ವಿಚಾರವಾದಕ್ಕಿರುವ ಬೆಲೆಯೆಷ್ಟು ??
ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ , ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವಾ ಸತ್ಯ ಕೆಲವೊಮ್ಮೆ ನಮ್ಮ ಸಾಂಪ್ರದಾಯಿಕ ನಂಬಿಕೆಗಿಂತ ಬಿನ್ನವೂ ಆಗಿರಬಹುದು, ಕೆಲವೊಮ್ಮೆ ನಮ್ಮ ನಂಬಿಕೆಗಳಿಗೆ ನಿಕಟವೂ ಇರಬಹುದು, ವಿಚಾರ ಸತ್ಯವೂ ಆಗಿರಬಹುದು ಕೆಲವೊಮ್ಮೆ ಸತ್ಯಕ್ಕೆ ದೂರವು ಇರಬಹುದು. ಅಧ್ಯಯನದ ಆಧಾರದ ಮೇಲೆ ಅನೇಕ ವಿಚಾರಗಳನ್ನು ಚರ್ಚೆಗೆ ತಳ್ಳುವುದೇ "ವಿಚಾರವಾದ". ಈ ರೀತಿಯ ಸಿದ್ದಾಂಥವನ್ನು ನಂಬಿ ವಿಷಯಗಳನ್ನು ವಿಬಿನ್ನ ದೃಷ್ಟಿಕೋನಗಳಲ್ಲಿ ನೋಡಿ ಸತ್ಯವನ್ನು ಅರಿಯುವವರು "ವಿಚಾರವಾದಿ"ಗಳು. ವಿಚಾರವಾದಿಗಳು ಪ್ರತಿಪಾದಿಸುವ ವಿಚಾರಗಳ ಮೇಲೆ ಚರ್ಚೆಗಳು ಆಗಬೇಕೆ ವಿನಃ ವಿಚಾರವಾದಿಗಳ ಕೊಲೆಗಳಲ್ಲ. ಚರ್ಚೆಯ ಬಳಿಕ ಆ ಸತ್ಯವನ್ನು ಒಪ್ಪಿಕೊಳ್ಳುವುದು ಬಿಡುವುದು ನಮಗೆ ಬಿಟ್ಟ ವಿಷಯ.
ನಮ್ಮ ಸಮಾಜದಲ್ಲಿ ಅನೇಕ ವಿಚಾರವಾದಿಗಳು ಇದ್ದಾರೆ. ಕೆಲವರ ವಾದ ನಮಗೆ ಇಷ್ಟವಾಗಬಹುದು, ಮತ್ತೆ ಕೆಲವರಿಗೆ ಇಷ್ಟವಾಗದೆಯೂ ಇರಬಹುದು. ಈ ರೀತಿಯ ಬಿನ್ನತೆಯನ್ನು ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ, ಹೇಗೆ ಆ ವಿಷಯವನ್ನು ಚರ್ಚಿಸುತ್ತದೆ ಎನ್ನುವುದರ ಮೇಲೆ ನಮ್ಮ ಸಮಾಜದ ಪ್ರೌಡತೆ ತಿಳಿಯುತ್ತದೆ. ವಿಚಾರವಾದ ಕೇವಲ ವಿವಾದಗಳನ್ನು ಹುಟ್ಟಿಹಾಕದೆ , ಒಂದು ವಿಷಯಕ್ಕೆ ತಾತ್ವಿಕ ಅಂತ್ಯವನ್ನು ನೀಡಬೇಕು. ಆ ರೀತಿಯ ವಿಚಾರವದವನ್ನು ಪ್ರತಿಪಾದಿಸುತ್ತಿದ್ದ ಅನೇಕ ಮಹಾನ್ ವ್ಯಕ್ತಿಗಳು ಶತಮಾನಗಳಿಂದಲೂ ನಮ್ಮ ಸಮಾಜದಲ್ಲಿ ಇದ್ದಾರೆ. ಆದರೆ ನಾವು ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದೇ ಒಂದು ದೊಡ್ಡ ಪ್ರಶ್ನೆ . ೧೨ನೆ ಶತಮಾನದಲ್ಲಿ ಬಸವಣ್ಣ ಹಾಗು ಅನೇಕ ವಚನಕಾರರು ವಿಚಾರವಾದಿಗಳಾಗಿದ್ದರೆ, ರಾಜಾರಾಂ ಮೋಹನ್ ರೋಯ್, ದಯಾನಂದ ಸರಸ್ವತಿ ಇನ್ನು ಅನೇಕ ಮಹನೀಯರು ವಿಚಾರವಾದದ ಪರಂಪರೆಯನ್ನು ಪ್ರಾರಂಬಿಸಿದರು. ಆದರೆ ಅವರುಗಳನ್ನು ನಮ್ಮ ಸಮಾಜ ಹೇಗೆ ನಡೆಸಿಕೊಂಡಿದೆ ಎಂದು ನಮ್ಮ ಇತಿಹಾಸವೇ ಹೇಳುತ್ತದೆ.
