ವಿಜ್ಞಾನದೊಳಗೊಂದು ಜೀವನ

ವಿಜ್ಞಾನದೊಳಗೊಂದು ಜೀವನ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಪ್ರೊ. ಸಿ.ಎನ್. ಆರ್ ರಾವ್, ಕನ್ನಡಕ್ಕೆ: ಎಂ ಎಸ್ ಎಸ್ ಮೂರ್ತಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೭೫.೦೦, ಮುದ್ರಣ: ೨೦೨೩

ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ ಎಸ್ ಎಸ್ ಮೂರ್ತಿ ಇವರು. “ವಿಜ್ಞಾನದೊಳಗೊಂದು ಜೀವನ" ಎಂಬ ಹೆಸರಿನಲ್ಲು ಪ್ರೊ. ರಾವ್ ಅವರ ಆತ್ಮಕಥೆ ಕನ್ನಡಕ್ಕೆ ಬಂದಿದೆ. ಅನುವಾದಕರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ...

“೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸಿ. ಎನ್. ಆರ್. ರಾವ್ ಇಂದು ವಿಶ್ವವಿಖ್ಯಾತ ರಸಾಯನ ವಿಜ್ಞಾನಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕಳೆದ ಐದು ದಶಕಗಳಲ್ಲಿ ಟ್ರ್ಯಾನ್ಸಿಶನ್ ಮೆಟಲ್ ಆಕ್ಸೆಡ್‌ಗಳು, ಇನಾರ್ಗ್ಯಾನಿಕ್-ಆರ್ಗ್ಯಾನಿಕ್ ಮಿಶ್ರವಸ್ತುಗಳು, ನ್ಯಾನೊ ಮೆಟೀರಿಯಲ್ಸ್, ದ್ಯುತಿ ಕ್ರಿಯಾವರ್ಧಕಗಳು ಮುಂತಾದವುಗಳನ್ನು ಒಳಗೊಂಡ ಸಾಲಿಡ್ ಸ್ಟೇಟ್ ಮತ್ತು ಸ್ಪಕ್ಟರಲ್ ಕೆಮಿಸ್ಟ್ರಿ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಗಳನ್ನು ನಡೆಸಿ, ಆ ಕ್ಷೇತ್ರಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಇತ್ತೀಚಿನ ಸಂಶೋಧನೆಗಳು ಗ್ರೇಫೀನ್ ಎಂಬ ಅದ್ಭುತ ವಸ್ತು ಮತ್ತು ಕೃತಕ ದ್ಯುತಿ ಸಂಶ್ಲೇಷಣೆಗಳನ್ನು ಒಳಗೊಂಡಿವೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಬಿ.ಎಸ್ಸಿ. ಪದವಿ ಪಡೆದ ನಂತರ, ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ. ಪದವಿ ಗಳಿಸಿ, ಅನಂತರ ಅಮೆರಿಕದ ಪರ್ಡ್ಯು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ. ಪದವಿ ಪಡೆದರು. ಆಗ ಅವರಿಗೆ ಕೇವಲ ೨೪ ವರ್ಷ ವಯಸ್ಸು. ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಬರ್ಕ್ಲಿಯಲ್ಲಿ ಸ್ವಲ್ಪ ಕಾಲ ಸಂಶೋಧನೆ ನಡೆಸಿದರು. ಅಮೆರಿಕದಲ್ಲೇ ಮುಂದುವರಿಯಲು ಎಲ್ಲ ಅವಕಾಶಗಳು ದೊರಕಿದರೂ, ಭಾರತದಲ್ಲಿಯೇ ಸ್ವಂತ ವಿದ್ಯಾರ್ಥಿ ತಂಡವನ್ನು ಕಟ್ಟಿಕೊಂಡು, ಉನ್ನತ ಮಟ್ಟದ ಸಂಶೋಧನೆ ನಡೆಸಬೇಕೆಂಬ ಹೆಬ್ಬಯಕೆಯಿಂದ ಭಾರತಕ್ಕೆ ವಾಪಸ್ಸು ಬಂದು ಐಐಟಿ- ಕಾನ್‌ಪುರ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) - ಬೆಂಗಳೂರು ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಸೇವೆ ಸಲ್ಲಿಸಿ, ೧೯೮೪ರಿಂದ ೧೯೯೪ರವರೆಗೆ ಐಐಎಸ್‌ಸಿಯ ನಿರ್ದೇಶಕರಾಗಿಯೂ ಜವಾಬ್ದಾರಿ ನಿರ್ವಹಿಸಿದರು. ಈ ವೇಳೆಯಲ್ಲಿ ಭಾರತ ಸರ್ಕಾರದ ಹಲವಾರು ವಿಜ್ಞಾನ ಸಲಹಾ ಸಮಿತಿಗಳ ಸದಸ್ಯ ಹಾಗೂ ಅಧ್ಯಕ್ಷರಾಗಿದ್ದು, ಭಾರತದಲ್ಲಿ ವಿಜ್ಞಾನ-ತಂತ್ರಜ್ಞಾನದ ಮುನ್ನಡೆಗೆ ಅವಶ್ಯವಾದ ಯೋಜನೆಗಳನ್ನು ನಿರೂಪಿಸಿದುದಲ್ಲದೆ, ಜವಹರ್‌ಲಾಲ್ ನೆಹರು ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಮತ್ತು ಇಂಟರ್‌ ನ್ಯಾಶನಲ್ ಸೆಂಟರ್ ಫಾರ್ ಮೆಟೀರಿಯಲ್ಸ್ ಸೈನ್ಸ್ ಸಂಸ್ಥೆಗಳ ಸ್ಥಾಪನೆಗೂ ಕಾರಣರಾದರು. ೧೯೯೪ರಲ್ಲಿ ನಿವೃತ್ತಿಯಾದ ನಂತರ ಅವರು ನ್ಯಾಶನಲ್ ರಿಸರ್ಚ್ ಪ್ರೊಫೆಸರ್, ಲೈನಸ್ ಪೌಲಿಂಗ್ ಪ್ರೊಫೆಸರ್ ಮತ್ತು ಜವಹರ್‌ಲಾಲ್ ನೆಹರು ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್‌ನ ಗೌರವಾನ್ವಿತ ಅಧ್ಯಕ್ಷರಾಗಿ ನೇಮಕವಾಗಿ, ಸಂಶೋಧನಾ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

