ವಾಸ್ತವ

ವಾಸ್ತವ

ಬರಹ

ರಮ್ಯ:
ಕನ್ನಡಿಯ ಮುಂದೆ ನಿಂತು ಒಪ್ಪವಾಗಿದ್ದ ಚೂಡಿದಾರನ್ನು ಮತ್ತೊಮ್ಮೆ ಒಪ್ಪ ಮಾಡಿಕೊಂಡು ಸಣ್ಣಗೆ ತಿಳಿ ನಗೆ ಸೂಸಿದೆ. ’ತಾನು ಸುಂದರಿ’ ಎಂದು ಕಳೆದ ಹತ್ತು ನಿಮಿಷದಲ್ಲಿ ಹತ್ತನೇ ಬಾರಿ ಹೇಳಿಕೊಂಡೆ. ತಾನು ಚೆಂದವಾಗಿ ಅಲಂಕರಿಸಿಕೊಳ್ಳದಿದ್ದರೂ ಹುಡುಗರು ತನ್ನ ಹಿಂದೆ ಬೀಳುವುದು ನಿಜ. ಆದರೂ ಕನ್ನಡಿಗೇ ಬೇಸರ ತರಿಸುವಷ್ಟು ಹೊತ್ತು ತಾನು ಅದರ ಮುಂದೆ ನಿಲ್ಲುವುದಾದರೂ ಏಕೆ?

ಮೋಹನನಿಗಾಗಿ ..... ಕೇವಲ ಮೋಹನನ ಕುಡಿ ನೋಟಕ್ಕಾಗಿ........ ಅವನು ತನ್ನತ್ತ ನೋಡಿ ಕಣ್ಣಲ್ಲೇ ಸೂಸುವ ಮೆಚ್ಚುಗೆಗಾಗಿ....... ಬಾಯಲ್ಲಿ ಹೇಳದಿದ್ದರೂ ಅವನ ಮನದಲ್ಲಿ ನನ್ನ ಬಗ್ಗೆ ಮೆಚ್ಚುಗೆ ಇದೆ ಎಂಬುದನು ನಾ ಬಲ್ಲೆ.

ಒಮ್ಮೊಮ್ಮೆ ಅವನು ನನ್ನನ್ನು ನೋಡಿದರೂ, ನೋಡದವನಂತೆ ಇರುತ್ತಾನೆ. ಮುಖದ ಹಿಂದಿನ ಭಾವ ಅರಿಯಲು ಸಾಧ್ಯವಾಗುವುದಿಲ್ಲ. ಮಾತು ಬಹಳ ಕಡಿಮೆ. ಬುದ್ದಿವಂತರು ಮಾತು ಕಡಿಮೆ ಆಡುತ್ತಾರಂತೆ. ಮೋಹನ ಬುದ್ದಿವಂತ ಎಂಬುದರಲ್ಲಿ ಸಂದೇಹವೇ ಇಲ್ಲ, ಇಲ್ಲದಿದ್ದರೆ ಕಾಲೇಜಿನಲ್ಲಿ ಪಾಠ ಮಾಡಲು ಸಾಧ್ಯವೇ ? ಅದು ಸರಿ, ನಾನು ಅವನ ಹಿಂದೆ ಬಿದ್ದಿರುವುದು ಅವನಿಗೆ ಗೊತ್ತಿದೆಯೇ ? ಅರಿತೂ ಅರಿಯದವನ ಹಾಗೆ ನಾಟಕವಾಡುತ್ತಿದ್ದಾನೆಯೇ ?