ಅದು ಆಗಿನಕಾಲ, ಆದರೆ ಈ ೨೧ನೇ ಶತಮಾನದಲ್ಲೂ ನಾವೇಕೆ ಇಷ್ಟೊಂದು ಕುಬ್ಜರಾಗಿದ್ದೇವೆ. ವಿಚಾರದಕ್ಕೆ ನಮ್ಮ ಸಮಾಜದಲ್ಲಿ ಇನ್ನೂ ಬೆಲೆಯೇ ಇಲ್ಲವೇ ? ವಿಚಾರವಾದಿಗಳನ್ನು ದ್ವೇಶಿಸುವುದರ ಬದಲು ಅವರು ಎತ್ತುವ ವಿಷಯಗಳ ಮೇಲೆ ನಾವು ಚರ್ಚಿಸಬೇಕಲ್ಲವೇ ? ವಿಚಾರವಾದಿಗಳಿಗೆ ನೀನು ಎಡಪಂಕ್ತೀಯ , ನೀನು ಬಲಪಂಕ್ತೀಯ ಎಂಬ ಬಣ್ಣಗಳನ್ನು ಹಚ್ಚಿ, ಅವರ ವಿಚಾರಗಳಿಂದ ವಿವಾದಗಳನ್ನು ಮಾತ್ರ ಸೃಷ್ಟಿಸುತ್ತಿದ್ದೆವೆಯೇ ಹೊರತು ಚರ್ಚೆ ಮಾಡುತ್ತಿಲ್ಲ. ನಮ್ಮ ಸಮಾಜ ಇನ್ನೂ ಅದೆಷ್ಟು ಕೆಳಮಟ್ಟಕ್ಕೆ ಸರಿದಿದೆ ಎಂದರೆ ವಿಚಾರವಾದಕ್ಕೆ ಧರ್ಮ ಹಾಗು ಜಾತಿಗಳ ವಿಷ ಸೇರಿಸಿ ವಿಚಾರವಾದವೇ ಸರಿಯಲ್ಲ. ವಿಚಾರವಾದಿಗಳು ಆ ಧರ್ಮ ವಿರೋಧಿಗಳು, ಈ ಜಾತಿ ವಿರೋದಿಗಳು ಎಂದು , ಕೆಲವರಿಗೆ ಜೀವ ಬೆದರಿಕೆ ಹಾಕಿದರೆ , ಮತ್ತೆ ಕೆಲವರ ಕೊಲೆಗಳೇ ಆಗಿ ಹೋಗಿವೆ.
ವಿಚಾರವಾದಿಗಳ ವಿಚಾರ ನಿಮಗೆ ಸರಿ ಅನ್ನಿಸದಿದ್ದಲ್ಲಿ ಅವುಗಳನ್ನು ನಾವು ನಂಬುವ ಅವಶ್ಯಕತೆಯಿಲ್ಲ. ಆದರೆ ಅವರ ಆ ವಿಚಾರ ಮಾಡುವ ಮನೋಭಾವವೇ ಸರಿ ಅಲ್ಲ ಎಂದು ನಾವೇಕೆ ಅವರನ್ನು ಕೊಲ್ಲಬೇಕು ? ಈ ರೀತಿಯಾಗಿ ನಾವು ವಿಚಾರವಾದಗಳಿಗೆ ಋಣಾತ್ಮಕವಾಗಿ ಸ್ಪಂದಿಸಿದರೆ ನಮ್ಮ ಸಮಾಜದ ಮುಂದಿನ ಗತಿಯೇನು ?.
