ವಿತರ್ಕ - ಪ್ರತಿಪಕ್ಷ ಭಾವ

ವಿತರ್ಕ - ಪ್ರತಿಪಕ್ಷ ಭಾವ

ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದಲ್ಲಿ ಬರುವ ವಿತರ್ಕ ಪ್ರತಿಪಕ್ಷ ಭಾವದ ಬಗ್ಗೆ ತಿಳಿದುಕೊಳ್ಳೋಣ. ವಿತರ್ಕ ಎಂದರೆ ವಿರೋಧ ಭಾವ ಎಂದರ್ಥ. ನಮಗೆಲ್ಲ ಗೊತ್ತು. ಸುಳ್ಳು ಹೇಳಬಾರದು. ಮೋಸ ಮಾಡಬಾರದು. ಹೊಲಸು ಮಾಡಬಾರದು. ಪರರ ವಸ್ತು ಕದಿಯಬಾರದು. ಇನ್ನೊಬ್ಬರಿಗೆ ನೋವು, ಹಿಂಸೆ ಮಾಡಬಾರದು. ಇದು ನಮಗೆಲ್ಲರಿಗೂ ಗೊತ್ತು. ಆದರೂ ನಾವು ಇವುಗಳನ್ನು ಮಾಡುತ್ತೇವೆ ಏಕೆ? ಸಂತೋಷವಾಗಿ ಇರಬೇಕು. ಕೆಲಸ ಮಾಡಬೇಕು. ತಡೆದುಕೊಳ್ಳಬೇಕು, ಅಧ್ಯಯನ ಮಾಡಬೇಕು. ಈ ಜಗತ್ತನ್ನು, ಈ ಜಗತ್ತಿನ ಹಿಂದಿರುವ ಶಕ್ತಿಯನ್ನು ಪ್ರೀತಿಸಬೇಕು. ಇದು ಯಾರಿಗೆ ಗೊತ್ತಿಲ್ಲ ?. ಎಲ್ಲರಿಗೂ ಗೊತ್ತು. ಒಬ್ಬರು ಇಬ್ಬರು ಸುಳ್ಳು ಹೇಳಿದರೆ ಸ್ವಲ್ಪ ನಡೆಯುತ್ತದೆ. ಎಲ್ಲರೂ ಸುಳ್ಳು ಹೇಳಿದರೆ ಜೀವನ ಹೇಗೆ ನಡೆಯುತ್ತದೆ. ಮನೆಯವರು ಅಡುಗೆ ಮಾಡದೆ, ಅಡುಗೆ ಆಗಿದೆ ಎಂದರೆ ಏನು ಊಟ ಮಾಡುವುದು. ಶಾಲೆಗೆ ಹೋಗದೆ, ಶಾಲೆಗೆ ಹೋದೆ ಎಂದರೆ ಜ್ಞಾನ ಆಗೋದು ಹೇಗೆ?. ಭೂಮಿಗೆ ಬೀಜ ಹಾಕದೆ, ಬಿತ್ತನೆ ಮಾಡಿದ್ದೇನೆಂದರೆ ಬೆಳೆಯುವುದಾದರೂ ಏನು?. ಹೀಗಾದರೆ ಸಾಧನೆ ಸಾಧ್ಯವೇ?. ಆದರೂ ನಾವು ಸುಳ್ಳು, ಮೋಸ, ಹಿಂಸೆ ಮಾಡುತ್ತೇವೆ. ಏಕೆ ಅನ್ನುವುದಕ್ಕೆ ಪಾತಂಜಲ ಮಹರ್ಷಿ ಹೇಳುತ್ತಾನೆ. 