ಮೋಹನನ ರೂಪ ಮನದಲ್ಲಿ ಮೂಡಿತು. ಒಪ್ಪವಾಗಿ ಜೀನ್ಸ್ ಪ್ಯಾಂಟು, ಬಿಳಿಯ ಜುಬ್ಬ, ಕಣ್ಣಿಗೆ ಕನ್ನಡಕ, ತಿದ್ದಿ ತೀಡಿದ ತಲೆಗೂದಲು, ಥೆಳ್ಳಗೆ ಗಡ್ಡ, ಅಲೋಚನಾಯುಕ್ತ ಕಣ್ಣುಗಳು, ಗಂಭೀರ ವದನ. ಕ್ಲಾಸಿನೊಳಗೆ ಬಂದು, ಮೇಜಿನ ಮೇಲೆ ಪುಸ್ತಕಗಳನ್ನು ಇಟ್ಟು, ತಲೆ ಎತ್ತಿ ಕ್ಲಾಸಿನತ್ತ ಮುಖ ಮಾಡಿ, ಗಂಭೀರ ದನಿಯಿಂದ ಹೊರಡಿಸುವ ಮೊದಲ ವಾಕ್ಯ "ನಿಮ್ಮಲ್ಲಿ ಯಾರಿಗೆ ನನ್ನ ಪಾಠ ಬೇಡವೋ, ಅವರು ಎದ್ದು ಹೋಗಬಹುದು" ಎಂದು.

ಹೆಸರು ಮೋಹನ ಆದರೂ ಹೊರಡುವ ಸ್ವರ ಮಾತ್ರ ಗುಹೆಯಿಂದ ಹೊರಬರುವ ಶಬ್ದದಂತೆ ಇರುವುದರಿಂದ, ಎದ್ದು ಹೋಗಲು ಇದುವರೆಗೂ ಯಾರೂ ಧೈರ್ಯ ಮಾಡಿಲ್ಲ. ಅಷ್ಟೇ ಸಾಮರ್ಥ್ಯ ಪಾಠ ಮಾಡುವುದರಲ್ಲೂ ಇರುತ್ತಿತ್ತು. ವಿದ್ಯಾರ್ಥಿಗಳು ಸಮ್ಮೋಹನಕ್ಕೆ ಒಳಗಾದವರಂತೆ ಕೂತು ಪಾಠ ಕೇಳುತ್ತಿದ್ದರು. ಇಂತಹ ವಿಶೇಷ ವ್ಯಕ್ತಿತ್ವವೇ ನನ್ನನ್ನು ಮರುಳು ಮಾಡಿದ್ದು.

ಮೋಹನ ಅಟೆಂಡೆನ್ಸ್ ತೆಗೆದುಕೊಳ್ಳುವ ಗೋಜಿಗೇ ಹೋಗುತ್ತಿರಲಿಲ್ಲ. ಪ್ರಿನ್ಸಿಪಾಲರಿಗೂ ಮೋಹನನಿಗೂ ಒಮ್ಮೆ ಈ ವಿಷಯಕ್ಕೆ ಚಕಾಮಕಿಯಾಗಿತ್ತಂತೆ. ಆಗ ಒಮ್ಮೆ ಕ್ಲಾಸಿಗೆ ಬಂದವನೇ, ಯಥಾಪ್ರಕಾರ ತನ್ನ ಮೊದಲ ವಾಕ್ಯವನ್ನು ನುಡಿದು, ನಿಮ್ಮಲ್ಲಿ ಯಾರು ಬಂದಿಲ್ಲವೋ ಅವರು ಕೈ ಎತ್ತಿ ಎಂದ. ಎಂದೂ ಜೋಕ್ ಮಾಡದ ಮೋಹನನ ಮಾತಿಗೆ ನಗು ಬಂದರೂ ಎಲ್ಲರೂ ಸುಮ್ಮನಿದ್ದರು.

ಮೋಹನ ನನ್ನತ್ತ ನೋಡುವುದಕ್ಕೆ ಒಂದು ವರ್ಷವಾಯಿತು. ಆದರೆ ಈಗ, ಕ್ಲಾಸಿಗೆ ಬಂದ ಕೂಡಲೆ ನನ್ನ ಖಾಯಂ ಜಾಗದತ್ತ ಒಮ್ಮೆ ನೋಡುತ್ತಾನೆಂದು ಮನ ನುಡಿದರೂ ಅದನ್ನು ಸಾಬೀತು ಪಡಿಸಿಕೊಳ್ಳುವಾಗಲೆಲ್ಲ ಸೋತಿದ್ದೇನೆ. ಎಲ್ಲರೊಂದಿಗೂ ಒಂದೇ ಸಮನಾಗಿ ನೆಡೆದುಕೊಳ್ಳುವ ಮೋಹನನು ನನ್ನನ್ನು ಇಷ್ಟಪಟ್ಟಿದ್ದಾನೆಯೇ? ಹೇಗೆ ತಿಳಿದುಕೊಳ್ಳಲಿ?