ನಮ್ಮ ದೇಶ ಹಾಗೆ, ಹೀಗೆ ಎಂದು ಹೆಮ್ಮೆಯಿಂದ ವಾಕ್ ಸ್ವಾತಂತ್ರದ ಬಗ್ಗೆ ಮಾತನಾಡುವ ನಾವು , ಒಂದುಕಡೆ "ಸತ್ಯವೇ ದೇವರು" ಎಂದು ಹೇಳಿದರೆ , ಮತ್ತೊಂದೆಡೆ "ಸಿಹಿ ಸುಳ್ಳನ್ನಾದರು ಹೇಳು ಕಟು ಸತ್ಯವನ್ನು ಹೇಳಬೇಡ" ಎನ್ನುತ್ತೇವೆ. ಇದರ ಮೇಲೆ ಯಾರಾದರು ಯಾವುದೋ ಸತ್ಯವನ್ನು ಮಾತಾಡಿದರೆ ಇವನು ನಮ್ಮ ವಿರೋದಿ , ಇವನು ಅವರ ವಿರೋದಿ ಎಂದು, ಆ ವಿಚಾರ ಮಾಡಿದವನ ಜೀವಕ್ಕೆ ಕುತ್ತು ತರುತ್ತೇವೆ. ಬಿಬಿ ಕಲ್ಬುರ್ಗಿ ಕರ್ನಾಟಕದಲ್ಲಿ ಈ ದಿನ ಇದೆ ರೀತಿಯ ಹಗೆತನಕ್ಕೆ ಬಲಿಯಾದರೆ , ನರೇಂದ್ರ ಧಬೋಲ್ಕರ್ , ಗೋವಿಂದ್ ಪನ್ಸರೆ ಮಹಾರಾಷ್ಟ್ರದಲ್ಲಿ ತೀರ ಇತ್ತೀಚಿಗೆ ಬಲಿಯಾದವರು. ಇವರ ವಿಚಾರಗಳಿಗೆಲ್ಲ ಜಾತಿ,ಧರ್ಮದ ಬಣ್ಣ ಹಚ್ಚಿ,ಕೊನೆಗೆ ಜೀವ ತೆಗೆದ ನಮ್ಮ ಸಮಾಜ ನಿಜವಾಗಿಯೂ ವಿಚಾರವಾದಿಗಳಿಗೆ ಏನು ಸಂದೇಶ ನೀಡುತ್ತಿದೆ. ನಮ್ಮ ಸಮಾಜ ಇನ್ನು ವಿಚಾರಗಳನ್ನು ಜೀರ್ಣಿಕೊಳ್ಳದೊಷ್ಟು ಸಣ್ಣ ಮಟ್ಟದ್ದೆ ?
ಬಾಂಗ್ಲದೇಶದಲ್ಲಿ ಬರಹಗಾರ್ತಿ ತಸ್ಲಿಮ ನಸ್ರೀನ್ ವಿರೋದಿಸಿದ್ದಕ್ಕೆ , ಬ್ಲಾಗರ್ ನೆಲೊಯ್ ನೀಲ್ ಹತ್ಯಮಾಡಿದ್ದಕ್ಕೆ ಭಾರತ ಮೊಸಳೆ ಕಣೀರು ಸುರಿಸುತ್ತದೆ. ನಮ್ಮ ದೇಶಲ್ಲಿ ಹೀಗಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ನಮ್ಮಲ್ಲೂ ಇದೆ ರೀತಿಯಲ್ಲೇ ಬಂಡಾಯ ಸಾಹಿತಿಗಳನ್ನು, ಬರಹಗಾರರನ್ನು ಹಾಗು ವಿಚಾರವಾದಿಗಳನ್ನು ಕೆಲವರು ಹೆದರಿಸುತ್ತಿದ್ದಾರೆ, ಹಲವರ ಪ್ರಾಣವನ್ನು ಕೂಡ ನಮ್ಮ ಸಮಾಜದ ಕೆಲವು ಸಂಘಟನೆಗಳು ತೆಗೆದುಕೊಂಡಿವೆ. ಇಂಥಹ ಸಂಘಟನೆಗಳನ್ನು ಅನೇಕರು ಬೆಂಬಲಿಸುತ್ತಾರೆ.
