ವಿಕಸನ...

ವಿಕಸನ...

ವಿಕಸನ ಎಂಬ ಪದದ ಅರ್ಥ ವ್ಯಾಪಕ. ಅರಳುವಿಕೆ, ವಿಸ್ತಾರವಾಗುವಿಕೆ, ಬೆಳವಣಿಗೆ, ಅಭಿವೃದ್ಧಿ, ಉತ್ಕರ್ಷ ಹೀಗೆ ಸಂದರ್ಭಾನು ಸಾರವಾಗಿ “ವಿಕಸನ” ಪದ ಬಳಕೆಯಾಗುತ್ತದೆ. ಕವಿ ಡಿ.ವಿ ಗುಂಡಪ್ಪನವರು, “ವನಸುಮದೋಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಹೇ ದೇವಾ” ಎಂದು ಭಗವಂತನನ್ನು ಯಾಚಿಸಿದ್ದಾರೆ. ಮನವು ಸಿದ್ಧಗೊಳ್ಳದೆ ವಿಕಸನ ಸಾಧ್ಯವಿಲ್ಲ ಎಂಬುದು ಕವಿಯ ಚರಣದಲ್ಲಿ ಬಿಂಬಿಸಲ್ಪಟ್ಟಿದೆ.

ನಮ್ಮ ನಾಳೆಗಳು ಸುಂದರವಾಗಿರಲು, ನಾವು ಎಲ್ಲರ ಕಣ್ಮಣಿಗಳಾಗಲು ವಿಕಸನವಾಗಲೇ ಬೇಕು. ದಿನವೊಂದರೊಳಗೆ ವಿಕಸಿಸುವ ಹೂವು ತನ್ನ ಅಲ್ಪ ಸಮಯದ ಜೀವಿತದಲ್ಲಿ ತನ್ನ ಬದುಕನ್ನು ಸಾರ್ಥಕಗೊಳಿಸುತ್ತದೆ. ನೋಡುಗರೆಲ್ಲರ ಕಣ್ಮನಗಳನ್ನು ಘಮಘಮಿಸುತ್ತಾ ಪುಳಕಗೊಳಿಸುತ್ತದೆ. ತನ್ನ ವಂಶವನ್ನು ಬೆಳಗಿಸುವ ಮತ್ತು ಬೆಳೆಸುವ ಪುಷ್ಪ ಧರ್ಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ. ದಶ ದಶಮಾನ ಕಾಲ ಮಾನವನಿಗೆ ಜೀವಿತವಿದೆ. ವನಸುಮಕ್ಕಿಂತಲೂ ವಿಶಾಲ ಪ್ರಮಾಣದಲ್ಲಿ ಜಗಗುಪಕಾರಿಯಾಗಿ ಬಾಳುವುದನ್ನು ನಾವೂ ಅರಿಯಬೇಕಲ್ಲವೇ?

ಬೇಡ ಬೇಡವೆಂದರೂ ದೇಹ ಎತ್ತರ ಮತ್ತು ಅಗಲಕ್ಕೆ ಬೆಳೆಯುತ್ತದೆ. ಆದರೆ ಇದು ಬೆಳೆಯುವಿಕೆಯೇ ಹೊರತು ವಿಕಸನವಲ್ಲ. ವಿಕಸನಕ್ಕೆ ದೇಹವೇ ಹೇತುವಾದರೂ ಗುರಿ ಮತ್ತು ಗುರಿಯ ಪಥ ನಿರ್ದಿಷ್ಟ ಮತ್ತು ಸ್ಥಿರವಾಗಿರಬೇಕು. ಚಂಚಲ ಮನೋಸ್ಥಿತಿ ವಿಕಸನಕ್ಕೆ ಪೂರಕವಲ್ಲ. ವಿಕಸನವು ಅನಪೇಕ್ಷಿತವಾಗಿ ಆಗದು. ಉದ್ದೇಶಪೂರ್ವಕವಾದ ಕ್ರಮಗಳು ಅಥವಾ ಪರಿಶ್ರಮದಿಂದ ವಿಕಸನವು ಸಾಧಿತವಾಗುತ್ತದೆ. ಜ್ಞಾನವಿಕಸನ, ಹೃದಯವಿಕಸನ, ಮನೋವಿಕಸನ, ಆರೋಗ್ಯವಿಕಸನ, ಜೀವನ ಕ್ರಮ ವಿಕಸನ, ಸಂಬಂಧಗಳ ವಿಕಸನ..... ಹೀಗೆ ವಿಕಸನವು ವ್ಯಕ್ತಿಯ ಸರ್ವಾಂಗೀಣ ಪ್ರಗತಿಯ ಸಂಕೇತಗಳಾಗಿವೆ. ಜೀವನ ಶೈಲಿಯ ವಿಕಸನವೆನ್ನುವಾಗ ಸಮತೂಕದ ಆಹಾರ ಕ್ರಮಗಳು, ಸ್ವಚ್ಛತೆಗೆ ನೀಡುವ ಆದ್ಯತೆ, ಜೀವನ ಮೌಲ್ಯಗಳು, ಆಕರ್ಷಕ ನುಡಿ ಮತ್ತು ದುಡಿಮೆ ಇತ್ಯಾದಿ ಸಕಾರಾತ್ಮಕ ಗುಣಗಳನ್ನೊಳಗೊಳ್ಳುತ್ತವೆ.

