ವಾಹನದಡಿ ಸಿಲುಕಿದ್ದ ಮುಂಗುಸಿ ಡಾ. ಅನಿಲ್ ಅವರ ಸಕಾಲಿಕ ಶಸ್ತ್ರ ಚಿಕಿತ್ಸೆಯಿಂದ ಬದುಕುಳಿದಾಗ....

Submitted by harshavardhan … on Thu, 05/27/2010 - 17:40
ಬರಹ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯದಲ್ಲಿ ಮುಂಗುಸಿಯ ಶಸ್ತ್ರ ಚಿಕಿತ್ಸೆ ನಡೆದಾಗ ತೆಗೆಯಲಾದ ಚಿತ್ರ.

 

ಮನುಷ್ಯ ಪ್ರಾಣಿ ಬೆಳಿಗ್ಗೆ ಎದ್ದು ರಸ್ತೆ ಸಂಚಾರ ಆರಂಭಿಸಿದ ಮೇಲೆ ಮತ್ಯಾವ ಪ್ರಾಣಿಗೂ ರಸ್ತೆಗಳ ಮೇಲೆ ಸಂಚರಿಸುವ ಅಧಿಕಾರವಿರಬಾರದು! ಹಾಗೇನಾದರೂ ಅವುಗಳಿಗೆ ಸಂಚರಿಸಲೇ ಬೇಕಾದ ಅನಿವಾರ್ಯತೆ ಇದ್ದರೆ, ಮಧ್ಯ ರಾತ್ರಿಯಿಂದ ಬೆಳಗಿನ ವರೆಗೆ ಸಂಚರಿಸಲಿ; ಇಲ್ಲದೇ ಹೋದರೆ ಈ ಪರಿಯ ಬೆಳವಣಿಗೆಗೆ ಕಾರಣನಾದ ಮಾನವ ಪ್ರಾಣಿಯ ಹಕ್ಕು ಕಸಿದಂತಾಗುತ್ತದೆ! ಅಲ್ಲವೇ?

 

ಮೊನ್ನೆ ಧಾರವಾಡದ ವಾರ್ತಾ ಕಚೇರಿಯ ಬಳಿ ಬೆಳಿಗ್ಗೆ ದ್ವಿಚಕ್ರ ವಾಹನ ಸವಾರರೊಬ್ಬರ ಧಾವಂತಕ್ಕೆ ಮುಂಗುಲಿಯೊಂದು ಇನ್ನೇನು ಬಲಿಯಾಗಬೇಕಿತ್ತು..ಆದರೆ, ಪ್ರಾಣಿ ಪ್ರಿಯರ ಸಕಾಲಿಕ ಚಿಕಿತ್ಸೆಯಿಂದಾಗಿ ಬದುಕುಳಿಯಿತು. ಕಚೇರಿಗೆ ತೆರಳುವ ಧಾವಂತದಲ್ಲಿ ಭರ್ಜರಿ ವೇಗದಲ್ಲಿ ಹೊರಟಿದ್ದ ‘ಒಬ್ಬರಿಗೆ’ ರಸ್ತೆ ಬದಿಗೆ ಹೊಂಚು ಹಾಕಿ ಕಾಯ್ದಿದ್ದ, ನಂತರ ಏಕಾಏಕಿ ರಸ್ತೆ ದಾಟಲು ಮುಂದಾದ ಮುಂಗುಲಿಯೊಂದು ಚಕ್ರದ ಅಡಿ ಬಂದು ಮೂತಿ ಸಿಕ್ಕಿಸಿಕೊಂಡಿತು. ಅತ್ಯಂತ ಭಯಂಕರವಾಗಿ ರಕ್ತ ಬಾಯಿಯಿಂದ ಚಿಮ್ಮಿ ಪುಟಿಯಲಾರಂಭಿಸಿತು. ಪುಟ್ಟ, ನಿರುಪದ್ರವಿ ಪ್ರಾಣಿ ಉಪಾಯಗಾಣದೇ ರಸ್ತೆಯ ಮೇಲೆ ಬಿದ್ದು ಪ್ರಾಣ ಸಂಕಟದಿಂದ ಒದ್ದಾಡಲಾರಂಭಿಸಿತು. ಸುತ್ತಲೂ ಜನ ನೆರೆದು ನೋಡಲಾರಂಭಿಸಿದರು. ಏನು ಮಾಡಬೇಕು? ‘ಪಾಪ ಇನ್ನೇನ್ ಸತ್ತ ಹೋಗ್ತೈತಿ...ಏನ್ ಮಾಡೋದು..ನೀರ್ ಬಿಟ್ಟ್ ಬಿಡ್ರಿ ಅದರ ಬಾಯಾಗ’ ಅಂದ್ರು ಬಹುತೇಕರು.