ಈ ರೀತಿಯಾದರೆ ಭಾರತಕ್ಕೂ, ಬಾಂಗ್ಲಕ್ಕೂ ಇರುವ ವ್ಯತ್ಯಾಸವೇನು ?, ಬಸವಣ್ಣನವರ ಪೂರ್ವಕಾಲಕ್ಕೂ ಹಾಗು ಬಸವಣ್ಣನವರ ನಂತರದ ಕಾಲಕ್ಕೂ ಆಗಿರುವ ಬದಲಾವಣೆಯಾದರು ಏನು ?? ಒಟ್ಟಾರೆ ಹೇಳುವುದಾದರೆ, ಕೇವಲ ನಂಬಿಕೆಯ ಮೇಲೆ , ಕಟ್ಟು ಕತೆಗಳ ಮೇಲೆ , ಸಾಂಪ್ರದಾಯಿಕ ಯೋಚನೆಗಳ ಮೇಲೆ ವಿಷಯವನ್ನು ನಂಬದೆ ಅದರ ಅರ್ಥ ಹಾಗು ಸತ್ಯದ ಮೇಲೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲು, ನಮ್ಮನ್ನು ಸರಿ-ತಪ್ಪುಗಳ ತುಲನೆ ಮಾಡಲು ಈ ವಿಚಾರವಾದ ಪ್ರೇರೇಪಿಸುತ್ತದೆ. ಆದರೆ ಈ ರೀತಿಯ ವಾದಗಳಿಗೆ , ಚರ್ಚೆಗಳಿಗೆ ಈ ಪ್ರಾಣ ಹತ್ಯೆಯ ಘಟನೆಗಳು, ನಮ್ಮ ಸಮಾಜದ ಮೇಲೆಯೇ ಹಲವಾರು ಅನುಮಾನವನ್ನು ಮೂಡಿಸುತ್ತವೆ. ನಮ್ಮ ಸಮಾಜ ಇದನೆಲ್ಲ ವಿಚಾರ ಮಾಡುವಷ್ಟು ಪ್ರೌಡವಾಗಿದೆಯಾ? ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಬಂದು ನಿಲ್ಲುತ್ತದೆ.
ನಿಮಗಾಗಿ
ನಿರಂಜನ್
Comments
ಉ: ವಿಚಾರವಾದಕ್ಕಿರುವ ಬೆಲೆಯೆಷ್ಟು ??
ಕಲ್ಬುರ್ಗಿಯವರ ಕೊಲೆಯ ನೈಜ ಕಾರಣ ತಿಳಿದ ನಂತರ ಈ ಕುರಿತು ಚರ್ಚಿಸಬಹುದೆನಿಸುತ್ತದೆ. ಕೊಲೆ ಯಾವ ಕಾರಣಕ್ಕಾಗಿ ಯಾರು ಯಾರನ್ನೇ ಮಾಡಿದರೂ ಅದು ಖಂಡನೀಯ, ಖಂಡನೀಯ.
In reply to ಉ: ವಿಚಾರವಾದಕ್ಕಿರುವ ಬೆಲೆಯೆಷ್ಟು ?? by kavinagaraj
ಉ: ವಿಚಾರವಾದಕ್ಕಿರುವ ಬೆಲೆಯೆಷ್ಟು ??
ನಿಜ, ನೀವು ಹೇಳುವುದು , ಆದರೆ ಅವರ ಕುಟುಂಬದ ಪ್ರಕಾರ ಇದೊಂದು ದ್ವೇಷದಿಂದ ನೆಡೆದಿರಬಹುದಾದ ಕೊಲೆ. ಇವರು ಕೂಡ ಮಹಾರಾಷ್ಟ್ರದ ಪನ್ಸರೆ ಸ್ನೇಹಿರಾಗಿದ್ದರು. ಪನ್ಸರೆ ಮತ್ತು ಇವರ ಕೊಲೆ ನೆಡೆದಿರುವುದು ಬಹಳಮಟ್ಟಿಗೆ ಒಂದೇ ರೀತಿಯಲ್ಲೆ. ಎಲ್ಲೋ ಇವೆರೆಡು ಕೊಲೆಗಳನ್ನು ನೋಡಿದರೆ , ನನಗೆ ನಮ್ಮ ಸಮಾಜದ ಮೇಲೆ ಒಂದು ಕ್ಷಣ ಬೇಸರ ಆಗುತ್ತಿದೆ. ಅವರಿಗಿದ್ದ ಬೆದರಿಕೆಗಳು , ಅವರ ಮೇಲೆ ಮಾಡಲಾಗಿದ್ದ ಆರೋಪಗಳನ್ನು ನೋಡಿದರೆ , ಯಾರೋ ಕೇವಲ ಅವರ ಬಾಯಿ ಮುಚ್ಚಿಸಲು ಮಾಡಿದ್ದಾರೆ ಎನ್ನುವುದು ನನ್ನ ಭಾವನೆ. ಇದೆಲ್ಲ ತನಿಖೆಯಿಂದ ತಿಳಿಯಬೇಕು.