ವಾಸ್ತು...............ಒಂದಷ್ಟು ಹರಟೆ.
ಈಗ ವಾರದ ಹಿಂದೆ ನಾನು ನನ್ನ ಮಿತ್ರನ ಜೊತೆ ಮಾತನಾಡುವಾಗ, "ಅವನ ೨೫ ವರ್ಷ ಹಳೆಯ ಮನೆಯನ್ನು ಕೆಡವಿ ಬೇರೆಮನೆ ನಿರ್ಮಾಣ ಮಾಡಬೇಕೆಂಬ ಪ್ರಸ್ತಾಪ ಮನೆಯಲ್ಲಿ ಪ್ರಾರಂಭವಾಗಿದೆ, ಇದು ನನ್ನನ್ನು ಚಿಂತೆಗೆ ಈಡುಮಾಡಿದೆ" ಎಂದು ತನ್ನ ಅಳಲನ್ನು ತೋಡಿಕೊಂಡ. ಇದಕ್ಕೆ ಏನು ಕಾರಣವೆಂದರೆ "ಒಬ್ಬ ವಾಸ್ತು ಪಂಡಿತರು ಬಂದು ಮನೆಯ ದಿಕ್ಕು, ಮನೆಯೊಳಗಿನ ವಿನ್ಯಾಸ ಸರಿ ಇಲ್ಲವೆಂದು, ಈ ಮನೆಯ ವಾಸ್ತುವನ್ನು ಸರಿಯಾಗಿ ಬದಲಾಯಿಸಿದಲ್ಲಿ ಅರೋಗ್ಯ ನೆಮ್ಮದಿ ಮತ್ತು ಸಂತೋಷ ಸಿಗುವುದೆಂದು ಹೇಳಿಹೋದ ಕ್ಷಣದಿಂದ ನಮ್ಮ ಮನೆಯ ಆರೋಗ್ಯವೇ ಹಾಳಾಗಿ ಹೋಗಿದೆ" ಎಂದು ಮತ್ತೂ ಮಾತು ಸೇರಿಸಿದ. "ಪ್ರತಿನಿತ್ಯ, ಮನೆಯನ್ನು ಯಾವಾಗ ಒಡೆಸುವುದು? ಎಂಬ ಪ್ರಶ್ನೆ ಮನೆಯಲ್ಲಿ ಎಲ್ಲರೂ ಕೇಳುತ್ತಾರೆ. ಹಣ ಎಲ್ಲಿಂದ ಹೊಂದಿಸುವುದು ಈ ಪ್ರಶ್ನೆಗೆ ಉತ್ತರವಿಲ್ಲ." ಎಂದು ತನ್ನ ಮನೆಯ ವಾತಾವರಣದ ಬಗ್ಗೆ ಬೇಸರದಿಂದ ನುಡಿದ. ಈ ಮಾತು ಕೇಳಿದ ಮೇಲೆ ನನ್ನ ಮನದಲ್ಲಿ ಹೊರಟ ವಿಚಾರ ಲಹರಿ.