 

 

ದ್ವಿಚಕ್ರವಾಹನದ ಬುಡದಲ್ಲಿ ಸಿಲುಕಿದ್ದ ಮುಂಗುಸಿಯ ಬಾಯಿ ಅಂಗಳ ಕತ್ತರಿಸಿದ್ದು ಹೀಗೆ..

 

ಅಲ್ಲಿಯೇ ಚಹಾ ಕುಡಿಯಲು ನಿಂತಿದ್ದ ಛಾಯಾಪತ್ರಕರ್ತ ಕೇದಾರ ಅಣ್ಣ ಓಡೋಡಿ ಹೋಗಿ ನೋಡಿದರು. ಕೂಡಲೇ ಎತ್ತಿ ಕೊಂಡು ರಸ್ತೆ ಬದಿಗೆ ಮಲಗಿಸಿದರು. ಕೂಡಲೇ ಪ್ರೊ. ಕಲ್ಲೂರ್ ಮನೆಗೆ ಹೋಗಿ, ಮಾಹಿತಿ ನೀಡಿ ಕರೆತಂದರು. ನೋವಿನಿಂದಾಗಿ ಕಡಿಯಲು ಹವಣಿಸುತ್ತಿದ್ದ ಮುಂಗುಲಿಯ ಮುಖಕ್ಕೆ ಬಟ್ಟೆ ಕಟ್ಟಿ, ಕಡಿಯದಂತೆ ಎಚ್ಚರವಹಿಸಿ ಅಗ್ರಿ ಯೂನಿವರ್ಸಿಟಿ ಪಶು ಚಿಕಿತ್ಸಾಲಯಕ್ಕೆ ಕೇದಾರ ಅಣ್ಣನ ಗಾಡಿಯ ಮೇಲೆ ಹೊತ್ತೊಯ್ದರು.

 

ಡಾ. ಅನಿಲ್ ಪಾಟೀಲ. ಅನೇಕ ಪರಿಸರವಾದಿಗಳ ಹೆಮ್ಮೆಯ ಗೆಳೆಯ. ಪ್ರಾಣಿಗಳ ಪ್ರತಿ ಪ್ರೀತಿ, ಕಾಳಜಿ ಹೊಂದಿರುವ ಮನುಷ್ಯ. ಕೈಯಲ್ಲಿದ್ದ ಎಲ್ಲ ಕೆಲಸಗಳನ್ನು ಬದಿಗೊತ್ತಿ ಮುಂಗುಸಿಯನ್ನು ನೋಡಲು ಅನುವಾದರು. ತೀವ್ರವಾಗಿ ಗಾಯಗೊಂಡಿದ್ದ ಮುಂಗುಸಿಗೆ ಪ್ರಜ್ಞೆ ತಪ್ಪಿಸಲು ಮುಂದಾದರು. ತಮ್ಮ ಸಹಾಯಕರ ನೆರವಿನಿಂದ ಪ್ರಜ್ಞೆ ತಪ್ಪಿಸಿ ಮಲಗಿಸಿದರು.

 

ಪ್ರಜ್ಞೆ ತಪ್ಪಿಸಿ ಮಲಗಿಸಲಾದ ಮುಂಗುಸಿಯ ಕತ್ತರಿಸಿದ ಅಂಗಳ ಪರೀಕ್ಷಿಸುತ್ತಿರುವ ಡಾ. ಅನಿಲ್ ಪಾಟೀಲ. 

