ವಿಕಲಚೇತನರು

ವಿಕಲಚೇತನರು

ದಿನಾಲೂ ಬೆಂಗಳೂರು ನಗರ ಸಾರಿಗೆ ಬಸ್‌ನಲ್ಲಿ ಹೋಗಿಬರುವಾಗಲೆಲ್ಲಾ ‘ವಿಕಲಚೇತನ’ ಎಂಬ ಪದ ತುಂಬಾ ಮುಜುಗರ ಪಡಿಸುತ್ತದೆ. ಅದು ಕೇವಲ ನನ್ನ ಮಟ್ಟಿಗೆ ಎಂದುಕೊಂಡಿದ್ದೆ.  ಆರ್ಕೈವಿನಿಂದ ಪ್ರತ್ಯಕ್ಷವಾದ 'ಅಂಗವಿಕಲರು ವಿಕಲಚೇತನರೇ?' ಈ ಚರ್ಚೆಯನ್ನು ನೋಡಿದರೆ ಈ ಪದ ಉಚಿತವೇ? ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಈ ಪದವನ್ನು ಸೂಚಿಸಿದವರು ವೆಂಕಟಸುಬ್ಬಯ್ಯನವರು ಎಂದು ಅದರಲ್ಲಿ ಕೆಲವರು ಬರೆದಿರುವುದನ್ನು ಓದಿ ನನಗೆ ಗೊಂದಲವೇ ಆಗಿದೆ.  ಕಾರಣ ಅವರು ಘನವಿದ್ವಾಂಸರು. ಅವರ ಬಗ್ಗೆ ತುಂಬಾ ಗೌರವವಿದೆ. ‘ಅಂಗವಿಕಲ’ದಲ್ಲಿ ಮತ್ತು ‘ವಿಕಲಚೇತನ’ದಲ್ಲಿ ಬದಲಾದ ‘ವಿಕಲ’ದ ಸ್ಥಾನ, ಆ ಪದಗಳ ಒಟ್ಟಾರೆ ಅರ್ಥವನ್ನು ಬೇರೆ ಬೇರೆ ರೀತಿಯಲ್ಲಿ ಗ್ರಹಿಸಲು ಸೂಚಿಸುತ್ತದೆ. ಆದರೆ ಇಂತಹ ಸೂಕ್ಷ್ಮ ಭಾಷೆಯನ್ನು ಕ್ಯಾಷ್ಯುವಲ್ಆಗಿ ಬಳಸುವ ಸಾಮಾನ್ಯರಿಗೆ ತೋರದು. ‘ಮಹಾನ್‌ಚೇತನ’ವನ್ನು ಅಪೇಕ್ಷಣೀಯವಾಗಿ ಒಪ್ಪುವ ಸಾಮಾನ್ಯ ಬುದ್ಧಿಗೆ ‘ವಿಕಲಚೇತನ’ ಇಷ್ಟವಾಗುವುದಿಲ್ಲ. ಈ ಪದದ ಅರ್ಥದ ಗ್ರಹಿಕೆಯಲ್ಲಿ ವಿದ್ವಾಂಸರ ಮತ್ತು ಸಾಮಾನ್ಯರ ನಡುವೆ ಇರುವ ಅಂತರ ಇಬ್ಬರಿಗೂ ಏನನ್ನೋ ಸೂಚಿಸುತ್ತಿದೆ ಅಲ್ಲವೇ?


ಮೂಲ ವಿಶಯಕ್ಕೆ ಸಂಬಂದಿಸಿದಂತೆ ಕೆಲವು ಮುಖ್ಯ ವಿಶಯಗಳು ಇಲ್ಲಿವೆ:
http://en.wikipedia.org/wiki/Americans_with_Disabilities_Act_of_1990


ಒಮ್ಮೊಮ್ಮೆ ನನಗೆ ಅಮೇರಿಕಾದಲ್ಲಿ ಡಿಸೆಬಿಲಿಟೀಸ್ ಆಕ್ಟ್‌ನಿಂದ ಕಲ್ಪಿಸಿರುವ ಸೌಲಭ್ಯಗಳ ಪ್ರಯೋಜನ ಡಿಸೇಬಲ್ ಆದವರಿಗಿಂತಲೂ ಹಾಗಲ್ಲದವರಿಗೇ ಮಿಗಿಲಾಗಿ ಆಗಿದೆ ಎನಿಸುತ್ತದೆ. ಡಿಸೇಬಲ್ ಆದವರ ವೀಲ್ ಚೇರ್ ಇತ್ಯಾದಿಗಳು ಅಡೆತಡೆ ಇರದೆ ಎಲ್ಲೆಡೆ ಚರಿಸಬೇಕಾದರೆ, ಸಮಾಜ ಅಂತಹ ಭರವಸೆಯನ್ನು ಡಿಸೇಬಲ್ ಆದವರಿಗೆ ಕೊಟ್ಟು ಆ ಮಾತನ್ನು ಉಳಿಸಿಕೊಳ್ಳಬೇಕದರೆ, ಸೈಡ್ ವಾಕ್ (ಫುಟ್ ಪಾತ್) ಇತ್ಯಾದಿ ನಾಗರೀಕ ಸೌಲಭ್ಯಗಳು ಯಾವ ಕನಿಷ್ಠ ಮಟ್ಟದಷ್ಟಾದರೂ  ಅಚ್ಚುಕಟ್ಟಾಗಿರಲೇ ಬೇಕೋ, ಆ ಮಟ್ಟದ ಸೌಲಭ್ಯಗಳು ಉಳಿದವರಿಗೆ ಅತ್ಯಂತ ಉತ್ತಮ ಮಟ್ಟದ ನಾಗರೀಕ ಸೌಲಭ್ಯವಾಗಿಬಿಡುತ್ತವೆ! ಉಳಿದವರ ನಾಗರೀಕ ಜನಜೀವನ ನೂರುಪಟ್ಟು ಸುಗಮವಾಗಿಬಿಡುತ್ತದೆ. 


