ವಿಕಲಚೇತನರಿಗೆ ನೆರವು ನೀಡುವ ತಂತ್ರಾಂಶಗಳು ಮುಕ್ತ ತಂತ್ರಾಂಶಗಳಾಗಿ ಲಭ್ಯ

ವಿಕಲಚೇತನರಿಗೆ ನೆರವು ನೀಡುವ ತಂತ್ರಾಂಶಗಳು ಮುಕ್ತ ತಂತ್ರಾಂಶಗಳಾಗಿ ಲಭ್ಯ

ಬರಹ

 ವಿಕಲಚೇತನರಿಗೆ ನೆರವು ನೀಡುವ ತಂತ್ರಾಂಶಗಳು  ಮುಕ್ತ ತಂತ್ರಾಂಶಗಳಾಗಿ ಲಭ್ಯblog
ವಿಕಲಚೇತನರಿಗೆ ಸಾಮಾನ್ಯರಂತೆ ಜೀವನ ಸಾಗಿಸಲು ಅನುವು ಮಾಡುವ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ, ಅವನ್ನು ಮುಕ್ತವಾಗಿ ಒದಗಿಸುವ ಆಂದೋಲನಕ್ಕೆ ವಿದ್ಯಾರ್ಥಿ ಸಮುದಾಯ ಕೈಹಾಕಿದೆ.ಪ್ರಾಜೆಕ್ಟ್ ಪಾಸಿಬಿಲಿಟಿ ಎನ್ನುವ ಹೆಸರಿನೊಂದಿಗೆ ಆಸ್ತಿತ್ವಕ್ಕೆ ಬಂದಿರುವ ಈ ಆಂದೋಲನ ಈಗಾಗಲೇ ಕೆಲವು ತಂತ್ರಾಂಶಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಒದಗಿಸುತ್ತಿದೆ.ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಯೋಜನೆಯ ಹರಿಕಾರರು.ಈ ಯೋಜನೆಯಲ್ಲಿ ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ತಂತ್ರಾಂಶ ಯೋಜನೆಗಳ ಅನುಷ್ಠಾನ ಕಾರ್ಯವನ್ನು ವಿದ್ಯಾರ್ಥಿಗಳ ತಂಡಗಳಿಗೆ ವಹಿಸಿಕೊಡಲಾಗುತ್ತದೆ.ವಿದ್ಯಾರ್ಥಿಗಳ ತಂಡವನ್ನು ಯೋಜನೆಯಲ್ಲಿ ಪಾಲ್ಗೊಳ್ಳಲು ನೋಂದಾಯಿಸಿದ ವಿದ್ಯಾರ್ಥಿಗಳ ಗುಂಪಿನಿಂದ ಆಯ್ದು ರಚಿಸಲಾಗುತ್ತದೆ. ಪ್ರತಿ ತಂಡಕ್ಕೂ ಓರ್ವ ನಾಯಕನಿದ್ದು, ಆತನೇ ತನ್ನ ತಂಡಕ್ಕೆ ಯಾರು ಸೂಕ್ತರೆಂದು ಆಯ್ದುಕೊಳ್ಳುತ್ತಾನೆ.ಈ ಅಭಿವೃದ್ಧಿ ಕಾರ್ಯವು ಕೇವಲ ಎರಡು ದಿನಗಳಲ್ಲಿ ನಡೆಯುತ್ತದೆ. ತಂಡಗಳ ನಡುವೆ ಸ್ಪರ್ಧಾ ಮನೋಭಾವ ಮೂಡಿಸಲು ಪತ್ರಿಕಾ ಪ್ರಚಾರ, ಗೂಗಲ್ ಅಂತಹ ಕಂಪೆನಿಗಳಿಂದ ಪ್ರಾಯೋಜನೆ,ಉತ್ತಮ ಪ್ರಾಜೆಕ್ಟುಗಳಿಗೆ ಬಹುಮಾನ ಯೋಜನೆ ಇಂತಹ ತಂತ್ರಗಳನ್ನು ಹೂಡಲಾಗುತ್ತದೆ.ಎರಡು ದಿನ,ಹನ್ನೆರಡು ಹೊತ್ತಿನಲ್ಲಿ ತಂತ್ರಾಂಶ ಅಭಿವೃದ್ಧಿ ಕಾರ್ಯ ನಡೆಯುತ್ತದೆ.