 

ದ್ವಿಚಕ್ರ ವಾಹನದ ಗಾಲಿಗೆ ಸಿಲುಕಿ ಗಂಟಲು ಹಾಗೂ ಬಾಯಿಯ ಒಳಗಿನ ಮೇಲಂಗಳ ಕತ್ತರಿಸಿ ರಕ್ತ ಒಸರುತ್ತಿರುವುದು ಗೋಚರಿಸಿತು. ನೀರಿನಿಂದ ಬಾಯಿ ತೊಳೆಸಿ, ಕೆಲವೇ ನಿಮಿಷಗಳಲ್ಲಿ ಮೂರು ಹೊಲಿಗೆಗಳನ್ನು ಅಂಗಳಕ್ಕೆ ಹಾಗೂ ಎರಡು ಹೊಲಿಗೆಗಳನ್ನು ಗಂಟಲಿಗೆ ಹಾಕಿ, ಉಸಿರಾಟ ಸರಾಗವಾಗಿದೆಯೇ ಎಂಬುದನ್ನು ಪರೀಕ್ಷಿಸಿದರು. ನಂತರ ನಂಜೇರದಂತೆ ಚುಚ್ಚುಮದ್ದು ನೀಡಿ, ಪ್ರಜ್ಞೆ ಮರುಕಳಿಸುವಂತೆ ಡಾ. ಅನಿಲ್ ಮಾಡಿದರು. ಈ ಎಲ್ಲ ಕೆಲಸಗಳಿಗೆ ಪ್ರೊ. ಕಲ್ಲೂರ್ ಸಹಕಾರ ನೀಡುತ್ತಿದ್ದರೆ ಕೇದಾರ ಅಣ್ಣ ಛಾಯಾಚಿತ್ರ ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದರು!

 

ಅಂತೂ ಎರಡು ದಿನಗಳ ಪಶು ವೈದ್ಯರ ಆರೈಕೆ ಹಾಗೂ ಸಮತೋಲಿತ ಆಹಾರ ದೊರಕಿದ ಕಾರಣ ಮುಂಗುಲಿ ಬದುಕುಳಿದು, ಚೇತರಿಸಿಕೊಂಡಿತು. ಇಂದು ಬೆಳಿಗ್ಗೆ ಪ್ರೊ. ಕಲ್ಲೂರ್ ಕರ್ನಾಟಕ ವಿವಿ ಆವರಣದಲ್ಲಿ ಚೇತರಿಸಿಕೊಂಡ ಮುಂಗುಲಿ ಒಯ್ದು ಬಿಡುಗಡೆಗೊಳಿಸಿ ಬಂದಿದ್ದಾರೆ. ಅಂತೂ ನಾವು ತುಸು ಮಾನವೀಯತೆ ಮೆರೆದರೆ ತನ್ನದಲ್ಲದ ತಪ್ಪಿಗೆ ಪ್ರಾಣ ತೆರಲಿರುವ ನಿಸರ್ಗದ ಅನೇಕ ಕೌತುಕಗಳು ಬದುಕಬಲ್ಲವು.

 

ಮುಂಗುಸಿಗೆ ಹೊಸ ಬದುಕು ನೀಡಿದ ಡಾ. ಅನಿಲ್, ಪ್ರೊ. ಕಲ್ಲೂರ್ ಹಾಗೂ ಸಹಾಯಕ ಸುರೇಶ್.

 

