ವಿಘ್ನ ನಿವಾರಕ ಗಣೇಶನ ಹಬ್ಬವನ್ನು ಆಚರಿಸೋಣ

*ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ|*
*ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ||*
ವಿಘ್ನ ನಿವಾರಕನಾದ ಗಣೇಶನನ್ನು ನೆನೆಯದೆ ಯಾವುದೇ ಪೂಜೆಗಳಿಲ್ಲ. ಯಾವುದರಲ್ಲೂ ಮೊದಲ ಪೂಜೆ ಕೈಗೊಳ್ಳುವ ಗಣಪತಿ. ಗಜಾನನಿಗಾದರೋ ನೂರೆಂಟು ಹೆಸರುಗಳು. ಗಜಾನನ, ಏಕದಂತ, ಲಂಬೋದರ, ಗೌರೀಪುತ್ರ, ವಿನಾಯಕ, ಫಾಲಚಂದ್ರ, ಹೇರಂಬ, ಪಾಶಾಂಕುಶಧರ,ಗಣಾಧಿಪ, ಗಜವಕ್ತ್ರ, ಮೋದಕಪ್ರಿಯ, ಗಣೇಶ, ಗಣಪತಿ ಹೀಗೆ ಹಲವಾರು ಹೆಸರುಗಳು.
ಗಣಪತಿಯ ಬಗ್ಗೆ ನಾನಾ ಕಥೆಗಳಿವೆ. ಆತನ ರೂಪಕ್ಕೂ ಕಾರಣವಿದೆ. ಪಾರ್ವತಿ ತಾನು ಸ್ನಾನ ಮಾಡಲು ಹೋಗುವ ಮೊದಲು ಬೆವರಿನಿಂದ (ಮಣ್ಣಿನಿಂದ ಎಂದೂ ಉಲ್ಲೇಖವಿದೆ) ಒಂದು ಬಾಲಕನ ರೂಪವನ್ನು ಮಾಡಿ ಅದಕ್ಕೆ ಜೀವ ತುಂಬಿ ಕಾವಲು ಕಾಯಲು ಹೇಳುವುದು, ಮಹಾಶಿವನನ್ನು ಆ ಬಾಲಕ ತಡೆಯುವುದು, ಸಿಟ್ಟಿನಿಂದ ತಲೆ ಕತ್ತರಿಸುವುದು, ದೇವಿಯ ಅಳಲು, ಕೋಪ ನೋಡಲಾಗದೆ ಆನೆಯ ತಲೆ ಜೋಡಿಸುವುದು ಹೀಗೆ ಗಣೇಶನ ಜನ್ಮವಾಯಿತೆಂಬ ಪ್ರತೀತಿ. ಶಿವನ ಗಣಗಳನ್ನು ಸೋಲಿಸಿ ಗಣಾಧಿರಾಜನಾದ. ಆನೆ ಮೊಗ ಜೋಡಿಸಿ ಗಜಾನನ ಎನಿಸಿದ. ಜನ್ಮ ತಾಳಿದ ದಿನ ಲೋಕದ ಜನ ಭಕ್ತಿ ಗೌರವದಿಂದ ನೋಡಲಿ, ಪೂಜಿಸಲಿ, ವಿಘ್ನನಿವಾರಕನಾಗಿ ಸಲಹು ಎಂದು ಪರಶಿವನು ಆಶೀರ್ವದಿಸಿದನಂತೆ.
