ವಿಜ್ನಾನಿಗಳೊಂದಿಗೆ ರಸನಿಮಿಷಗಳು

ವಿಜ್ನಾನಿಗಳೊಂದಿಗೆ ರಸನಿಮಿಷಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಜೆ. ಆರ್. ಲಕ್ಷ್ಮಣ ರಾವ್
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೭೫/-

ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ ದಕ್ಕದ ಒಳನೋಟಗಳು ಅವರ ಮನದಲ್ಲಿ ಮಿಂಚುತ್ತವೆ.

ಆದರೆ, ಬೇರೆ ಹಲವಾರು ವಿಷಯಗಳಲ್ಲಿ, ನಡವಳಿಕೆಗಳಲ್ಲಿ ಅವರು ನಮ್ಮೆಲ್ಲರಂತೆಯೇ. ಅವರಿಗೂ ಮರೆವು ಸಹಜ. ಎಲ್ಲಿಯ ವರೆಗೆಂದರೆ, ಒಬ್ಬ ವಿಜ್ನಾನಿಗೆ ಅಂಚೆಕಚೇರಿಯಲ್ಲಿ ಒಂದು ಪತ್ರ ಬರೆಯುತ್ತಿರುವಾಗ ತನ್ನ ಹೆಸರೇ ನೆನಪಿಗೆ ಬಾರದೆ ಅವರು ಪರದಾಡಿ ಬಿಟ್ಟರು. ಅವರೇ ಜಗದ್ವಿಖ್ಯಾತ ಗಣಿತಜ್ನ, ಸೈಬರ್ನೆಟಿಕ್ಸ್ ಶಾಸ್ತ್ರದ ಆದ್ಯ ಪ್ರವರ್ತಕ ನಾರ್ಬರ್ಟ್ ವೀನರ್.

