ವಾಹನ – ರೈಲುಗಳಿಂದಾಗುವ ಅಸಹಜ ಸಾವುಗಳ ಇಳಿಕೆಯ ತುರ್ತು

ವಾಹನ – ರೈಲುಗಳಿಂದಾಗುವ ಅಸಹಜ ಸಾವುಗಳ ಇಳಿಕೆಯ ತುರ್ತು

ಸಪ್ಟಂಬರ್ ೨೦೧೪ರಲ್ಲಿ ಕಾಶ್ಮೀರದಲ್ಲಿ ಭೀಕರ ನೆರೆಯಿಂದಾಗಿ ಹಲವರ ಸಾವು. ಅದರಿಂದಾದ ಹಾನಿ ಸಾವಿರಾರು ಕೋಟಿ ರೂಪಾಯಿಗಳೆಂದು ಅಂದಾಜು. ೨೦೧೩ರಲ್ಲಿ ಉತ್ತರಖಂಡದಲ್ಲಿ ಚರಿತ್ರೆಯಲ್ಲೇ ಕಂಡರಿಯದ ಹಠಾತ್ ನೆರೆಯಿಂದಾಗಿ ಸತ್ತವರು ಸುಮಾರು ೫,೦೦೦ ಜನರೆಂದು ಸರಕಾರದಿಂದಲೇ ಘೋಷಣೆ. ೨೦೧೦ರಲ್ಲಿ ಮೇಘಸ್ಫೋಟದಿಂದ ಲೆಹ್‍ನಲ್ಲಿ ಭಾರೀ ಹಾನಿ. ೨೦೧೮ರಲ್ಲಿ ಕೇರಳದಲ್ಲಿ ಶತಮಾನದ ಮಹಾನೆರೆಯಿಂದಾಗಿ ಅಪಾರ ಹಾನಿ. ೨೦೧೮ರ ಆಗಸ್ಟಿನಲ್ಲಿ ಮಹಾಮಳೆಯಿಂದಾಗಿ ಕೊಡಗಿನಲ್ಲಾದ ಅನಾಹುತ ಹಾಗೂ ಜೀವಹಾನಿ ನಮ್ಮ ನೆನಪಿನಿಂದ ಮಾಸಿಲ್ಲ.
ಇವಲ್ಲದೆ, ಹಲವು ಭೂಕಂಪ ಹಾಗೂ ಬಿರುಗಾಳಿಗಳಿಂದಾದ ಹಾನಿಯನ್ನು ನೆನೆದಾಗ ನಮಗನಿಸುತ್ತದೆ: ನಮ್ಮ ದೇಶದಲ್ಲಿ ಮತ್ತೆಮತ್ತೆ ಜರಗುತ್ತಿರುವ ಪ್ರಾಕೃತಿಕ ವಿಕೋಪಗಳಿಂದಾಗಿ ಅಪಾರ ಜೀವಹಾನಿ ಆಗುತ್ತಿದೆ ಎಂದು.