ಭಾದ್ರಪದ ಮಾಸದ ಶುಕ್ಲಪಕ್ಷ ಚತುರ್ಥಿಯ ದಿನ ವಿಶೇಷ. ನಮ್ಮದು ಕೃಷಿ ಪ್ರಧಾನವಾದ ನೆಲಜಲವೆಲ್ಲವನ್ನೂ ಒಳಗೊಂಡ ದೇಶ. ಕೃಷಿ ಕೆಲಸ ಕಾರ್ಯಗಳಲ್ಲಿ ಆನೆ ಬಂದು ನಾಶಮಾಡುವುದು, ಬೆಳೆದ ಧಾನ್ಯಗಳನ್ನು ಇಲಿ ನಾಶ ಮಾಡುವುದು ಗೊತ್ತೇ ಇದೆ. ಇದೆಲ್ಲವನ್ನೂ ಪರಿಹರಿಸು ಎಂದು ಪರ್ವತರಾಜನ ಮಗಳಾದ ಪಾರ್ವತಿಯಲ್ಲಿ ನಮ್ಮ ಕೇಳಿಕೆ. ಆಕೆ ಪ್ರಕೃತಿ, ಶಿವ ಸೂರ್ಯ. ಇವರೀರ್ವರ ಸೃಷ್ಟಿ ಗಣೇಶ. ಗಣಪತಿ ಕೃಷಿಯ ಒಂದು ಭಾಗವೆಂದು ನಂಬಿದವರು ನಾವು. ತಾಯಿ ಪಾರ್ವತಿ ಸಹ ಗಣಪತಿಯ ಪೂಜೆ ಮಾಡಿ ಶಿವನನ್ನು ಮೆಚ್ಚಿಸಿದ ಕಥೆಯಿದೆ. ಗಣಪತಿ ಓರ್ವ ಭಯ ನಿವಾರಕ. ಹಾಗಾಗಿ ಭಯವಿಲ್ಲದೆ ಅವನನ್ನು ಭಜಿಸಿ, ಧ್ಯಾನಿಸಬೇಕು. ವೈಜ್ಞಾನಿಕವಾಗಿ ನೋಡಿದರೆ ಗಣೇಶ ಸೃಷ್ಟಿ, ಸ್ಥಿತಿ, ಲಯಗಳ ಕಾರಣೀಭೂತನು, ಜ್ಞಾನ ಮಯನೂ ಆಗಿದ್ದಾನೆ.ಗಣಪತಿಗೂ ಮಣ್ಣಿಗೂ ಅವಿನಾಭಾವ ಸಂಬಂಧ.
ಗಣೇಶ ಭಕ್ತರು ನೀಡಿದ ಭಕ್ಷ್ಯಭೋಜ್ಯಂಗಳನ್ನು ಎಲ್ಲಾ ತಿಂದು ಉದರವು ದೊಡ್ಡದಾಗಿ ನಡೆಯಲು ಸಾಧ್ಯವಿಲ್ಲದಷ್ಟು ಆಗಿ ಬಿಟ್ಟು ಉಸಿರು ಕಟ್ಟಿದಂತಾಯಿತಂತೆ. ಇದರಿಂದಲೇ ಅವನಿಗೆ ಲಂಬೋದರ ಎಂಬ ಹೆಸರು ಬಂತು. ಇದರ ಸಂಕೇತ ಬಂದ ಕಷ್ಟನಷ್ಟಗಳನ್ನು, ನೋವು ನಲಿವುಗಳನ್ನು ನುಂಗಿ ಜೀರ್ಣಿಸಿಕೊಳ್ಳುವ ತಾಕತ್ತು ನಮ್ಮಲ್ಲಿರಬೇಕು. ಇಲಿಯೇ ವಾಹನ ಹಾವನ್ನು ಹೊಟ್ಟೆಗೆ ಬಿಗಿದು ನಿಟ್ಟುಸಿರು ಚೆಲ್ಲಿದವ ಗಣೇಶ. ಇವನ ಅವಸ್ಥೆ ನೋಡಿ ನಕ್ಕವ ಚಂದ್ರ. ಸಿಟ್ಟಿನಿಂದ ತನ್ನ ಒಂದು ದಾಡೆಯನ್ನೇ ಕಿತ್ತು ಚೌತಿಯ ದಿನದ ಚಂದ್ರನಿಗೆ ಎಸೆದು ಏಕದಂತ ಎನಿಸಿದ.