’ರಮ್ಯಾ... ಕನ್ನಡಿಗೆ ಬೇಜಾರು ಮಾಡಬೇಡ, ತಿಂಡಿ ತಿನ್ನೋಕೆ ಬೇಗ ಬಾ’. ಅದು ಅಮ್ಮ ಕೂಗು. ಅಲೋಚನಾ ಲಹರಿ ಕಡಿಯಿತು.

ಮೋಹನ:
ಸಮಸ್ಯೆಗಳ ನಡುವೆಯೇ ಬೆಳೆದವ ನಾನು.... ಶುದ್ದ ನೀಲಿ ಆಕಾಶದಲ್ಲಿ ಎಲ್ಲಾದರೂ ಮೋಡದ ತುಣುಕು ಕಾಣುವುದೋ ಎಂದು ಅರಸುವವ ನಾನು..... ಬರಡು ಭೂಮಿಯ ನಡುವೆ ನಿಂತು ಹಸಿರನ್ನು ಹುಡುಕುವವ ನಾನು.... ಎಲ್ಲೆಲ್ಲೂ ಅವಕಾಶವಂಚಿತನಾಗಿ ಬೆಳೆದ ನನಗೆ ಎಲ್ಲಾದರೂ ನೆಲೆ ಊರಲು ಚೂರು ಅವಕಾಶ ಸಿಗಬಹುದೋ ಎಂದೇ ಹುಡುಕುವ ಅಭ್ಯಾಸ ಮೈಗೂಡಿಕೊಂಡು ಬಿಟ್ಟಿದೆ.

ಸದಾ ದುಡಿಮೆಯಲ್ಲೇ ಮುಳುಗಿದ ಅಪ್ಪ, ಕಣ್ಣುಮುಚ್ಚಿದಾಗ, ಆತನೊಡನೆಯ ಒಡನಾಟ ನೆನಪಿಗೇ ಬರಲಿಲ್ಲ. ಆದರೆ ಆತ ಹೊತ್ತ ಜವಾಬ್ದಾರಿ ಮಾತ್ರ ನನ್ನ ಹೆಗಲೇರಿ ನಿಂತಿತು. ಖಾಯಿಲೆಯಿಂದ ನರಳುತ್ತಿದ್ದ ಅಮ್ಮ ಒಂದೆಡೆಯಾದರೆ, ಹಲವಾರು ವರ್ಷಗಳ ನಂತರ ಹುಟ್ಟಿದ ನನ್ನ ತಮ್ಮ ತಂಗಿಯರು ಇನ್ನೊಂದೆಡೆ. ನನ್ನದೇ ಹಾಸಿಕೊಂಡು ಹೊದ್ದಿಕೊಳ್ಳುವಷ್ಟು ಇರುವುದರಿಂದ ಇತರ ಜೊತೆ ನನ್ನ ಒಡನಾಟ ಬಹಳ ಕಡಿಮೆ. ಸಮಸ್ಯೆಯೇ ಮೈತಳೆದು ಮೂರ್ತಿ ರೂಪ ಹೊತ್ತು ಬೆಳೆದಿದ್ದರಿಂದಲೋ ಏನೋ, ಯಾರಿಗೂ ಹೆದರಿ ಅಭ್ಯಾಸ ಇಲ್ಲ. ನಾನಾಯಿತು, ನನ್ನ ಕೆಲಸವಾಯಿತು. ಇದ್ದ ಅನುಕೂಲದಲ್ಲೇ ಹೆಚ್ಚು ಓದುವುದು ನನ್ನ ಧ್ಯೇಯ. ಬೇರಾವ ರೀತಿಯಲ್ಲೂ ಅನುಕೂಲವಿಲ್ಲದಿದರೂ, ನನ್ನ ಓದು ಮಾತ್ರ ನಿರಾತಂಕವಾಗಿ ಸಾಗಿತು.

