ವಿಜಯ ದೊರಕಲಿ ನಮಗೆ
ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ
(ಸುಭಾಷಿತರತ್ನಭಾಂಡಾಗಾರ)
ಗೆಲಬೇಕು ಲಂಕೆಯನು, ಪದಕ್ರಮಿಸಬೇಕು ಕಡಲನು
ವೈರಿಯವ ರಾವಣನು, ಯುದ್ಧದಿ ನೆರವು ಕಪಿಗಳದು
ಆದರೂ ರಾಮನೊಬ್ಬನೆ ರಾಕ್ಷಸಕುಲವನಳಿಸಿದನು
ಶ್ರೇಷ್ಠರಿಗೆ ಸಿದ್ಧಿ ಸತ್ತ್ವದಲಿಹುದು, ಸಾಮಗ್ರಿಯಲಿರದು
***
ವಿಜಯ ದೊರಕಲಿ ನಮಗೆ ದಶ ದಿಕ್ಕುಗಳಮೇಲೆ;
ಯಶದ ಸೌಧ ಏಳಲಿ ಯತ್ನದ ತಳಹದಿಮೇಲೆ
ವಿಜಯ ದೊರಕಲಿ ನಮಗೆ ನವ ದ್ವಾರಗಳಮೇಲೆ;
ಅವು ನಮ್ಮ ಅಂಕೆಯಲ್ಲಿರಲಿ, ಮನ ಗುರುಶಾಲೆ
ವಿಜಯ ದೊರಕಲಿ ನಮಗೆ ಅಷ್ಟ ಮದಗಳಮೇಲೆ;
ಇಷ್ಟವಾಗಲಿ ವಿನಯ, ದೃಷ್ಟಿಯಿರಲಿ ನೆಲದಮೇಲೆ
ವಿಜಯ ದೊರಕಲಿ ನಮಗೆ ಸಪ್ತ ವ್ಯಸನಗಳಮೇಲೆ;
ಪ್ರಾಪ್ತವಾಗಲಿ ಹಿಡಿತ ಕೋಪ-ಕಾಮಗಳಮೇಲೆ
ವಿಜಯ ದೊರಕಲಿ ನಮಗೆ ಅರಿಷಡ್ವರ್ಗಗಳಮೇಲೆ,
ಅರಿವನಾವರಿಸಿರುವ ಅಂಧಕಾರದಮೇಲೆ
ವಿಜಯ ದೊರಕಲಿ ನಮಗೆ ಪಂಚ ಪಾತಕಗಳಮೇಲೆ;
ಕಿಂಚಿತ್ತಾದರೂ ಗೌರವವಿರಲಿ ಜೀವನಮೌಲ್ಯದಮೇಲೆ
ವಿಜಯ ದೊರಕಲಿ ನಮಗೆ ಕ್ರೂರ ಚತುಷ್ಟಯದಮೇಲೆ;
ಹಾರವಾಗಲಿ ಹೃದಯಕೆ ಅಂತಃಕರಣಮಾಲೆ
ವಿಜಯ ದೊರಕಲಿ ನಮಗೆ ತಾಪತ್ರಯದಮೇಲೆ;
ಈ ಪ್ರಪಂಚವು ಆ ದೇವದೇವನ ಲೀಲೆ
ವಿಜಯ ದೊರಕಲಿ ನಮಗೆ ಸ್ವೇಚ್ಛೆ-ಸ್ವೈರದಮೇಲೆ;
ಎಚ್ಚರವಿರಲಿ ಸದಾ ಇಹಪರಗಳಮೇಲೆ
ವಿಜಯ ದೊರಕಲಿ ನಮಗೆ ಭವದ ಮಾಯೆಯಮೇಲೆ;
ಅವ ಮೊದಲು; ನಾನು, ನನ್ನದು ಎಲ್ಲ ಆಮೇಲೆ
-೦-
(ದಶ ದಿಕ್ಕುಗಳು: ಎಂಟು ದಿಕ್ಕುಗಳು+ಊರ್ಧ್ವದಿಶೆ+ಅಧೋದಿಶೆ.
ನವ ದ್ವಾರಗಳು: ಕಣ್ಣುಗಳು, ಕಿವಿಗಳು, ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ.
ಅಷ್ಟ ಮದಗಳು: ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ, ಅಧಿಕಾರ.
ಸಪ್ತ ವ್ಯಸನಗಳು: ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ (ಇವು ಕೋಪಜನ್ಯ), ಬೇಟೆ, ಜೂಜು, ಸ್ತ್ರೀ, ಪಾನ (ಇವು ಕಾಮಜನ್ಯ).
ಅರಿಷಡ್ವರ್ಗಗಳು: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ.
ಪಂಚಪಾತಕಗಳು: ಬ್ರಹ್ಮಹತ್ಯೆ, ಸುರಾಪಾನ, (ಸ್ವರ್ಣ)ಸ್ತೇಯ(=ಕಳ್ಳತನ), ಗುರುಭಾರ್ಯಾ ಗಮನ ಮತ್ತು ಇವುಗಳನ್ನು ಮಾಡುವವರ ಸಹವಾಸ.
ಕ್ರೂರ ಚತುಷ್ಟಯ: ದುರ್ಮನ, ದುರ್ಬುದ್ಧಿ, ದುರಹಂಕಾರ, ದುಶ್ಚಿತ್ತ. ಅಂತಃಕರಣ ಚತುಷ್ಟಯ: ಸುಮನ, ಸದ್ಬುದ್ಧಿ, ನಿರಹಂಕಾರ, ಸತ್‌ಚಿತ್ತ.
ತಾಪತ್ರಯ: ಆಧ್ಯಾತ್ಮಿಕ ದುಃಖ, ಆಧಿಭೌತಿಕ ದುಃಖ, ಆಧಿದೈವಿಕ ದುಃಖ.
ದೋಷದ್ವಯ: ಸ್ವೇಚ್ಛೆ, ಸ್ವೈರ.
ಏಕಭ್ರಾಂತಿ: ಭವದ ಮಾಯೆ.
ಅವ = ಭಗವಂತ.)
- ವಿಜಯದಶಮಿ, ’ವಿಕೃತಿ’ ಸಂವತ್ಸರ (ಇಸವಿ ೨೦೧೦)