ಹೌದು! ಈಗ ವಾಸ್ತು ಮತ್ತು ವಾಸ್ತು ಪಂಡಿತರ ಕಾಟ ಸ್ವಲ್ಪ ಜಾಸ್ತಿಯೇ ಎಂದು ಹೇಳಬಹುದು. ಹಲವಾರು ವರ್ಷಗಳಿಂದ ಬದುಕಿ ಬಾಳಿದ ಮನೆಯ ವಾಸ್ತುವಿನ ವಸ್ತುಸ್ತಿತಿ ಇದ್ದಕ್ಕೆ ಇದ್ದಹಾಗೆ ಹೇಗೆ ಬದಲಾಗಲು ಸಾಧ್ಯ? ವಾಸ್ತುವಿನ ಪರಿಣಾಮದಿಂದಾಗಿ ಮನೆಯ ಕಿಟಕಿ ಬಾಗಿಲುಗಳೇ ವೈರಿಗಳಾಗುತ್ತವೆ, ಅಡುಗೆ ಬಚ್ಚಲು ಮನೆಗಳೇ ಪರಮ ದ್ವೇಷಿಗಳಾಗುತ್ತವೆ, ಮನೆಯ ಗೋಡೆಗಳೇ ಹೆದರಿಕೆ ಹುಟ್ಟಿಸುತ್ತವೆ. ಬದುಕು ಅಸಹನೀಯವಾಗುತ್ತಿದೆ. ಈಗ ನಾವು ಒಮ್ಮೆ ಸಮಾಧಾನ ಚಿತ್ತದಿಂದ ಯೋಚಿಸೋಣ. ಇದು ಸತ್ಯವೇ? ಇದು ಸಾಧ್ಯವೇ? ಸತ್ಯವಾದರೆ ಅದೇನು? ಸಾಧ್ಯವಾಗುವುದಾದರೆ ಯಾವುದು? ಈ ಮನೆಯಲ್ಲಿ ಬದಲಾಗಬೇಕಾದದ್ದು ಏನು? ಏಕೆ? ಆರೋಗ್ಯ, ಸಂಪಾದನೆ, ಸಾಮರಸ್ಯ ಚೆನ್ನಾಗಿರಬೇಕಾದರೆ ಏನು ಬದಲಾಗಬೇಕು? ಮನೆಯಲ್ಲಿರುವ ಕಿಟಕಿ ಬಾಗಿಲುಗಳೇ? ಈ ಮನೆಯಲ್ಲಿ ಇರುವ ವಾಸ್ತುದೋಷವನ್ನು ಸರಿಪಡಿಸಿದರೆ ಇವೆಲ್ಲವೂ ಸರಿಯಾಗುವುದೆಂಬುವುದು ಯಾವುದರ ಆಧಾರದಲ್ಲಿ ನಿಂತಿದೆ? ಈಗ ಇಲ್ಲಿ ಕೆಲಸ ಮಾಡಬೇಕಾದದ್ದು ನಮ್ಮ ದೃಢ ಸಂಕಲ್ಪವೋ? ಅಥವಾ ಮನೆಯ ಕಿಟಕಿ ಬಾಗಿಲುಗಳೋ?
ಈಗ ಹೀಗೆ ಯೋಚಿಸೋಣ! ವಾಸ್ತು ಪಂಡಿತರು ಹೇಳುವಂತಹ ಬದಲಾವಣೆಗಳನ್ನು ಮಾಡುವುದೇ ಆದರೆ, ಅಲ್ಲಿ ಆರೋಗ್ಯ, ಸಂಪಾದನೆ ಮತ್ತು ಸಾಮರಸ್ಯ ಹೆಚ್ಚಾಗಬೇಕಲ್ಲವೇ? ಹಾಗಾದರೆ, ಇಲ್ಲಿ ನಮ್ಮ ಬುದ್ಧಿಮತ್ತೆ ಮತ್ತು ಪ್ರಯತ್ನ ಬೇಡವೇ? ಬೇಕು ಎನ್ನುವುದಾದರೆ ವಾಸ್ತು ಪಂಡಿತರು ಹೇಳುವ ಬದಲಾವಣೆಗಳ ಮಹತ್ವ ಎಷ್ಟು? ನಮ್ಮ ಪ್ರಯತ್ನ ಮತ್ತು ಬುದ್ಧಿಶೀಲತೆಯ ಮಹತ್ವ ಎಷ್ಟು? ಪ್ರಯತ್ನ ಮತ್ತು ಬುದ್ಧಿವಂತಿಕೆ ಎಂದೂ ಮುಂದೆ ಸಾಗುವ ಧೀರರು! ಮಿಕ್ಕದ್ದೆಲ್ಲ ಹಿಂದೆಯೇ! ಒಂದನ್ನು ಗಮನಿಸಬೇಕು, ವಾಸ್ತು ಪಂಡಿತರು ಹೇಳುವ ಹಾಗೆ ಎಲ್ಲವನ್ನು ಮಾಡಿ ಕೆಲಸ ಮುಗಿಯಿತೆಂದು ಕೈ ಕಟ್ಟಿ ಕುಳಿತರೆ ಸಂತೋಷ, ಸಾಮರಸ್ಯ ಅರೋಗ್ಯ ಇತ್ಯಾದಿಗಳೆಲ್ಲ ಮೇಲಿಂದ ಉದುರುವುದಿಲ್ಲ, ಅಥವಾ ವಾಸ್ತು ಪುರುಷ ಎಲ್ಲವನ್ನು ನೀಡುವ ಕಾಮಧೆನುವು ಅಲ್ಲ.ಇದು ಮನನ ಮಾಡಬೇಕಾದ ಸಂಗತಿ ಎನಿಸುವುದಿಲ್ಲವೇ?