ಅಂಗಡಿಗಳಲ್ಲಿ     ದೃಷ್ಟಿಯ ತೊಂದರೆಯಿರುವವರಿಗೆ ವಸ್ತುಗಳ ವಿವರಣೆ ನೀಡುವ ತಂತ್ರಾಂಶ ಬಾರ್‌ಕೋಡ್ ರೀಡರ್ ಬಹುಮಾನ ಗಳಿಸಿದ ತಂತ್ರಾಂಶಗಳಲ್ಲೊಂದು.ವಿಕಲಚೇತನರು ತಮ್ಮ ಹಾವಭಾವದ ಮೂಲಕವೇ ಕಂಪ್ಯೂಟರ್ ಮೌಸನ್ನು ತಮ್ಮ ಯೋಚನೆಯ ಮೂಲಕ ಚಲಾಯಿಸುವ ತಂತ್ರಾಂಶ ಎರಡನೆಯ ಬಹುಮಾನ ಗಳಿಸಿತು.http://projectpossibility.org/ನಲ್ಲಿ ವಿವರಗಳು ಲಭ್ಯವಿವೆ.ವರ್ಷವೂ ಇಂತಹ ಸ್ಪರ್ಧೆಗಳನ್ನು ನಡೆಸುವ ಮೂಲಕ ಕ್ಷಿಪ್ರವಾಗಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ,ಅವನ್ನು ಮುಕ್ತವಾಗಿ ಒದಗಿಸಿ, ವಿಕಲಚೇತನರಿಗೆ ಸಹಾಯ ಮಾಡುವ ಯೋಚನೆ ವಿದ್ಯಾರ್ಥಿಗಳದ್ದು.ಎರಡೆ ದಿವಸಗಳಲ್ಲಿ ನಡೆಯುವ ಈ ಸ್ಪರ್ಧೆಗೆ ,ಕಡಿಮೆ ಅವಧಿಯಲ್ಲಿ ತಂತ್ರಾಂಶ ಅಭಿವೃದ್ಧಿಗೆ ಅನುವು ಮಾಡಲು,ಪ್ರತಿಯೊಂದನ್ನೂ ಬುಡದಿಂದ ಆರಂಭಿಸದೆ, ಸದ್ಯ ಮುಕ್ತವಾಗಿ ಲಭ್ಯವಿರುವ ತಂತ್ರಾಂಶಗಳನ್ನು ಬಳಸಿಕೊಂಡು ಮುಂದುವರಿಯುವ ಅವಕಾಶ ನೀಡಲಾಗಿದೆ.
---------------------------------
ಐಫೋನನ್ನು "ತೆರೆಯುವ" ತಂತ್ರಾಂಶ
ಐಫೋನನ್ನು ನಿಗದಿತ ನಿಸ್ತಂತು ಸೇವಾದಾತೃಗಳ ಜಾಲದ ಮೂಲಕ ಮಾತ್ರಾ ಬಳಸಲು ಸಾಧ್ಯವಾಗುತ್ತದೆ. ಅಮೆರಿಕಾದಲ್ಲಾದರೆ, ಏಟಿಅಂಡ್‌ಟಿ,ಪ್ರಾನ್ಸ್‌ನಲ್ಲಾದರೆ ಒರೇಂಜ್ ಎನ್ನುವ ಜಾಲದಲ್ಲಿ ಐಫೋನ್ ಬಳಸಬಹುದು.ಭಾರತದಲ್ಲಿ ಏರ್‍ಟೆಲ್ ಈ ಒಡಂಬಡಿಕೆ ಮಾಡಿಕೊಂಡಿದೆ.ಆದರೀಗ ಕೆಲವು ಸ್ವತಂತ್ರ ತಂತ್ರಾಂಶ ಅಭಿವೃದ್ಧಿ ಪಡಿಸುವವರು ಯೆಲ್ಲೋಸ್‌ಆನ್ ಎನ್ನುವ ತಂತ್ರಾಂಶ ರಚಿಸಿ,ಆ ಮೂಲಕ ಐಫೋನ್ ಬಳಕೆಯನ್ನು ಇನ್ನಿತರ ಜಾಲಗಳ ಮೂಲಕವೂ ಸಾಧ್ಯವಾಗುವಂತೆ ಮಾಡಿದ್ದಾರೆ.ಐಫೋನಿನ ತ್ರೀಜಿ ಫೋನ್‌ನಲ್ಲಿ ಈ ತಂತ್ರಾಂಶ ಯಶಸ್ವಿಯಾಗಿ ಬಳಕೆಯಾಗುತ್ತಿದೆ.