ನಮ್ಮನ್ನು ವಿತರ್ಕ ಭಾವನೆಗಳು ದಾರಿ ತಪ್ಪಿಸುತ್ತವೆ. ವಿತರ್ಕ ಭಾವ ಎಂದರೆ ವಿರೋಧ ಭಾವಗಳು. ವಿಚಾರಗಳು ವಿರುದ್ಧ ಇದ್ದರೆ, ಅವು ನಮ್ಮ ದಾರಿ ತಪ್ಪಿಸುತ್ತದೆ. ವಿರುದ್ಧ ವಿಚಾರಗಳು ಬಹಳ ಆಕರ್ಷಕವಾಗಿರುತ್ತದೆ. ಅವು ನಮ್ಮಲ್ಲಿ ಆಸೆ ಉಂಟು ಮಾಡುತ್ತವೆ. ಉದಾಹರಣೆಗೆ, ಇದನ್ನು ಬಲಿ ಕೊಟ್ಟರೆ, ನಿನಗೆ ಮಕ್ಕಳಾಗುತ್ತದೆ. ನೀನು ಕೊಡಲು ಆಗದಿದ್ದರೆ, ಬೇರೆಯವರ ಕಡೆಯಿಂದ ಕೊಡಿಸು, ನಾವು ಕೊಡ್ತೀವಿ, ನೀನು ಸಮ್ಮತಿಸು. ಸ್ವಂತ ಮಾಡುವುದು, ಯಾರಾದರೂ ಕೈಯಲ್ಲಿ ಮಾಡಿಸುವುದು, ನೀವು ಮಾಡಿದ ಬಳಿಕ ಸಮ್ಮತಿ ಕೊಡ್ತೀನಿ ಅನ್ನುವುದು. ನೀನು ಕೊಡು ಮಕ್ಕಳಾಗುತ್ತವೆ. ನಿನಗೆ ಹಣ ಬೇಕಾದರೆ ಸುಳ್ಳು ಹೇಳು. ಎಷ್ಟು ಆಕರ್ಷಕ?. ಒಬ್ಬನಿಗೆ ತಿಂಗಳಿಗೆ 5000 ಸಂಬಳ. ಈತ ಮೂರು ವರ್ಷದಲ್ಲಿ ಮೂರು ಮಹಡಿ ಮನೆ ಕಟ್ಟಿದ್ದಾನೆ. ಒಂದೊಂದು ಮಹಡಿ 20 ಲಕ್ಷ. ಇದನ್ನು ಕಂಡು ಮಿತ್ರ ಇನ್ನೊಬ್ಬನಿಗೆ ಹೇಳುತ್ತಾನೆ. ನೋಡು ಸುತ್ತಮುತ್ತ. ನೀನು 20 ವರ್ಷ ಕೆಲಸ ಮಾಡ್ತಾ ಬಂದಿದ್ದು, ಎಲ್ಲಿದೆ ನೀನು ಸತ್ಯ. ಸತ್ಯ ಅಂತ ಹೇಳಿ ಇಲ್ಲಿ ಸಾಯ್ತಾ ಇದ್ದೀಯ. ಹೀಗೆ ಹೇಳಿದರೆ ಈ ಮಾತು ಯಾರಿಗೆ ಹಿಡಿಸುವುದಿಲ್ಲ?. ಈ ಮಾತು ಎಷ್ಟು ಆಕರ್ಷವಾಗಿದೆ?. ಇಂತಹದರಲ್ಲಿ ಸತ್ಯ ಹೇಳಬೇಕು. ಮೋಸ ಮಾಡಬಾರದು ಅಂದ್ರೆ ಹೇಗೆ ಎಂಬ ಪ್ರಶ್ನೆಗೆ ಪಾತಂಜಲ ಹೇಳುತ್ತಾನೆ. ಸಮಾಧಾನ ಬಹಳ ಮಹತ್ವದ್ದು. ನಮ್ಮ ಜೀವನದ ಸಂಪತ್ತು ಅಂದರೆ ಸಮಾಧಾನ. ಸುಳ್ಳು, ಮೋಸ, ಹಿಂಸೆ ಮಾಡುವುದರಿಂದ, ಹಣ ಸಿಗಬಹುದು, ಅಧಿಕಾರ ಸಿಗಬಹುದು, ಬಹುಮಾನ ಸಿಗಬಹುದು, ಸಮಾಧಾನ ಸಿಗುತ್ತದೆಯೇ ಎಂದ. ಮನುಷ್ಯ ಉತ್ಸಾಹಿಯಾಗಿರಬೇಕು. ಕ್ರಿಯಾಶೀಲನಾಗಿರಬೇಕು. ಕೆಲಸದಿಂದ ಜಗತ್ತನ್ನು ಕಟ್ಟಬಹುದೇ ವಿನ, ಸುಳ್ಳಿನಿಂದ, ಕಳ್ಳತನದಿಂದ, ಮೋಸದಿಂದ ಜಗತ್ತನ್ನು ಕಟ್ಟಲು ಸಾಧ್ಯವಿಲ್ಲ. ಆಗ ಒಂದು ಪ್ರಶ್ನೆ ಉಂಟಾಗುತ್ತದೆ. ಹಾಗಾದರೆ ಇದರಿಂದ ಪಾರಾಗುವುದು ಹೇಗೆ?.