ಒಂದು ಮನೆಯನ್ನು ನಿರ್ಮಾಣ ಮಾಡಬೇಕಾದರೆ ಎಲ್ಲೆಲ್ಲಿ ಏನೇನು ಇರಬೇಕು? ಏನು ಇರಬಾರದು? ಎಂಬುದು ಆ ಮನೆಯ ಮಾಲಿಕನ ಸ್ವತಂತ್ರ ವಿಚಾರಕ್ಕೆ ಬಿಟ್ಟ ಸಂಗತಿ.ಎಲ್ಲಿ ನೀರಿನ ತೊಟ್ಟಿ ಇದ್ದರೆ ತನ್ನ ಮನೆಯೊಡತಿಗೆ ಅನುಕೂಲ? ಎಲ್ಲಿ ಅಡುಗೆ ಮನೆ ಇದ್ದರೆ ಚಂದ? ಎಲ್ಲಿ ರೂಮು ಹಾಲು ಇದ್ದರೆ ಅನುಕೂಲ ಇತ್ಯಾದಿಗಳು ಮನೆಯ ಮಾಲಿಕನ ಅಗತ್ಯ ಮತ್ತು ಇಷ್ಟಕ್ಕೆ ಬಿಟ್ಟ ವಿಷಯ. ಇಂತಹ ವಿಚಾರದಲ್ಲಿ ಸ್ವಲ್ಪ ಹೀಗೆ ಯೋಚಿಸ ಬಹುದು.ಸೂರ್ಯನ ರಶ್ಮಿ ಯಾವ ಹೊತ್ತಿನಲ್ಲಿ ಎಷ್ಟು ,ಎಲ್ಲಿ ಹೆಚ್ಚು ಬೀಳುತ್ತದೆ? ಯಾವ ದಿಕ್ಕಿನಲ್ಲಿ ಮಳೆಗಾಲದಲ್ಲಿ ಮಳೆಯ ಇರಚಲು ಹೊಡೆಯುತ್ತದೆ? ಯಾವ ದಿಕ್ಕಿನಲ್ಲಿ ಗಾಳಿ ಹೆಚ್ಚು ಎಂಬುದನ್ನು ಗಮನಿಸಿ, ಇದರಿಂದಾಗುವ ಅನುಕೂಲ, ಅನಾನುಕೂಲ ಗಮನಿಸಿ ಮನೆಯ ವಿನ್ಯಾಸದ ನಿರ್ಧಾರವನ್ನು ಮಾಡಬಹುದು. ಗೃಹ ನಿರ್ಮಾಣದ ಸಮಯದಲ್ಲಿ ಹೆಚ್ಚು ಗಾಳಿ ಬೆಳಕು ಬರುವಂತೆ ಮನೆಯ ಸುತ್ತಲು ಜಾಗ ಬಿಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ಎಲ್ಲೂ ನೀರು ನಿಲ್ಲದಂತೆ ಹರಿದು ಹೋಗುವ ಅಥವಾ ಇಂಗಿಸುವ ವ್ಯವಸ್ತೆ ಮಾಡಿದರೆ ಸೊಳ್ಳೆ ಮತ್ತು ಇನ್ನಿತರ ಸಾಂಕ್ರಾಮಿಕ ರೋಗದ ಭೀತಿಯಿಲ್ಲ. ಮನೆಯ ಮುಂಭಾಗ ಹಿಂಭಾಗದಲ್ಲಿ ಗಿಡಗಳನ್ನು ಬೆಳೆಸುವ ಅನುಕೂಲವಾದರೆ ಆರೋಗ್ಯಕ್ಕೆ ಮತ್ತು ಪ್ರಕೃತಿಗೆ ಹಿತಕರ. ಇಂತಹ ಇನ್ನೂ ಹಲವಾರು ವಿಚಾರಗಳ ಬಗ್ಗೆ ಚಿಂತನೆ ನಡೆಸಿ ಅಳವಡಿಸಿಕೊಳ್ಳಲು ಸಾಧ್ಯವಾದರೆ ಅನುಕೂಲ ನಮಗೆ.