ಕ್ಲಾಸಿನಲ್ಲಿ ಸದಾ ಮುಂದಿದ್ದುದರಿಂದ ಹೆಚ್ಚು ಕಮ್ಮಿ ಸ್ಕಾಲರ್ ಶಿಪ್’ನಲ್ಲೇ ನನ್ನ ಓದು ಮುಗಿದಿತ್ತು. ಪ್ರಾಧ್ಯಾಪಕನಾಗಿ ಕೆಲಸವೂ ದೊರಕಿತ್ತು. ಪರಿಸ್ಥಿತಿಯು ಸ್ವಲ್ಪ ಉಸಿರಾಡುವಷ್ಟರ ಮಟ್ಟಿಗೆ ಬಂತು. ಆಗ ನನ್ನ ಸುತ್ತಲೂ ಏನು ನೆಡೆಯುತ್ತಿದೆ ಎಂದು ಮೊದಲ ಬಾರಿಗೆ ಜಗತ್ತನ್ನು ಕಣ್ಣು ಬಿಟ್ಟು ನೋಡಿದಾಗ ಕಣ್ಣಿಗೆ ಬಿದ್ದದ್ದು ಈ ಸುಂದರ ಬೊಂಬೆ ’ರಮ್ಯ’.

ಬ್ರಹ್ಮದೇವ ಬಿಡುವಿನ ವೇಳೆಯಲ್ಲಿ ಕೂತು ಮಾಡಿದ ರೂಪವದು. ಹಾಲ್ಗಡಲಿನಲಿ ಮಿಂದೆದ್ದ ಬಣ್ಣ. ದಟ್ಟವಾದ ಕಪ್ಪುಗೂದಲು. ನಕ್ಕರೆ ಗುಳಿ ಬೀಳುವ ಕೆನ್ನೆಗಳು. ಸೂಜಿಗಲ್ಲಿನಂತಹ ಕಣ್ಣುಗಳು. ಪಡ್ಡೆಹುಡುಗರ ಗುಂಪು ಆಕೆಯ ಒಂದು ನೋಟಕ್ಕಾಗಿ ಹಾತೊರೆಯುತ್ತಿದ್ದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಪಾಠ ಮಾಡುವಾಗ ನನ್ನ ಏಕಾಗ್ರತೆಗೆಲ್ಲಿ ಭಂಗ ಬರುವುದೋ ಎಂದು, ಅವಳ ಕಡೆ ನೋಡುವುದೇ ಇಲ್ಲ. ಆದರೂ.... ನಾನೇನು ಸನ್ಯಾಸಿಯೆ ?

ರಮ್ಯ-ಮೋಹನ
ಹಲವು ಬಾರಿ ಕಣ್ಣೋಟಗಳು ಕೂಡಿದ ಮೇಲೆ ಭಾವನೆಗಳು ಅರಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಮೊದಮೊದಲಿಗೆ ಜಗತ್ತು ನಮ್ಮನ್ನು ನೋಡುತ್ತಿದೆ ಎಂಬ ಅಳುಕು ಮೂಡಿದರೂ, ಆ ನಂತರ ಕಾಲೇಜಿನ ಗೋಡೆಗಳ ಮೇಲೆ ನಮ್ಮ ಹೆಸರು ರಾರಾಜಿಸುತ್ತಿದ್ದರೂ, ನಾವು ಕ್ಯಾರೇ ಅನ್ನಲಿಲ್ಲ. ಹೀಗಿರುವಾಗ ಒಮ್ಮೆ .......