ಎನ್ನುವ ಪ್ರಶ್ನೆಗೆ ಪಾತಂಜಲ ಹೇಳುತ್ತಾನೆ. ಪ್ರತಿಪಕ್ಷ ಭಾವನೆ ಮಾಡಬೇಕು. ಇದಕ್ಕೆ ಮೊದಲು ವಿತರ್ಕಗಳು ಯಾವುವು? ಅನ್ನುವುದನ್ನು ತಿಳಿದುಕೊಳ್ಳಬೇಕು. ಹಿಂಸೆ, ಅಸತ್ಯ ಕಳ್ಳತನ, ಸ್ವೇಚಾಚಾರ, ಸಂಗ್ರಹ ಬುದ್ಧಿ, ಹೊಲಸುತನ, ಅಸಂತೃಪ್ತಿ, ಸೋಮಾರಿತನ ಅಜ್ಞಾನ. ಅಂದರೆ ತಿಳಿದುಕೊಳ್ಳದೇ ಇರುವುದು. ಜಗತ್ತನ್ನು ಪ್ರೀತಿಸದೆ ಇರುವುದು. ಮನಸ್ಸು ಹೊಲಸಾದ ಬಳಿಕ ಜಗತ್ತನ್ನು ಪ್ರೀತಿಸುವುದು ಹೇಗೆ ಸಾಧ್ಯ?. ದ್ವೇಷಿಸಲು ಶುರು ಮಾಡುತ್ತಾನೆ. ಮನುಷ್ಯನಿಗೆ ಕವಿಹೃದಯ ಇದ್ದರೆ ಕಾಣುವುದೆಲ್ಲ ಸುಂದರ ಇರುತ್ತದೆ. ಮನಸ್ಸು ಕುರೂಪ ಇದ್ದರೆ ಜಗತ್ತೆಲ್ಲ ಕುರೂಪ ಕಾಣಿಸುತ್ತದೆ. ವಿತರ್ಕಗಳು ಹೇಗೆ ಕೆಲಸ ಮಾಡುತ್ತವೆ ಎಂದರೆ.... ತಾನು ಸುಳ್ಳು ಹೇಳುವುದು ಇಲ್ಲ. ಇನ್ನೊಬ್ಬರಿಂದ ಸುಳ್ಳು ಹೇಳಿಸುವುದು. ತಾನು ಹೇಳೋದಿಲ್ಲ ಬೇರೊಬ್ಬರ ಕೈಯಲ್ಲಿ ಹೇಳಿಸುವುದು. ಬೇರೆಯವರು ಸುಳ್ಳು ಹೇಳಿದಾಗ ಅನುಮೋದಿಸುವುದು. ಅಂದರೆ ಒಪ್ಪಿಗೆ ಸೂಚಿಸುವುದು. ಸಮ್ಮತಿ ಮಾಡುವುದು. ತಾನು ಕಾರಣ ಅಲ್ಲ, ಪ್ರೇರೇಪಣೆ ನೀಡಿದವರು ಕಾರಣ ಅಥವಾ ಬೇರೆಯವರ ತಪ್ಪಿಗೆ ಸಮ್ಮತಿ ನೀಡುವುದು. ಉದಾಹರಣೆಗೆ ಮಗು ಕಾಪಿ ಮಾಡಿ ಪರೀಕ್ಷೆ ಬರೆದರೆ ಬೇಷ್ ಸರಿಯನ್ನುವುದು. ತಾನು ಕೆಡಿಸುವುದು ಇಲ್ಲ. ನಾನು ಕೆಡಿಸಿಲ್ಲ. ಅವನು ಕೆಡಿಸಿದ ಅಥವಾ ಅವನು ಕೆಡಿಸಿದ ಆಯ್ತು ಬಿಡು ಅಂದೆ, ಈ ಮೂರು ರೀತಿ ಆಗುತ್ತದೆ. ಇದನ್ನು ಏಕೆ ಮಾಡುತ್ತಾರೆ ಎನ್ನುವುದಕ್ಕೆ ಪಾತಂಜಲ ಹೇಳುತ್ತಾರೆ. ಗೊತ್ತಿದ್ದು ಏಕೆ ಮಾಡುತ್ತಾರೆ ಎಂದರೆ ಮೂರು ಕಾರಣ...