ಆದರೆ ಅಧಿಕೃತ ಅಂಕೆಸಂಖ್ಯೆಗಳನ್ನು ಜಾಲಾಡಿದಾಗ ಸಿಗುವ ಚಿತ್ರಣವೇ ಬೇರೆ. ಅವು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದಲ್ಲಿ ಲಭ್ಯ. ಅದರ ಪ್ರಕಾರ, ಭಾರತದಲ್ಲಿ ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದರಲ್ಲಿ ಪ್ರಾಕೃತಿಕ ವಿಕೋಪಗಳಿಂದಾಗುವ ಸಾವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಇದರರ್ಥವೇನು? ನಮ್ಮ ದೇಶದಲ್ಲಿ ಮಾನವ ವಿಫಲತೆಗಳಿಂದಾಗಿ ಆಗುವ ಸಾವುಗಳು ಹೆಚ್ಚಾಗುತ್ತಿವೆ. ಅದರಲ್ಲಿ ಮೊದಲ ಕಾರಣ ರಸ್ತೆ ಅಪಘಾತ. ೨೦೧೨ರಲ್ಲಿ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆ ೧,೩೯,೦೯೧. ಇದರೊಳಗೆ, ೩೨,೩೧೮ ಸಾವುಗಳು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ್ದು. ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದರೆ, ಇವರಲ್ಲಿ ಹಲವರ ಜೀವ ಉಳಿಯುತ್ತಿತ್ತು. ಆದರೆ, ಅನೇಕ ರಾಜ್ಯಗಳು ಮತ್ತು ನಗರಗಳು (ವಿದ್ಯಾವಂತರ ಸಂಖ್ಯೆ ಜಾಸ್ತಿಯಿರುವ ಪುಣೆ ನಗರ ಸಹಿತ) ಕಡ್ಡಾಯ ಹೆಲ್ಮೆಟ್ ನಿಯಮ ಜ್ಯಾರಿಯನ್ನು ವಿರೋಧಿಸುತ್ತಿವೆ! ಹೆದ್ದಾರಿಗಳಿಂದ ಅಪಘಾತಕ್ಕೆ ಸಿಲುಕಿದವರನ್ನು ಆಸ್ಪತ್ರೆಗೆ ಒಯ್ಯುವ ಮತ್ತು  ಆಸ್ಪತ್ರೆಯಲ್ಲಿ ಟ್ರಾಮಾಕೇರ್ (ತುರ್ತು ನಿಗಾ) ವ್ಯವಸ್ಥೆ ಹೇಗಿದೆ? ಆ ವ್ಯವಸ್ಥೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅಸಹಜ ಸಾವುಗಳಿಗೆ ಎರಡನೇ ಅತಿದೊಡ್ಡ ಕಾರಣ ರೈಲುಗಳು. ಈ ಸಾವುಗಳ ಸಂಖ್ಯೆ ೨೦೦೭ರಲ್ಲಿ ೨೪,೧೬೨ ಇದ್ದದ್ದು ೨೦೧೨ರಲ್ಲಿ ೨೭,೦೪೨ಕ್ಕೆ ಏರಿದೆ. (ಇದೇ ಅವಧಿಯಲ್ಲಿ ರೈಲು ಅಪಘಾತಗಳಿಂದಾದ ಸಾವುಗಳ ಸಂಖ್ಯೆ ೨,೨೨೨ರಿಂದ ೧,೭೬೨ಕ್ಕೆ ಇಳಿದಿದೆ.) ಅಂದರೆ, ೧೯೬೨ ಮತ್ತು ೧೯೬೫ ಹಾಗೂ ೧೯೭೧ರ ಯುದ್ಧಗಳಲ್ಲಿ ಸಾವಿಗೀಡಾದ ಯೋಧರಿಗಿಂತ ಜಾಸ್ತಿ ಸಂಖ್ಯೆಯ ಜನರು, ಪ್ರತಿ ವರುಷ ರೈಲುಗಳಿಂದ ಬಿದ್ದು ಅಥವಾ ರೈಲುಗಳ ಅಡಿಗೆ ಸಿಲುಕಿ ಸಾಯುತ್ತಿದ್ದಾರೆ. ಮುಂಬೈಯಲ್ಲೇ ಪ್ರತಿ ದಿನ ಹತ್ತು ಜನರು ರೈಲುಗಳಿಗೆ ಬಲಿ!
ಸುಶಿಕ್ಷಿತ ಹಾಗೂ ಪ್ರಜೆಗಳಿಗೆ ಉತ್ತರದಾಯಿ ಸಮಾಜದಲ್ಲಿ ಹೀಗಾಗಬಾರದು. ಪ್ರಜೆಗಳ ಜೀವರಕ್ಷಣೆ ಸರಕಾರದ ಹೊಣೆ. ಹಾಗಿರುವಾಗ, ವಾಹನಗಳಿಂದಾಗಿ ಮತ್ತು ರೈಲುಗಳಿಂದಾಗಿ ಸಾಯುವವರನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಸರಕಾರ ಯಾಕೆ ಜ್ಯಾರಿ ಮಾಡುತ್ತಿಲ್ಲ?
ವಾಹನ ಅಥವಾ ರೈಲುಗಳಿಂದಾಗಿ ಜನರು ಸತ್ತಾಗೆಲ್ಲ ಸರಕಾರ ಪರಿಹಾರಧನ ಘೋಷಿಸಿ ಕೈತೊಳೆದು ಕೊಳ್ಳುತ್ತದೆ. ಜನರ ಜೀವಗಳಿಗೆ ಬೆಲೆ ಕಟ್ಟುವುದು (ಅದೂ ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ಬೆಲೆ ಕಟ್ಟುವುದು) ಜುಗುಪ್ಸೆ ಹುಟ್ಟಿಸುವ ಸಂಗತಿ.
ಢೆಲ್ಲಿ, ಮುಂಬೈ, ಕೊಲ್ಕತಾ, ಹೈದರಾಬಾದ, ಚೆನ್ನೈ, ತಿರುವನಂತಪುರ, ಬೆಂಗಳೂರು – ಇಂತಹ ಮಹಾನಗರಗಳಲ್ಲಿ ವಾಹನ ಚಲಾಯಿಸುವವರನ್ನು ಗಮನಿಸಿ. ವಾಹನ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಜನರಿಗೆ ಅಭ್ಯಾಸವಾಗಿದೆ. ಆ ಉಲ್ಲಂಘನೆಗೆ ಶಿಕ್ಷೆಯ ಭಯ ಇಲ್ಲದಿರುವುದೇ ಇದಕ್ಕೆ ಕಾರಣ; ದಂಡ ಕಟ್ಟಿ ಪಾರಾಗಬಹುದೆಂಬ ಭಾವನೆ ಜನರಲ್ಲಿ ಬೇರೂರಿದೆ.
ಈ ನಿಟ್ಟಿನಲ್ಲಿ, ಮೋಟರ್ ವಾಹನಗಳ ಕಾಯಿದೆಯ ತಿದ್ದುಪಡಿಯನ್ನು ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ೧ ಸಪ್ಟಂಬರ್ ೨೦೧೯ರಿಂದ ದೇಶದಾದ್ಯಂತ ಜ್ಯಾರಿ ಮಾಡಿರುವುದು ಸ್ವಾಗತಾರ್ಹ. ಇದರ ಅನುಸಾರ ವಾಹನ ಸಂಚಾರ ನಿಯಮಗಳ ಉಲ್ಲಂಘನೆಗೆ ಕಠಿಣ ಶಿಕ್ಷೆ ಮತ್ತು ಹಲವು ಪಟ್ಟು ಹೆಚ್ಚು ದಂಡ ಜ್ಯಾರಿಯಾಗಿದೆ. ಉದಾಹರಣೆಗೆ, ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವಾಗ ಪೊಲೀಸರಿಂದ ತಡೆಯಲ್ಪಟ್ಟರೆ ರೂ.೧,೦೦೦ ದಂಡ. ಮಾತ್ರವಲ್ಲ, ಅವರ ಚಾಲಕ ಲೈಸನ್ಸ್ ಮುಂದಿನ ಮೂರು ತಿಂಗಳುಗಳಿಗೆ ಸಸ್ಪೆಂಡ್ ಆದೀತು. ಮದ್ಯಸೇವಿಸಿ ವಾಹನ ಚಲಾಯಿಸಿದರೆ, ಅಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನಕ್ಕೆ ದಾರಿ ಬಿಡದಿದ್ದರೆ, ರೂ.೧೦,೦೦೦ ದಂಡ ಅಥವಾ ಜೈಲು ಶಿಕ್ಷೆ. ಇವೆರಡನ್ನೂ (ದಂಡ ಮತ್ತು ಜೈಲು ಶಿಕ್ಷೆ) ವಿಧಿಸುವ ಸಾಧ್ಯತೆಯೂ ಇದೆ.
ಹಾಗೆಯೇ, ರೈಲುಪ್ರಯಾಣ ಸುರಕ್ಷಿತವಾಗಲಿಕ್ಕಾಗಿ ಸುಧಾರಣಾ ಕ್ರಮಗಳು ಬೇಗನೇ ಜ್ಯಾರಿಯಾಗಬೇಕು. ಆಗ, ಬೆಲೆಕಟ್ಟಲಾಗದ ಸಾವಿರಾರು ಜೀವಗಳನ್ನು ಪ್ರತಿ ವರುಷ ಉಳಿಸಲು ಸಾಧ್ಯ.