ಐದು ದಶಕಗಳಿಗೂ ಮೀರಿದ ಸಂಶೋಧನಾ ವೃತ್ತಿಜೀವನದಲ್ಲಿ ಪ್ರೊ.ರಾವ್ ಅವರು ನೂರಾರು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದುದಲ್ಲದೇ, ೧೭೭೦ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ, ೫೩ ಪುಸ್ತಕಗಳನ್ನು ರಚಿಸಿದ್ದಾರೆ. ಕೆಮಿಕಲ್ ಫಿಸಿಕ್ಸ್, ಸೈಕ್ಟ್ರೋಸ್ಕೋಪಿ, ಸಾಲಿಡ್ ಸ್ಟೇಟ್ ಅಂಡ್ ಮೆಟೀರಿಯಲ್ಸ್ ಕೆಮಿಸ್ಟ್ರಿ ಮುಂತಾದ ಕ್ಷೇತ್ರಗಳನ್ನು ಒಳಗೊಂಡ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳ ಸಂಪಾದಕ ವರ್ಗದ ಸದಸ್ಯರಾಗಿದ್ದಾರೆ.

ರಸಾಯನ ವಿಜ್ಞಾನ ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಯನ್ನು ಗುರುತಿಸಿ 83 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿವೆ. ಅಲ್ಲದೆ ರಾಯಲ್ ಸೊಸೈಟಿ ಆಫ್ ಕೆಮಿಸ್ಟಿಯೂ ಸೇರಿದಂತೆ (FIRS) 30 ಅಕಾಡೆಮಿಗಳ ಸದಸ್ಯತ್ವ: ೩೧ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಜ್ಞಾನ ಪದಕಗಳು, ನಾಲ್ಕು ವಿದೇಶಿ ಸರ್ಕಾರದ ಗೌರವಗಳು ಹಾಗೂ ಇನ್ನೂ ಹಲವಾರು ಮನ್ನಣೆಗಳು ಅವರನ್ನು ಅರಸಿ ಬಂದಿವೆ. ಭಾರತ ಸರ್ಕಾರವೂ ತನ್ನ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತರತ್ನ ಪ್ರಶಸ್ತಿಯನ್ನು ೨೦೧೪ರಲ್ಲಿ ಪ್ರೊ. ರಾವ್ ಅವರಿಗೆ ನೀಡಿ ಗೌರವಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ಸರ್ ಸಿ. ವಿ. ರಾಮನ್ ಮತ್ತು ಡಾ. ಅಬ್ದುಲ್ ಕಲಾಮ್ ಅವರ ನಂತರ ಈ ಗೌರವಕ್ಕೆ ಉತ್ತರಾದ ಮೂರನೆಯವರು ಪ್ರೊ. ಸಿ. ಎಸ್. ಆರ್. ರಾವ್, ಇತ್ತೀಚೆಗೆ, ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಹೈಡ್ರೋಜನ್‌ಅನ್ನು ನವೀಕರಿಸ ಬಹುದಾದ ಶಕ್ತಿ ಸಂಪನ್ಮೂಲವಾಗಿ ಬಳಸಲು ನೆರವಾಗುವಂತೆ ಅದರ ಉತ್ಪಾದನೆ, ಸಂಗ್ರಹಣೆ ಮುಂತಾದ ಕ್ಷೇತ್ರಗಳಲ್ಲಿ ಪ್ರೊ. ರಾವ್ ಅವರು ನಡೆಸಿರುವ ಮಹತ್ವದ ಸಂಶೋಧನೆಗಳನ್ನು ಗುರುತಿಸಿ ಇಟಲಿಯ Eni ಎಂಬ ಶಕ್ತಿ ಸಂಪನ್ಮೂಲ ಸಂಸ್ಥೆ ತನ್ನ ವಾರ್ಷಿಕ Eni Awardನ Energy Frontier ವಿಭಾಗದ ಪ್ರಶಸ್ತಿಯನ್ನು ಪ್ರೊ. ಸಿ. ಎನ್. ಆರ್. ರಾವ್ ಅವರಿಗೆ ನೀಡಿದೆ.

