ವಿಕ್ರಾಂತ್ - ಭಾರತವೇ ನಿರ್ಮಿಸಿದ ಮೊದಲ ವಿಮಾನವಾಹಕ ಯುದ್ಧನೌಕೆ
ಇದೀಗ ನಮ್ಮ ಭವ್ಯ ಭಾರತ ಜಗತ್ತಿನ ಬೇರೆಲ್ಲ ದೇಶಗಳಿಗೂ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ: ಕೊಚ್ಚಿ ನೌಕಾ ನೆಲೆಯಲ್ಲಿ (ಕೊಚಿನ್ ಷಿಪ್‌ಯಾರ್ಡ್ ಲಿಮಿಟೆಡ್) ನಿರ್ಮಿಸಲಾದ ಮೊದಲ ವಿಮಾನವಾಹಕ ಯುದ್ಧ ನೌಕೆ, ಆಗಸ್ಟ್ ೨೦೨೧ರ ಆರಂಭದಲ್ಲಿ ಐದು ದಿನಗಳ ಮೊದಲ ಪ್ರಾಯೋಗಿಕ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
೪ ಆಗಸ್ಟ್ ೨೦೨೧ರಂದು ಈ ಪ್ರಾಯೋಗಿಕ ಯಾನ ಆರಂಭವಾಯಿತು. "ಯಾನದಲ್ಲಿ ಈ ಬೃಹತ್ ಯುದ್ಧನೌಕೆಯ ಕಾರ್ಯಕ್ಷಮತೆ ಅತ್ಯುತ್ತಮವಾಗಿತ್ತು” ಎಂದು ಭಾರತೀಯ ನೌಕಾ ಪಡೆಯ ವಕ್ತಾರರಾದ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.
ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಮಾದಿತ್ಯದ ನಂತರ ಭಾರತೀಯ ನೌಕಾ ಪಡೆಯ ಆ ವರ್ಗದ ಅತ್ಯಂತ ದೊಡ್ಡ
ನೌಕೆ ಇದು. ಇದರ ಅಳತೆಗಳು: ಉದ್ದ ೨೬೨ ಮೀ. ಅತ್ಯಂತ ಅಗಲದ ಭಾಗದಲ್ಲಿ ಅಗಲ ೬೨ ಮೀ. ಮತ್ತು ಎತ್ತರ ೫೯ ಮೀ.
ಇದರಲ್ಲಿರುವ ಡೆಕ್(ಅಂತಸ್ತು)ಗಳ ಸಂಖ್ಯೆ ೧೪ ಮತ್ತು ವಿಭಾಗಗಳ ಸಂಖ್ಯೆ ೨,೩೦೦. ಇದರ ಪ್ರಯಾಣ ವೇಗ ೧೮ ನಾಟ್. ಇದು ಸಾಗಬಲ್ಲ ಗರಿಷ್ಠ ವೇಗ ೨೮ ನಾಟ್. ಇದು ಹೊರನೂಕುವ ನೀರಿನ ಪರಿಮಾಣ (ಡಿಸ್‌ಪ್ಲೇಸ್‌ಮೆಂಟ್) ೪೦,೦೦೦ ಟನ್.
ಇದರಲ್ಲಿರುವ ನೌಕಾದಳದ ಸಿಬ್ಬಂದಿಯ ಸಂಖ್ಯೆ ೧,೭೦೦. ಇದರ ನಿರ್ಮಾಣ ಹಂತದಲ್ಲಿ ಸಾವಿರಾರು ಜನರಿಗೆ ಉದ್ಯೋಗವಕಾಶಗಳು ಲಭ್ಯವಾದವು. ಕೊಚ್ಚಿ ನೌಕಾ ನೆಲೆಯಲ್ಲೇ ೨,೦೦೦ ಜನರಿಗೆ ನೇರ ಉದ್ಯೋಗ ಲಭ್ಯವಾಯಿತು. ಅದಲ್ಲದೆ, ಪೂರಕ ಕೈಗಾರಿಕಾ ಘಟಕಗಳಲ್ಲಿ ೧೨,೦೦೦ ಉದ್ಯೋಗಿಗಳಿಗೆ ಕೆಲಸ ಒದಗಿತು. ಇದರ ನಿರ್ಮಾಣದಲ್ಲಿ ಕೈಜೋಡಿಸಿದ ಭಾರತೀಯ ಘಟಕಗಳ ಸಂಖ್ಯೆ ೫೫೦.
ಇದರ ನಿರ್ಮಾಣ ವೆಚ್ಚ ರೂ.೨೩,೦೦೦ ಕೋಟಿ. ಆದರೆ, ಇದರಲ್ಲಿರುವ ಶೇಕಡಾ ೭೬ರಷ್ಟು ಭಾಗಗಳು ಭಾರತದಲ್ಲೇ ನಿರ್ಮಿಸಲ್ಪಟ್ಟ ಕಾರಣ, ನಿರ್ಮಾಣವೆಚ್ಚದ ಬಹುಪಾಲು ನಮ್ಮ ದೇಶದ ಅರ್ಥ ವ್ಯವಸ್ಥೆಯಲ್ಲೇ ಮರುಹೂಡಿಕೆಯಾಯಿತು - ಬಿಡಿಭಾಗಗಳ ಖರೀದಿ ಮತ್ತು ಉದ್ಯೋಗಿಗಳ ವೇತನದ ಮೂಲಕ.
