾಂಧಿ, ಅಂಬೇಡ್ಕರ್, ಲೋಹಿಯಾ ಎಲ್ಲರೂ ಪ್ರಶ್ನಿಸುವ ಮುಖಾಂತರವೇ ತಮ್ಮ ಚಿಂತನೆಗಳನ್ನು ಬೆಳೆಸಿಕೊಂಡವರು....
ಪ್ರಶ್ನೆಗಳೇ ಒಂದು ಜೀವಂತ ಸಮಾಜದ, ಅಭಿವೃದ್ಧಿ ದೇಶದ ಮಾನದಂಡಗಳು. ರಾಮಾಯಣ ಎಂಬುದು ವಾಲ್ಮೀಕಿ ಎಂಬ ಐತಿಹಾಸಿಕ ವ್ಯಕ್ತಿ ಮತ್ತು ವಿಶ್ವ ಮಟ್ಟದ ಪ್ರಖ್ಯಾತ ಸಾಹಿತಿ ಬರೆದ ಒಂದು ಬೃಹತ್ ಗ್ರಂಥ. ಅಂದಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇಲ್ಲಿನ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಭೌಗೋಳಿಕ ಸನ್ನಿವೇಶಗಳನ್ನು ತನ್ನ ಜ್ಞಾನದ ಮಿತಿಯಲ್ಲಿ ಗ್ರಹಿಸಿ ರಚಿಸಿದ ಸಾಹಿತ್ಯಿಕವಾಗಿ ಅತ್ಯಂತ ಪ್ರಭಾವಶಾಲಿ ಕೃತಿ. ಶ್ರೀರಾಮನೆಂಬ ಪಾತ್ರವನ್ನು ಮುಖ್ಯವಾಗಿ ಚಿತ್ರಿಸಿ ಆತನನ್ನು ಪ್ರಭುತ್ವದ ಮತ್ತು ಕೌಟುಂಬಿಕ ಮೌಲ್ಯಗಳ ಆದರ್ಶ ಪುರುಷನನ್ನಾಗಿ ಚಿತ್ರಿಸಿದರು.
ವಾಲ್ಮೀಕಿಯವರ ಮೂಲ ಉದ್ದೇಶವೇ ರಾಮನನ್ನು ಸನಾತನ ಧರ್ಮದ ಬಹುಮುಖ್ಯ ನಂಬಿಕೆಯಾದ ಏಕ ಪತ್ನಿತ್ವ ಮತ್ತು ಸರ್ವಗುಣ ಸಂಪನ್ನ ಎಂದು ಚಿತ್ರಿಸಿರುವ ಕಾರಣ ಇದು ಒಬ್ಬ ಬರಹಗಾರನ ಕಲ್ಪನೆಯಲ್ಲಿ ಮೂಡಿದ ಪಾತ್ರವಾದ್ದರಿಂದ ಅದರಲ್ಲಿ ನಾವು ಏನೇನೋ ಹುಡುಕುವ ಬದಲು ಇಷ್ಟವಾದರೆ ಓದಿ ಅಳವಡಿಸಿಕೊಳ್ಳೋಣ, ಇಲ್ಲದಿದ್ದರೆ ನಿರ್ಲಕ್ಷಿಸೋಣ ಅಥವಾ ಶಕ್ತಿ ಇದ್ದರೆ ಬುದ್ದಿ ಇದ್ದರೆ ಸಾಮರ್ಥ್ಯವಿದ್ದರೆ ಅದಕ್ಕಿಂತ ಉತ್ತಮ ಕೃತಿ ರಚಿಸೋಣ. ತೀರಾ ಅಸಂಭಧ್ಧ ಹೇಳಿಕೆ ಅಥವಾ ಅನರ್ಥ ನೀಡಬಾರದು.
ಒಂದು ಕೃತಿಯನ್ನು ವಿಮರ್ಶಿಸಿ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅವರಿಗೆ ರಾಮ ಕೆಟ್ಟದಾಗಿ ಕಂಡರೆ ಅದು ಅವರ ಗ್ರಹಿಕೆ. ಒಳ್ಳೆಯದಾಗಿ ಕಂಡರೆ ಅದು ನಿಮ್ಮ ಗ್ರಹಿಕೆ. ಅದಕ್ಕಿಂತ ಹೆಚ್ಚಿನ ಚರ್ಚೆ ಮತ್ತು ಕೂಗಾಟ ಅನಾವಶ್ಯಕವೆನಿಸುತ್ತದೆ. ನಿಮ್ಮ ರಾಮ ನಿಮಗೆ ಆದರ್ಶ ಎಂಬ ಬಲವಾದ ನಂಬಿಕೆ ನಿಮ್ಮದಾದಾರೆ ಅದನ್ನು ಹೋಗಲಾಡಿಸಲು ಮೂರನೆಯ ವ್ಯಕ್ತಿಗೆ ಹೇಗೆ ಸಾಧ್ಯ. ಹಾಗೇ ದೇಶದ್ರೋಹಿ, ಧರ್ಮದ್ರೋಹಿ ಎಂಬುದೂ ಅಷ್ಟೇ ಮೂರ್ಖತನವಾಗುತ್ತದೆ.
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