ರಮ್ಯ:
ಸಿರಿವಂತರ ಮಗಳಾದ ನನಗೆ, ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ನಮ್ಮಿಬ್ಬರ ಮದುವೆಗೆ ಯಾರೂ ಅಡ್ಡಿ ಬರುವುದಿಲ್ಲ. ಅಪ್ಪ-ಅಮ್ಮ ಇಬ್ಬರೂ ಮನುಷ್ಯನ ಯೋಗ್ಯತೆಗೆ ಬೆಲೆ ಕೊಡುತ್ತಿದ್ದರೇ ವಿನಹ ಜಾತಿಗಲ್ಲ. ಇಷ್ಟಕ್ಕೂ ಮೋಹನ ಯಾವ ಜಾತಿ ಎಂದೇ ನನಗೆ ಗೊತ್ತಿರಲಿಲ್ಲ. ಅರೆ ! ಹೌದಲ್ಲ !! ಅವನ ಮನೆಯಲ್ಲಿ ಯಾರು ಯಾರು ಇದ್ದಾರೆ ಇತ್ಯಾದಿ ವಿಷಯಗಳು ನಮ್ಮ ನಡುವೆ ಏಕೆ ವಿನಿಮಯವಾಗಿಲ್ಲ ? ನನ್ನ ಯೋಚನೆಗೆ ನಾನೇ ನಕ್ಕೆ... ಅದಕ್ಕೆಲ್ಲಾ ಪುರುಸೊತ್ತಾದರೂ ಎಲ್ಲಿತ್ತು ? ಅದು ನನಗೆ ಬೇಡವೂ ಬೇಡ. ಆದರೂ, ಒಮ್ಮೆ ಅವನ ಮನೆಗೆ ಹೋಗಿ ಅವನ ಅಪ್ಪ-ಅಮ್ಮನನ್ನು ಭೇಟಿ ಮಾಡಿ ಬರಬೇಕು.

ಮೋಹನ:
ರಮ್ಯಳ ನುಡಿಗಳನ್ನು ಕೇಳಿ ಪಕ್ಕದಲ್ಲೇ ಬಾಂಬು ಸಿಡಿದಂತೆ ಆಯಿತು. ನಾಳೆ ಸಂಜೆ ನಮ್ಮ ಮನೆಗೆ ಬರುತ್ತಾಳಂತೆ ! ಆಕೆ ಸಿರಿವಂತರ ಮನೆ ಹೆಣ್ಣು. ಅಲ್ಲ, ನನ್ನ ಬುದ್ದಿಗೆ ಏನು ಮಂಕು ಕವಿದಿತ್ತು. ನನ್ನ ಪರಿಸ್ಥಿತಿ ಹೀಗಿದೆ ಎಂದು ತಿಳಿದೂ .... ಥತ್ ! ಈಗ ಯೋಚಿಸಿ ಏನು ಫಲ. ಅಲ್ಲ, ನನ್ನ ಮೇಲಿರುವ ಜವಾಬ್ದಾರಿ ಬಗ್ಗೆ ಯೋಚಿಸಿದರೆ, ಮದುವೆ ಅನ್ನೋ ಮಾತು ನನ್ನ ಯೌವ್ವನ ಕಾಲದಲ್ಲಿ ಸಾಧ್ಯವಾಗದ ಮಾತು ಅಂಬೋದು ನಿಜ... ಆದರೂ, ನಮ್ಮದು ನೈಜ ಪ್ರೀತಿ. ’ನಿನ್ನ ಮೇಲಿರೋ ಹೊಣೆ ನನ್ನದೂ ಅಲ್ಲವೇ’ ಎಂದು ರಮ್ಯ ನುಡಿಯಬಹುದೋ ಏನೋ ಎಂಬ ಟೊಳ್ಳು ನಂಬಿಕೆಯಿಂದ ಹೂಗುಟ್ಟಿದೆ.