ಇದು ನನಗೆ ಸದಾ ನೆನಪಿಸುವ ನೀತಿ ಏನೆಂದರೆ, ಒಂದು ಸ್ವಸ್ಥ ಸಮಾಜ ತನ್ನ ನಿಜವಾದ ದುರ್ಬಲ (ಡಿಸಡ್ವಾಂಟೇಜ್ಡ್) ವರ್ಗಕ್ಕೆ ಮಾಡಿಕೊಡುವ ಸೌಲಭ್ಯ ತನಗಾಗಿ  ತಾನೆ ಮಾಡಿಕೊಳ್ಳುವ ಉತ್ಕೃಷ್ಟ ಸೇವೆ.


ನಮ್ಮ ಬೆಂಗಳೂರು ನಗರದ ಅವ್ಯವಸ್ಥೆ ನಮ್ಮ ಸಮಾಜದ ಅಂಗೈ ಹುಣ್ಣಿಗೆ ಹಿಡಿದ ಕನ್ನಡಿ.  ಒಮ್ಮೆ  ಆಟೋದಲ್ಲಿ ರೆಸಿಡೆಂಸಿ ರಸ್ತೆಯಿಂದ ಮ್ಯೂಸಿಯಂ ರಸ್ತೆಗೆ ಎಡಕ್ಕೆ ತಿರುಗುವಾಗ ಕಂಡ ದೃಶ್ಯ,  ‘ವಿಕಲಚೇತನ’ ನೋಡಿದಾಗಲೆಲ್ಲಾ ನೆನಪಿಗೆ ಬರುತ್ತದೆ.


ಆತ ಸುಮಾರು ಐವತ್ತು ವರುಷದವರಿರಬಹುದು. ಕೈಯಲ್ಲಿ ಒಂದು ಕೋಲು; ಊರುಗೋಲಲ್ಲ. ಅದು ಈ ವೇಳೆಗಾಗಲೆ ಅವರ ಅವಯವಗಳಲ್ಲಿ  ಒಂದು  ಆಗಿಹೋಗಿರಬೇಕು. ತಮ್ಮ ಪಾದದಿಂದ ಸುಮಾರು ಮೂರುಹೆಜ್ಜೆಯಷ್ಟು ದೂರದಲ್ಲಿ ಹಾದಿಯನ್ನು ಮೆತ್ತಗೆ ದಡುವುತ್ತಾ ಅದಮ್ಯ ಆತ್ಮವಿಶ್ವಾಸದಿಂದ ತಲೆಯೆತ್ತಿ ನಡೆಯುತ್ತಾರೆ.   ಒಬ್ಬರೇ.   ಅವರು ಖಂಡಿತಾ ಎಲ್ಲೂ ಎಂದೂ ಎಡವಿಬಿದ್ದಂತೆ ಅನಿಸುವುದಿಲ್ಲ. ಆಂಖೋವಾಲೇ ಆಂಧೆಗಳು ಎಡುವುವ  ಪುಟ್‌ಪಾತಿನ ಅಡ್ಡಾದಿಡ್ಡಿಗಳು ಅವರ ಮಾಂತ್ರಿಕ ಕೋಲಿನ ತುದಿಯಲ್ಲಿ ಸಪಾಟಾಗಿಬಿಡುತ್ತವೆ. ಲೈಟ್ ಕಂಬ ಇತ್ಯಾದಿ ಅಡೆತಡೆಗಳು ಪಕ್ಕಸರಿಯುತ್ತವೆ. ಎರಡುಕಾಲಿನ ಮೃಗಗಳು ಒಂದುಕ್ಷಣ ಮನುಷ್ಯರಾಗಿಬಿಡುತ್ತವೆ. ನೀವು ಅವರನ್ನು ಹಿಂಬಾಲಿಸಿದರೆ ಅವಘಡವಿಲ್ಲದೇ ನಡೆದು ಹೋಗಬಹುದು.


‘ವಿಕಲಚೇತನ’: ಇದನ್ನು ಹಾಗೂಹೀಗೂ ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲೆ . ಆದರೆ ಅದನ್ನು ಯಾರ ಕುರಿತು ಹೇಳಬೇಕು ಎಂದು ಕೆಲವೊಮ್ಮೆ ತಿಳಿಯುವುದಿಲ್ಲ.


ಪ್ರಭು
 

Comments