ವಿಜ್ಞಾನಿಗಳೊಡನೆ ರಸನಿಮಿಷಗಳು

ವಿಜ್ಞಾನಿಗಳೊಡನೆ ರಸನಿಮಿಷಗಳು

ಬರಹ

ಜಿ.ಟಿ. ನಾರಾಯಣ್ ರಾವ್ ರವರ ಬಗ್ಗೆ ಚಿಂತಿಸುತ್ತ ನನ್ನ ಪುಸ್ತಕದ ಆಲ್ಮೇರಾ ಬಳಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದವರು ಜೆ.ಆರ್.ಲಕ್ಷ್ಮಣರಾವ್ ರವರು. ಅವರ ಪುರ್ಣ ಹೆಸರು ಜಗಲೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್. 1921ರಲ್ಲಿ ಜನಿಸಿದ ಇವರು 1943ರಿಂದ 38 ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪರಮಾಣು ಚರಿತ್ರೆ, ಬೈಜಿಕ ವಿದ್ಯುತ್ ಹೀಗೆ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ.
ನಾವು ಸಾಧಾರಣವಾಗಿ ವಿಜ್ಞಾನಿಗಳು ಎಂದರೆ ನಮ್ಮಂತೆ ಸಾಮಾನ್ಯ ಮನುಷ್ಯರು ಎಂದು ಪರಿಗಣಿಸುವುದೇ ಇಲ್ಲ. ಅವರೆಲ್ಲೋ ಎತ್ತರದಲ್ಲಿ ಇರುವ ವಿಶಿಷ್ಟ ಮನೊಭಾವದ ವ್ಯಕ್ತಿಗಳಾಗಿರುತ್ತಾರೆ, ನಮ್ಮ ನಿಮ್ಮ ಹಾಗೆ ಸಾಮಾನ್ಯ ವಿಚಾರಗಳು ಅವರಿಗೆ ಬರುವುದೇ ಇಲ್ಲ, ಸದಾ ಗಂಭೀರ ಪ್ರವೃತ್ತಿಯವರಾಗಿ ಇರುತ್ತಾರೆ ಎಂದೆಲ್ಲ ಅವರ ಬಗ್ಗೆ ಚಿಂತಿಸಿರುತ್ತೇವೆ. ಸಾಮಾನ್ಯ ಜನರಂತೆ ಅವರು ಸಂತೋಷ ಆದಾಗ ಕುಣಿದಾಡುವುದು, ಸಣ್ಣ ತಪ್ಪು ಮಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವುದು ಮುಂತಾದವು ಅವರಿಂದ ಬಲು ದೂರ ಎಂದುಕೊಳ್ಳುತ್ತೇವೆ. ಆದರೆ ಜೆ.ಆರ್. ಲಕ್ಷ್ಮಣ ರಾಯರು ವಿಜ್ಞಾನವಲ್ಲದೇ ವಿಜ್ಞಾನಿಗಳ ಬಗ್ಗೆಯೂ ಹೆಚ್ಚು ಆಸಕ್ತಿಯುಳ್ಳವರಾಗಿ ಅವರ ದಂತಕಥೆಗಳಿಂದಲೂ ಆಕರ್ಷಿತರಾದರಂತೆ. ಹೀಗಾಗಿ ತಾನು ಸವಿದು ಬಾಯಿ ಚಪ್ಪರಿಸಿದ ಸುದ್ದಿಗಳನ್ನು ನಮಗಾಗಿ “ವಿಜ್ಞಾನಿಗಳೊಡನೆ ರಸನಿಮಿಷಗಳು” ಎಂಬ ಕೃತಿ ರಚಿಸಿ ಮನರಂಜನೆ ನೀಡಿದ್ದಾರೆ. ಅವುಗಳನ್ನು ಓದುತ್ತಿದ್ದರೆ ಆ ವಿಜ್ಞಾನಿಗಳೆಲ್ಲಾ ನಮಗೆ ತೀರಾ ಹತ್ತಿರದವರೆನ್ನಿಸುತ್ತಾರೆ. ಅಪಾರ ಬುದ್ಧಿಶಕ್ತಿಯ ಅವರ ಹಸುಳೆ ಸ್ವಭಾವ, ವಿನೋದ ಪ್ರಿಯತೆ, ಮಾನವೀಯತೆ ಮತ್ತು ಮರೆಗೂಳಿತನ ನಮ್ಮ ಹೃದಯವರಳಿಸಿ ತುಟಿಯಂಚಿನಲ್ಲಿ ನಗು ಅರಳುವಂತೆ ಮಾಡುತ್ತವೆ. ಜೆ.ಆರ್. ಲಕ್ಷ್ಮಣರಾವ್ ರವರು ಇಲ್ಲಿ ಮೆರೆಸಿರುವ ಹಾಸ್ಯ ಯಾರ ಮನಸ್ಸನ್ನೂ ಘಾಸಿಗೊಳಿಸದ ಹಿತವಾದ ನಗೆರತ್ನಗಳಂತಿವೆ. ಈ ಪುಸ್ತಕದಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಉದಾಹರಿಸುತ್ತೇನೆ.