ರಮ್ಯ:
ಆಟೋದಲ್ಲಿ ಇಬ್ಬರೂ ಅವನ ಮನೆಗೆ ಹೋದೆವು. ಯಾಕೋ ಮೋಹನನ ಬಹಳ ಟೆನ್ಶನ್’ನಲ್ಲಿ ಇದ್ದಂತೆ ಅನ್ನಿಸಿತು. ಗಲ್ಲಿಗಳ ಮಧ್ಯೆಯಲ್ಲಿ ನುಸುಳುತ್ತ ಅಂತೂ ಇಂತೂ ಒಂದು ವಠಾರದ ಮುಂದೆ ನಿಂತಿತು. ಜನರು ನಿಂತ ನಿಲುವಲ್ಲೇ ಯಾವುದೋ ಗ್ರಹದ ಪ್ರಾಣಿಯಂತೆ ನನ್ನತ್ತ ನೋಡುತ್ತಿದ್ದಾರೇನೋ ಎನ್ನಿಸಿತು. ತೀವ್ರ ಮುಜುಗರವಾಯಿತು. ಮೋಹನನ ಹಿಂದೆಯೇ ಹೆಜ್ಜೆ ಹಾಕುತ್ತ ಒಂದು ಸಣ್ಣ ಮನೆಯ ಮುಂದೆ ನಿಂತೆ. ಬಾಗಿಲು ತೆರೆದೇ ಇತ್ತು. ಕಣ್ ಸನ್ನೆಯಲ್ಲೇ ಒಳಗೆ ಕರೆದ ಮೋಹನ. ಒಮ್ಮೆ ಮನೆಯ ಒಳಗೆ ನೋಡಿದಾಗ, ಚಪ್ಪಲಿ ಬಿಟ್ಟು ಹೇಗೆ ಕಾಲಿಡಲಿ ಎನ್ನಿಸಿತು. ಹಾಗೂ ಹೀಗೂ ಒಳಗೆ ಹೋದೆ. ಮೂಲೆಯ ಮಂಚದ ಮೇಲೆ ಸುಸ್ತಾಗಿ ಮಲಗಿದ್ದ ಮೋಹನನ ಅಮ್ಮ ಕಣ್ಣಲ್ಲೇ ’ಹೇಗಿದ್ದೀಯಮ್ಮ’ ಎನ್ನುವಂತೆ ತೋರಿತು. ಎರಡು ಮೂರು ಮಕ್ಕಳು... ಯಾರೋ ಗೊತ್ತಿಲ್ಲ.... ಇವರ ಬಗ್ಗೆ ಮೋಹನ ಎಂದೂ ಹೇಳಿಲ್ಲ.... ನೋಡಿದರೆ ಇವನ ಒಡಹುಟ್ಟಿದವರು ಎನಿಸುತ್ತಿದೆ... ಅಲ್ಲಲ್ಲೇ ಒಣಗಿ ಹಾಕಿದ ಬಟ್ಟೆಗಳು. ರಾಜಾ ರೋಷದಿಂದ ಕಟ್ಟಿದ್ದ ಜೇಡರ ಬಲೆಗಳು. ಆಗೊಮ್ಮೆ ಈಗೊಮ್ಮೆ ಮನೆಗೆ ಯಾರು ಬಂದರೆಂದು ನೋಡಿ ಹೋಗುವ ಜಿರಲೆಗಳು. ಉಸುರು ಕಟ್ಟುವಂತಹ ವಾತಾವರಣ.... ತಲೆ ಸುತ್ತಿ ಬಂದಂತಾಯಿತು.... ಇನ್ನು ಹೆಚ್ಚು ಹೊತ್ತು ನಿಂತರ ನನಗೆ ಏನಾಗುವುದೋ ಎಂದು, ಒಂದೂ ಮಾತನಾಡದೆ, ಚಪ್ಪಲಿ ತೊಟ್ಟವಳೇ ಹೊರಗೆ ಓಡಿದೆ.