ಗಣಪತಿಗೆ ಗರಿಕೆ ವಿಶೇಷ. ಮೋದಕ ಕಡುಬು ಪ್ರಿಯ. ತೃತೀಯ ದಿನ ಗೌರಿಗೆ, ಚತುರ್ಥಿ ದಿನ ಗಣೇಶಗೆ ಪೂಜೆ. ೧೬ ಬಗೆಯ ಪೂಜೆ ಷೋಡಶೋಪಚಾರ ಗಣೇಶನಿಗೆ ಮಾಡುತ್ತಾರೆ. ಗಣಪತಿ ತತ್ವವನ್ನು ನಾವು ಆರಾಧಿಸಬೇಕು. ಸ್ನೇಹಪರ,ಭಕ್ತಪ್ರಿಯ ದೇವನೀತ. ಸೂರ್ಯನು ಬುದ್ಧಿ ತತ್ವ, ಚಂದ್ರ ಮನಸ್ತತ್ವಕ್ಕೆ ದೇವತೆ. ಗಣಪತಿಯೊಳಗೆ ೨೧ ತತ್ವ ಗಳಿವೆ.
ಬ್ರಿಟಿಷರು ಭಾರತದಲ್ಲಿ ಅಧಿಪತ್ಯ ಸಾಧಿಸಿದ ಸಮಯದಲ್ಲಿ ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗುವ ನಿಟ್ಟಿನಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ ವನ್ನು ಆರಂಭಿಸಲು ಕರೆಕೊಟ್ಟು ಯಶಸ್ವಿಯಾದರು ಬಾಲಗಂಗಾಧರ ತಿಲಕರು. ಒಗ್ಗೂಡುವಿಕೆಯ ದೇವನೀತ. ಕಲ್ಲು, ಮಣ್ಣು, ಪರ್ವತ,ನದಿ ಬೆಟ್ಟ, ಮರಳು ಇದು ಗಣೇಶನಿಗೆ ಪ್ರಿಯ. ಪರಿಸರ ಪ್ರಿಯ, ಪರಿಸರ ಸ್ನೇಹಿ ಗಣೇಶ ವಾತಾವರಣದ ದೃಷ್ಟಿಯಿಂದ ಉತ್ತಮ. ರಾಸಾಯನಿಕ ಬಣ್ಣ ಲೇಪಿಸದೆ, ಪ್ಲಾಸ್ಟಿಕ್ ಗಣಪತಿಯನ್ನು ಮಾಡದೆ ಪರಿಸರಕ್ಕೆ ಕೊಡುಗೆ ಸಲ್ಲಿಸೋಣ. ಈ ಮಣ್ಣಿಗೆ ಒಂದು ದಿನ ಬೀಳುತ್ತೇವೆ, ಮುಂದೊಂದು ದಿನ ಇದೇ ಮಣ್ಣಿಗೆ ಸೇರುತ್ತೇವೆ ಎಂಬುದು ಮಾನವರಿಗೆ ನೆನಪಿದ್ದರೆ ಸಾಕು.
ಈ ಕೊರೋನಾ ಸಂಕಷ್ಟ ನಮ್ಮ ಬದುಕನ್ನೇ ಅಲ್ಲಾಡಿಸಿತು. ಒಮ್ಮೆ ಇದು ತೊಲಗಲೆಂದು ಪ್ರಾರ್ಥಿಸೋಣ. ಎಲ್ಲರೂ ಇರುವುದರಲ್ಲಿಯೇ ತೃಪ್ತಿ, ನೆಮ್ಮದಿ ಕಾಣುತ್ತಾ ಬದುಕಲು ಕಲಿಯೋಣ.
*ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋದಂತಿಃ ಪ್ರಚೋದಯಾತ್*||
ಕರಾವಳಿ ಕರ್ನಾಟಕ ದಲ್ಲಿ ವಿಶೇಷಪೂಜೆ ನಾವು ಎಲ್ಲೆಡೆ ಕಾಣಬಹುದು.
*ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ|*
*ಅನೇಕದಂತಂ ಭಕ್ತಾನಾಂ* *ಏಕದಂತಮುಪಾಸ್ಮಹೇ||*
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ (ಆಕರ: ಶ್ರೀ ಗಣೇಶ ಸ್ತೋತ್ರ)