‘ಮಂಗೂಸ್’ ಎಂಬ ಆಂಗ್ಲ ಭಾಷಾ ಪದ ಮಂಗೂಸ್ ಎಂಬ ಮರಾಠಿ ಭಾಷಾ ಪದದಿಂದ ಹುಟ್ಟಿದ್ದು.  ದ್ರಾವಿಡ ಭಾಷೆ ತೆಲುಗಿನಲ್ಲಿ  ಮುಂಗಿಸ್ ಹಾಗೂ ಕನ್ನಡದಲ್ಲಿ ಮುಂಗುಸಿ, ಬಂಗಾಳಿ ಭಾಷೆಯಲ್ಲಿ ಬೇಜಿ ಎಂದು ಕರೆಯಲ್ಪಡುತ್ತದೆ. ಮುಂಗುಲಿ ನಿಜಕ್ಕೂ ನಿರುಪದ್ರವಿ. ಮಾಂಸಾಹಾರಿಯಾದ ಇದು ರೈತನ ಮಿತ್ರನೂ ಹೌದು. ಒಟ್ಟು ೩೩ ಪ್ರಜಾತಿಯ ಮುಂಗುಸಿಗಳಿದ್ದು ಯುರೋಪ್, ಏಷಿಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಚಿಕ್ಕ ಗಾತ್ರದ ಮುಂಗುಸಿ ಅಳಿಲಿನಷ್ಟಿದ್ದು ೧ ರಿಂದ ೪ ಅಡಿಗಳಷ್ಟಿರಬಹುದು. ತೂಕ ಸುಮಾರು ೨೮೦ ಗ್ರಾಂಗಳಷ್ಟು. ಬೆಕ್ಕಿನ ಗಾತ್ರದ ಬಿಳಿ ಬಾಲದ ಮುಂಗುಸಿಗಳೂ ಇದ್ದು ೪ ಕೆಜಿ ವರೆಗೆ ತೂಗಬಲ್ಲವು. ಮುಂಗುಸಿಯಲ್ಲಿ ಬಹುತೇಕ ಪ್ರಬೇಧಗಳು ಒಂಟಿಯಾಗಿ ಆಹಾರ ಅರಸಿದರೆ, ಪುಟ್ಟ ಅಳಿಲಿನ ಗಾತ್ರದ ಮುಂಗುಸಿಗಳು ಗುಂಪು-ಗುಂಪಾಗಿ ಆಹಾರ ಅರಸುತ್ತವೆ.  

 

ಕ್ರಿಮಿ-ಕೀಟ, ಏಡಿ, ಕಾಳಿಂಗ ಸರ್ಪದಂತಹ ಅತ್ಯಂತ ವಿಷಕಾರಿ ಹಾವುಗಳು, ಸಾಮಾನ್ಯ ಹಾವುಗಳು, ಎರೆಹುಳು, ಮಳೆಹುಳು, ಕಪ್ಪೆ, ಓತಿಕ್ಯಾತ, ಹಾವು ರಾಣಿ, ಹಲ್ಲಿಗಳು, ಕೋಳಿಪಿಳ್ಳೆ, ಹಕ್ಕಿ ಮರಿ, ಹಕ್ಕಿಯ ಮೊಟ್ಟೆಗಳು, ಗಿನಿ ಹಂದಿ, ಅಳಿಲು, ಸತ್ತ ಪ್ರಾಣಿಗಳ ದೇಹದ ಮಾಂಸ, ಕೆಲವೊಮ್ಮೆ ಮೊಸಳೆಯ ಮೊಟ್ಟೆಗಳು ಮುಂಗುಸಿಯ ಪ್ರೀತಿಯ ಆಹಾರ. ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ರೈತರು ಮುಂಗುಲಿಯ ಮರಿಗಳನ್ನು ಸಾಕಿ, ಪಳಗಿಸಿಕೊಂಡು, ಕಾಡು ಮೊಲ, ಇಲಿ, ಹೆಗ್ಗಣಗಳ ನಿಯಂತ್ರಣಕ್ಕೆ ಬಳಸುತ್ತಾರೆ. ಶಿಳ್ಳೆಕ್ಯಾತರು, ಹಕ್ಕಿ-ಪಿಕ್ಕಿಗಳು, ಡೊಂಬರಾಟದವರು, ಹಾವಾಡಿಗರು ಮುಂಗುಸಿಯನ್ನು ಹಿಡಿದು, ಸಾಕಿಕೊಂಡು ಜೀವನೋಪಾಯ ಮಾಡುತ್ತಾರೆ.

 

ಬದುಕಿಸಿದ ಖುಷಿಯಲ್ಲಿ ಪ್ರೊ. ಕಲ್ಲೂರ್, ಡಾ. ಅನಿಲ್  ಹಾಗೂ ಇತರರು ಮುಂಗುಸಿಯೊಂದಿಗೆ.