ಈ ವಿಮಾನವಾಹಕ ಯುದ್ಧನೌಕೆಯಲ್ಲಿ ಫೈಟರ್ ಜೆಟ್ ವಿಮಾನಗಳೂ, ವಿಭಿನ್ನ ಸಾಮರ್ಥ್ಯದ (ಮಲ್ಟಿರೋಲ್) ಹೆಲಿಕಾಪ್ಟರುಗಳೂ, ಕ್ಷಿಪ್ರ ಮುನ್ಸೂಚನಾ (ಅರ್ಲಿ ವಾರ್ನಿಗ್) ಹೆಲಿಕಾಪ್ಟರುಗಳು ಸನ್ನದ್ಧ ಸ್ಥಿತಿಯಲ್ಲಿರುತ್ತವೆ.
ಭಾರತದ ನೌಕಾಪಡೆಯಲ್ಲಿ ಇದಕ್ಕಿಂತ ಮುಂಚೆ (ಮೊದಲನೆಯ) ಐಎನ್‌ಎಸ್ ವಿಕ್ರಾಂತ್ ಹೆಸರಿನ ವಿಮಾನವಾಹಕ ಯುದ್ಧನೌಕೆ ಇತ್ತು. ಅದರ ಮೂಲ ಹೆಸರು ಎಚ್‌ಎಮ್‌ಎಸ್ ಹರ್-ಕ್ಯುಲಿಸ್. ಅದು ಭಾರತೀಯ ನೌಕಾ ಪಡೆಗೆ ೧೯೬೧ರಿಂದ ೧೯೯೭ರ ವರೆಗೆ ಸೇವೆ ಸಲ್ಲಿಸಿತ್ತು. ಪೂರ್ವ ವಲಯದಲ್ಲಿ ೧೯೭೧ರ ಯುದ್ಧದಲ್ಲಿ ಅದು ಪ್ರಮುಖ ಪಾತ್ರ ವಹಿಸಿತ್ತು.
ಇನ್ನೂ ಕೆಲವು ಪ್ರಾಯೋಗಿಕ ಯಾನಗಳ ನಂತರ, ೨೦೨೨ರಲ್ಲಿ ಭಾರತೀಯ ನೌಕಾ ಪಡೆಗೆ ವಿದ್ಯುಕ್ತವಾಗಿ "ವಿಕ್ರಾಂತ್" ಸೇರ್ಪಡೆಯಾಗಲಿದೆ. ಆಗ ಭಾರತೀಯ ನೌಕಾ ಪಡೆ ಜಗತ್ತಿನಲ್ಲಿ ಒಂದಕ್ಕಿಂತ ಜಾಸ್ತಿ ವಿಮಾನವಾಹಕ ಯುದ್ಧನೌಕೆ ಹೊಂದಿರುವ ಐದನೆಯ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಯಾಕೆಂದರೆ, ಜಗತ್ತಿನಲ್ಲಿ ಈಗ ಕೇವಲ ಈ ನಾಲ್ಕು ದೇಶಗಳು ಒಂದಕ್ಕಿಂತ ಜಾಸ್ತಿ ವಿಮಾನವಾಹಕ ಯುದ್ಧನೌಕೆಗಳನ್ನು ಹೊಂದಿವೆ: ಯುಎಸ್‌ಎ (೧೧), ಚೀನಾ (೨), ಇಟೆಲಿ (೨) ಮತ್ತು ಯುನೈಟೆಡ್ ಕಿಂಗ್‌ಡಮ್ (೨).
ಬೃಹತ್ ವಿಮಾನವಾಹಕ ಯುದ್ಧನೌಕೆಯೊಂದನ್ನು ಆಂತರಿಕವಾಗಿ ನಿರ್ಮಿಸಿದ ಮಹತ್ತರ ಸಾಧನೆಗಾಗಿ ನಮ್ಮ ದೇಶದ ಸ್ವಾತಂತ್ರ್ಯದ “ಅಮೃತೋತ್ಸವ"ದ ಸಂದರ್ಭದಲ್ಲಿ ನಾವೆಲ್ಲರೂ ಸಂಭ್ರಮಿಸೋಣ.
(“ಸಂಪದ"ದಲ್ಲಿ ೨೨ ಸಪ್ಟಂಬರ್ ೨೦೨೦ರಂದು ಪ್ರಕಟವಾದ “ಐಎನ್‌ಎಸ್ ವಿರಾಟ್ ಇನ್ನು ನೆನಪು ಮಾತ್ರ" ಎಂಬ ನನ್ನ ಲೇಖನವನ್ನೂ ಓದಬಹುದು.)