ವಿಚಿತ್ರ ಕಕ್ಷಿದಾರ (ವಿಶ್ವಕಥಾಕೋಶ -೬)

ವಿಚಿತ್ರ ಕಕ್ಷಿದಾರ (ವಿಶ್ವಕಥಾಕೋಶ -೬)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಆರನೆಯ ಸಂಪುಟ ‘ವಿಚಿತ್ರ ಕಕ್ಷಿದಾರ'. ವಿಶ್ವಕಥಾಕೊಶದ ೬ನೇ ಸಂಪುಟದಲ್ಲಿ ಇಂಗ್ಲೆಂಡ್ ನ ೧೧ ಕಥೆಗಳಿವೆ. ಈ ಸಂಪುಟವನ್ನು ಅನುವಾದಿಸುವ ಹೊಣೆಯನ್ನು ಹೊತ್ತ ಶ್ರೀ ಎನ್.ಎಸ್. ರಾಮಚಂದ್ರಯ್ಯನವರು ಕೆಲಸ ಪೂರ್ತಿಯಾಗುವುದಕ್ಕೆ ಮೊದಲೇ ನಮ್ಮನ್ನಗಲಿದುದು ನಮಗೊಂದು ದುಃಖದ ಸಂಗತಿ. 

ಈ ಪುಸ್ತಕದಲ್ಲಿ ಇರುವ ೧೧ ಇಂಗ್ಲೆಂಡ್ ನ ಕಥೆಗಳೆಂದರೆ, ವಿಚಿತ್ರ ಕಕ್ಷಿದಾರ (ಚಾರ್ಲ್ಸ್ ಡಿಕನ್ಸ್), ಟೋನಿ ಕೈಟ್ಸ್ - ವಂಚಕಾಗ್ರೇಸರ (ಥಾಮಸ್ ಹಾರ್ಡಿ), ಪಾತಾಳ ಕೂಪದಲ್ಲಿ (ಎಚ್. ಜಿ. ವೇಲ್ಸ್), ಒಂದು ನೊಣ (ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್), ಸ್ಯಾಮ್ಸನ್ ಮತ್ತು ಡಿಲೈಲ (ಡಿ.ಎಚ್.ಲಾರೆನ್ಸ್), ಒಂದಿಷ್ಟು ಸಂಗೀತ ಮತ್ತು ನೃತ್ಯ (ಸೂಸನ್ ಹಿಲ್), ಇಗರ್ಜಿಯ ಕರ್ಮಚಾರಿ (ಡಬ್ಲ್ಯೂ. ಸಾಮರ್ ಸೆಟ್ ಮಾಮ್), ಟಾಮಿ ಫ್ಲಿನ್ನನ ಅನ್ವೇಷಣೆ ( ಸ್ಟಾನ್ ಬಾರ್ ಸ್ಟೋ), ಪಶು ಸಿಮನ್ಸ್ ( ಆರ್ಥರ್ ಮಾರಿಸನ್), ಹಡಗುಕಟ್ಟೆಯ ಗೇಟಿನ ಬಳಿ (ಆರ್ಥರ್ ಸೈಂಟ್ ಜಾನ್ ಆಡ್ ಕಾಕ್), ಇಂಗ್ಲೆಂಡ್ ನ ವಿರುದ್ಧ ಇಂಗ್ಲೆಂಡ್ (ಡೋರಿಸ್ ಲೆಸ್ಸಿಂಗ್). 

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಎನ್. ಎಸ್. ರಾಮಚಂದ್ರಯ್ಯ ಹಾಗೂ ಎಸ್. ಆರ್. ಭಟ್ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೨೦೦ ಪುಟಗಳನ್ನು ಹೊಂದಿದೆ. ಇಂಗ್ಲೆಂಡ್ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.