--------------------------------------------------------------
ನಿಧಿ ಸಂಗ್ರಹ ಗುರಿ ತಲುಪಿದ ವಿಕಿಪೀಡಿಯಾ
ಮುಕ್ತ ವಿಶ್ವಕೋಶ ವಿಕಿಪೀಡಿಯಾ ತನ್ನ ವರ್ಷದ ನಿರ್ವಹಣಾ ಖರ್ಚನ್ನು ಸರಿದೂಗಿಸಲು ಆರು ಮಿಲಿಯನ್ ಡಾಲರು ಸಂಗ್ರಹಿಸುವ ಗುರಿಯನ್ನು ಹೊಂದಿತ್ತು. ಅದೀಗ ಯಶಸ್ವಿಯಾಗಿ ತನ್ನ ಗುರಿಯನ್ನು ತಲುಪಿದೆ. ಒಂದೂಕಾಲು ಲಕ್ಷ ಜನರ ವಂತಿಗೆಯ ಮೂಲಕ ಈ ನಿಧಿಯನ್ನು ಸಂಗ್ರಹಿಸಲಾಗಿದೆಯಂತೆ.ವಿಕಿಯ ಸ್ಥಾಪಕ ಜಿಮ್ಮಿ ವೇಲ್ಸ್ ಅವರು ಕಳೆದ ಜುಲೈನಲ್ಲಿ ವಂತಿಗೆ ನೀಡುವಂತೆ ಜನರಲ್ಲಿ ವಿನಂತಿಸಿಕೊಂಡಿದ್ದರು.
----------------------------------------------------------------
ಅಗ್ಗದ ಐಫೋನ್?
ಅಮೆರಿಕಾದಲ್ಲಿ ಆರ್ಥಿಕ ಕುಸಿತದ ಕಾರಣ ಎಲ್ಲಾ ವಸ್ತುಗಳು ಮಾರಾಟ ಕುಸಿತ ಕಾಣುತ್ತಿವೆ. ಇದಕ್ಕೆ ಐಫೋನ್ ಕೂಡಾ ಹೊರತಲ್ಲ.ಈ ತ್ರೈಮಾಸಿಕದಲ್ಲಿ ಐಫೋನ್ ಮಾರಾಟ ನಿರೀಕ್ಷೆಗಿಂತ ಕಡಿಮೆಯಾಗಿದೆ.ನೂರತೊಂಭತ್ತೊಂಭತ್ತು ಡಾಲರು ಮತ್ತು ಇನ್ನೂರ್‍ಅ ತೊಂಭತ್ತೊಂಭತ್ತು ಡಾಲರು ಹೀಗೆ ಎರಡು ತೆರನ ಐಫೋನ್ ಲಭ್ಯವಿದ್ದು, ಮೊದಲನೆಯದ್ದು ಎಂಟು ಜೀಬಿ ಸಾಮರ್ಥ್ಯದ್ದಾದರೆ, ಎರಡನೆಯದು ಹದಿನಾರು ಜೀಬಿಯದ್ದು.ಅಗ್ಗದ ಐಫೋನ್ ಬಿಡುಗಡೆ ಮಾಡುವ ಮೂಲಕ ಮಾರಾಟದಲ್ಲಿ ಕುಸಿತವನ್ನು ಎದುರಿಸಲು ಆಪಲ್ ಕಂಪೆನಿಯು ಯೋಜನೆ ಹಾಕಿಕೊಂಡಿದೆ.ಭಾರತದಂತಹ ದೇಶದಲ್ಲಿ ಐಫೋನ್ ಮಾರಾಟ ಹೆಚ್ಚಿಸಲೂ ಈ ಹೆಜ್ಜೆ ಸಹಾಯಕವಾಗಲಿದೆ.