ಕೆಲವು ಪ್ರಸಂಗಗಳನ್ನು ಓದಿದಾಗಲಂತೂ “ಇಂತಹ ಪ್ರಚಂಡ ಬುದ್ಧಿಮತ್ತೆಯ ವಿಜ್ನಾನಿಗಳೂ ಹೀಗೇ ಮಾಡ್ತಾರಾ!” ಎಂದು ಬೆರಗಾಗುತ್ತೇವೆ. ಉದಾಹರಣೆಗೆ, ಸರ್ ಐಸಾಕ್ ನ್ಯೂಟನ್. ಅವರದು ಸಾಟಿಯಿಲ್ಲದ ಮೇಧಾಶಕ್ತಿ. ಮರದಿಂದ ಸೇಬು ಬಿದ್ದದ್ದನ್ನು ಗಮನಿಸಿ, ಗುರುತ್ವಾಕರ್ಷಣೆಯ ಶಕ್ತಿಯನ್ನು ವಿವರಿಸಿದವರು ನ್ಯೂಟನ್. ಈ ಪುಸ್ತಕದಲ್ಲಿರುವ ಅವರ ಬಗೆಗಿನ “ಗಾತ್ರಕ್ಕೆ ತಕ್ಕ ರಂಧ್ರ” ಎಂಬ ಪ್ರಸಂಗ ಹೀಗಿದೆ: “ನ್ಯೂಟನ್ ಒಂದು ಬೆಕ್ಕನ್ನು ಸಾಕಿದ್ದ. ಅದನ್ನು ಕಂಡರೆ ಅವನಿಗೆ ಬಹಳ ಪ್ರೀತಿ. ಅವನು ತನ್ನ ಪ್ರಯೋಗಶಾಲೆಯ ಬಾಗಿಲು ಹಾಕಿಕೊಂಡು ಒಳಗೆ ಕೆಲಸ ಮಾಡುತ್ತಿದ್ದರೆ ಅದು ಬಾಗಿಲ ಬಳಿ ಬಂದು ಮಿಯಾಂವ್, ಮಿಯಾಂವ್ ಎನ್ನುತ್ತಿತ್ತು. ಅದನ್ನು ಒಳಗೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದರೆ, ಸ್ವಲ್ಪಕಾಲದ ಬಳಿಕ ಹೊರಕ್ಕೆ ಹೋಗಲು ತವಕಪಡುತ್ತಿತ್ತು. (ಅದಕ್ಕಾಗಿ) ……. ಬಾಗಿಲಿನಲ್ಲಿ ಒಂದು ರಂಧ್ರವನ್ನು ಕೊರೆಯಿಸಲು ನ್ಯೂಟನ್ ನಿಶ್ಚಯಿಸಿದ; ಬಡಗಿಯೊಬ್ಬನನ್ನು ಕರೆದು ತನ್ನ ಇಚ್ಛೆ ತಿಳಿಸಿದ. ಸಾಯಂಕಾಲದ ವೇಳೆಗೆ ರಂಧ್ರ ಸಿದ್ಧವಾಯಿತು. ಬಡಗಿ ನ್ಯೂಟನನಿಗೆ ಆ ರಂಧ್ರವನ್ನು ತೋರಿಸಿದ. ನ್ಯೂಟನ್ ಒಂದು ಕ್ಷಣಕಾಲ ಅದನ್ನು ನೋಡಿ, ಅನಂತರ ಏನನ್ನೋ ಜ್ನಾಪಿಸಿಕೊಂಡು. ಅಕ್ಕಪಕ್ಕದಲ್ಲಿ ಇನ್ನೂ ಮೂರು ಚಿಕ್ಕಚಿಕ್ಕ ರಂಧ್ರಗಳನ್ನು ಮಾಡುವಂತೆ ಹೇಳಿ ಹೊರಟುಹೋದ. ….. ಮರುದಿನ ನ್ಯೂಟನ್ ಬಂದಾಗ ಆ ಮೂರು ರಂಧ್ರಗಳು ಏತಕ್ಕೆ ಎಂದು ಬಡಗಿ ಕೇಳಿದ. "ನನ್ನ ಬೆಕ್ಕಿಗೆ ಮೂರು ಮರಿಗಳಿವೆಯಲ್ಲಾ, ಅವಕ್ಕೆ” ಎಂದ ನ್ಯೂಟನ್. ಬಡಗಿ ಗಟ್ಟಿಯಾಗಿ ನಕ್ಕುಬಿಟ್ಟು, “ಏಕೆ? ಆ ದೊಡ್ಡ ರಂಧ್ರದ ಮೂಲಕವೇ ಮರಿಗಳೂ ಹೋಗಲಾರವೇ?” ಎಂದು ಕೇಳಿದ. ನ್ಯೂಟನ್ ತಲೆಯ ಮೇಲೆ ಕೈ ಹೊತ್ತು ಕುಳಿತ.”

ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸುವ ಮೂಲಕ ಜಗದ್ವಿಖ್ಯಾತರಾದ ವಿಜ್ನಾನಿ ಆಲ್ಬರ್ಟ್ ಐನ್‌ಸ್ಟೈನ್. ಅವರದು ಅದ್ಭುತ ಪ್ರತಿಭೆ. ಅವರಿಗೆ ಸಂಬಂಧಿಸಿದ ಹಲವು ಪ್ರಸಂಗಗಳು ಈ ಪುಸ್ತಕದಲ್ಲಿವೆ. ಅವುಗಳಲ್ಲೊಂದು “ಕ್ರಿಸ್‌ಮಸ್ ಗೀತೆಗಳಿಗೆ ಇನಾಮು". “ಕ್ರಿಸ್‌ಮಸ್ ಹಿಂದಿನ ದಿನದ ಸಂಜೆ. ಬಾಲಕರ ಒಂದು ತಂಡ, ಪ್ರಿನ್ಸ್‌‌ಟನ್‌ನಲ್ಲಿ ಐನ್‌ಸ್ಟೈನ್ ಅವರ ಮನೆಗೆ ಹೋಗಿ ಬಾಗಿಲು ತಟ್ಟಿದರು. ಬಾಗಿಲು ತೆರೆಯಿತು; ಐನ್‌ಸ್ಟೈನ್ ವೆರಾಂಡಕ್ಕೆ ಬಂದರು. ಬಾಲಕರು ಕ್ರಿಸ್‌ಮಸ್ ಗೀತೆಗಳನ್ನು ಹಾಡಲು ಪ್ರಾರಂಭಿಸಿದರು. ಐನ್‌ಸ್ಟೈನ್ ಮುಗುಳ್ನಗೆಯಿಂದ ಮೆಚ್ಚಿಗೆ ಸೂಚಿಸುತ್ತ ಗೀತೆಗಳನ್ನು ಕೇಳಿದರು. ಹಾಡಿದ್ದು ಮುಗಿದ ಮೇಲೆ ಅವರಲ್ಲಿ ಒಬ್ಬ ಹುಡುಗ, ತಂಡದ ನಾಯಕ, ಇನಾಮು ಕೊಡಿರೆಂದು ಕೇಳಿದ. “ಎಂಥ ಇನಾಮು?" ಎಂದರು ಐನ್‌ಸ್ಟೈನ್. ಅದಕ್ಕೆ ಆ ಹುಡುಗ, "ಮನೆ ಬಾಗಿಲಿಗೆ ಬಂದು ಕ್ರಿಸ್‌ಮಸ್ ಗೀತೆಗಳನ್ನು ಹಾಡಿದ ಹುಡುಗರಿಗೆ ನಾಲ್ಕು ಕಾಸು ಇನಾಮು ಕೊಡುವುದು ಪದ್ಧತಿ” ಎಂದ. ಆಗ ಐನ್‌ಸ್ಟೈನ್, “ಸ್ವಲ್ಪ ತಾಳಿ" ಎಂದು ಒಳಕ್ಕೆ ಹೋದರು. ….. ಕಾಸು ತರಲು ಒಳಕ್ಕೆ ಹೋದರೆಂದು ಅಂದುಕೊಂಡ ಆ ಬಾಲಕರಿಗೆ ಒಂದು ಆಶ್ಚರ್ಯ ಕಾದಿತ್ತು. ಐನ್‌ಸ್ಟೈನ್, ತಮ್ಮ ಮಾಮೂಲು ಚರ್ಮದ ಕೋಟನ್ನೂ ಹೆಣಿಗೆ ಟೋಪಿಯನ್ನೂ ಹಾಕಿಕೊಂಡು, ಪಿಟೀಲನ್ನು ಕಂಕುಳಲ್ಲಿಟ್ಟುಕೊಂಡು ಹೊರಕ್ಕೆ ಬಂದರು; “ನಿಮ್ಮ ಹಾಡುಗಾರಿಕೆಗೆ ಪಕ್ಕವಾದ್ಯ ನುಡಿಸುತ್ತೇನೆ; ನಿಮಗೆ ಬರುವ ಇನಾಮಿನಲ್ಲಿ ನನ್ನ ಪಾಲು ನನಗೆ ಕೊಡಬೇಕು. ಈಗ ಬನ್ನಿ ಹೋಗೋಣ" ಎಂದರು.”

ಇಂತಹ ೮೭ ರಸನಿಮಿಷಗಳು ಈ ಪುಸ್ತಕದಲ್ಲಿವೆ. ಕೊನೆಯಲ್ಲಿ ನೀಡಲಾದ, ಪುಸ್ತಕದಲ್ಲಿ ಪ್ರಸ್ತಾಪಿಸಲಾದ ೫೫ ವಿಜ್ನಾನಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಪುಸ್ತಕದ ಮೌಲ್ಯ ಹೆಚ್ಚಿಸಿದೆ. ಪುಸ್ತಕದಲ್ಲಿರುವ ಬಿ. ರಾಮಮೂರ್ತಿ ಚಿತ್ರಿಸಿರುವ ಚಿತ್ರಗಳು ಚೇತೋಹಾರಿ.