ಪದವಿಗಳು ವಿಕಸನದ ಅಂತಿಮ ಗಡಿಗಳಲ್ಲ. ಪದವಿ ಮತ್ತು ಉನ್ನತ ಹುದ್ದೆಯಲ್ಲಿರುವವರಲ್ಲೇ ನಕಾರಾತ್ಮಕ ಅಂಶಗಳು ಮನೆಯಾಗಿರುತ್ತವೆ. ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳ ನಿವಾಸಿಗಳನ್ನು ಸಂಪರ್ಕಿಸಿದರೆ ಪದವೀಧರ ಬುದ್ಧಿವಂತರ ವಿಕಸನ ಕುಂಠಿತವಾಗಿರುವುದನ್ನು ಗಮನಿಸಬಹುದು. ನಿವಾಸಿಗಳನ್ನು ವಿಚಾರಿಸಿದರೆ ಅವರೆಲ್ಲರೂ ಹೊಂದಿರುವ ಮಕ್ಕಳ ಪದವಿ ಮತ್ತು ಆದಾಯ ಮೇಲ್ಮಟ್ಟದಲ್ಲಿರುತ್ತದೆ. ಅವರಲ್ಲಿ ಯಾರೊಬ್ಬರೂ, “ನಮ್ಮ ಮಕ್ಕಳು ಬಡತನದಿಂದ ಕಷ್ಟಪಡುತ್ತಾರೆ, ನಮ್ಮ ಮಕ್ಕಳು ಅವಿದ್ಯಾವಂತರು, ನಮಗೆ ಮಕ್ಕಳಿಲ್ಲ.” ಎನ್ನುವುದಿಲ್ಲ. ಓದದ ಬಡವರ ಮಕ್ಕಳ ಮನಸ್ಸು ಕೂಡಾ ವಿಕಸನಗೊಂಡಿರುತ್ತದೆಂಬುದಕ್ಕಿದು ಸಾಕ್ಷ್ಯ.

ಮಂಗನೇ ವಿಕಸನಹೊಂದಿ ಮಾನವನಾದ ಎಂಬುದು ಡಾರ್ವಿನ್ ವಾದ. ಅದೇ ಮಾನನ ವಿಕಸನಹೊಂದಿ ಮಾಧವನಾಗಬೇಕೆಂದು ನಮ್ಮ ಆಶಾವಾದ. ಮಾನವ ಮಾಧವನಾಗಲು ಹಣ, ಆಸ್ತಿ, ರೂಪ, ದೇಹಬಲ ಮೊದಲಾದುವುಗಳಿದ್ದರೆ ಸಾಲದು. ಇವೆಲ್ಲ ಇಲ್ಲದೆಯೂ ವಿಕಸನ ಸಾಧ್ಯ. ಮಾನವತ್ವ ವೊಂದಿದ್ದರೆ ವಿಕಸನ ಖಂಡಿತಾ ಸಾಧ್ಯ. ಮೃಗೀಯತೆಯುಳ್ಳವರು ಮನುಷ್ಯರೂಪವನ್ನು ಮಾತ್ರ ಪಡದೆದಿರುತ್ತಾರೆ. ಆದರೆ ಮಾನವತ್ವ ಹೊಂದಿರುವುದಿಲ್ಲ. ಮಾನವತ್ವ ಬೆಳೆಯಲು ಹೃದಯ ವೈಶಾಲ್ಯತೆ ಅತ್ಯಗತ್ಯ. ಬದುಕು ಮತ್ತು ಬದುಕಲು ಬಿಡು ಎಂಬ ಸಾಮಾಜಿಕ ನ್ಯಾಯದ ಪಾಲಕರು ಮಾನವತೆಯ ಮಾಧವರಾಗಲು ಸಾಧ್ಯ.

ಸಹನೆ, ಅನುಕಂಪ, ಆದರಿಸುವ ಮತ್ತು ಗೌರವಿಸುವ ಗುಣ, ಸಹಕರಿಸುವ ಮನೋವೃತ್ತಿ, ದಾನಶೀಲತೆ, ಕೃತಜ್ಞತೆಯ ಭಾವ, ಉತ್ತಮ ನಡೆ, ನುಡಿ ಮತ್ತು ಗೈಮೆ, ಶೂನ್ಯ ಅಹಂ ಮೊದಲಾದ ಆದರಣೀಯ ಗುಣಗಳು ನಮ್ಮನ್ನು ವಿಕಸನಗೊಳಿಸುವ ಮಹಾ ಪಥಗಳು ಮತ್ತು ರಥಗಳು. ಜ್ಞಾನವೇ ವಿಕಸನದ ಹೆಬ್ಬಾಗಿಲು. ಜ್ಞಾನವೆನ್ನುವುದು ಗ್ರಂಥಜ್ಞಾನವನ್ನು ಮಾತ್ರ ಒಳಗೊಂಡಿರದೆ ಆಧ್ಯಾತ್ಮದ ಜ್ಞಾನವೂ ಸೇರಿರಬೇಕು. ಲೋಕಜ್ಞಾನ ಮತ್ತು ಜೀವನ ಧರ್ಮದ ಜ್ಞಾನಿಯ ವಿಕಸನ ಬಾಳೆಹಣ್ಣು ಸುಲಿದು ತಿನ್ನುವಷ್ಟು ಸುಲಭ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