ಎಲ್ಲಕ್ಕಿಂತ ಹೆಚ್ಚಾಗಿ ಮನೆಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೆವೋ ಅಷ್ಟೇ ಮನದ ಬಗ್ಗೆಯೂ ಕಾಳಜಿ ಬೇಕು. ಸದ್ಗ್ರುಹವಾಗಬೇಕಾದರೆ ಸದಾಚಾರ, ಸದ್ವಿಚಾರ, ಸತ್ಯಧರ್ಮ ಪಾಲನೆಯಾಗಬೇಕು. ನಾವು ಚಿಂತೆಗಿಂತ ಚಿಂತನೆ ಜಾಸ್ತಿ ಮಾಡಬೇಕು. ಅಕ್ಕಪಕ್ಕದವರೊಡನೆ ಮಧುರ ಭಾವನೆ ಇರಬೇಕು. ಮನೆಯ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸದ ಜೊತೆಜೊತೆಗೆ ಒಳ್ಳೆಯ ನಡತೆಯನ್ನು ಕಲಿಸಲು ಸಹಾಯಕವಾಗುವಂತಹ ವಾತಾವರಣ ನಮ್ಮ ಮನೆಯಲ್ಲಿ ಸೃಷ್ಟಿಯಾಗಬೇಕು. ಸ್ನೇಹಭಾವ, ನಿಯಮಪಾಲನೆ, ಸದಾಚಾರ ಇತ್ಯಾದಿಗಳು ನಮ್ಮ ಅರೋಗ್ಯ ಮತ್ತು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ ಎಂಬುದನ್ನು ಮನಗಾಣಬೇಕು. ಯಾವ ಮನೆಯಲ್ಲಿ ಕಷ್ಟ ನಿಷ್ಟುರಗಳಿಲ್ಲ? ಯಾವ ಮನೆಗಳಲ್ಲಿ ರೋಗ ರುಜಿನಗಳಿಲ್ಲ? ಯಾವ ಮನೆಗಳಲ್ಲಿ ಸಾವು ನೋವುಗಳಿಲ್ಲ? ಇದನ್ನೆಲ್ಲಾ ಎದುರಿಸುವ ಮನೋಸ್ತೈರ್ಯ ಮತ್ತು ದೃಢ ವಿಶ್ವಾಸ ನಮ್ಮದಾಗಬೇಕು. ಪರಸ್ಪರ ವಿಶ್ವಾಸ ಮತ್ತು ನಂಬಿಕೆಗಳು ಗಟ್ಟಿಯಾಗಬೇಕು. ಮೂಡ ನಂಬಿಕೆ ಮತ್ತು ಅಪನಂಬಿಕೆ ನಮ್ಮಿಂದ ದೂರವಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಮನೆಯಲ್ಲಿರುವ ಆಚಾರ ವಿಚಾರಗಳು ಮನೆಯ ಒಡತಿಯಾದ ಗೃಹಣಿ ಮತ್ತು ಗೃಹಸ್ತನ ಧರ್ಮ ಮಾತ್ರ ಸಂತೋಷಮಯ, ಆರೋಗ್ಯವಂತ ಬಾಳಿಗೆ ಅತಿಮುಖ್ಯವೇ ಹೊರತು ನಿರ್ಜೀವವಾದ ಕಿಟಕಿ- ಬಾಗಿಲುಗಳಾಗಲಿ ಅಥವಾ ದಿಕ್ಕಾಗಲಿ ಅಲ್ಲ.
ಇದಕ್ಕೆ ನೀವೇನು ಹೇಳುತ್ತಿರಾ?
Comments
ಉ: ವಾಸ್ತು...............ಒಂದಷ್ಟು ಹರಟೆ.
In reply to ಉ: ವಾಸ್ತು...............ಒಂದಷ್ಟು ಹರಟೆ. by makara
ಉ: ವಾಸ್ತು...............ಒಂದಷ್ಟು ಹರಟೆ.