ಹೆನ್ರಿ ಕ್ಯವೆಂಡಿಷ್ ಅವರನ್ನು ಭೇಟಿ ಮಾಡುವುದಕ್ಕಾಗಿ ಒಮ್ಮೆ ದೊಡ್ಡ ವಿದೇಶಿ ವಿಜ್ಞಾನಿಯೊಬ್ಬರು ಕೇಂಬ್ರಿಡ್ಜ್ ನಲ್ಲಿನ ಅವರ ಪ್ರಯೋಗಾಲಯಕ್ಕೆ ಬಂದಿದ್ದರಂತೆ. ಮಾತುಕತೆ ಮುಗಿದಮೇಲೆ ಅವರನ್ನು ಬೀಳ್ಕೊಡುವುದಕ್ಕಾಗಿ ಕ್ಯಾವೆಂಡಿಷ್ ಗೇಟಿನ ವರೆಗೂ ಬಂದರು. ಆ ಗೇಟಿನ ಮೇಲೆ ಸಾಲಾಗಿ ಹೊರಟುಕೊಂಡಿದ್ದ ಕಬ್ಬಿಣದ ಸಲಾಕೆಗಳ ತುದಿಗಳಿಗೆ ಅಲಂಕಾರಕ್ಕಾಗಿ ಸಿಕ್ಕಿಸಿದ್ದ ದೊಡ್ಡ ಹಿತ್ತಾಳೆ ಗುಂಡುಗಳ ಪೈಕಿ ಒಂದನ್ನು ಕೈಯಲ್ಲಿ ಹಿಡಿದುಕೊಂಡರು. ಗುಂಡಿನ ಅರ್ಧ ಭಾಗ ತಣ್ಣಗಿತ್ತು; ಅರ್ಧ ಭಾಗ ಬಿಸಿಯಾಗಿತ್ತು. ಆದರೆ ಅದರಲ್ಲಿ ಒಂದು ಕೌತುಕದ ವಿಷಯವಿತ್ತು. ಬಿಸಿಲಿಗೆ ಎದುರಾಗಿದ್ದ ಅರ್ಧ ಭಾಗ ತಣ್ಣಗಿತ್ತು. ಬಿಸಿಲಿನಿಂದ ಆಚೆಕಡೆ ಇದ್ದ ಅರ್ಧ ಭಾಗ ಬಿಸಿಯಾಗಿತ್ತು. ಕ್ಯಾವೆಂಡಿಷ್ ಆಶ್ಚರ್ಯದಿಂದ ಅದನ್ನು ತಮ್ಮ ಮಿತ್ರರಿಗೆ ತೋರಿಸಿದರು. ಅವರೂ ನೋಡಿ ಆಶ್ಚರ್ಯಪಟ್ಟರು. ಇಬ್ಬರೂ ಇತರ ಗುಂಡುಗಳನ್ನೂ ಮುಟ್ಟಿ ನೋಡಿದರು. ಅವುಗಳೂ ಹಾಗೇ ಇದ್ದವು. ಆ ವೈಚಿತ್ರ್ಯಕ್ಕೆ ಕಾರಣವೇನೆಂಬುದನ್ನು ಕಂಡುಹಿಡಿಯಲು ಕೆಲವು ಪ್ರಯೋಗಗಳನ್ನು ನಡೆಸುವ ಯೋಚನೆ ಮಾಡಿ ಇಬ್ಬರೂ ಅದನ್ನು ಚರ್ಚಿಸುತ್ತಾ ನಿಂತರು. ಹೆಚ್ಚುಕಡಿಮೆ ಅರ್ಧ ಗಂಟೆ ಹಾಗೆಯೇ ಕಳೆಯಿತು. ಅಷ್ಟುಹೊತ್ತಿಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ತೋಟದ ಮಾಲಿ ಬಂದು ಆ ಹಿತ್ತಾಳೆ ಗುಂಡುಗಳೊಂದೊಂದನ್ನೂ 180ಡಿಗ್ರಿಗಳಷ್ಟು ತಿರುಗಿಸಿದ. ಗುಂಡುಗಳು ಒಂದೇಕಡೆ ಬಹುವಾಗಿ ಕಾದುಬಿಡದಂತೆ ಅವನ್ನು ಅರ್ಧ ಗಂಟೆಗೊಮ್ಮೆ ಆರೀತಿ ತಿರುಗಿಸುವುದು ಪದ್ಧತಿ ಎಂದು ಹೇಳಿದ.
ಸ್ವಾರಸ್ಯಕರವಾದ ವೈಜ್ಞಾನಿಕ ಸಮಸ್ಯೆಯೊಂದನ್ನು ಬಿಡಿಸುವ ಅವಕಾಶ ಕೈತಪ್ಪಿ ಹೋದುದಕ್ಕಾಗಿ ವಿಜ್ಞಾನಿಗಳಿಬ್ಬರೂ ವ್ಯಥೆಪಟ್ಟು ಪೆಚ್ಚುಮೋರೆ ಹಾಕಿಕೊಂಡರು.
ಹೀಗೆ ಇನ್ನೂ ನೂರಾರು ಘಟನೆಗಳು ಇಲ್ಲಿ ಇವೆ. ಒಂದಕ್ಕಿಂತ ಒಂದು ಹೆಚ್ಚಾಗಿ ನವಿರಾದ ಹಾಸ್ಯ ಹೊಂದಿವೆ ಓದಲು ಮುದ ನೀಡುವ ಈ ಪುಸ್ತಕವನ್ನು ನೀವು ಓದಿರುವಿರಾ? ಅದರ ಬಗ್ಗೆ ನಿಮಗೇನನ್ನಿಸುತ್ತದೆ?