ವಾಸ್ತವ

ವಾಸ್ತವ

ಬರಹ

ಮುಂಜಾನೆ ಮಿಂದು
ದೇವರಿಗೆ ನಮಿಸುವಾಗ
ಅಮ್ಮ ಹೇಳುತ್ತಿದ್ದಳಾಗ,
ಕೈ ಮುಗಿದು ಕಣ್ಮುಚ್ಚಿ ಬೇಡಿದರೆ
ಈಶ ಒಲಿವನೆಂದು..

ಸಂಧ್ಯಾವಂದನೆ ವೇಳೆ
ದೀಪ ಉರಿಸಿ ನನ್ನ ಅಜ್ಜಿ
ರಾಮನಾಮ ಜಪಿಸುತಿರಲು
ಕಣ್ಣೆರಡು ಮುಚ್ಚಿ ನಾನೂ
ದನಿಗೂಡಿಸುತ್ತಿದ್ದೆ..

ಇರುಳ ಬಾನಂಗಳದಲ್ಲಿ
ಕೋಟಿ ತಾರೆಗಳು ಮಿನುಗುವಾಗ
ನಿದ್ದೆ ಬರುತ್ತಿಲ್ಲ ತಾತ,
ಕತೆ ಹೇಳೆಂದು ಸತಾಯಿಸಿದಾಗ
ಸುಮ್ಮನೆ ಕಣ್ಣು ಮುಚ್ಚಿರು
ನಿದ್ದೆ ತಂತಾನೆ ಬರುವುದು
ಎಂದು ಅಪ್ಪ ಗದರಿಸಿದಾಗ
ಕಣ್ಣೆರಡು ಮುಚ್ಚಿ ಮಗ್ಗಲೆಳೆದು
ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ

ಬಾಲ್ಯವೆಷ್ಟು ಮಧುರವಾಗಿತ್ತು!
ಕಣ್ತೆರೆದರೆ ಸುಂದರ ಲೋಕ
ಮುಚ್ಚಿದರೆ ಸ್ವಪ್ನ ಲೋಕಕ್ಕೆ
ಪಯಣ ಬೆಳೆಸುತಲಿದ್ದೆ

ಕಾಲ ಚಕ್ರವು ತಿರುಗುತಿರಲು
ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು,
ಸುತ್ತ ಕಣ್ಣು ಹಾಯಿಸಿದರೆ...
ಹಗೆ ಹೊಗೆಯಾಡುವ ಜಗದಲ್ಲಿ
ನಗೆ ಮಾಸಿದ ಜೋಲು ಮುಖ!
ಜೀವ ತೆಗೆಯಲು ಕತ್ತಿ ಮಸೆಯುವ ಜನ,
ಇನ್ನೊಂದೆಡೆ,
ಜೀವಕ್ಕಾಗಿ ಬೇಡುವ ಮನ
ಹಣದಾಸೆಗಾಗಿ ಜೀವ ಹಿಂಡುವವರು,
ಬೇಡುವವರು, ಮುಂದೆ ಕೈ ಚಾಚಿ

ಜಗದಳುವಿನ ಮುಂದೆ
ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು
ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ
ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ
ದನಿಯೆತ್ತಲು ಚಡಪಡಿಸಿ ಸೋತಾಗ
ಎರಡು ಹನಿ ಕಣ್ಣೀರೆರೆದು
ಮತ್ತೆ,
ನನಗಿದರ ಅರಿವೇ ಇಲ್ಲದವನಂತೆ
ಕಣ್ಣು ಮುಚ್ಚಿಕೊಳ್ಳುತ್ತೇನೆ!