1. ಲೋಭ 

2. ಕ್ರೋದ 

3. ಮೋಹ 

ಲೋಭ : ಇದು ಇದ್ರೆ ದಾರಿ ಬಿಡ್ತಾನೆ. ನನಗೆ ಒಂದು ವಸ್ತು ಸಿಗುತ್ತದೆ ಅಂದರೆ ಸುಳ್ಳು ಹೇಳುವುದು. ಅವನಿಗೆ ಸುಳ್ಳು ಸತ್ಯ ಮುಖ್ಯವಲ್ಲ. ವಸ್ತು ಮುಖ್ಯ. ನನಗೆ ಭಾರೀ ಭೂಮಿ ಸಂಗ್ರಹಿಸಬೇಕಾಗಿದೆ, ಬಾರಿ ಗಳಿಸಬೇಕಾಗಿದೆ. ಅಧಿಕಾರ ಬೇಕಾಗಿದೆ. ಬಹುಮಾನ ಪ್ರಶಸ್ತಿ ಬೇಕಾಗಿದೆ. ಅಷ್ಟು ಸಾಮರ್ಥ್ಯ ನನ್ನಲ್ಲಿ ಇಲ್ಲ. ನನ್ನಲ್ಲಿ ಸಾಮರ್ಥ್ಯ ಕಡಿಮೆ ಇದೆ. ಲೋಭ ಹೆಚ್ಚಿದೆ. ಬೇರೆ ದಾರಿ ಹಿಡಿಯುತ್ತಾನೆ. ಇತಿಹಾಸ ಓದಿದರೆ, ಯುದ್ಧ ಆಗಿರುವುದು ಈ ಲೋಭದಿಂದಲೇ. ಮೋಸ, ಹಿಂಸೆ, ಸುಳ್ಳು, ಕಳ್ಳತನ ಇವೆಲ್ಲ ಲೋಭದಿಂದ. ನನ್ನದು ಇನ್ನೊಬ್ಬನಿಗೆ ಬೇಕು. ಆತನದು ನನಗೆ ಬೇಕು ಅಂದಾಗ ಹೋರಾಟ ಶುರುವಾಗುತ್ತದೆ. ಬೇಕು ಅನ್ನುವುದೇ ಲೋಭ. ಇಂದಿನ ರಾಜಕೀಯ ವ್ಯವಸ್ಥೆ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಲೋಭ ಅಂದರೆ ಬೇಕು. ಮತ್ತೊಂದು ಹಿಡಿದಿದ್ದು ಬಿಡುವುದಿಲ್ಲ ಅನ್ನೋದು. ಸಂಗ್ರಹಕ್ಕೆ ಮಿತಿ ಇಲ್ಲ. ಸಂಗ್ರಹಿಸಿದ್ದು ಬಿಡುವುದಿಲ್ಲ. ಈ ಭಾವನೆಗೆ ಲೋಭ. ಆಗ ಸುಳ್ಳು, ಹಿಂಸೆ, ಮೋಸ ಮಾಡಲೇಬೇಕಾಗುತ್ತದೆ. ಜಗತ್ತು ಹಾಳಾಗಿರುವುದು ಜಗತ್ತಿನಿಂದಲ್ಲ, ಮನುಷ್ಯನಿಂದ. ಲೋಭದಿಂದ ನದಿ ಮಲಿನವಾಗಿದೆ.