-------------------------------------------------------------------
2009ರಲ್ಲಿ ಬರಲಿರುವ ಹೊಸ ಸಾಧನಗಳುblog
ಎಂಟಿಂಚು ಗಾತ್ರದ ತೆರೆಯಿರುವ ನೋಟ್‌ಬುಕ್ ಕಂಪ್ಯೂಟರನ್ನು ಸೋನಿ ಕಂಪೆನಿಯು ಈ ವರ್ಷ ಬಿಡುಗಡೆ ಮಾಡುವ ನಿರೀಕ್ಷೆಯಿದೆ.ಅತ್ಯಂತ ನೈಜ ಚಿತ್ರವನ್ನು ಪ್ರದರ್ಶಿಸುವ ಸಾವಯವ ಬೆಳಕು ಬೀರುವ ಡಯೋಡ್ ತೆರೆ ಇರುವ ಟಿವಿಯೂ ಈ ವರ್ಷ ಲಭ್ಯವಾಗಬಹುದು.ಇದರ ಸ್ಪಷ್ಟತೆ 100000:1 ಇರುತ್ತದೆ.ಈ ತೆರನ ಸ್ಪಷ್ಟತೆ ಸದ್ಯ ಯಾವುದೇ ಟಿವಿಯಲ್ಲಿಯೂ ಇಲ್ಲ.ಮ್ಯಾಕ್‍ಟ್ಯಾಬ್ಲೆಟ್ ಎನ್ನುವ ಕಿರುಗಾತ್ರದ ಮೊಬೈಲ್ ಸಾಧನವೂ ಇದರಲ್ಲಿ ಎರಡು ಬೆರಳುಗಳ ಮೂಲಕ ಬಳಸಬಹುದಾದ ಸ್ಪರ್ಶ ಸಂವೇದಿ ತೆರೆಯ ಬದಲಿಗೆ, ಬಹು ಬೆರಳುಗಳ ಸ್ಪರ್ಶಕ್ಕೆ ಸ್ಪಂದಿಸುವ ತಂತ್ರಜ್ಞಾನ ಲಭ್ಯವಾಗಬಹುದು.ಬ್ಲೂರೇಡಿಸ್ಕ್ ಎನ್ನುವ ಹೊಸ ನಮೂನೆಯ ಡಿವಿಡಿ ಹೊಸ ವರ್ಷದಲ್ಲಿ ಸಿಗಬಹುದು. ಈ ಡಿವಿಡಿಯಲ್ಲಿ ಎರಡು ಪದರಗಳಿದ್ದು, ಒಂದು ಪದರದಲ್ಲಿ ಸಾಮಾನ್ಯ ಡಿವಿಡಿಗೆ ಸರಿ ಹೊಂದುವ ಮಾಹಿತಿಯಿದ್ದರೆ, ಇನ್ನೊಂದು ಪದರದಲ್ಲಿ ಬ್ಲೂರೇಡಿಸ್ಕ್ ಡಿವಿಡಿಗೆ ಸರಿ ಹೊಂದುವ ಮಾಹಿತಿಯಿರುತ್ತದೆ. ಹೀಗಾಗಿ ಒಂದೇ ಡಿಸ್ಕಿನ ಮೂಲಕ ಎರಡೂ ನಮೂನೆಯ ಮಾಹಿತಿಯನ್ನು ಶೇಖರಿಸಲು ಸಾಧ್ಯ. ಹಳೆಯ ತಂತ್ರಜ್ಞಾನದ ಡಿವಿಡಿ ಪ್ಲೇಯರ್ ಕೂಡಾ ಬ್ಲೂರೇಡಿಸ್ಕ್ ಮೂಲಕ ಮಾಹಿತಿ ಪಡೆಯಲು ತೊಂದರೆಯಿಲ್ಲ.
----udayavani

ashokworld

*ಅಶೋಕ್‌ಕುಮಾರ್ ಎ