 

ಮುಂಗುಸಿ ಬಳಸಿ ಇಲಿ-ಹೆಗ್ಗಣಗಳ ನಿಯಂತ್ರಣ ಮಾಡುವ ಪ್ರಯೋಗವನ್ನು ವೆಸ್ಟ್ ಇಂಡೀಸ್ ರೈತರು ಮಾಡಲು ಹೋಗಿ ಕೈಸುಟ್ಟು ಕೊಂಡ ಉದಾಹರಣೆಗಳೂ ಇವೆ! ಅಮೇರಿಕಾ, ಆಸ್ಟ್ರೇಲಿಯಾ ದೇಶಗಳಲ್ಲಿ ಮುಂಗುಸಿಯ ಆಮದು, ಸಾಕಾಣಿಕೆಗೆ ಅವಕಾವಿಲ್ಲ. ಕಾರಣ ಹವಾಯಿ ದ್ವೀಪ ಮತ್ತು ವೆಸ್ಟ್ ಇಂಡೀಸ್ ಗಳಲ್ಲಿ ಮುಂಗುಸಿಯ ಆಮದಿನಿಂದ ಇಲಿ, ಹೆಗ್ಗ್ಗಣಗಳ ನಿಯಂತ್ರಣವಾದರೂ, ನಶ್ಟವೇ ಹೆಚ್ಚಾಗಿ ಅಲ್ಲಿನ ಪ್ರಾಣಿಗಳ ಆಹಾರ ಕೊಂಡಿಯಲ್ಲಿ ವಿಪರೀತ ಏರುಪೇರುಗಳು ಕಾಣಿಸಿ, ರೈತರು ತತ್ತರಿಸುವಂತಾಗಿತ್ತು. ಮುಂಗುಸಿಗಳು ಸಂತಾನೋತ್ಪತ್ತಿ ಕಾಲದಲ್ಲಿ ಹೊರಡಿಸುವ ವಿಚಿತ್ರವಾದ ‘ಗಿಗ್ಲಿಂಗ್’ ಸದ್ದು ಅನೇಕ ಜೀವಿಗಳ ಬದುಕಿನಲ್ಲಿ ವಿಪ್ಲವ ತಂದಿಟ್ಟಿತ್ತು!  

 

ಅಂತೂ ಧಾರವಾಡದ ಮುಂಗಸಿ ವಾಹನದ ಚಕ್ರಕ್ಕೆ ಸಿಲುಕಿದ್ದು ಇಷ್ಟೆಲ್ಲ ಕುತೂಹಲಕಾರಿ ವಿಷಯಗಳ ಅನಾವರಣಕ್ಕೆ ಕಾರಣವಾಯಿತು. ಈ ಪ್ರಯತ್ನದಿಂದ ಒಂದು ಮಾತಂತೂ ಸಾಬೀತಾಯಿತು..ಯಾವುದೇ ಪ್ರಾಣಿ ಎಷ್ಟೇ ಆಘಾತಕ್ಕೆ ಒಳಗಾಗಿದ್ದರೂ ಸಕಾಲಿಕವಾದ ಸೂಕ್ತ ಚಿಕಿತ್ಸೆ ಅದನ್ನು ಬದುಕಿಸಬಲ್ಲದು. ಹಾಗಾಗಿ ನಮ್ಮ ಸಮೀಪದ ಪರಿಸರ ಪ್ರೇಮಿಗಳು, ವನ್ಯ ಜೀವಿ ಸಂರಕ್ಷಕರು, ಜಾನುವಾರು ವೈದ್ಯರ ಸಂಪರ್ಕ ಅಂಕಿ ಡೈರಿಯಲ್ಲಿ ಬರೆದಿಟ್ಟುಕೊಳ್ಳುವುದು ಒಳಿತು. ನಮ್ಮ ಸ್ವಯಂಪ್ರೇರಿತ ಒಂದು ಹೆಜ್ಜೆ ಒಂದು ಅಪರೂಪದ ಮೂಕ ಪ್ರಾಣಿಯ ಜೀವ ಉಳಿಸಬಹುದು.