ಕ್ರೋಧ : ನನಗೆ ಆಗಬಾರದವರ ಬಗ್ಗೆ ಹಿಂಸೆಗೆ ಇಳಿಯುತ್ತೇನೆ. ಆಗಬಾರದ ವಸ್ತು, ವ್ಯಕ್ತಿ , ನಾಶ ಮಾಡಲು ಪ್ರಾರಂಭಿಸುತ್ತೇನೆ. ಇಲ್ಲದೆ ಇದ್ದರೆ ಅವರ ಬಗ್ಗೆ ಇರುವ ಸದ್ಭಾವನೆ ನಾಶ ಮಾಡುತ್ತೇನೆ. ದಂಪತಿ ಚೆನ್ನಾಗಿ ಬದುಕಿದ್ದರೆ, ಅವರು ನಮಗೆ ಹಿಡಿಸದಿದ್ದರೆ ಅವರಲ್ಲಿ ಜಗಳ ತಂದು ಹಾಕುತ್ತೇವೆ. ಇಂಥ ಸಂದರ್ಭದಲ್ಲಿ ಸುಳ್ಳು, ಹಿಂಸೆ, ಮೋಸ ಮಾಡದೆ ಮಾಡಲು ಸಾಧ್ಯವಿಲ್ಲ . ಪಂಡಿತರ ನಡುವೆ ಆಗಿ ಬರುವುದಿಲ್ಲ. ಇದು ಇರೋವರೆಗೆ ಮೋಸ ಸುಳ್ಳು ಇರುವುದೇ.

ಮೋಹ : ಮೋಹ ಅಂದ್ರೆ ಅಂಟಿಕೊಳ್ಳುವುದು. ಏನೂ ವಿಚಾರ ಮಾಡದೆ ಅದರಲ್ಲಿ ಬಿದ್ದುಬಿಡುವುದು. ಮೋಹದಲ್ಲಿ ಬಿದ್ದ ಬಳಿಕ ಸತ್ಯ ಏನು? ಅಸತ್ಯ ಏನು?. ಮೋಹದಲ್ಲಿ ಬಿದ್ದ ಬಳಿಕ ಏನೂ ಗೊತ್ತಾಗುವುದಿಲ್ಲ. ಜಾತಿ ಮೋಹ, ಧರ್ಮ ಮೋಹ, ವಸ್ತು ಮೋಹ, ಹಣ ಮೋಹ, ಪುತ್ರ ಪುತ್ರಿ ಮೋಹ, ಹೀಗೆ ಮೋಹದಲ್ಲಿ ಬಿದ್ದಾಗ ಸರಿಯಾಗಿ ನಮಗೆ ಏನೂ ಗೊತ್ತಾಗುವುದಿಲ್ಲ. ನಮ್ಮನ್ನು ಕೆಡಿಸುವುದು ಈ ಮೂರು. ಈ ಮೂರು ನಮ್ಮೊಳಗೆ, ನಮ್ಮ ಮನಸ್ಸಿನಲ್ಲಿ ಇವೆ. ಯಾರೂ ಕೇಳಿಸಿದ್ದಲ್ಲ. ನಮ್ಮೊಳಗಿರುವ ಈ ಮೂರೇ ಕೆಡಿಸುವುದು. ಈ ಮೂರು ಇದ್ದಾಗ ಅಡ್ಡದಾರಿ ಹಿಡಿಸುತ್ತದೆ. ನಿನಗೆ ಹಣ ಬೇಕು, ನನಗೆ ಮತ ಹಾಕು. ನಿನಗೆ ಹಣ ಬೇಕಾ ಸುಳ್ಳು ಹೇಳು. ಈ ಮೂರಕ್ಕೆ ಸಿಕ್ಕಿ ಬಿದ್ದವರಿಗೆ ಸತ್ಯ, ಅಹಿಂಸೆ, ಸ್ವಾಧ್ಯಾಯ, ಶೌಚ, ಬ್ರಹ್ಮಚರ್ಯ ಅಪರಿಗ್ರಹ ಯಾವುದು ಇಲ್ಲ. ನಿಸರ್ಗ ಏನಾದರೂ ಹಣ್ಣಿಗೆ, ಕಾಳಿಗೆ ವಿಷ ಬೆರೆಸುತ್ತದೆ ಏನು?. ಎಮ್ಮೆ ತನ್ನ ಹಾಲಿಗೆ ನೀರು ಬೆರೆಸುತ್ತದೆಯೆ? ಮನುಷ್ಯ ಲೋಭಕ್ಕಾಗಿ ಮಾಡುತ್ತಿದ್ದಾನೆ. ಒಬ್ಬ ಅಂಗಡಿಯವ ಲಾಭಕ್ಕಾಗಿ ಆಹಾರಕ್ಕೆ ಬಣ್ಣ ಹಾಕಿ ಆಕರ್ಷಕ ಮಾಡಿದ. ಆ ಬಣ್ಣ ವಿಷ. ಅದನ್ನು ಪಕ್ಕದ ಮನೆಯ ಮಕ್ಕಳು ತೆಗೆದುಕೊಂಡು ತಿಂದರು. ಅದನ್ನೇ ಅಂಗಡಿಯವನ ಮಕ್ಕಳಿಬ್ಬರು, ನಿಮ್ಮ ಅಂಗಡಿಯದು ಅಂತ ನೀಡಿದರು. ಅಂದರೆ ನಾವೇ ಲೋಭಕ್ಕಾಗಿ ನಾವೇ ನಾಶವಾಗುತ್ತಿದ್ದೇವೆ. ನಿಸರ್ಗ ಪ್ರಾಮಾಣಿಕ. ಮನುಷ್ಯನನ್ನು ಹೊರತುಪಡಿಸಿ ಇನ್ಯಾರೋ ಮೋಸ ಮಾಡುವುದಿಲ್ಲ. ಪ್ರಾಣಿ ಪಕ್ಷಿಗಳು ಜಗಳ ಮಾಡುತ್ತವೆ ಜಾಗಕ್ಕಾಗಿ. ಜಾಗ ಸಿಕ್ಕ ಬಳಿಕ ಸುಮ್ಮನಾಗುತ್ತವೆ. ಅವು ಯುದ್ಧ, ಸುಳ್ಳು, ಮೋಸ ಮಾಡುವುದಿಲ್ಲ. ಈ ಮೂರಕ್ಕಾಗಿ ಪ್ರಾರಂಭದಲ್ಲಿ ಸಣ್ಣ ಸಣ್ಣ ಸುಳ್ಳು. ಕ್ರಮೇಣ ಮಧ್ಯಮ. ಕಡೆಯದಾಗಿ ಅತಿ ಹೆಚ್ಚು ಸುಳ್ಳು ಮಾಡುತ್ತಾನೆ. ಹೀಗೆ ಸಣ್ಣದು, ಮಧ್ಯ, ಕ್ರಮೇಣ ಹೆಚ್ಚು ರೀತಿಯಾಗಿ ನಡೆಯುತ್ತದೆ. ಇದಕ್ಕೆ ಉಪಾಯವನ್ನು ಪಾತಂಜಲ ಮಹರ್ಷಿ ಹೇಳುತ್ತಾನೆ. ಆ ಉಪಾಯ ಪ್ರತಿಪಕ್ಷ ಭಾವ. 

ಪ್ರತಿಪಕ್ಷ ಭಾವ ಎಂದರೆ ಪ್ರಸನ್ನತೆ ಇಲ್ಲದೆ ಇರುವುದು. ಅಂದರೆ ದುಃಖದಿಂದ ಕೂಡಿರುತ್ತದೆ. ವಿತರ್ಕದಿಂದ ಪ್ರಸನ್ನತೆ ಹೋಗುತ್ತದೆ. ಯಾರು ಬೈಯಬೇಕಿಲ್ಲ, ಹೇಳಬೇಕಿಲ್ಲ. ಮನಸ್ಸು ಅರಳುವುದಿಲ್ಲ. ಹಣ ಸಿಗಬಹುದು. ಅಧಿಕಾರ ಸಿಗಬಹುದು. ಮಾನಸಿಕ ಪ್ರಸನ್ನತೆ ಸಿಗುವುದಿಲ್ಲ. ಮಾನಸಿಕ ಪ್ರಸನ್ನತೆಯೇ ಸಂಪತ್ತು. ನಾನು ಬದುಕಿರುವುದೇ ಪ್ರಸನ್ನತೆಗಾಗಿ. ಮುಖ ಯಾವಾಗಲೂ ಅರಳಿರಬೇಕು. ಸಂತೋಷ ಪಡುತ್ತಿರಬೇಕು. ನಗುನಗುತ್ತಾ ಇರಬೇಕು. ಅದೇ ಜೀವನ. ಪ್ರಸನ್ನತೆ ಮಹತ್ವದ್ದು ಅಂತ ತಿಳಿದರೆ ಇವು ಕಡಿಮೆಯಾಗುತ್ತದೆ ಮತ್ತು ವಿತರ್ಕದಿಂದ ಏನು ಒಳ್ಳೆಯದು ಆಗುತ್ತದೆ ಅಂತ ತಿಳಿದಿದ್ದೇವೆಯಲ್ಲ ಅದು ಅಜ್ಞಾನ. ಇದರಿಂದ ಏನಾದರೂ ದೊಡ್ಡದು ಆಗುತ್ತದೆ ಎಂದು ಭಾವಿಸಿಕೊಂಡಿದ್ದರೆ ಅದು ಅಜ್ಞಾನ. ವಿತರ್ಕದಿಂದ ದುಃಖ ಮತ್ತು ಅಜ್ಞಾನ ನೆನಪಿರುವುದಿಲ್ಲ. ಯಾರು ಯಾವುದೇ ಪಡೆದಿರಲಿ ಅದು ಶಾಶ್ವತವಾಗಿ ಅವರ ಬಳೀ ಇರುವುದಿಲ್ಲ ಹಾಗೂ ಅದು ಇದ್ದ ಹಾಗೆಯೇ ಇರುವುದಿಲ್ಲ ಅನ್ನುವ ಜ್ಞಾನ. ವಿತರ್ಕ ಹೊಂದಿರುವವರಲ್ಲಿ ಇರುವುದಿಲ್ಲ. ಅದೇ ಅಜ್ಞಾನ. ಹೀಗೆ ಭಾವಿಸಿದರೆ ವಿತರ್ಕದ ಮನಸ್ಸು ಬರುವುದಿಲ್ಲ ಎಂದು ಪಾತಂಜಲ ಮಹರ್ಷಿ ಹೇಳುತ್ತಾನೆ, "ಈ ಜಗತ್ತಿನಲ್ಲಿ ಬದುಕುವಾಗ ಅಷ್ಟಷ್ಟು ತಪ್ಪು ಆಗಿರುತ್ತದೆ. ಕೆಲವು ಬಾರಿ ಒತ್ತಡ ಪ್ರಸಂಗಕ್ಕೆ ಬಿದ್ದು ತಪ್ಪು ಮಾಡುತ್ತಿದ್ಧೇವೆ. ಆದರೆ ತಿಳಿದುಕೋ ಪ್ರಸನ್ನತೆ ಜ್ಞಾನ ಉಂಟಾಗುವುದಿಲ್ಲ. ಜಗತ್ತಿನಲ್ಲಿ ಬದುಕಿರುವಾಗ ಕಸ ಸ್ವಲ್ಪ ಸ್ವಲ್ಪ ಬೀಳುತ್ತದೆ. ಗುಡಿಸುವಂತೆ ಬೀಳುತ್ತದೆ. ಗುಡಿಸಲಾರದಂತೆ ಕಸ ಮಾಡಿಕೋ ಬಾರದು. ವಿತರ್ಕ ಇದ್ದರೂ ಪ್ರಮಾಣ ಕಡಿಮೆ ಇದ್ದರೆ ಬಾದಕವಿಲ್ಲ. ಮನುಷ್ಯ ಸಂಘ ಜೀವಿ. ಅಂದಾಗ ಇಂಥವೆಲ್ಲ ಆಗುತ್ತದೆ ಕಸ ಗುಡಿಸಿ ಹಾಕುವಂತೆ ಸ್ವಲ್ಪ ಸ್ವಲ್ಪ ಇದ್ದರೆ ಬಾದಕ ಅಲ್ಲ. ಪ್ರತಿದಿನ ಅವುಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಾ ಇದ್ದರೆ ಸ್ವಚ್ಛವಾಗುತ್ತದೆ. ಹಾಗೆ ಮನಸ್ಸಿನ ಕಸವನ್ನು ಪ್ರತಿದಿನ ತೆಗೆಯುತ್ತಾ ಇರಬೇಕು. ಇದೇ ಪ್ರತಿಪಕ್ಷ ಭಾವನೆ. ಕೀಳರಿಮೆ ಬೆಳಸಿಕೊಳ್ಳಬೇಡ. ಸ್ವಚ್ಛ ಮಾಡಿಕೋ. ಅದರಿಂದ ಪ್ರಸನ್ನತೆ ಮತ್ತು ಜ್ಞಾನ ಬರುತ್ತದೆ" ಎಂದು ಹೇಳಿದ.

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