ವಿಕಾಸದ ಮಜಲು
ಕವನ
ಸೃಷ್ಟಿಯ ಆದಿಯ ಪೃಥ್ವಿಯ ಸ್ಥಿತಿಯಲಿ |
ಜೀವಿಯ ಉಗಮಕೆ ಜಲಧಿಯೆ ಮೂಲ |
ಜೀವಿಯ ವಿಕಾಸದ ವಿಧಿ ವಿಧಾನದಿ |
ಧರಣಿಯ ಗರ್ಭದ ಅಗ್ನಿಯ ಸಿಡಿತದಿ |
ಜಲಧಿಯ ಮೇಲೆಯೆ ಉರಿಯುವ ನೆಲವು
ಆರಿದ ನೆಲದಲಿ ಮನುವಿನ ಆಳ್ವಿಕೆ || 1 ||
ಜಲಪ್ರಳಯದಿ ಭೂಮಿಯ ಮುಳುಗಡೆ |
ಮನುವಿನ ಮೀನಲಿ ಜೀವಿಯ ಉಳಿಕೆ |
ಜೀವ ವಿಕಾಸದ ಭೂಮಿಯ ಪಾತ್ರಕೆ |
ಜಲಧಿಯ ಕಡೆಯಲು ಆಮೆಯ ಕೊಡುಗೆ |
ಮುಗಿಯದು ಇನ್ನೂ ಮೇದಿನಿ ವೇದನೆ |
ದಾನವ ಹರಣದ ದಾರುಣ ಧರಣಿಗೆ |
ದೈತ್ಯನ ಮೌಢ್ಯದಿ ಜಲಧಿಯ ಕಬಳಿಕೆ |
ವರಾಹ ಕೊಂಬಲಿ ತಂದನು ಮೇಲಕೆ || 2 ||
ಜೀವ ವಿಕಾಸದ ಮಜಲಿನ ಧರೆಯಲಿ |
ಧರೆಯೊಳು ಉರಿಯುವ ಸೂರ್ಯನ ಬಿಸಿಲು |
ಬಿಸಿಲಿನ ಬೇಗೆಗೆ ನೀರಿನ ಆವಿಯು |
ಆವಿಯ ತೇವದಿ ತೇಲುವ ಮೋಡವು |
ಮೋಡದಿ ಸಂಚಿತ ಮಿಂಚಿನ ಮಳೆಯು |
ಮಳೆಯಲಿ ನೆನೆಯಲು ಇಳೆಯಲಿ ಛಳಿಯು |
ಛಳಿಯನು ತಣಿಸಲು ಬಿಸಿಲಿನ ಝಳವು |
ಇಳೆಯಲಿ ಕಾಲದ ಋತುಗಳ ಪಾಳಿಯು |
ಮಣ್ಣಿನ ನೆಲದಲು ಜೀವಿಯ ನಲಿವು |
ತಿರೆಯಲಿ ತರತರ ಜೀವದ ಕಳೆಯು || 3 ||