ಇಷ್ಟೆಲ್ಲಾ ಪ್ರಶಸ್ತಿ, ಪುರಸ್ಕಾರಗಳ ನಡುವೆಯೂ ಪ್ರೊ, ರಾವ್ ಅವರ ವೈಜ್ಞಾನಿಕ ಸಂಶೋಧನಾಕಾರ್ಯ ಭರದಿಂದ ಮುಂದುವರಿದಿದೆ. ೨೦೨೦ರಲ್ಲಿ, ಅಂದರೆ ತಮ್ಮ ೮೬ನೇ ವರ್ಷದಲ್ಲಿ ೧೮ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆಂಬುದು ಆಶ್ಚರ್ಯ ಪಡುವಂತಹ ಸಂಗತಿ.

ಪ್ರೊ. ರಾವ್ ಅವರು ೨೦೧೬ರಲ್ಲಿ ತಮ್ಮ ಆತ್ಮಚರಿತ್ರೆ A Life in Science ಪ್ರಕಟಸಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ದೀರ್ಘ ಪಯಣವನ್ನು ಚಿತ್ರಿಸುವುದರೊಂದಿಗೆ, ಶ್ರೇಷ್ಟ ವಿಜ್ಞಾನಿಯಾಗಬೇಕಾದರೆ ಇರಬೇಕಾದ ಶ್ರದ್ಧೆ, ಬದ್ಧತೆ, ಮಾನಸಿಕ ಹಾಗೂ ಶೈಕ್ಷಣಿಕ ತರಬೇತಿ ಇವುಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ. ಅವರೇ ಹೇಳುವಂತೆ, "ಶ್ರೇಷ್ಠ ವಿಜ್ಞಾನಿಗಳ ಬಗ್ಗೆ ಕೇಳುವುದರಿಂದ ಹಾಗೂ ಓದುವುದರಿಂದ ಯುವ ಜನಾಂಗಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೇರಣೆ ದೊರಕುತ್ತದೆ." ಹಾಗಾಗಿ, ನಮ್ಮ ನಡುವೆಯೇ ಇರುವ ಈ ಶ್ರೇಷ್ಠ ವಿಜ್ಞಾನಿಯ ಜೀವನಚರಿತ್ರೆಯನ್ನು ಕನ್ನಡದ ಓದುಗಂಗೂ ದೊರಕಿಸಬೇಕೆಂಬ ಇಚ್ಛೆಯಿಂದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಅದಕ್ಕೆ ಅನುಮತಿ ಕೊಟ್ಟ ಪ್ರೊ, ರಾವ್ ಅವರಿಗೆ ನಾನು ಕೃತಜ್ಞ. ವಿಜ್ಞಾನಿಯ ಜೀವನಚರಿತ್ರೆ ಎಂದ ಮೇಲೆ ಅದರಲ್ಲಿ ಪಾರಿಭಾಷಿಕ ಶಬ್ದಗಳು ಅನಿವಾರ್ಯ. ಈ ಕೃತಿಯಲ್ಲಿ ರಸಾಯನ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ತಾಂತ್ರಿಕ ಪದಗುಚ್ಛಗಳಿವೆ. ಅವೆಲ್ಲವೂ ಸಾಮಾನ್ಯ ಓದುಗರಿಗೆ ಪರಿಚಯವಿಲ್ಲದಿರಬಹುದು. ಓದುಗರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಅಂತಹ ಕೆಲವು ಪದಗುಚ್ಛಗಳನ್ನು ಅಲ್ಲಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಇವು ಮೂಲ ಕೃತಿಯಲ್ಲಿ ಇಲ್ಲ. ಆದ್ದರಿಂದ ಅವುಗಳನ್ನು ಬಾಕ್ಸ್‌ನಲ್ಲಿ ಕೊಟ್ಟಿದ್ದೇನೆ.”