ಮೋಹನ:
ನಿರಾಸೆಯ ಭಾವ ಮನವನ್ನು ಮುತ್ತಿತ್ತು. ಹೀಗೇ ಆಗುವುದು ಎಂದು ನನಗೆ ತಿಳಿದಿದ್ದರೂ ಮನವೇಕೋ ತೀವ್ರ ಘಾಸಿಗೊಂಡಿತ್ತು... ಎರಡು ದಿನ ಕಾಲೇಜಿನತ್ತ ತಲೆ ಹಾಕಲಿಲ್ಲ... ಹೊಟ್ಟೆಪಾಡು ಕೇಳಬೇಕಲ್ಲ... ನಂತರ ಕಾಲೇಜಿಗೆ ಹೋದೆ. ಗೋಡೆ ಗೋಡೆಗಳೂ ನನ್ನತ್ತ ಗಹಗಹಿಸಿ ನಗುತ್ತಿದೆಯೇನೋ ಅನ್ನಿಸಿತು..... ಪ್ರೀತಿ ಪ್ರೇಮ ಮಾಡುವುದಕ್ಕೂ ಒಂದು ಯೋಗ್ಯತೆ ಇರಬೇಕು ಎಂದು ತಿಳುವಳಿಕೆ ನೀಡುತ್ತಿದೆಯೇನೋ ಎನ್ನಿಸಿತು... ಎಲ್ಲರೂ ನನ್ನತ್ತಲೇ ನೋಡುತ್ತ ನಗುತ್ತಿದ್ದಾರೇನೋ ಎನ್ನಿಸಿತು..... ಕ್ಲಾಸಿನೊಳಗೆ ಹೋದ ಮೇಲೆ ನನ್ನ ಮೊದಲ ವಾಕ್ಯ ನುಡಿಯಲೂ ನಾಲಿಗೆ ಏಳಲಿಲ್ಲ. ರಮ್ಯಳ ಖಾಯಂ ಜಾಗದೆಡೆ ನೋಡಲೂ ಸ್ಥೈರ್ಯ ಬರಲಿಲ್ಲ..... ಅದು ಖಾಲಿ ಇತ್ತು ಎಂದು ಗೊತ್ತಿತ್ತು ! ತೆರೆದ ಪುಸ್ತಕಗಳನ್ನು ಹಾಗೇ ಮುಚ್ಚಿಟ್ಟು ಕ್ಲಾಸಿನಿಂದ ಹೊರನೆಡೆದೆ... ಇದು ಎನಗೆ ಬೇಕಿತ್ತೆ ?

ರಮ್ಯ:
ಜೀವನದಲ್ಲಿ ಆಟೋ ಹತ್ತಿದ್ದು ಇಂದೇ ಮೊದಲು ! ಬಹುಶ: ನಿನ್ನದೂ ಇದೇ ಮೊದಲು ಎನಿಸುತ್ತಿದೆ.... ನೀನು ನನಗಾಗಿ, ನಾನು ನಿನಗಾಗಿ ಮಾತ್ರ ಇಂದು ಆಟೋ ಹತ್ತಬೇಕಾಯ್ತು ಎಂಬುದು ದಿಟ. ನಮ್ಮಿಬ್ಬರ ಮಧ್ಯೆ ಇರುವ ಈ ಅಂತರ ನಾನು ಊಹಿಸಿರಲಿಲ್ಲ... ಇದರಲ್ಲಿ ಇಬ್ಬರದೂ ತಪ್ಪಿಲ್ಲ... ಒಂದೇ ಆಟೋ ಸೀಟಿನ ಮೇಲೆ ಕುಳಿತು ಅರ್ಧ ಘಂಟೆ ನಮ್ಮಿಂದ ಒಟ್ಟಿಗೆ ಪ್ರಯಾಣ ಮಾಡಲಾಗಲಿಲ್ಲ ಅಂದರೆ ಜೀವನ ಪೂರ್ತಿ ನಾವು ಒಟ್ಟಿಗೆ ಸಾಗಲು ಸಾಧ್ಯವೇ? ನಿನ್ನೊಂದಿಗೆ ನಾನು ಕೈಗೂಡಿಸಲಾರೆ. ನಾನು ಪ್ರೀತಿಸಿದ್ದು ನಿನ್ನನ್ನು... ನಿನ್ನ ಸಮಸ್ಯೆಗಳನ್ನಲ್ಲ.... ನಾನು ನಿನ್ನೊಂದಿಗೆ ಸಪ್ತಪದಿ ತುಳಿಯಬೇಕೆಂದುಕೊಂಡಿದ್ದೆ.... ನಿನ್ನ ಮೇಲಿರುವ ಹೊಣೆಗಾರಿಕೆಯ ಜೊತೆಗಲ್ಲ.... ಮೋಹನ... ಸಾಧ್ಯವಾದರೆ ನನ್ನನ್ನು ಕ್ಷಮಿಸು.